ಸಾಧನೆ

ಸ್ಟೀಲ್ ಮ್ಯಾನ್

'ಜೀವನದಲ್ಲಿ ಛಲ, ಉತ್ಸಾಹ ಇದ್ದರೆ, ಸಾಧನೆ ಮಾಡುವುದು ಕಷ್ಟದ ಕೆಲಸವೇನಲ್ಲ.

'2006 ನನಗೆ ಅಗ್ನಿ ಪರೀಕ್ಷೆಯ ವರ್ಷ. ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವಾಲಯದ ಬ್ರಹ್ಮ ರಥೋತ್ಸವಕ್ಕೆ ರಥದ ಗೋಪುರವನ್ನು ಅದುವರೆಗೆ ಅಡಕೆ ದಬ್ಬೆ, ಬಿದಿರು ಉಪಯೋಗಿಸಿ ನಿರ್ಮಿಸುತ್ತಿದ್ದರು. ಅದಕ್ಕೆ ಶಾಶ್ವತ ಸ್ಟೀಲ್ ಗೋಪುರ ವಿನ್ಯಾಸಗೊಳಿಸಿ, ಅಳವಡಿಸುವ ಕೆಲಸ ಒಪ್ಪಿಕೊಂಡೆ. ಕೇವಲ ಒಂದೇ ತಿಂಗಳ ಕಾಲಾವಕಾಶ. ಇದನ್ನು ಚಾಲೆಂಜಾಗಿ ಸ್ವೀಕರಿಸಿದೆ. ಬಹಳ ತೂಕದ ಸ್ಟೀಲ್ ಕೂಡ ಬಳಸುವಂತಿರಲಿಲ್ಲ. 1200 ಕೆ.ಜಿ. ಸ್ಟೀಲ್ ಬಳಸಿ, ಶಾಶ್ವತ ಸ್ಟೀಲ್ ಗೋಪುರವನ್ನು ಯಶಸ್ವಿಯಾಗಿ ಅಳವಡಿಸಿದೆ. ಇದಕ್ಕೆ ತಗುಲಿದ ಖರ್ಚು 25 ಸಾವಿರ ರುಪಾಯಿ ಮಾತ್ರ. ರಥೋತ್ಸವದ ದಿನ ಅಗ್ನಿ ಪರೀಕ್ಷೆಯಲ್ಲಿ ಜಯಿಸಿದ ತೃಪ್ತಿ ನನಗಾಯಿತು'
'ಜೀವನದಲ್ಲಿ ಛಲ, ಉತ್ಸಾಹ ಇದ್ದರೆ, ಸಾಧನೆ ಮಾಡುವುದು ಕಷ್ಟದ ಕೆಲಸವೇನಲ್ಲ. ಸವಾಲುಗಳನ್ನು ಎದುರಿಸಿ ಮುನ್ನುಗ್ಗುವ ಗುಣವನ್ನು ಮೈಗೂಡಿಸಿಕೊಳ್ಳಬೇಕಷ್ಟೆ. ಇದಕ್ಕೆ ವಯಸ್ಸು ಅಡ್ಡಿ ಬರುವುದೇ ಇಲ್ಲ ಎನ್ನುವುದಕ್ಕೆ ನಾನೇ ಉದಾಹರಣೆ' ಎನ್ನುತ್ತ ಮಂದಹಾಸ ಬೀರಿದರು ಗೀಜಗಾರಿನ 76 ವರ್ಷದ ವಿ.ನಾ. ಕೃಷ್ಣಮೂರ್ತಿ.
ಓದಿದ್ದು ಎಸ್‌ಎಸ್‌ಎಲ್‌ಸಿ. ಜೀವನ ನಿರ್ವಹಣೆಗೆ ನಂಬಿಕೊಂಡಿದ್ದು ಕೃಷಿಯನ್ನು. ಆದರೆ ಇವರ ತುಡಿತ ಇದ್ದದ್ದು ಸ್ವಾವಲಂಬಿ ಬದುಕಿನತ್ತ. ಹೀಗಾಗಿ ದುಡಿಯಬೇಕು, ನನ್ನ ಕಾಲಮೇಲೆ ನಾನು ನಿಂತುಕೊಳ್ಳಬೇಕು ಎಂಬ ಛಲವೇ ಇವರು ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ವಿಶೇಷವೆಂದರೆ, ಇವರು ಉದ್ಯಮ ಪ್ರಾರಂಭಿಸಿದ್ದೇ ತಮ್ಮ 50ನೇ ವಯಸ್ಸಿನ ನಂತರ!

