ಮಂಗಳಾ ರಾಮಚಂದ್ರ ಅವರಿಗೀಗ 80ರ ಹರೆಯ. ಇಳಿವಯಸ್ಸಿನಲ್ಲಿಯೂ ಅವರು ಮಾಡುವ ಕೆಲಸ, ಚುರುಕುತನ ನೋಡಿದರೆ ಯುವಜನಾಂಗ ನಾಚಿಕೊಳ್ಳಬೇಕು. ತಾನು ಮಾಡುವ ಯಾವುದೇ ಕೆಲಸವಿರಲಿ, ಅದರಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಇನ್ನೊಬ್ಬರ ಸಂತೋಷದಲ್ಲೇ ತನ್ನ ಸಂತೋಷ ಕಾಣುವ ಮಂಗಳಾ ಸಮಾಜಸೇವೆಯೇ ಭಗವಂತನ ಸೇವೆ ಎಂದು ನಂಬಿಕೊಂಡವರು. 'ನಾನು ಕೇವಲ ನಿಮಿತ್ತ ಮಾತ್ರ, ಎಲ್ಲವೂ ಭಗವಂತನ ಇಚ್ಛೆ' ಎಂದು ಹೇಳುವ ಮಂಗಳಾ ಸಮಾಜಸೇವೆಯಲ್ಲೇ ಅಧ್ಯಾತ್ಮದ ಸುಖವನ್ನು ಅನುಭವಿಸಿದವರು.
ಟರ್ನಿಂಗ್ 60
ಮಂಗಳಾ ಅವರು ಸಮಾಜಸೇವೆಯತ್ತ ಗಮನ ಹರಿಸಿದ್ದು 60ನೇ ವಯಸ್ಸಿನ ನಂತರವೇ. ಅಲ್ಲಿಯವರೆಗೆ ಮನೆ, ಮಕ್ಕಳು ಸಂಸಾರದಲ್ಲಿ ಬ್ಯುಸಿಯಾದದ್ದಾಯ್ತು. ಇನ್ನು ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ಯೋಚನೆ ಬಂದ ಕೂಡಲೇ ಅವರು ಕಾರ್ಯೋನ್ಮುಖರಾದರು. ಮಹಿಳಾ ಸಬಲೀಕರಣದ ದೆಸೆಯಲ್ಲಿ ಕಳೆದ 50 ವರ್ಷಗಳಿಂದ ಮಂಗಳಾ ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಸೇವೆಯಲ್ಲೇ ತೊಡಗಿರುವ ಕುಟುಂಬಕ್ಕೆ ಸೊಸೆಯಾಗಿ ಬಂದ ಮಂಗಳಾರಿಗೆ ಅತ್ತೆಯವರ ಪ್ರೋತ್ಸಾಹ ಸದಾ ಇರುತ್ತಿತ್ತು. ಆದ್ದರಿಂದಲೇ ಮಂಗಳಾ ಅವರು ಯಾವತ್ತೂ ಸಹಾಯಾರ್ಥವಾಗಿ ಕೆಲಸ ಮಾಡಿದರೇ ವಿನಾ ಸಂಬಳಕ್ಕಾಗಿ ಕೆಲಸ ಮಾಡಿದವರಲ್ಲ. ವಯಸ್ಸಾಗುತ್ತಿದ್ದಂತೆ ಆಧ್ಯಾತ್ಮದತ್ತ ಮನಸ್ಸು ಸೆಳೆದಾಗ, ಧಾರ್ಮಿಕ ಚಟುವಟಿಕೆಯ ಜತೆಗೆ ಸಾಮಾಜಿಕ ಚಟುವಟಿಕೆಗಳನ್ನು ಮಾಡಲು ಮಂಗಳಾ ಮುಂದಾದರು.
ಸಮಾಜಸೇವೆಯೇ ಈಶ ಸೇವೆ
ಸಮಾಜಕ್ಕಾಗಿ ನಾನೇನಾದರೂ ಮಾಡಬೇಕು, ಅದರಿಂದಲೇ ನನ್ನ ಮನಸ್ಸಿಗೆ ಸಂತೋಷ ಸಿಗುತ್ತದೆ ಎಂದು ಹೇಳುವ ಮಂಗಳಾ ಸಮಾಜ ಸೇವೆಯಲ್ಲೇ ಖುಷಿ ಕಾಣುತ್ತಾರೆ. 1960-70ರ ದಶಕದಲ್ಲಿ ಹೆಣ್ಣು ಮಕ್ಕಳು ಹೊರಗೆ ಹೋಗಿ ಕೆಲಸ ಮಾಡುವಂತಿರಲಿಲ್ಲ. ಆದಾಗ್ಯೂ, ದುಡಿಯಲು ಹೊರಗೆ ಬಂದರೆ ವಾಸ್ತವ್ಯದ ಸಮಸ್ಯೆ ಕಾಡುತ್ತಿತ್ತು. ಇಂತಿರುವಾಗ ಈ ಸಮಸ್ಯೆ ಪರಿಹರಿಸಲು ಮಂಗಳಾ, ಅಮ್ಮಣ್ಣಿ ಅಯ್ಯಂಗಾರ್ ಜತೆ ಸೇರಿ 'ಮಲ್ಲೇಶ್ವರಂ ಎಂಟರ್‌ಪ್ರೈಸಿಂಗ್ ಗರ್ಲ್ಸ್ ಹಾಸ್ಟೆಲ್'ನ್ನು ಆರಂಭಿಸಿ ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. ಈ ಹಾಸ್ಟೆಲ್‌ನಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸೂಕ್ತ ಭದ್ರತೆ, ಊಟ, ವಸತಿಯನ್ನು ಕಲ್ಪಿಸಲಾಗುತ್ತಿತ್ತು, ಈಗಲೂ ಈ ಸಂಸ್ಥೆ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವುದು ಮಂಗಳಾ ಅವರ ಕಾರ್ಯದಕ್ಷತೆಗೆ ಕನ್ನಡಿ ಹಿಡಿದಂತಾಗಿದೆ.
