ಕೆಲವೇ ಗೆರೆಗಳ ಮೂಲಕ ಘಟನೆಯನ್ನು ವಿಶ್ಲೇಷಿಸುವ, ದ್ವಂದ್ವವನ್ನು ಎತ್ತಿ ತೋರಿಸುವ ವ್ಯಂಗ್ಯಚಿತ್ರಗಳು ನೋಡುಗರ ಮನದಲ್ಲಿ ತಲ್ಲಣ ಸೃಷ್ಟಿಸುವಷ್ಟು ಪರಿಣಾಮಕಾರಿಯಾಗಿರುತ್ತವೆ. ವ್ಯಂಗ್ಯಚಿತ್ರದಲ್ಲಿ ನುರಿತವರ ಕೈಚಳಕ ಇಡೀ ವಿಷಯವನ್ನು ಸರಳವಾಗಿ ಅನಾವರಣ ಮಾಡಿಬಿಡುತ್ತದೆ. ಅವು ರಾಜಕೀಯ ಮತ್ತು ಸಾಮಾಜಿಕ ಸಂಗತಿಗಳ ವಾಸ್ತವ ಅಭಿವ್ಯಕ್ತಿ ಕೂಡ.
ಇಂದು ವ್ಯಂಗ್ಯಚಿತ್ರಕಾರರಿಲ್ಲದ ಪತ್ರಿಕೆಗಳೇ ಇಲ್ಲ ಎನ್ನಬಹುದು. ಪತ್ರಿಕೆಗಳ ಮೂಲೆಯೊಂದರಲ್ಲಿ ಪ್ರಕಟವಾಗುವ ಕೆಲವು ವ್ಯಂಗ್ಯಚಿತ್ರಗಳು ಪತ್ರಿಕೆಯ ಲೇಖನಗಳಿಗಿಂತಲೂ ಪ್ರಭಾವಶಾಲಿ. ವಿಷಯವನ್ನು ಸರಳವಾಗಿ ಗ್ರಹಿಸಲು ಅನುಕೂಲವಾಗುವ ವ್ಯಂಗ್ಯಚಿತ್ರ ಎಲ್ಲರಿಗೂ ಇಷ್ಟ. ಇದರ ಹಿಂದೆ ಮಾಹಿತಿ ಇರುತ್ತದೆ, ಚಿಂತನೆ ಇರುತ್ತದೆ.
ಕರ್ನಾಟಕದಲ್ಲಿ ಹಲವು ಹೆಸರಾಂತ ಕಾರ್ಟೂನಿಸ್ಟ್‌ಗಳಿದ್ದರೂ ಮಹಿಳಾ ಕಾರ್ಟೂನಿಸ್ಟ್‌ಗಳು ತುಂಬಾ ವಿರಳ ಅಥವಾ ಇಲ್ಲವೇ ಇಲ್ಲ ಎಂದೇ ಹೇಳಬಹುದು. ಈ ಹಿಂದೆ ಕೆಲವು ಮಹಿಳಾ ಕಾರ್ಟೂನಿಸ್ಟ್‌ಗಳು ಅಪರೂಪಕ್ಕೊಮ್ಮೆ ಪತ್ರಿಕೆಗಳಲ್ಲಿ ಕಾಣಿಸಿಕೊಂಡದ್ದನ್ನು ಬಿಟ್ಟರೆ ಹೆಚ್ಚಿನವರು ಎಲೆಮರೆಯ ಕಾಯಿಯಾಗಿಯೇ ಉಳಿದುಬಿಟ್ಟಿದ್ದಾರೆ. ಅಂಥವರಲ್ಲಿ ದೇವಪತ್ನಿ ಭೂಪತಿ ಕೂಡ ಒಬ್ಬರು.
