ಬಸವನಗುಡಿಯ 'ಇಂಡಿ ಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್' ಆವರಣದಲ್ಲಿರುವ ಕಲಾ ಶಾಲೆಗೆ ಹೋದರೆ 'ನಮಸ್ಕಾರ, ಬರ್ರಿ... ಕೂತ್ಕೊಳ್ರಿ...' ಎಂದು ಸೌಜನ್ಯದಿಂದ ಬರಮಾಡಿಕೊಳ್ಳುತ್ತಾರೆ ಸಜ್ಜನ, ಸಭ್ಯ ವ್ಯಕ್ತಿ ಎಂ.ಕೆ. ಸುಂಕದ್. ಸಂಸ್ಥೆಯ ಆವರಣದಲ್ಲೊಮ್ಮೆ ಸುತ್ತಾಡಿದರೆ, ಚಿಣ್ಣರು ಬಣ್ಣಗಳಲ್ಲಿ ಆಟವಾಡುತ್ತಿರುತ್ತಾರೆ. ಹಾಗಂತ ಅದು ಚಿಕ್ಕಮಕ್ಕಳಿಗೆ ಮಾತ್ರ ಮೀಸಲಲ್ಲ, ಎಲ್ಲ ವಯೋವಾನದವರೂ ಅಲ್ಲಿ ಸಿಗುತ್ತಾರೆ. ಎಲ್ಲರೂ, ಬಣ್ಣ, ಕುಂಚ, ಪೇಪರ್, ಕ್ಯಾನ್ವಾಸ್‌ಗಳಲ್ಲಿ ಆಡುತ್ತಿರುತ್ತಾರೆ. ಯಾಕೆ ಅಂತೀರಾ? ಇಲ್ಲೊಂದು ಚಿತ್ರಕಲಾ ಶಾಲೆಯಿದೆ. ಅದರ ಗೌರವ ಮಾರ್ಗದರ್ಶಕರಾಗಿ 27 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂ.ಕೆ. ಸುಂಕದ್.
'ಮಾನವ ತನ್ನಲ್ಲಿರುವ ಈಶ್ವರೀ ಚೈತನ್ಯವನ್ನು ಮತ್ತು ಅದರ ವಿಶ್ವತೋಮುಖ ವ್ಯಾಪ್ತಿಯನ್ನು ಅರ್ಥಮಾಡಿಕೊಂಡು ಆ ಚೈತನ್ಯದ ಪ್ರಸಾರದಲ್ಲಿ ನಿರತವಾಗುವುದು ಸಂಸ್ಕೃತಿ. ಈ ರೀತಿ ಅರ್ಥಮಾಡಿಕೊಂಡಿದ್ದನ್ನು ರಚನಾತ್ಮಕವಾಗಿ ರೂಪಿಸುವುದೇ ಕಲೆ. ಮನಸ್ಸಿಗೆ ಶಾಂತ ಸ್ಥಿತಿಯನ್ನು ತಂದೊದಗಿಸಿ ದಿವ್ಯದರ್ಶನ ಮಾಡಿಸುವುದೇ ಕಲೆಯ ಗುರಿ. ಜೀವನದ ಎಲ್ಲ ಆವಿಷ್ಕಾರಗಳಲ್ಲೂ ಅಧ್ಯಾತ್ಮ ಹಾಸುಹೊಕ್ಕಾಗಿದೆ. ಲಲಿತಕಲೆಗಳು ಇವೆಲ್ಲವುಗಳಿಗೆ ಅತಿ ಸಮೀಪದವುಗಳಾಗಿವೆ. ಭಾರತೀಯ ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆಗಳು ಅಧ್ಯಾತ್ಮ ಜೀವನದ ಮೂಲಾಧಾರಗಳು' ಎನ್ನುತ್ತಾರೆ ಎಂ.ಕೆ. ಸುಂಕದ್.
ಇವರು ಬಳಸುವ ಬಣ್ಣವೇ ವಿಶೇಷ. ಬಣ್ಣಗಳ ಮೂಲಕ ಬದುಕಿನ ಹಲವು ಸ್ಥರಗಳನ್ನು ಬಿಂಬಿಸುವ ಇವರ ವರ್ಣಕಲೆ ಅಪೂರ್ವ. ಕಲಾಕೃತಿಗಳಲ್ಲಿ ಬಣ್ಣಗಳೇ ಮಾತಾಡುತ್ತವೆ. ರೇಖೆಗಳು ನರ್ತಿಸಿ, ನಮ್ಮ ದೃಷ್ಟಿಯನ್ನು ಆಹ್ವಾನಿಸುತ್ತವೆ. ವರ್ಣಚಿತ್ರಕಲೆಯಲ್ಲಿ ಸಾಧನೆಯನ್ನು ಮೆರೆದ, ಯಾರ ಸ್ಪರ್ಧೆಗೂ ನಿಲುಕದೆ, ಬೆಲೆಕಟ್ಟಲು ಸಾಧ್ಯವಾಗದಂಥ ಕಲೆಗಳ ಜನ್ಮದಾತರು ಇವರು.
