ರಂಗ ಲೋಕದ ತುಳು ಪ್ರತಿಭೆ
ತುಳು ರಂಗಭೂಮಿ ಹಲವು ಕಲಾವಿದರನ್ನು ಜಗತ್ತಿಗೆ ನೀಡಿದೆ. ಪ್ರತಿಭೆಗೆ ವಯಸ್ಸಿನ ಅಂತರವಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಅಭಿನಯದಿಂದ ಜನಮಾನಸ ಸೆಳೆದ ಕಲಾವಿದರಲ್ಲಿ 21ರ ಹರೆಯದ ಮಂಗಳೂರಿನ ಕರುಣಾಕರ ಸರಿಪಲ್ಲ ಒಬ್ಬರು.
ಈ ಪ್ರತಿಭೆ ವಿಠಲ ಪೂಜಾರಿ- ಗಿರಿಜಾ ದಂಪತಿ ದ್ವಿತೀಯ ಪುತ್ರ. ಬಾಲ್ಯದಲ್ಲೇ ಅಭಿನಯ ಕಡೆಗೆ ಆಕರ್ಷಿತರಾದ ಇವರು ಸ್ಥಳೀಯ ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಪಡೆದಿದ್ದರು. ಇವರ ಅಭಿನಯಕ್ಕೆ ಮನಸೋತ ರಾಜ್ಯಪ್ರಶಸ್ತಿ ವಿಜೇತ ತುಳು ರಂಗಕರ್ಮಿ ದೇವದಾಸ್ ಕಾಪಿಕಾಡ್ ತಮ್ಮ 'ಚಾಪರ್ಕ' ಬಳಗಕ್ಕೆ ಸೇರಿಸಿಕೊಂಡರು. ತನ್ನ 14ನೇ ವಯಸ್ಸಿನಲ್ಲಿ ಕಾಪಿಕಾಡ್ ಅವರ 'ಪಿರ ತೂವೊಡ್ಚಿ ದುಂಬು ಪೋಲೆ' ನಾಟಕದ ಮೂಲಕ ನಾಟಕರಂಗಕ್ಕೆ ಪದಾರ್ಪಣೆ ಮಾಡಿದರು. ಪುದರ್ ದೀತಿಜಿ, ಈರ್ ಉಂಡರ.., ಬೋರಿ ಬಸವೆ ಅವರು ನಟಿಸಿರುವ ಪ್ರಮುಖ ನಾಟಕಗಳು.
ಕಾಪಿಕಾಡ್ ಗರಡಿಯಲ್ಲಿ ಪಳಗುತ್ತಿರುವ ಕರುಣಾಕರ್ 30ಕ್ಕೂ ಹೆಚ್ಚು ನಾಟಕದಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗೆ ತೆರೆ ಕಂಡ ತುಳು ಸಿನಿಮಾ 'ತೆಲಿಕೆದ ಬೊಳ್ಳಿ'ಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಮಿಂಚಿದ್ದಾರೆ. ಇವರ ಉತ್ತಮ ಅಭಿನಯಕ್ಕಾಗಿ ದೇಶ- ವಿದೇಶಗಳಲ್ಲಿ ಹಲವು ಸನ್ಮಾನಗಳು, ಗೌರವ ಪ್ರಶಸ್ತಿಗಳು ಲಭಿಸಿವೆ.
ಕೇರಳ, ಮಹರಾಷ್ಟ್ರ, ದೆಹಲಿ ಮತ್ತು ದುಬೈ, ಕತಾರ್, ಅಬುಧಾಬಿಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ರಾಜ್ಯದ ಶಿವಮೊಗ್ಗ, ಕುಂದಾಪುರ, ಭಟ್ಕಳ ಮುಂತಾದ ಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಕರುಣಾಕರ್ ಬಿ.ಕಾಂ. ಪದವಿ ವ್ಯಾಸಂಗ ಮಾಡುತ್ತಿದ್ದು ಓದಿನ ಜತೆಗೆ ಅಭಿನಯವನ್ನೂ ಮೈಗೂಡಿಸಿಕೊಂಡಿದ್ದಾರೆ. ತಂದೆ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು ಮಗನ ಸಾಧನೆಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಕರುಣಾಕರ್ ಉತ್ತಮ ನೃತ್ಯಗಾರನೂ ಹೌದು. ಅಕ್ಕ ದೀಪಿಕಾ ಕೂಡ ಪದವೀಧರೆಯಾಗಿದ್ದು ಚಿತ್ರಕಲೆ ಮತ್ತು ಮೆಹಂದಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಲಿಕೆ ಜತೆ ನಟನೆಯಲ್ಲಿ ಮುಂದುವರಿಯುತ್ತಿರುವ ಕರುಣಾಕರ್ ನಟನೆಯಲ್ಲಿ ಉತ್ತಮ ಸಾಧನೆ ಮಾಡುವ ಕನಸು ಕಾಣುತ್ತಿದ್ದಾರೆ.
- ರವಿರಾಜ್ ಕಟೀಲು
ravirajsherry01@gmail.com