ಹೊಸತನದ ತುಡಿತ
ಏನನ್ನಾದರೂ ಹೊಸತನ್ನು ಮಾಡಬೇಕೆಂಬ ತುಡಿತದಿಂದ 1986ರ ಸೆಪ್ಟೆಂಬರ್‌ನಲ್ಲಿ ಬಾವಿ ರಿಂಗ್‌ಗಳನ್ನು ತಯಾರಿಸುವ ಸಣ್ಣ ಕೈಗಾರಿಕಾ ಘಟಕವನ್ನು ಮೊದಲು ಪ್ರಾರಂಭಿಸಿದರು. ಇದರ ಬಗ್ಗೆ ಪೂರ್ವಭಾವಿಯಾಗಿ ಶಿವಮೊಗ್ಗ, ಪುಣೆ, ಕೊಲ್ಲಾಪುರ ಕಡೆ ಓಡಾಡಿ ಪರಿಣತಿ ಸಂಪಾದಿಸಿಕೊಂಡರು. ಉದ್ಯಮ ಪ್ರಾರಂಭಿಸಿದಾಗ ಐದು ಜನ ಕೆಲಸಗಾರರು ಜತೆಗಿದ್ದರು. ಬಾವಿ ರಿಂಗ್‌ಗಳ ಜತೆಗೆ ಸಿಮೆಂಟ್ ಬಾಗಿಲು, ಕಿಟಕಿ ಚೌಕಟ್ಟುಗಳನ್ನೂ ತಯಾರಿಸಲಾರಂಭಿಸಿದರು. 1990ರಲ್ಲಿ ನೀರಿನ ಟ್ಯಾಂಕ್‌ಗಳು, ವಿನೂತನ ಶೈಲಿ, ವಿನ್ಯಾಸಗಳಲ್ಲಿ ಸೆಫ್ಟಿಕ್ ಟ್ಯಾಂಕ್‌ಗಳ ನಿರ್ಮಿಸಲಾರಂಭಿಸಿದರು. ಇದು ಅತ್ಯುತ್ತಮ ಗುಣಮಟ್ಟದ ಟ್ಯಾಂಕುಗಳೆಂದು ಗ್ರಾಹಕರ ಪ್ರಶಂಸೆಗೆ ಪಾತ್ರವಾಗಿದೆ. 'ಗ್ರಾಹಕರ ನಂಬಿಕೆ ವಿಶ್ವಾಸವೇ ಹೊಸಹೊಸ ಸಿಮೆಂಟ್ ವಸ್ತುಗಳ ಉತ್ಪಾದನೆಗೆ ಪ್ರೇರಣೆ ನೀಡಿತು' ಎಂದು ಕೃತಜ್ಞತೆಯಿಂದ ನೆನೆಯುತ್ತಾರೆ ಕೃಷ್ಣಮೂರ್ತಿ. ಇವರು ತಯಾರಿಸಿದ ಆರ್‌ಸಿಸಿ ಪೈಪುಗಳು ಗ್ರಾಮ ಪಂಚಾಯಿತಿಗಳಿಗೆ ಸರಬರಾಜಾಗುತ್ತಿವೆ. 'ಹೊಸತನಕ್ಕೆ ನಾನೇನೂ ಹೆಚ್ಚು ಬಂಡವಾಳ ತೊಡಗಿಸುವ ಅವಶ್ಯಕತೆ ಬೀಳಲಿಲ್ಲ. ಬಂದ ಲಾಭದಲ್ಲಿ ಹೊಸತು ನಿರ್ಮಿಸಿದೆ. ಗ್ರಾಹಕರನ್ನು ತೃಪ್ತಿಪಡಿಸಬೇಕು. ವಿಶ್ವಾಸ ಉಳಿಸಿಕೊಳ್ಳಬೇಕೆಂಬುದೇ ನನ್ನ ಉದ್ದೇಶವಾಗಿತ್ತು' ಎನ್ನುತ್ತಾರೆ.