ಬಾಲ್ಯದಿಂದಲೇ ಬಣ್ಣದ ಮೇಲಿನ ವ್ಯಾಮೋಹ ಬೆಳೆಸಿಕೊಂಡರು. ಕಲೆಗೆ ಸಂಬಂಧಿಸಿದಂತೆ ಇವರ ಮೇಲೆ ಗಾಢ ಪರಿಣಾಮ ಬೀರಿದವರು ಡಾ. ಎಂ.ವಿ. ಮಿಣಜಿಗಿ. ಧಾರವಾಡದ ಡಿ.ವಿ. ಹಾಲಭಾವಿಯವರ ಕಲಾಶಾಲೆಯಲ್ಲಿ ತರಬೇತಿ ಪಡೆದು 1955ರಲ್ಲಿ ಮುಂಬೈನ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌ನಿಂದ ಮಾಸ್ಟರ್ ಡಿಗ್ರಿ ಪಡೆದು, ಕಲಾಶಿಕ್ಷಕರಾಗಿ ಹೊರಹೊಮ್ಮಿದ ಎಂ.ಕೆ. ಸುಂಕದ್ ತಮ್ಮ ಕಲಾ ಸೃಷ್ಟಿಗಿಂತಲೂ ಕಲಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವವರು. ಇದುವರೆಗೆ 3500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿದ ಮಹಾಗುರು ಇವರು. ಅಲ್ಲದೆ, ನೂರಾರು ಚಿತ್ರಕಲಾ ಶಿಕ್ಷಕರನ್ನು ತರಬೇತಿಗೊಳಿಸಿದ್ದಾರೆ. ಇವರ ಶಿಷ್ಯರಲ್ಲಿ 8 ವರ್ಷದ ಪುಟಾಣಿಗಳಿಂದ 80ರ ವೃದ್ಧರವರೆಗೂ ಇದ್ದಾರೆ! ಇದುವರೆಗೆ 60ಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನವನ್ನು ಆಯೋಜಿಸಿದ ಹೆಗ್ಗಳಿಕೆ ಇವರದು.
ಎಂ.ಕೆ. ಸುಂಕದ್ ಅತ್ಯುತ್ತಮ ಕಲಾಶಿಕ್ಷಕರು. ಈ 82ರ ವಯಸ್ಸಿನಲ್ಲೂ ಬಿ.ಇಡಿ., ಡಿ.ಇಡಿ. ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ. ರಾಷ್ಟ್ರೀಯ ವಿದ್ಯಾಲಯದಲ್ಲಿ ಕಲಾಶಿಕ್ಷಕರಾಗಿ ತರಬೇತಿ ನೀಡುತ್ತಿದ್ದಾರೆ. ಅತಿಥಿ ಉಪನ್ಯಾಸಕರಾಗಿದ್ದಾರೆ. ರಾಜ್ಯದ ಶಿಕ್ಷಣ ಇಲಾಖೆಯ ಡಿಎಸ್‌ಇಆರ್‌ಟಿ ಮತ್ತು ಎನ್‌ಸಿಇಆರ್‌ಟಿಗಳಿಗೆ ಪಾಠೋಪಕರಣಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಸರ್ಕಾರದ ದೃಶ್ಯ-ಶ್ರವಣ ಶಿಕ್ಷಣದ ಅಗತ್ಯ ಪೂರೈಸುವ ಚನಲಚಿತ್ರ ಮಾಲೆಗಳಿಗೆ ಚಿತ್ರಗಳು ಹಾಗೂ ವರ್ಣಚಿತ್ರಗಳನ್ನು ರಚಿಸಿ ಕೊಟ್ಟಿದ್ದಾರೆ. 'ಕಲೆಯ ಬೆಳವಣಿಗೆ ಕಲಾವಿದನ ಬೆಳವಣಿಗೆಯಾಗಬೇಕು. ಚಿತ್ರಕಲೆ ವಿಶ್ವಭಾಷೆಯಾಗಿದ್ದು, ವಿಶ್ವ ಮಾನ್ಯತೆ ಕೂಡ ಇದೆ. ಈ ನಿಟ್ಟಿನಲ್ಲಿ ಚಿತ್ರಕಲೆ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಯಾಗಬೇಕು. ಜನಸಾಮಾನ್ಯರಿಗೂ ಇದು ತಲುಪುವಂತೆ ಇಂದಿನ ಕಲಾವಿದರು ಚಿತ್ರಕಲೆ ಬಗ್ಗೆ ಪರಿಪೂರ್ಣ ಜ್ಞಾನ ಬೆಳೆಸಿಕೊಳ್ಳಬೇಕು' ಎನ್ನುತ್ತಾರೆ.
