ನ್ಯೂರೋಸೈನ್ಸ್‌ನಲ್ಲಿ ಡಾಕ್ಟರೇಟ್. ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಅಧ್ಯಾಪಕಿ. ಮೆದುಳು ಮತ್ತು ಮಧುಮೇಹ ತೀವ್ರತೆ ಕುರಿತು ಅತೀವ ಆಸಕ್ತಿ. ಮಧುಮೇಹದ ಸಂಕೀರ್ಣತೆ ಕುರಿತು ನಡೆಸಿದ ಸಂಶೋಧನೆಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ. ಅನೇಕ ಫೆಲೋಶಿಪ್‌ಗಳ ಗೌರವ.
ಇದೆಲ್ಲವನ್ನೂ ಮೀರಿ ಅಮೆರಿಕದಲ್ಲಿ ಅವರು ಖ್ಯಾತರಾಗಿರುವುದು 'ಸಮ್ಮೋಹಕ ಸ್ವರ'ದಿಂದ!
ತನ್ನ ವೃತ್ತಿಗಿಂತಲೂ ಪ್ರವೃತ್ತಿಯಿಂದಲೇ ಮಿನುಗುತ್ತಿರುವವರು ಡಾ.ದೀಪ್ತಿ ನವರತ್ನ. ಕನ್ನಡದ ಹೆಣ್ಣು ಮಗಳು. ದಕ್ಷಿಣ ಭಾರತದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸಮಕಾಲೀನ ವಿಶ್ವ ಸಂಗೀತದೊಂದಿಗೆ ಬೆರೆಸುವ ಪ್ರಯತ್ನ ಅವರದು. ವೈದ್ಯೆಯಾಗಿ ಎಷ್ಟು ಮುತುವರ್ಜಿಯಿಂದ ರೋಗಿಗಳನ್ನು ನೋಡುತ್ತಾರೋ ಗಾಯಕಿಯಾಗಿಯೂ ಅಷ್ಟೇ ತನ್ಮಯತೆ. ಹಾಡಲು ತೊಡಗಿದರೆ ಸಭಿಕರನ್ನೂ ಮೈಮರೆಸುವ ತಾದಾತ್ಮತೆ. 'ಮತ್ತೆ ಮತ್ತೆ ಕೇಳಬೇಕೆನಿಸುವ ಮತ್ತು ಮಂತ್ರಮುಗ್ಧಗೊಳಿಸುವ ಸ್ವರ' ಎಂದು ಅಮೆರಿಕದ ಮಾಧ್ಯಮಗಳು ಅವರನ್ನು ಹಾಡಿ ಹೊಗಳಿವೆ.
ಬಹುತೇಕ ಕಲಾವಿದರಂತೆ ದೀಪ್ತಿಗೂ ಬಾಲ್ಯದಲ್ಲೇ ಸಂಗೀತದ ನಂಟು. ರೋಹಿಣಿ ಮಂಜುನಾಥ್, ಟಿ.ವಿ. ಗೋಪಾಲಕೃಷ್ಣನ್, ಬಾಂಬೆ ಜಯಶ್ರೀ ಮೊದಲಾದವರಿಂದ ಸಂಗೀತ ಪಾಠ. 1999, 2000ರಲ್ಲಿ ಸತತ ಎರಡು ವರ್ಷ ಅಖಿಲ ಭಾರತ ಆಕಾಶವಾಣಿ ಸಂಗೀತ ಸ್ಪರ್ಧೆ ವಿಜೇತೆ. 