ಅಕ್ಷಯ ಅನಿಲ ಸ್ಥಾವರದ ಆವಿಷ್ಕಾರ
ತೀರಾ ಚಿಕ್ಕ ಕುಟುಂಬಗಳು ಕೂಡ ನೈಸರ್ಗಿಕ ಅನಿಲ ಬಳಸಿ ಪರಿಸರ ಉಳಿಸುವ ನಿಟ್ಟಿನಲ್ಲಿ ಅತಿ ಕಡಿಮೆ ಸಗಣಿ ಬಳಸಿ ಗೋಬರ್‌ಗ್ಯಾಸ್ ಪಡೆಯುವ ಅಕ್ಷಯ ಅನಿಲ ಸ್ಥಾವರ ಇವರ ಆವಿಷ್ಕಾರಗಳಲ್ಲಿ ವಿಶೇಷವಾದುದು. ಒಂದು ಮನೆಗೆ ಅಡುಗೆಗೆ ಬೇಕಾಗುವಷ್ಟು ಅನಿಲ ಇಂಧನವನ್ನು ಒಂದೇ ಜಾನುವಾರು ಸಗಣಿಯಿಂದ ಪಡೆಯಬಹುದೆಂಬುದನ್ನು ಅಕ್ಷಯ ಅನಿಲ ಸ್ಥಾವರದ ಮೂಲಕ ತೋರಿಸಿಕೊಟ್ಟವರು ಕೃಷ್ಣಮೂರ್ತಿ. ಅದಾಗಲೇ ಚಾಲ್ತಿಯಲ್ಲಿದ್ದ ತೇಲುವ ಡ್ರಂ ಮಾದರಿಯ ಗೋಬರ್ ಅನಿಲ ಸ್ಥಾವರ, ನಂತರ ಬಂದಿದ್ದ ಸುಲಭ ಖರ್ಚಿನ ದೀನಬಂಧು ಮಾದರಿಯ ಪ್ಲಾಂಟ್‌ಗಳಲ್ಲಿ ಸ್ಲರಿಯು ತೊಂಬತ್ತು ದಿನಗಳವರೆಗೆ ಮಾತ್ರ ಇರುತ್ತದೆ. ಅಂದರೆ ಶೇಕಡಾ 50ರಷ್ಟು ಅನಿಲ ಮಾತ್ರ ಬಳಕೆಗೆ ದೊರೆತಂತಾಗುತ್ತದೆ. ಆದರೆ 165 ದಿನಗಳ ಕಾಲ ಸ್ಲರಿಯಿಂದ ಮೀಥೇನ್ ಅನಿಲ ಬಿಡುಗಡೆಯಾಗುತ್ತಲೇ ಇರುತ್ತದೆ. ಒಂದು ತೇಲುವ ಮಾದರಿ ಹಾಗೂ ಎರಡು ದೀನಬಂಧು ಮಾದರಿಯ ಸ್ಥಾವರವನ್ನು ಒಮ್ಮೆಗೇ ಅಳವಡಿಸಿದ ಪರಿಣಾಮವಾಗಿ ಅನಿಲ ಸಂಪೂರ್ಣ ಬಳಕೆಗೆ ಸಿಗುವುದೇ ಇವರು ತಯಾರಿಸಿದ ಅಕ್ಷಯ ಅನಿಲ ಸ್ಥಾವರದ ವಿಶೇಷತೆ.

ವಿಶೇಷ ವಿನ್ಯಾಸದ ಕಬ್ಬಿಣದ ಮೇಲ್ಛಾವಣಿ
ನಂತರದ ಪ್ರಯೋಗ ಕಬ್ಬಿಣದ ಮೇಲ್ಛಾವಣಿ ನಿರ್ಮಾಣ. ಮಲೆನಾಡು ಭಾಗಗಳಿಗೆ ಸೂಕ್ತವಾದ, ಪರಿಸರಸ್ನೇಹಿಯಾದ ಈ ಮೇಲ್ಛಾವಣಿಗೆ ಮರವನ್ನು ಬಳಸದೆಯೇ ಸಂಪೂರ್ಣವಾಗಿ ಕಬ್ಬಿಣದ ಸರಳು, ಪಟ್ಟಿಗಳಿಂದ ನಿರ್ಮಿಸಲಾಗುತ್ತದೆ. ಇವರು ನಿರ್ಮಿಸಿದ ಸಾಗರದ ಪ್ರಗತಿ ಶಾಲೆಯ ಆಕರ್ಷಕ ಮೇಲ್ಛಾವಣಿ ಎಂಥವರನ್ನೂ ಒಮ್ಮೆ ಅತ್ತ ಕಣ್ಣು ಹಾಯಿಸುವಂತೆ ಮಾಡುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಳ್ಳಿಯ ಜನರು ಕೃಷಿಗೆ ವಿಮುಖರಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಉದ್ದೇಶದಿಂದ ಗಂಟೆಗೆ 30-40 ಕೆಜಿ. ಚಾಲಿ ಸುಲಿಯಬಹುದಾದ ಯಂತ್ರವನ್ನು ತಯಾರಿಸಿದ್ದಾರೆ. ಇದನ್ನು ಮತ್ತಷ್ಟು ಸುಧಾರಿಸುವ ಜತೆಗೆ ಹಸಿ ಅಡಿಕೆಯನ್ನು ಸುಲಿಯುವ ಯಂತ್ರವನ್ನು ತಯಾರಿಸುವ ಯೋಚನೆಯಲ್ಲಿದ್ದಾರೆ. ಕೃಷ್ಣಮೂರ್ತಿ ತಮ್ಮ ಕನಸುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತಲೇ ಇದ್ದಾರೆ.
ಇವರ ಈ ಉದ್ಯಮ ಈ ವರ್ಷ ಬೆಳ್ಳಿ ಹಬ್ಬವನ್ನು ಆಚರಿಸಿದೆ! ಮೂವರು ಕೆಲಸಗಾರರಿಂದ ಆರಂಭವಾದ ಈ ಉದ್ಯಮದಲ್ಲಿ ಇಂದು ಇಪ್ಪತ್ತಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ವಿ.ನಾ. ಕೃಷ್ಣಮೂರ್ತಿ ಈಗಲೂ ಲವಲವಿಕೆಯಿಂದ ಈ ಉದ್ಯಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಶ್ರಮವಹಿಸಿ ದುಡಿದರೆ ಸಾಧಿಸಲು ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎಂಬುದು ವಿ.ನಾ. ಕೃಷ್ಣಮೂರ್ತಿಯವರ ಅಚಲ ನಂಬಿಕೆ.

- ಜಯಪ್ರಕಾಶ ತಲವಾಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು