ಕೈ ತುಂಬ ಅಲ್ಲದಿದ್ದರೂ ಸುಖವಾಗಿ ಸಂಸಾರ ಸಾಗಿಸಲು ಸಾಲುವಷ್ಟು ಸಂಬಳವಿತ್ತು. ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ. ಅದೊಂದು ದಿನ ಕನ್ನಡಕ್ಕಾಗಿ ಬದುಕುವ ಸಂಕಲ್ಪ ಮಾಡಿದವ ಕೆಲಸಕ್ಕೆ ರಾಜೀನಾಮೆ ಬಿಸಾಕಿದ. ಕನ್ನಡ ಕೈಂಕರ್ಯಕ್ಕೆ ಟೊಂಕಕಟ್ಟಿ ಹೊರಟೇಬಿಟ್ಟ.
ಸದ್ಯ ಕೊಟ್ಟೂರಿನಲ್ಲಿ ವಾಸವಾಗಿರುವ ಪಿ. ಬಸವನಗೌಡ ನಿಜಾರ್ಥದಲ್ಲಿ ಕನ್ನಡ ಪ್ರೇಮಿ. ವರ್ಷವಿಡೀ ಕನ್ನಡ ಪುಸ್ತಕಗಳನ್ನು ಬೈಕ್‌ನಲ್ಲಿ ಮಾರಾಟ ಮಾಡುತ್ತ ನಿರಂತರ ಕನ್ನಡ ಸೇವೆ ಮಾಡುತ್ತಿರುವ ಕನ್ನಡಿಗ. ಮೂಲತಃ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕು ಚಿರಸ್ತಹಳ್ಳಿ ಗ್ರಾಮ. ಕೂಡ್ಲಿಗಿ ತಾಲೂಕು ಕೊಟ್ಟೂರಿನಲ್ಲಿ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳೊಂದಿಗೆ ವಾಸ್ತವ್ಯ. ಉತ್ತರ ಕರ್ನಾಟಕದ ಮೂಲೆಮೂಲೆಗೆ ತೆರಳಿ ಶಾಲಾ ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ತಲುಪಿಸಿ, ಕನ್ನಡ ಓದುವಂತೆ ಪ್ರೇರೇಪಿಸುವುದೇ ಈತನ ಕಾಯಕ, ಅದೇ ಬದುಕು.
33ರ ಹರೆಯದ ಬಸವನಗೌಡ ಬಿ.ಇಡಿ ಪದವೀಧರ. ಕೆಲಕಾಲ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ್ದಾರೆ. 'ಕನ್ನಡ ಭಾಷಾಭಿಮಾನದ ಮನಸ್ಸು ಹೇಗೆ ಬಂತೋ ಗೊತ್ತಿಲ್ಲ. ಪುಸ್ತಕ ಹಂಚಲು ಶುರು ಮಾಡಿದೆ ಅಷ್ಟೇ' ಎನ್ನುತ್ತಾರೆ ಈ ಯುವಕ. ರು. 5 ಮುಖ ಬೆಲೆಯ ಪುಸ್ತಕಗಳನ್ನು ಎರಡು ರೂಪಾಯಿಗೆ ಮಕ್ಕಳಿಗೆ ಕೊಡುತ್ತಾರೆ. ಬಡವರು, ಅಂಗವಿಕಲರಿಂದ ಹಣ ಪಡೆಯುವುದಿಲ್ಲ. ಚೂರುಪಾರು ಕಾಸು ಸಿಕ್ಕರೆ ಸಾಕು. ಮತ್ತೆ ಮುಂದಿನ ಊರಿಗೆ ಪಯಣ. ರಾತ್ರಿ ಯಾವ ಊರಿನಲ್ಲಿರುತ್ತಾರೋ ಆ ಊರಿನ ದೇವಸ್ಥಾನ ಅಥವಾ ಶಾಲೆಯಲ್ಲಿಯೇ ವಸತಿ.
ನಿತ್ಯ ಬೈಕ್ ಸಂಚಾರಿ
'ಮೊದಲ ವರ್ಷ ಬಸ್ಸಲ್ಲೇ ತೆರಳಿ ಪುಸ್ತಕ ಮಾರುತ್ತಿದ್ದೆ. ನನ್ನ ಕಷ್ಟ ನೋಡಿ ಸ್ನೇಹಿತರೊಬ್ಬರು ತಮ್ಮ ಹಳೆ ಬೈಕ್ ಕೊಟ್ಟರು. ಹೀಗಾಗಿ 5 ವರ್ಷದಿಂದ ಬೈಕ್‌ನಲ್ಲಿ ಸುತ್ತಿ ಪುಸ್ತಕ ಮಾರುತ್ತಿದ್ದೇನೆ. ಹಂಚುತ್ತಿದ್ದೇನೆ. ಇಲ್ಲಿಯುವರೆಗೂ 9 ಲಕ್ಷ ಕನ್ನಡ ಪುಸ್ತಕ ಮಾರಿದ್ದೇನೆ. ಪುಸ್ತಕ ಖಾಲಿಯಾದ ತಕ್ಷಣ ಅದೇ ಗ್ರಾಮದಲ್ಲಿ ಬೈಕ್ ಬಿಟ್ಟು ಬಸ್ಸಲ್ಲಿ ಊರಿಗೆ ಬಂದು ಪುನಃ ಸಾವಿರಾರು ಪುಸ್ತಕ ಒಯ್ಯುತ್ತೇನೆ. ಕನ್ನಡದ ದಾರ್ಶನಿಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕುರಿತ ಪುಸ್ತಕಗಳನ್ನು ಮಾರಾಟ ಮಾಡುತ್ತೇನೆ' ಎನ್ನುತ್ತಾರೆ ಅವರು.
