ಗೊಂಬೆಗಳ ಜತೆ ಆಟವಾಡಿಕೊಂಡಿರಬೇಕಾದ ಒಂದೂವರೆ ವರ್ಷದ ಮಗು ಅದು. ಮನೆಯಲ್ಲಿ ಎಲ್ಲಾದರೂ ಸಂಗೀತ ಕೇಳುತ್ತಿದ್ದರೆ ಆಟವಾಡುವುದನ್ನು ಬಿಟ್ಟು ಅಲ್ಲಿ ಹೋಗಿ ಆಸಕ್ತಿಯಿಂದ ಆಲಿಸುತ್ತಿತ್ತು. ಸಂಗೀತವನ್ನು ನಿಲ್ಲಿಸಿದರೆ ರಚ್ಚೆಹಿಡಿಯುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಮಗುವಿಗೆ ಸಂಗೀತದಲ್ಲಿ ಆಸಕ್ತಿ ಇರುವುದನ್ನು ಗುರುತಿಸಿದರು. ಅಂದಿನಿಂದಲೇ ಸಂಗೀತ ಕಛೇರಿಗಳಿಗೆ ಕರೆದೊಯ್ಯಲು ಪ್ರಾರಂಭಿಸಿದರು.
ಆ ಬಾಲಪ್ರತಿಭೆಯೇ ಅನ್ವಿತಾ. ಈಗವಳಿಗೆ ಒಂಬತ್ತು ವರ್ಷ.
ಒಬ್ಬ ಸಂಗೀತಗಾರ ಸ್ವತಂತ್ರವಾಗಿ ಕಛೇರಿ ನಡೆಸಲು ಕನಿಷ್ಠ 5-10 ವರ್ಷ ಸತತ ಅಭ್ಯಾಸ ಮಾಡಬೇಕಾಗುತ್ತದೆ. ಅಂಥದ್ದರಲ್ಲಿ ಕೇವಲ ಏಳು ವರ್ಷದ ಬಾಲೆ ಸ್ವತಂತ್ರವಾಗಿ, ಸತತ ಒಂದೂವರೆ ಗಂಟೆಗಳ ಕಾಲ ಕಛೇರಿ ನೀಡುತ್ತಾಳೆಂದರೆ ಆಕೆಯಲ್ಲಿ ಅದೆಂಥ ಪ್ರತಿಭೆ ಇರಬಹುದು? ಯಾವುದೇ ಶೈಲಿಯ ಹಾಡುಗಳಿರಲಿ, ಒಮ್ಮೆ ಕೇಳಿದರೆ ಸಾಕು, ಯಾವುದೇ ಪರಿಶ್ರಮವಿಲ್ಲದೆ ಲೀಲಾಜಾಲವಾಗಿ ಹಾಡಬಲ್ಲ ಅದ್ಭುತ ಪ್ರತಿಭೆ ಅನ್ವಿತಾ.
ಅನ್ವಿತಾ 4ನೇ ವಯಸ್ಸಿನಲ್ಲಿ ವಿನಯ ಸುರ್ವೆಯವರಲ್ಲಿ ಶಾಸ್ತ್ರೀಯ ಸಂಗೀತಾಭ್ಯಾಸ ಪ್ರಾರಂಭಿಸಿದಳು. ನಂತರ ಸಿನಿಮಾ ಹಾಡುಗಳನ್ನು 'ಸಾಧನಾ ಸಂಗೀತ ಶಾಲೆ'ಯ ಮಂಜುಳಾ ಗುರುರಾಜ್ ಅವರಲ್ಲಿ, ಲಘು ಸಂಗೀತ, ದೇವರನಾಮ, ಜಾನಪದ ಗೀತೆ, ದಾಸರ ಪದಗಳನ್ನು ನರಹರಿ ದೀಕ್ಷಿತರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಅನ್ವಿತಾ ಐದು ವರ್ಷದವಳಿರುವಾಗಲೇ ರಾಜ್ಯಮಟ್ಟದ ಅನೇಕ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿದ್ದಾಳೆ. ಈಗ ಅವಳ ಬಳಿ ಇರುವುದು ಹತ್ತಿರಹತ್ತಿರ ನೂರು ಬಹುಮಾನಗಳು. ಸಂಗೀತ ಸ್ಪರ್ಧೆಗಳಲ್ಲಿ ಈಕೆ ಭಾಗವಹಿಸಿದಳೆಂದರೆ, ಬಹುಮಾನ ನಿಶ್ಚಿತ ಎಂದೇ ಅರ್ಥ. ಇವಳಿಗೆ 'ಪುರಂದರ ಯುವ ಪ್ರಶಸ್ತಿ' ಕೂಡ ಲಭಿಸಿದೆ.
ಬಹುಶಃ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಲ್ಲೂ ಅನ್ವಿತಾ ಹಾಡು ಮೊಳಗಿದೆ. ತಿರುಪತಿಯ 'ತಿರುಪತಿ ತಿರುಮಲ' ದೇವಸ್ಥಾನದಲ್ಲಿ ನಡೆಯುವ ವಿಶೇಷ ಸೇವಾ ಸಂದರ್ಭಗಳಲ್ಲಿ ಹಾಡಿದ ಕೀರ್ತಿ ಅನ್ವಿತಾಳದು. ಈಕೆ ರಾಜ್ಯದ ಎಲ್ಲ ಚಾನೆಲ್‌ಗಳಲ್ಲೂ ಕಾರ್ಯಕ್ರಮ ನೀಡಿದ್ದಾಳೆ. ಕಳೆದ ಒಂದೂವರೆ ವರ್ಷದಲ್ಲಿ ನಲವತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ನೀಡಿದ್ದಾಳೆ. ಈ ಸಣ್ಣ ವಯಸ್ಸಿಗೇ ಬೆಟ್ಟದಷ್ಟು ಸಾಧನೆ ಮಾಡಿದ ಪುಟ್ಟ ಬಾಲೆಗೆ ಉಜ್ವಲ ಭವಿಷ್ಯ ಖಂಡಿತ. ಸಂಪರ್ಕ: 9481451579, 9980400535.
- ಶಶಿರೇಖಾ ಹೆಗಡೆ