ಸಾಧನೆ

ಒಂಟಿ ಪ್ರೀತ್ಸೆ!

Mainashree

ಮನಸ್ಸೇ ಯಾಕೆ ಹೀಗೆ ಚಡಪಡಿಸ್ತೀ? ಇನ್ನೇಕೆ ಈ ಹಪಹಪ ಮಾಡ್ತೀ? ಪ್ರೀತಿಸಿದಾತ ಜೊತೆಗಿಲ್ಲ, ಅವನಿಗಾಗಿ ಕಾಯುವ ಕ್ಷಣಗಳೂ ಇನ್ನಿಲ್ಲ. ಆದರೂ ಮರೆಯಾಗದ ಮನದಾಳದ ನೆನಪುಗಳು! ಕೂತಲ್ಲಿ ನಿಂತಲ್ಲಿ ನೆನಪಾಗುವುದೆಂದರೆ... 60ರಲ್ಲಿ ಸಂಗಾತಿ ಕಳೆದುಕೊಂಡರೆ ಬದುಕು ಏನಾಗಬಹುದೆಂಬುದಕ್ಕೆ ಇದಕ್ಕಿಂತ ನಿದರ್ಶನ ಇನ್ನೊಂದಿಲ್ಲ. ಛೇ, ಹೀಗೇ ತಲೆ ಕೆಡಿಸಿಕೊಂಡು ಮನೆಯಲ್ಲಿ ಕುಳಿತರೆ ಹುಚ್ಚೇ ಹಿಡಿಯುತ್ತಷ್ಟೆ. ಹಾಗಾಗೇ ಇತ್ತೀಚೆಗೆ ವಾಕಿಂಗ್ ನೆಪದಲ್ಲಿ ಮನೆ ಬಿಟ್ಟು ಹೊರ ಬರುವುದು, ಪಾರ್ಕ್‌ನಲ್ಲಿ ಕುಮುದಳಿಗಾಗಿ ಹುಡುಕುವುದು. ಆ ಕ್ಷಣಕ್ಕೆ ಎಲ್ಲವನ್ನೂ ಹೇಳಿಕೊಳ್ಳುವ ತುಡಿತ.
ಕುಮುದ ನನ್ನ ಮನಸ್ಸಿಗೆ ಕನ್ನಡಿ ಹಿಡಿವ ಹೆಂಗಸು ಮೊನ್ನೆ ಹೇಳಿದ್ದಳು, 'ಮನಸ್ಸಿನಲ್ಲಿರೋದೆಲ್ಲ ಹೇಳಿಕೊಳ್ಳಬಹುದಾದ ಅಪಾಯವಿಲ್ಲದ ಸ್ನೇಹ ಸಿಗಬಹುದೇ?', ಹೌದು, ನನ್ನದೇ ಚಡಪಡಿಕೆ, ಪೇಚಾಟ ಅವಳಿಗೂ. ತೀರಾ ಸಾಮಾನ್ಯ ಹೆಂಗಸಾದರೆ ಒಂದು ಕಡೆಯ ಮಾತು ಇನ್ನೊಂದು ಕಡೆ ಹೇಳಿ ಅದಕ್ಕೆ ಬಣ್ಣ ಹಚ್ಚಿಬಿಡುವುದಿದೆ. ಬದುಕಿನ ಗಂಭೀರ ಬಲ್ಲ ಹೆಣ್ಣು ಮಗಳು ಮಾತ್ರ ಹಾಗೆಂದಿಗೂ ಮಾಡಲಾರಳು. ಕುಮುದ ಆ ಪೈಕಿ ಅಲ್ಲ. ಅದಕ್ಕೇ ಅವಳು ಇಷ್ಟ. ಹಾಯ್ ಹೇಳಿ ಸ್ನೇಹಹಸ್ತ ಚಾಚಿದ್ದಾಯ್ತು. ಅವಳಲ್ಲೂ ಖಿನ್ನತೆಯ ಭಾವ.
'ಯಾಕೆ ಹೀಗೆ ಮುಖ ಪೆಚ್ಚಾಗಿದೆ?'
'ಮಾಮೂಲು ಬಿಡಿ'.
'ಮನೇನಲ್ಲಿ ಏನಾದ್ರೂ...'