2000ನೇ ಇಸವಿಯಲ್ಲಿ ಕೇಂದದ್ರ ಸರ್ಕಾರ ನಡೆಸಿದ ಆರ್ಟ್ಸ್ ಗ್ರಾಂಟ್‌ನ ಯೂಥ್ ಅಂಬಾಸಿಡರ್. ಅಮೆರಿಕಕ್ಕೆ ತೆರಳಿದ ನಂತರ ಅಲ್ಲಿಯೂ ಸಂಗೀತ ಬಿಡಲಿಲ್ಲ. ಕೇಂಬ್ರಿಡ್ಜ್ ಆರ್ಟ್ ಕೌನ್ಸಿಲ್ ಗ್ರಾಂಟ್ ಸೇರಿದಂತೆ ವಿವಿಧ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡ ಪ್ರತಿಭಾವಂತೆ. ಬೋಸ್ಟನ್‌ನ ನ್ಯೂ ಇಂಗ್ಲೆಂಡ್ ಕನ್ಸರ್ವೇಟರಿ ಆಫ್ ಮ್ಯೂಸಿಕ್ ಮೆರಿಟ್ ಸ್ಕಾಲರ್‌ಶಿಪ್ ಮತ್ತು ನಗದು ಬಹುಮಾನ ಪಡೆದ ದಕ್ಷಿಣ ಭಾರತದ ಮೊದಲ ಕಲಾವಿದೆ. ಒಂದು ತಿಂಗಳ ಕಾಲ ನಡೆದ ಮ್ಯೂಸಿಕ್ ಓಮಿ ಇಂಟರ್‌ನ್ಯಾಶನಲ್ ಮ್ಯೂಸಿಕ್ ರೆಸಿಡೆನ್ಸಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ದಕ್ಷಿಣ ಭಾರತದ ಮೊದಲ ಗಾಯಕಿ. ಅಮೆರಿಕದಲ್ಲಿ ಸಂಗೀತ ತರಗತಿಗಳನ್ನೂ ನಡೆಸುತ್ತಿದ್ದಾರೆ.
ಕರ್ನಾಟಕ ಸಂಗೀತವನ್ನು ಸಮಕಾಲೀನ ವಿಶ್ವ ಸಂಗೀತದೊಂದಿಗೆ ಬೆರೆಸುವ ಮತ್ತು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಡಾ. ದೀಪ್ತಿ ಇಂಡೋ ಅಮೆರಿಕನ್ ಸಂಗೀತ ಸಂಯೋಜಕ ಶಿರಿಶ್ ಕೊರ್ಡೆ, ರಿಚರ್ಡ್ ಪಿಟ್‌ಮನ್, ರಾಬರ್ಟ್ ಶ್ಚುಲ್ಜ್, ಝೊರಾನಾ ಸಾದಿಕ್ ಮೊದಲಾದವರೊಂದಿಗೆ ಕೈ ಜೋಡಿಸಿದ್ದಾರೆ. ಅಂತರ್ ಸಾಂಸ್ಕೃತಿಕ ಕಾರ್ಯಕ್ರಮಗಳೆಂದರೆ ಬಹಳ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ.
ಕಲೆ ಮತ್ತು ಉದ್ಯಮದ ಚಟುವಟಿಕೆಗಳು ಮಿಳಿತವಾಗಿರುವ 'ಕರ್ನಾಟಿಕ್ ಅಲ್ಚೆಮಿ ಪ್ರಾಜೆಕ್ಟ್'ನ ಕಲಾ ನಿರ್ದೇಶಕಿಯಾಗಿಯಾಗಿ ಸದ್ಯ ಬ್ಯುಸಿ. ಈ ಪ್ರಾಜೆಕ್ಟ್‌ನ ಮೊದಲ ಕಾಣಿಕೆ 2013ರ ಅಕ್ಟೋಬರ್ 4ರಂದು ಜೋರ್ಡಾನ್ ಹಾಲ್‌ನಲ್ಲಿ ಶ್ರೋತೃಗಳ ಸಮ್ಮುಖದಲ್ಲಿ ಅನಾವರಣಗೊಳ್ಳಲಿದೆ.
ಡಾ.ದೀಪ್ತಿ ನವರತ್ನ ಅವರ ಸಂಪರ್ಕ: 91-8277419235, US: 001-505-270-9228.
info@deeptinavaratna.com, www.deeptinavaratna.com, www.facebook.com/dnavaratna, www.twitter.com/dnavaratna
- ನಂದೀಶ್ ಬಿ.ಎಸ್.