ವಿದ್ಯೆಯೇ ಸಂಪತ್ತು
ಪ್ರತಿಯೊಬ್ಬರ ಜೀವನದಲ್ಲಿ ವಿದ್ಯೆಯೇ ನಿಜವಾದ ಸಂಪತ್ತು. ವಿದ್ಯೆ ಇದ್ದಲ್ಲಿ ವಿನಯ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಮಂಗಳಾ ಅವರು ವಿದ್ಯಾಭ್ಯಾಸ ಕ್ಷೇತ್ರದತ್ತ ತಮ್ಮ ಗಮನ ಹರಿಸಿದರು. 'ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಇನ್ಸ್‌ಟಿಟ್ಯೂಟ್'ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಂಗಳಾ ಅವರು ತಮ್ಮ ನೇತೃತ್ವದಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಮಹಿಳಾ ಅಭಿವೃದ್ಧಿಗಾಗಿ ದುಡಿದಿದ್ದಾರೆ.
ಈ ವಿದ್ಯಾಸಂಸ್ಥೆಯಲ್ಲಿ ಯಾವುದೇ ಡೊನೆಷನ್ ಇಲ್ಲದೆ ಮಕ್ಕಳಿಗೆ ವಿದ್ಯಾದಾನ ಮಾಡಲಾಗುತ್ತದೆ. ಕೆ.ಜಿ ತರಗತಿಯಿಂದ ಪಿ.ಜಿ ವರೆಗೆ, ಜತಗೆ ರಿಸರ್ಚ್ ಸೆಂಟರ್‌ನ್ನು ಸ್ಥಾಪಿಸುವ ಮೂಲಕ ಮಂಗಳಾ ಪ್ರಸ್ತುತ ವಿದ್ಯಾಸಂಸ್ಥೆಯನ್ನು ಯಶಸ್ಸಿನ ಶಿಖರಕ್ಕೊಯ್ಯುವಲ್ಲಿ ನೆರವಾಗಿದ್ದಾರೆ. ಈಗ ಪ್ರಸ್ತುತ ಸಂಸ್ಥೆ ಹೈಟೆಕ್ ವಿದ್ಯಾಸಂಸ್ಥೆಯೆಂದು ಖ್ಯಾತಿಗೆ ಪಾತ್ರವಾಗಿದ್ದು, ಅದರ ಯಶಸ್ಸಿನ ಹಿಂದೆ ಸೂತ್ರಧಾರಿಯಾಗಿ ಮಂಗಳಾ ಇದ್ದಾರೆ.
ಮಾತ್ರವಲ್ಲದೆ ಶ್ರೀ ಸಾಯಿ ಮಂಡಳಿಯ ಅಧ್ಯಕ್ಷೆಯಾಗಿರುವ ಇವರು ಸಾಯಿಮಂಡಳಿಯ ಮೂಲಕ ಸಮಾಜಸೇವೆಯನ್ನು ಮಾಡುತ್ತಾ ಜನರಿಗೆ ನೆರವಾಗುತ್ತಿದ್ದಾರೆ. ತಾನು ಮಾಡುವ ಕೆಲಸವೆಲ್ಲವೂ ಭಗವಂತನಿಗೆ ಸಮರ್ಪಣೆ ಮಾಡುತ್ತೇನೆ ಎನ್ನುವ ಮಂಗಳಾ ಸಮಾಜಸೇವೆಯಲ್ಲೇ ತೃಪ್ತಿ ಕಂಡುಕೊಂಡವರು.
ಮಂಗಳಾ ಅವರ ಕಾರ್ಯತತ್ಪರತೆ ಹಾಗೂ ಸೇವಾ ಮನೋಭಾವವನ್ನು ಗೌರವಿಸಿದ ನಾಡಿನ ಸಂಘ ಸಂಸ್ಥೆಗಳು ಉತ್ಕೃಷ್ಟ ಸಮಾಜಸೇವಾ ಪ್ರಶಸ್ತಿ, ಹಿರಿಯ ನಾಗರಿಕ ಪ್ರಶಸ್ತಿ, ಸ್ವರಕಲಾ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿವೆ.
-ರಶ್ಮಿ ಕಾಸರಗೋಡು