'ಹಾಗೇನಿಲ್ಲ, ನನ್ನೊಳಗೇ ಅದೆಂಥದೋ ಕಸಿವಿಸಿ. ನನ್ನಲ್ಲಿ ಅದೆಂಥದೋ ಸಣ್ಣತನ ತಲೆ ಎತ್ತಿದೆ. ಸಣ್ಣಪುಟ್ಟ ವಿಚಾರಗಳಿಗೂ ನನ್ನ ಅಹಂ ಕೆರಳಿಬಿಡುತ್ತದೆ. ಸುಂದರವಾದ ನನ್ನದೇ ಸಂಸಾರದಲ್ಲಿ ನಾನು ಈಗೀಗ ಹುಳಿ.. ಯಾಕೆ ಹೀಗೆ? ಈಗಲೇ ನನ್ನ ನಾನು ಸರಿಪಡಿಸಿಕೊಳ್ಳದಿದ್ದರೆ ಮನೆಯ ಶಾಂತಿ ಕೆಡುತ್ತದೆ'- ಒದ್ದಾಡಿಕೊಂಡಳು.
ಕುಮುದ ಪ್ರಬುದ್ಧಳಾಗಿ ಕಂಡಳು. ಎಷ್ಟು ಜನ ಹೆಂಗಸರು ಮಧ್ಯವಯಸ್ಸು ದಾಟಿದ ಮೇಲೆ ತಮ್ಮ ನಡವಳಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ?!
'ಈಗೇನಾಯ್ತು?'
'ಹೊರಗಿಂದ ನನಗೆ ಸೊಸೆಯಾಗಿ ಬಂದ ಹೆಣ್ಣು, ಯಾವುದೋ ಸ್ಪಿರಿಟ್‌ನಲ್ಲಿ 'ನನಗೆ ಗೊತ್ತು ನನ್ನ ಗಂಡ ಹಾಗಲ್ಲ', 'ಅವರಷ್ಟು ತಿನ್ನಲ್ಲ, ತೆಗೀರಿ ಅಮ್ಮಾ', 'ಅವರ ಟೇಸ್ಟ್ ನನಗೆ ಗೊತ್ತಿಲ್ವಾ?' ಅನ್ನುವುದು ಕಂಡು ಕುದ್ದು ಹೋದೆ. 'ನಿನಗಿಂತ ಮೊದ್ಲು ಅವನೇನು ಅಂತ ನನಗೆ ಗೊತ್ತು. ನೀನು ಬಾಯಿಮುಚ್ಚು' ಅಂತ ರೇಗಿಕೊಂಡೆ.
ಆ ಹುಡುಗಿ ಪೆಚ್ಚಾದ್ಲು. ಮದುವೆ ಹೊಸದು. ಹಚ್ಚಟೆ ಮುಚ್ಚಟೆ ಮಾಡಿಕೊಂಡ್ರೆ ನನ್ನ ಗಂಟೇನು ಹೋಯ್ತು? ಅವು ಮೈಕಾವಿನಲ್ಲಿ ತೊದಲುತ್ವೆ. ನಾನು ಇಂಥ ಸಣ್ಣಪುಟ್ಟ ವಿಚಾರಗಳಿಗೆ ಚುಟುಕು ಮುಳ್ಳಾಡಿಸಿದ್ರೆ ಮನೆ ಗತಿ ಏನಾಗಬೇಕು? ಆ ಮಗು ದೃಷ್ಟೀಲಿ ನಾನೇಗಬೇಕು? ಮೌನವಾದಾಗ ಮಾತ್ರ ಗೌರವ ಉಳಿಯುತ್ತೆ ಅಲ್ವಾ?' ಎಂದ ಕುಮುದಳ ಮುಖ ನೋಡಿದೆ. ಪ್ರಾಮಾಣಿಕತೆ ತುಂಬಿತ್ತು.
'ಅಂದ ಹಾಗೆ ನೀವಿವತ್ತು ಬೇಗ ಬಂದಿರೋ ಹಾಗಿದೆ?'
'ಇತ್ತೀಚೆಗೆ ಯಾಕೋ ಒಬ್ಬಂಟಿ ಇರಕ್ಕೆ ಆಗ್ತಾ ಇಲ್ಲ. ಅದಕ್ಕೆ ಬೇಗ ಹೊರಬಂದೆ. ನೀವು ಸಿಕ್ಕಿದ್ದು ಒಳ್ಳೇದಾಯ್ತು. ನಿಮ್ಮ ಹತ್ರ ಮುಚ್ಚುಮರೆ ಏನೂ ಇಲ್ಲ. ನನಗೆ ಅಳಬೇಕು ಅಂದ್ರೂ ಒಂದು ಭುಜವಿಲ್ಲ. ದೊಡ್ಡ ಮನೆ, ಗೋಡೆಗಳು ಮಾತಾಡಲ್ಲ. ಇವರು ಬದುಕಿದ್ದಾಗ ಇಂಥ ಕೊಲ್ಲುವ ಮೌನ ಇರಲಿಲ್ಲ' ಅನ್ನುವಾಗ ಏನಾದ್ರೂ ಸಲಹೆ ಬೇಕು ಅನ್ನುವಂತಿತ್ತು ಮನದಾಳದಲ್ಲಿ.
