ಬೆಂಗಳೂರಿನ ಬಿ.ಇ.ಎಂ.ಎಲ್. ಬಡಾವಣೆಯ ನಿವಾಸಿ ವಸಂತ್ ಶಾನಭಾಗ್ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಶಿಸ್ತಿನ ಸಿಪಾಯಿ. ಸೈನ್ಯದಲ್ಲಿ ಸೇವೆ ಸಲ್ಲಿಸಿದಂಥವರು ಜೀವನದಲ್ಲಿ ಒಂದು ಶಿಸ್ತು ಮೈಗೂಡಿಸಿಕೊಂಡಿರುತ್ತಾರೆ. ವಸಂತ್ ಶಾನಭಾಗರೂ ಹಾಗೇ. 64ರ ಈ ವಯಸ್ಸಿನಲ್ಲೂ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಅವರ ದೃಷ್ಟಿಯಲ್ಲಿ ಯಾವುದೇ ವಸ್ತು ನಿರುಪಯುಕ್ತವಲ್ಲ. ಕಸದಿಂದ ರಸ ಮಾಡುವ ಜಾಯಮಾನ ಅವರದು. ಯಾವುದೇ ಕೆಲಸ ಅಸಾಧ್ಯ ಎಂದು ಹೇಳಿದವರೇ ಅಲ್ಲ. ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ಎಂತಹ ಕ್ಲಿಷ್ಟ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಅವರಲ್ಲಿದೆ. ಅವರ ಯೋಜನಾ ಶೈಲಿ, ಯೋಚನಾ ವಿಧಾನ, ಜೀವನವನ್ನು ಸುಲಭೀಕರಿಸುವ ರೀತಿ ವಿಸ್ಮಯಗೊಳಿಸುತ್ತದೆ.
ಅವರು ತಮ್ಮ ಮನೆಯಲ್ಲಿ ಮಳೆನೀರನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. ಟ್ಯಾಂಕಿನಲ್ಲಿ ನೀರು ಯಾವ ಮಟ್ಟದಲ್ಲಿದೆ ಎಂಬುದನ್ನು ಮನೆಯ ಒಳಗೇ ಕುಳಿತು ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ಮಾರುಕಟ್ಟೆಯಲ್ಲಿ ಹಲವು ವಿಧದ ಸ್ವಯಂಚಾಲಿತ ಉಪಕರಣ ಲಭ್ಯವಿದೆ. ಅದು ಟ್ಯಾಂಕಿನಲ್ಲಿನ ನೀರಿನ ಮಟ್ಟವನ್ನು ಗಮನಿಸಿ ಸೂಚನೆ ನೀಡುತ್ತದೆ. ಅದರ ಬಗ್ಗೆ ನಾನು ವಿವರಿಸಲು ಪ್ರಯತ್ನಿಸಿದಾಗ ಅವರು ಥಟ್ಟನೆ- 'ಅದ್ಯಾಕೆ? ನಾವೇ ಸುಲಭವಾಗಿ ಮಾಡಿಕೊಳ್ಳಬಹುದಲ್ಲ?' ಎಂದರು.
ವಸಂತ್ ಶಾನಭಾಗ್ ಅವರು ತಾರಸಿಯ ಮೇಲಿರುವ ಟ್ಯಾಂಕಿನ ನೀರಿನ ಮಟ್ಟವನ್ನು ತಮ್ಮದೇ ತಂತ್ರಜ್ಞಾನದಿಂದ ಮನೆಯಲ್ಲೇ ಕುಳಿತು ನೋಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಮನೆಯಲ್ಲೇ ಲಭ್ಯವಿರುವ ಕೆಲವು ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿ ಒಂದು ಸಮರ್ಥ ವ್ಯವಸ್ಥೆಯನ್ನು ರೂಪಿಸಿದ್ದರು.
ಉದ್ದ ದಾರದ ಒಂದು ತುದಿಗೆ ಮರದ ತುಂಡು ಕಟ್ಟಿ (ನೀರಿನಲ್ಲಿ ತೇಲುವ ಯಾವುದೇ ಭಾರದ ವಸ್ತು), ಮತ್ತೊಂದು ತುದಿಗೆ ವಿದ್ಯುತ್ ಬಲ್ಬಿನ ಕೆಟ್ಟುಹೋದ ಹಿಡಿಕೆಯನ್ನು ಕಟ್ಟಿದ್ದರು (ನಿರ್ದೇಶಕದ ರೀತಿ ಕೆಲಸ ಮಾಡಲು). ಮರದ ತುಂಡು ಕಟ್ಟಿದ ತುದಿಯನ್ನು ಟ್ಯಾಂಕಿನೊಳಗೆ, ಮತ್ತೊಂದು ತುದಿಯನ್ನು, ಮನೆಯ ಬಾಲ್ಕನಿಯ ಗೋಡೆ ಮೇಲೆ ಇಳಿಬಿಟ್ಟಿದ್ದರು.
ಕಸವೆಂದು ಬಿಸಾಕಿದ ಕಿಟಕಿ ಪರದೆಯ ಚಿಕ್ಕಚಿಕ್ಕ ರಾಟೆಗಳನ್ನು ಅಲ್ಲಲ್ಲಿ ಆಸರೆಗೆ ಹಾಗೂ ದಾರದ ಸ್ವತಂತ್ರ ಚಲನೆಗೆ ಉಪಯೋಗಿಸಿದ್ದರು. ಟ್ಯಾಂಕನ್ನು ಖಾಲಿಯಾದಾಗ ದಾರದ ತುದಿ ಎಲ್ಲಿಗೆ ಬರುತ್ತದೆ? ಟ್ಯಾಂಕ್ ತುಂಬಿದ ಮೇಲೆ ಎಲ್ಲಿಗೆ ಬರುತ್ತದೆ ಎಂಬುದನ್ನು ಮೊದಲೇ ನಿರ್ಧರಿಸಿ ಗೋಡೆಯ ಮೇಲೆ ಒಂದು ಮಾಪಕವನ್ನು ತಯಾರಿಸಿದ್ದರು.
ಇದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿತ್ತು. ತಾನು ಮಾಡಿದ್ದು ಎಂಬ ತೃಪ್ತಿ ಇತ್ತು ಅವರ ಮನದಲ್ಲಿ. ಇಂತಹ ಎಷ್ಟೋ ಚಿಕ್ಕಚಿಕ್ಕ ಆವಿಷ್ಕಾರಗಳನ್ನು ಇವರ ಮನೆಯಲ್ಲಿ ಕಾಣಬಹುದು.
ಸಮಯ ಮತ್ತು ಸಂಪನ್ಮೂಲಗಳನ್ನು ಪೋಲು ಮಾಡಿದವರೇ ಅಲ್ಲ ಇವರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿಲ್ಲದಿದ್ದರೂ ಯಾವ ಎಂಜಿನಿಯರ್‌ಗೂ ಕಡಿಮೆ ಇಲ್ಲದ ಆಲೋಚನೆ ಹೊಂದಿದವರು. ಇವರ ಶೃದ್ಧೆ, ಸೃಜನಶೀಲತೆ ನಮಗೆಲ್ಲ ಮಾದರಿ. ಶಾನಭಾಗರ ಸಂಪರ್ಕ: 9740504695.
- ಪರೇಶ ಸರಾಫ