ಪೆನ್ಸಿಲ್ ಸ್ಕೆಚಿಂಗ್, ತೈಲವರ್ಣ, ಜಲವರ್ಣ, ನಿಬ್ ಪೇಂಟಿಂಗ್ ಮತ್ತು ಸಾಂಪ್ರದಾಯಿಕ ಕಲೆಗಳಾದ ತಂಜಾವೂರು, ಮೈಸೂರು ಶೈಲಿ ಚಿತ್ರ ರಚನೆಯಲ್ಲಿ ಇವರು ಸಿದ್ಧಹಸ್ತರು. 82ರ ಹರೆಯದಲ್ಲೂ ಇವ ಉತ್ಸಾಹ ನೋಡಿದರೆ ತರುಣರೂ ನಾಚಬೇಕು. ಇಂದಿಗೂ ಚಿತ್ರ ರಚನೆಯಲ್ಲಿ ಸದಾ ತೊಡಗಿಸಿಕೊಳ್ಳುವ, ಬಣ್ಣಗಳಲ್ಲೇ ಸಮಯ ಕಳೆಯುವ ಇವರು ರಚಿಸಿದ ರವೀಂದ್ರನಾಥ ಟ್ಯಾಗೋರ್, ಆತಂಕದ ಮುಖ ಹೊತ್ತು ಕುಳಿತ ಹೆಣ್ಣುಮಗಳು, ಹಸುವಿನ ಜತೆಗಿರುವ ರೈತ ಮಹಿಳೆ, ಬಾದಾಮಿಯ ಪ್ರತಿಕೃತಿ ವಿಶೇಷವಾಗಿದೆ. ಇವರು ರಚಿಸಿದ ಚಿತ್ರಗಳ ರೇಖೆಗಳ ಹಾದಿಯನ್ನು ಆಳವಾಗಿ ಪರಿಭಾವಿಸಿದರೆ ತತ್ತ್ವಜ್ಞಾನಿಯೊಬ್ಬನ ಗಾಂಭೀರ್ಯ ಕಾಣಿಸುತ್ತದೆ. ಇವರ ವರ್ಣಚಿತ್ರಗಳನ್ನು ಏಕಾಗ್ರತೆಯಿಂದ ವೀಕ್ಷಿಸಿದರೆ ಬಳಸುವ ಬಣ್ಣಗಳ ಸಂಯೋಜನೆ, ರೇಖೆಗಳು ಬೆರಗುಗೊಳಿಸುವ ಪರಿಣತಿಯನ್ನು ಹೇಳುತ್ತವೆ. ನಿಜಕ್ಕೂ ಇವರೊಬ್ಬ ಕಲೆಯ ಹರಿಕಾರ.
ಇವರೊಬ್ಬ ಅಸಾಧಾರಣ ಕಲಾವಿದ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಗೋಡೆಯ ತುಂಬ ಇವರ ಅದ್ಭುತ ತೈಲವರ್ಣ, ಜಲವರ್ಣ ಚಿತ್ರಗಳು ತುಂಬಿಹೋಗಿವೆ. ಆದರೆ ಇಂದಿಗೂ ಎಲೆಮರೆಯ ಕಾಯಾಗಿಯೇ ಉಳಿದುಬಿಟ್ಟಿದ್ದಾರೆ. ಯಾವುದೇ ಪ್ರಚಾರ, ಪ್ರಶಸ್ತಿಗೆ ಆಸೆಪಡದೆ ತಮ್ಮ ಕೆಲಸವನ್ನು ನಿಷ್ಠೆಯಿಂದ, ಪ್ರೀತಿಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ.
= ಶಶಿರೇಖಾ ಹೆಗಡೆ