'ನಿಮ್ಮ ಜೊತೆ ಬಂದಿರುವುದಕ್ಕೆ ಯಾರಾದ್ರೂ ಇದಾರಾ? ಯೋಚಿಸಿ.'
'ಊಹೂಂ ಸಾಧ್ಯವಿಲ್ಲ. ನಾನು ಬದುಕಿದ್ದು ಬೇರೆ ತರಹ. ಎಲ್ಲರಂತೆ ಮದುವೆ ಆಗಿದ್ದಲ್ಲ. ನನ್ನ ಗೆಳತಿ ಅಣ್ಣ ಒಬ್ರು ಹತ್ತಿರವಾದ್ರು. ಋಣ ಅನ್ನಿ, ಹಚ್ಚಿಕೊಂಡು ಒಟ್ಟಿಗೆ ಬದುಕಿದವರು ನಾವು. ಅವರೊಬ್ಬ ಗಣ್ಯ ವ್ಯಕ್ತಿ. ಹಾಗಾಗಿ ಯಾರನ್ನೂ ಹತ್ತಿರ ಬಿಟ್ಟುಕೊಳ್ಳಲಿಲ್ಲ. ಅವರಿಗೆ ಬೇರೆ ಮದುವೆಯಾಗಿತ್ತು. ಆದರೆ ಎಲ್ಲವನ್ನೂ ದಾಟಿಕೊಂಡು ನನ್ನೆಡೆ ಬಂದರು. 20 ವರ್ಷಗಳ ಕಾಲ ಈ ಜಗತ್ತಿನ ಮೇಲಿರಲಿಲ್ಲ. ಮುಗಿಲು, ಹುಣ್ಣಿಮೆ, ನಕ್ಷತ್ರಗಳಲ್ಲಿ ಮೆರೆದೆವು. ಅವರು ಹೋಗಿ ಎರಡು ವರ್ಷವಾಯ್ತು. ಇನ್ನೇನೂ ಉಳಿದಿಲ್ಲ ಈ ಜೀವನದಲ್ಲಿ. ಇನ್ನೆಷ್ಟು ದಿನ ಕಾಯಬೇಕೋ ನನ್ನ ಸರದಿಗೆ?!'
ಮಾತು ಮುಗಿಯುವ ಮುನ್ನ ಉಕ್ಕಿತು ಕಣ್ಣೀರು. ಕುಮುದ ಕೈ ಹಿಡಿದು ಒತ್ತಿದಳು. ಹತ್ತಾರು ಕ್ಷಣದ ಮೌನದ ನಂತರ, ನೋಡಿ ನಮ್ಮ ಸ್ನೇಹ ಹೊಸತೆನಿಸುತ್ತಿಲ್ಲ. ಮನಸ್ಸಿನ ತುಮುಲಗಳನ್ನು ಹೇಳಿಕೊಳ್ಳಬೇಕು. ಅದೇನೇ ವಿಚಾರವಾದ್ರೂ ಒಳಗೇ ಇಟ್ಟುಕೊಂಡು ನೋವು ತಿನ್ನಬಾರದು. ಅದು ನಾಲಗೆಯಿಂದ ಹೊರಬಿದ್ದಾಗ, ಕಣ್ಣೀರಾಗಿ ಹೋದಾಗ ಮಾತ್ರ ಮನಸ್ಸು ಹಗುರವೆನಿಸುವುದು. ಅಂತರಂಗಕ್ಕೆ ಬರುವ ಸ್ನೇಹಿತರ ಹತ್ತಿರ ಮನಸ್ಸು ಬಿಚ್ಚಬೇಕು. ಆ ಸ್ಥಾನ ಮುಂದೆ ನನ್ನದಿರಲಿ ಗೆಳತಿ' ಎಂದು ನಗೆಯಲಿ ಮೆಲುವಾಗಿ ತಲೆದಡವಿ ಬೀಳ್ಕೊಟ್ಟರು. ಮನೆಗೆ ಬಂದಾಗ ಮನ ಶಾಂತವಾಗಿತ್ತು.

- ಭಾಗ್ಯ ಕೃಷ್ಣಮೂರ್ತಿ

SCROLL FOR NEXT