ಕೊಳ್ಳೇಗಾಲದ 65ರ ಶ್ರಮಜೀವಿ ಸುಬ್ರಮಣ್ಯಸ್ವಾಮಿ ಸೀಮೆಎಣ್ಣೆ ಗಾಡಿ ಎಳೆಯುವ ಕಾಯಕಕ್ಕೆ ಇದೀಗ ಅರ್ಧ ಶತಕ!
ಯುವಪೀಳಿಗೆ ಶ್ರಮ ಪಡದೆ ಮೋಜು- ಮಸ್ತಿ ಜೀವನ ನಡೆಸುತ್ತಿರುವ ಹಾಗೂ ದಿಕ್ಕುತಪ್ಪಿ ಅನವಶ್ಯ ದುಂದು ವೆಚ್ಚ ಮಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಸುಬ್ರಮಣ್ಯಸ್ವಾಮಿ ಇದಕ್ಕೆ ಅಪವಾದವಾಗಿದ್ದಾರೆ.
ಕೊಳ್ಳೇಗಾಲ ವಾಸಿಯಾಗಿರುವ ಇವರು, ತಮ್ಮ 50 ವರ್ಷಗಳ ವೃತ್ತಿ ಜೀವನವನ್ನು ಸೀಮೆಎಣ್ಣೆ ಗಾಡಿ ಎಳೆಯುವುದರಲ್ಲಿಯೇ ಕಳೆದಿದ್ದಾರೆ. ಈಗ ಇವರಿಗೆ 65 ವರ್ಷ ತುಂಬಿದೆ. ಈ ಇಳಿ ವಯಸ್ಸಿನಲ್ಲೂ ದುಡಿದು ಜೀವಿಸಬೇಕು. ಯಾರಿಗೂ ಹೊರೆಯಾಗಬಾರದು ಎಂದು ನಗರ ವ್ಯಾಪ್ತಿಯ ಮುಡಿಗುಂಡದಲ್ಲಿರುವ ಸೀಮೆಎಣ್ಣೆ ಬಂಕ್‌ನಿಂದ ವಿವಿಧ ಸ್ಥಳಗಳಿಗೆ ಗಾಡಿಯಲ್ಲಿ ಸಾಗಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ. ಬಂಕ್‌ನಿಂದ ಸೀಮೆಎಣ್ಣೆ ತುಂಬಿಸಿಕೊಂಡು ದಾಸನಪುರ, ಅಣಗಳ್ಳಿ ಸೇರಿದಂತೆ ಕೊಳ್ಳೇಗಾಲ ನಗರ ವ್ಯಾಪ್ತಿಯಲ್ಲೂ ಗಾಡಿ ಇಳಿಸುತ್ತಾರೆ. 1 ಗ್ರಾಮಕ್ಕೆ ಗಾಡಿಯಲ್ಲಿನ ಸೀಮೆಎಣ್ಣೆ ಇಳಿಸಿದರೆ 100ರಿಂದ 150 ಸಿಗಲಿದೆ. ಶ್ರಮದ ದುಡಿಮೆಗೆ ತ್ರಾಸದಾಯಕವಾದರೂ ತುಂಬಿದ ಸೀಮೆಎಣ್ಣೆ ಗಾಡಿ ಎಳೆದು ಜೀವನದ ಬಂಡಿ ಸಾಗಿಸುವ ದೃಶ್ಯ ಮನ ಕಲಕುತ್ತದೆ. ಈ ಇಳಿ ವಯಸ್ಸಿನಲ್ಲೂ ದುಡಿಯಬೇಕೆಂಬ ಛಲ ಯುವಜನತೆಗೆ ಮಾದರಿಯಾಗಿದೆ.
150 ಸಿಗುತ್ತೆ!
ನನಗೀಗ 65 ವರ್ಷ ತುಂಬಿದೆ. 50 ವರ್ಷದಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೊಳ್ಳೇಗಾಲದಲ್ಲಿ ವಾಸವಾಗಿದ್ದೇನೆ. ಖಾಲಿ ಗಾಡಿಯನ್ನು ಮುಡಿಗುಂಡಕ್ಕೆ ಎಳೆದುಕೊಂಡು ಹೋಗಿ, ಅಲ್ಲಿನ ಬಂಕ್‌ನಲ್ಲಿ ಸೀಮೆಎಣ್ಣೆ ತುಂಬಿಸಿ ನಗರ ಪ್ರದೇಶಕ್ಕೆ ಎಳೆದುಕೊಂಡು ಹೋದರೆ 100ರಿಂದ 150 ಸಂಪಾದನೆಯಾಗುತ್ತದೆ.
- ಸುಬ್ರಮಣ್ಯಸ್ವಾಮಿ
-ಎನ್. ನಾಗೇಂದ್ರಸ್ವಾಮಿ, ಕೊಳ್ಳೇಗಾಲ