ಮಕ್ಕಳಿಗೆ ವಾರ್ಷಿಕ ಪರೀಕ್ಷೆ ಶುರುವಾಗುವುದರ ಒಳಗೇ ಬೇಸಿಗೆ ಶಿಬಿರಗಳ ಪ್ರಚಾರ ಭರಾಟೆ ಜೋರಾಗಿದೆ. ಸಮ್ಮರ್ ಕ್ಯಾಂಪ್, ಸ್ವಿಮ್ಮಿಂಗ್ ಕ್ಯಾಂಪ್ ಹೆಸರಲ್ಲಿ ಸಾವಿರಾರು ರುಪಾಯಿ ಕಳೆದುಕೊಳ್ಳುತ್ತಿದ್ದಾರೆ ಪಾಲಕರು. ಇಲ್ಲೊಬ್ಬರಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಮಕ್ಕಳಿಗೆ ವಿವಿಧ ರೀತಿಯ ತರಬೇತಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಇವರ ಹೆಸರು ದಂಡನಶಿವರ ತಿಮ್ಮೇಗೌಡ. ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನ ದಂಡಿನಶಿವರದವರು. ಹವ್ಯಾಸಿ ಪಕ್ಷಿ ಛಾಯಾಗ್ರಾಹಕ, ಹವ್ಯಾಸಿ ಪತ್ರಕರ್ತ. ಪೂರ್ಣಚಂದ್ರ ತೇಜಸ್ವಿಯವರ ಒಡನಾಟದಿಂದ ಪರಿಸರದ ಬಗ್ಗೆ ಪ್ರೀತಿ ಬೆಳೆಸಿಕೊಂಡರು. ಇವರು ತೆಗೆದಿರುವ ಹಲವಾರು ಪ್ರಾಣಿ ಪಕ್ಷಿಗಳ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ, ಹಲವು ಸಾಕ್ಷ್ಯ ಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾಗಿವೆ. ಇದೇ ಅಲ್ಲದೆ ಇವರ ಪರಿಸರ ಕಾಳಜಿಯ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಪ್ರತಿ ವರ್ಷ ಸುಮಾರು 40 ರಿಂದ 50 ಜನ ಮಕ್ಕಳು ನೀರಿನ ಅಪಘಾತದಲ್ಲಿ ಸಾವನ್ನಪ್ಪುತ್ತಿರುವ ವಿಷಯ ತಿಳಿದು ಕಳವಳಗೊಂಡ ತಿಮ್ಮೇಗೌಡ ಇದಕ್ಕೆ ಒಂದು ಪರ್ಯಾಯ ವ್ಯವಸ್ಥೆ ಕಂಡುಹಿಡಿಯಲು ಮುಂದಾದರು. ಇದರ ಪ್ರತಿಫಲವೇ ಇಂದು ನೂರಾರು ಮಕ್ಕಳು ಈಜು ಕಲಿಯಲು ಕಾರಣವಾಗಿದೆ.
ದಂಡಿನಶಿವರ ಒಂದು ಕುಗ್ರಾಮವಾದ ಕಾರಣ ಇಲ್ಲಿ ಪಕೃತಿಯ ಮಡಿಲಲ್ಲಿರುವ ಕೆರೆಯೇ ಇವರಿಗೆ ಈಜುಕೊಳ. ತಿಮ್ಮೇಗೌಡರೇ ಇಲ್ಲಿ ಕೋಚ್. ಎಷ್ಟೇ ಮಕ್ಕಳು ಬರಲಿ, ಇಲ್ಲಿ ಈಜು ಕಲಿಸಲಾಗುತ್ತದೆ. ಅದೂ ಸಂಪೂರ್ಣ ಉಚಿತವಾಗಿ. ಹಾಗಂತ ಇವರು ಯಾವುದೆ ಎನ್‌ಜಿಒ ಅಥವಾ ಸಂಘ ಸಂಸ್ಥೆಯ ಹೆಸರಲ್ಲಿ ಹಣ ಪಡೆಯುತ್ತಿಲ್ಲ. ಇದೆಲ್ಲಾ ಕೇವಲ ಸೇವೆಗಾಗಿ.
ಅಂಗವಿಕಲರಿಗೂ ತರಬೇತಿ
ಇವರು ಈವರೆಗೆ 300 ಮಕ್ಕಳಿಗೆ ಈಜು ಕಲಿಸಿದ್ದಾರೆ. ಇವರಲ್ಲಿ 30ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಮತ್ತು ಕೆಲ ಅಂಗವಿಕಲ ಮಕ್ಕಳೂ ಇದ್ದಾರೆ ಎನ್ನುವುದು ವಿಶೇಷ.
ಈಜು ಕಲಿಸುವ ಜತೆಗೆ ಗ್ರಾಮೀಣ ಸೊಗಡಿನ ಬಗ್ಗೆ ಮಕ್ಕಳಿಗೆ ವಿವರಿಸಲಾಗುತ್ತದೆ. ಹಳ್ಳಿಗಳ ಬಗ್ಗೆ ಪರಿಚಯ, ಕೆರೆ, ನೀರಿನ ಸಂರಕ್ಷಣೆ ಬಗ್ಗೆ ತಿಳಿವಳಿಕೆ. ನಮ್ಮ ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದು ಮತ್ತು ಮೀನು ಹಿಡಿಯುವ ತರಬೇತಿ, ಜಾನಪದ ಕಲೆಗಳ ಮಾಹಿತಿ ಮತ್ತು ಅದರ ಬಗ್ಗೆ ಆಸಕ್ತಿ ಮೂಡಿಸುವ ಕೆಲಸದಲ್ಲೂ ತಿಮ್ಮೇಗೌಡರು ನಿರತರಾಗಿದ್ದಾರೆ. ಅವರು ಯಾವುದೇ ಧನ ಸಹಾಯ ನಿರೀಕ್ಷೆ ಮಾಡುತ್ತಿಲ್ಲ. ಬದಲಿಗೆ ಹೆಚ್ಚಿನ ಮಕ್ಕಳು ತರಬೇತಿ ಪಡೆಯಲಿ ಎಂಬುದಷ್ಟೇ ಅವರ ಆಶಯ. ಇವರ ಜನಪರ ಕಾಳಜಿಯನ್ನು ಕಂಡ ಹಲವು ಉಪನ್ಯಾಸಕರು, ಪೊಲೀಸ್ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹವಾಗಿದೆ. ಈ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಈಜು ಕಲಿಸಲು ಬಯಸುವವರು ಸಂಪರ್ಕಿಸಿ: 9980671479.
= ಅಶ್ವತ್ಥನಾರಾಯಣ ಎಲ್.