ದೇವಪತ್ನಿ ಭೂಪತಿ ಕಾನೂನಿನಲ್ಲಿ ಸ್ನಾತಕೋತ್ತರ ಪದವೀಧರರು. ಕೆಲ ಸಮಯ ಸರ್ಕಾರಿ ವಕೀಲರಾಗಿದ್ದವರು. ಪತಿಯ ಅನಾರೋಗ್ಯ ಅವರ ಬದುಕಿನಲ್ಲಿ ಮಹತ್ವದ ತಿರುವಿಗೆ ಕಾರಣವಾಯಿತು. ಖಚಿತ ಪ್ರಗತಿಪರ ದೃಷ್ಟಿಕೋನವುಳ್ಳ ಇವರು ಭಾರತದ ಸಂವಿಧಾನದ ಬಗ್ಗೆ, ಕಾನೂನಿನ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಕಾನೂನನ್ನು ವ್ಯಂಗ್ಯಚಿತ್ರಗಳ ಮೂಲಕ ಅಭಿವ್ಯಕ್ತಿಸಲಾರಂಭಿಸಿದರು.
ಇವರ ಕಾರ್ಟೂನ್ಸ್‌ಹೊಸ ವಿಚಾರಗಳಿಂದ ಕೂಡಿದವುಗಳಾಗಿವೆ. ಸಾಮಾನ್ಯ ಚಿತ್ರರಚನೆಗಿಂತ ಭಿನ್ನವೂ, ವಿಚಾರ ಪ್ರಚೋದಕವೂ ಆಗಿವೆ ಹಾಗೂ ಹಾಸ್ಯ, ಮನರಂಜನೆ ನೀಡುವುದಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಮತ್ತು ತಿಳಿವಳಿಕೆಯನ್ನು ಸಾಮಾನ್ಯರಲ್ಲಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾಮಾನ್ಯರ ಆಲೋಚನೆಗೆ ನಿಲುಕುವಂತೆ 'ಲಾ ಕಾರ್ಟೂನ್', ದೇಶಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ 'ಸ್ವತಂತ್ರ ಭಾರತ-ವ್ಯಂಗ್ಯಚಿತ್ರಗಳಲ್ಲಿ' ಎಂಬ ಎರಡು ಕೃತಿಗಳನ್ನು ಕೂಡ ಹೊರತಂದಿದ್ದಾರೆ. ಪ್ರಸ್ತುತ ಕಾರ್ಟೂನ್ ಪುಸ್ತಕಗಳು ಪ್ರಕಟವಾಗಿರುವುದು ಸ್ವಲ್ಪ ಕಡಿಮೆಯೇ. ನ್ಯಾಯಾಂಗದ ಬಗ್ಗೆ, ಅದರ ಮೂಲಭೂತ ತತ್ತ್ವಗಳ ಬಗ್ಗೆ, ಅದನ್ನು ಗೌರವಿಸುವುದರ ಬಗ್ಗೆ ಸಾಮಾನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ಈ ಕಾರ್ಟೂನ್ ಪುಸ್ತಕಗಳು ಪ್ರಮುಖವೆನಿಸುತ್ತವೆ. ಈ ವಿಷಯವಾಗಿ ಚಿತ್ರಿಸುವಾಗ ವಿಶೇಷವಾಗಿ ನ್ಯಾಯ ಮತ್ತು ಸಂವಿಧಾನ ಗಮನಿಸಬೇಕಾಗುತ್ತದೆ ಹಾಗೂ ಸಾಮಾನ್ಯರ ತಿಳಿವಳಿಕೆಗೆ ನಿಲುಕುವಂತೆ ಚಿತ್ರಿಸಬೇಕಾಗುತ್ತದೆ. ಈ ಸೂಕ್ಷ್ಮವನ್ನು ಎಚ್ಚರಿಕೆಯಿಂದ ಗಮನಿಸಿ ಚಿತ್ರಿಸಿದ್ದಾರೆ. ಈ ಪುಸ್ತಕಗಳು ಕಾರ್ಟೂನ್ ಚಿತ್ರ ಬರವಣಿಗೆಯಲ್ಲಿ ಅಪರೂಪದ ಕೃತಿಗಳಾಗಿವೆ.