ಪುಸ್ತಕ ತರಲೆಂದು ಮನೆಗೆ ಹೋದಾಗ ಮಾತ್ರ ಎರಡ್ಮೂರು ದಿನ ಮನೆಯಲ್ಲಿ ಉಳಿಯುತ್ತಾರೆ. ಆಗ ಪತ್ನಿ ಮಂಜುಳಾ ಖುಷ್‌ಖುಷಿಯಾಗಿರುತ್ತಾರೆ. ಮತ್ತೆ ಕನ್ನಡ ಸೇವೆಗಾಗಿ ಹೊರಟು ನಿಂತಾಗ ಆಕೆಯ ಕಣ್ಣಂಚಿನಲ್ಲಿ ನೀರು. ಅದನ್ನು ತೋರಿಸಿಕೊಳ್ಳದೆ ನಗುನಗುತ್ತ, ಪುಸ್ತಕಗಳು ಬೇಗ ಖಾಲಿಯಾಗಲೆಂದು ಹಾರೈಸಿ ಗಂಡನನ್ನು ಕಳಿಸಿಕೊಡುತ್ತಾರೆ.
ಈ ಕನ್ನಡಪ್ರೇಮಿಯ ಸಂಪರ್ಕ: 9902873143.
ಎಂಇಎಸ್ ಕಿರುಕುಳ
ಒಮ್ಮೆ ಬೆಳಗಾವಿ ಜಿಲ್ಲಾ ಖಾನಪುರ ತಾಲೂಕು ಇಟಗಿ ಗ್ರಾಮದ ಶಾಲೆಯಲ್ಲಿ ಪುಸ್ತಕಗಳನ್ನು ಮಕ್ಕಳಿಗೆ ಹಂಚುವಾಗ ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಪುಸ್ತಕ ಹರಿದು ಹಾಕಿದ್ರು. ಆಗ ಅಲ್ಲಿನ ಕನ್ನಡಿಗರು ನನ್ನ ಸಹಾಯಕ್ಕೆ ಬಂದ್ರು. ಎದೆಗುಂದದೇ ಮತ್ತೆ ಪುಸ್ತಕ ಹಂಚಿದೆ ಎಂದು ತನ್ನ ಅನುಭವವನ್ನು ಹೆಮ್ಮೆಯಿಂದ ಹೇಳುತ್ತಾರೆ ಬಸವನಗೌಡ.
ಆರು ವರ್ಷದಲ್ಲಿ ಬಳ್ಳಾರಿ, ಹಾವೇರಿ, ಧಾರವಾಡ, ಬೆಳಗಾವಿ, ಬಿಜಾಪುರ, ಬೀದರ್, ಗುಲ್ಬರ್ಗಾ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಬೈಕ್‌ನಲ್ಲಿ ಸುತ್ತಿ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಹಂಚಿ ಭಾಷಾ ಪ್ರೇಮ ಬೆಳೆಸಿದ್ದೇನೆ. ಇಡೀ ರಾಜ್ಯ ಸುತ್ತಿ ಕನ್ನಡ ಪುಸ್ತಕ ಹಂಚುವ ಬಯಕೆ ಇದೆ.
- ಪಿ.ಬಸವನಗೌಡ
ನಮ್ಮೆಜಮಾನ್ರು ತಿಂಗಳಿಗೊಮ್ಮೆ ಊರಿಗೆ ಬರ್ತಾರೆ. ಮಕ್ಕಳ ಜತೆ ಒಬ್ಬಳೇ ಇರಲಿಕ್ಕೆ ಸ್ವಲ್ಪ ಭಯ ಆಗ್ತದೆ. ಆದ್ರೆ ನನ್ನ ಗಂಡ ಕನ್ನಡ ಭಾಷೆಗಾಗಿ ಟೊಂಕ ಕಟ್ಟಿ ನಿಂತಿರೋದಿಕ್ಕೆ ಹೆಮ್ಮೆ ಇದೆ.
- ಮಂಜುಳಾ, ಬಸವನಗೌಡರ ಪತ್ನಿ
- ಭೀಮಣ್ಣ ಗಜಾಪುರ