ಕಲಾವಿದ ದಿ. ಎಚ್.ಆರ್. ಹಡಪದ್ ಅವರಲ್ಲಿ ಕಾರ್ಟೂನ್ ಅಭ್ಯಾಸ ಮಾಡಿದ ಡಿ. ಭೂಪತಿಯವರು, ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂದು ದೇಶಭಕ್ತಿ ಹೊಮ್ಮುವ ಕಾರ್ಟೂನ್‌ಗಳನ್ನು ರಚಿಸಿ ರಾಜ್ಯ-ಹೊರರಾಜ್ಯಗಳ ಶಾಲೆಗಳಿಗೆ, ಬಾರ್ ಕೌನ್ಸಿಲ್, ರಾಜ್ಯಪಾಲರ, ಮುಖ್ಯಮಂತ್ರಿಗಳ, ಪ್ರಧಾನ ಮಂತ್ರಿಗಳ ಕಚೇರಿಗಳಿಗೆ ಕಳುಹಿಸಿ ಅವರಿಂದ ಮೆಚ್ಚುಗೆ ಕೂಡ ಗಳಿಸಿದ್ದಾರೆ. ವಿಶೇಷವೆಂದರೆ ಇವರು ವ್ಯಂಗ್ಯಚಿತ್ರದ ಶೀರ್ಷಿಕೆಯನ್ನು ಹತ್ತು ಭಾಷೆಗಳಲ್ಲಿ ಬರೆದಿದ್ದಾರೆ! ಯಾರ ಅಸಡ್ಡೆ, ತಾತ್ಸಾರ, ಅವಮಾನಕ್ಕೂ ಕಿವಿಗೊಡದೆ ತಮ್ಮ ಕೆಲಸವನ್ನು ಕಳೆದ 20 ವರ್ಷಗಳಿಂದ ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ.
ಅರವತ್ತೆಂಟರ ಈ ವಯಸ್ಸಿನಲ್ಲೂ ಅಮಿತ ಜೀವನೋತ್ಸಾಹ ತುಂಬಿಕೊಂಡಿರುವ ಡಿ. ಭೂಪತಿಯವರು, ಕಾರ್ಟೂನ್ ಹವ್ಯಾಸದ ಜತೆಗೆ ರೇಖಿ, ಯೋಗದಂತಹ ಚಿಕಿತ್ಸಾ ವಿಧಾನಗಳ ಮೂಲಕ ಹಿರಿಯ ನಾಗರಿಕರಿಗೆ, ನೊಂದವರಿಗೆ, ರೋಗಿಗಳಿಗೆ ಆಪ್ತ ಸಲಹೆ, ಸಹಾಯ ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕಿದ್ವಾಯಿ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗಳಲ್ಲಿ ರೋಗಿಗಳಿಗೆ, ಅವರ ಕುಟುಂಬದವರಿಗೆ ಸಾಂತ್ವನ, ಮಾರ್ಗದರ್ಶನ, ತಿಳಿವಳಿಕೆ ನೀಡುವ ಕೆಲಸವನ್ನು ಕಳೆದ 15 ವರ್ಷಗಳಿಂದ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.
ಬದ್ಧತೆ ಮತ್ತು ಪ್ರಾಮಾಣಿಕತೆ ಸೇವೆಯ ಮೂಲ ತಳಹದಿ ಎಂದು ನಂಬಿರುವ ಇವರು, ಸೇವೆ ಮಾಡಲಿಚ್ಛಿಸುವವರಿಗಾಗಿ 'ಮೈ ಟ್ರಿಸ್ಟ್ ವಿತ್ ವಾಲೆಂಟೀರಿಸಮ್' ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ. 'ನಾನೊಬ್ಬಳು ಸಾಮಾನ್ಯಳು' ಎನ್ನುವ ದೇವಪತ್ನಿ ಭೂಪತಿಯವರು ಸಾಮಾನ್ಯರಲ್ಲಿ ಅಸಾಮಾನ್ಯರು ಎಂದರೆ ತಪ್ಪಾಗಲಾರದು.
- ಶಶಿರೇಖಾ ಹೆಗಡೆ