ಘಟನೆ-1
ಈ ಹಿರಿಯರ ವಯಸ್ಸು 78, ಇವರ ಬಾಳಸಂಗಾತಿಗೆ 70, ಇವರು ತಮ್ಮದೇ ಮನೆಯ ಗ್ರೌಂಡ್‌ಫ್ಲೋರ್‌ನಲ್ಲಿ ವಾಸ ಮಾಡುತ್ತಿದ್ದಾರೆ. ಫಸ್ಟ್ ಫ್ಲೋರ್‌ನಲ್ಲಿ ಮಗ-ಸೊಸೆ ವಾಸಿಸುತ್ತಾರೆ! ಈ ವೃದ್ಧರಿಗೆ ಮಂಡಿನೋವಿನ ಕಾರಣದಿಂದ ಹೊರಗಡೆ ಹೋಗಲೂ ಸಾಧ್ಯವಾಗುತ್ತಿಲ್ಲ. ಪೇಪರ್, ಪುಸ್ತಕವನ್ನು ಕುಳಿತು ಓದಲು ಬೆನ್ನು ಸಹಕರಿಸುತ್ತಿಲ್ಲ. ಸ್ವಲ್ಪ ಹೊತ್ತು ಟಿ.ವಿ. ವೀಕ್ಷಿಸುತ್ತಾರೆ. ಇಬ್ಬರೇ ಎಷ್ಟು ಹೊತ್ತು ಅಂತ ಮಾತನಾಡುತ್ತಾರೆ? ಇಡೀ ದಿನ ಮೌನ!! ಬೆಳಗ್ಗಿನ ತಿಂಡಿ ಬರೀ ಕಾಫಿಯಲ್ಲೇ ಮುಗಿದುಹೋಗುತ್ತದೆ. ಮಧ್ಯಾಹ್ನದ ಊಟಕ್ಕೆ ಕ್ಯಾರಿಯರ್ ಬರುತ್ತದೆ, ಫಸ್ಟ್‌ಫ್ಲೋರ್‌ನ ಮಗನ ಮನೆಯಿಂದ!
ಮಗ-ಸೊಸೆ ಆಫೀಸಿಗೆ ಹೊರಡುವ ಮುನ್ನ ಕ್ಯಾರಿಯರನ್ನು ಕೆಳಗಡೆ ಮನೆಯ ಬಾಗಿಲಿನ ಹೊರಗೆ ಇಟ್ಟು ಹೋಗುತ್ತಾರೆ. ವೃದ್ಧ ದಂಪತಿ ಹಸಿವೆಯಾದರೆ ಅದನ್ನು ಒಳಗೆ ತಂದು ಊಟ ಮಾಡುತ್ತಾರೆ. ಇಲ್ಲದಿದ್ದರೆ ಇಲ್ಲ. ರಾತ್ರಿ ಮಗ-ಸೊಸೆ ಕ್ಯಾರಿಯರ್ ತೆಗೆದುಕೊಂಡು ಹೋಗುತ್ತಾರೆ. ಕ್ಯಾರಿಯರ್ ಖಾಲಿಯಾಗಿರಲಿ ಬಿಡಲಿ ವಿಚಾರಿಸುವ ಗೋಜಿಗೇ ಹೋಗುವುದಿಲ್ಲ. 'ಊಟ ಮಾಡಿದಿರಾ? ಏಕೆ ಮಾಡಿಲ್ಲ?' ಎಂಬ ಯಾವ ಸಂಭಾಷಣೆಯೂ ಅವರ ಮಧ್ಯೆ ನಡೆಯುವುದಿಲ್ಲ.
ಅವರ ಪಾಡಿಗೆ ಅವರು, ಇವರ ನೋವು, ಅಸಹನೀಯ ಮೌನದೊಂದಿಗೆ ಇವರು.
ಘಟನೆ-2
ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಎಂಬತ್ತೈದರ ವೃದ್ಧ ತಾಯಿ ಏಕಾಂಗಿಯಾಗಿ ತನ್ನ ಮನೆಯಲ್ಲಿ ವಾಸಿಸುತ್ತಿದ್ದಳು. ಅವಳ ಸಹಾಯಕ್ಕೊಬ್ಬಳು ಸಹಾಯಕಿ, ಬೆಳಗ್ಗೆಯಿಂದ ಸಂಜೆ ಏಳು ಗಂಟೆಯವರೆಗೆ ಮನೆಯಲ್ಲಿದ್ದು ಹೊರಟುಹೋಗುತ್ತಿದ್ದಳು. ಹಾಗಂತ ಆ ಅಜ್ಜಿಯ ಮಕ್ಕಳೆಲ್ಲ ಬೇರೆ ಯಾವುದೋ ದೇಶದಲ್ಲಿರಬಹುದೆಂದು ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಅದೊಂದು ರಾತ್ರಿ ಬಾತ್‌ರೂಮಿಗೆ ಹೋಗಲು ಎದ್ದ ಆ ವೃದ್ಧ ತಾಯಿ ಬಾತ್‌ರೂಮಿನ ಬಾಗಿಲಿನಲ್ಲೇ ಬಿದ್ದು ಕೊನೆಯುಸಿರೆಳೆದುಬಿಟ್ಟಳು. ಬೆಳಗ್ಗೆ ಸಹಾಯಕಿ ಬರುವವರೆಗೂ ಆಕೆಯ ದೇಹ ಬಾತ್‌ರೂಮಿನಲ್ಲೇ ಬಿದ್ದಿತ್ತು.
ಇವು ಯಾವುದೋ ಸಿನಿಮಾದ ಅಥವಾ ಬೇರೆ ಯಾವುದೋ ದೇಶದಲ್ಲಿ ನಡೆದ ಘಟನೆಗಳಲ್ಲ. ಇದು ನಡೆದದ್ದು ನಮ್ಮ ದೇಶದಲ್ಲೇ, ನಮ್ಮ ನಗರದಲ್ಲೇ. ಮೇಲಿನ ಎರಡೂ ಘಟನೆಗಳನ್ನು ಗಮನಿಸಿದರೆ, ಹೆತ್ತವರೆಡೆಗಿನ ಮಕ್ಕಳ ದಿವ್ಯ ನಿರ್ಲಕ್ಷ್ಯ, ಅವರ ಬಗ್ಗೆ ತೀರಾ ಕಡೆಗಣನೆ ಎದ್ದು ಕಾಣುತ್ತದೆ. ನಗರಗಳಲ್ಲಿ ಇಂತಹ ನೂರಾರು ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುವುದು ಆತಂಕ ತರುವ ವಿಷಯ.
ಸಾಮಾಜಿಕ ಭದ್ರತೆ
'ಹಿರಿಯ ಜೀವಗಳಲ್ಲಿನ ಜ್ಞಾನದ ಭಂಡಾರವನ್ನು, ಅನುಭವದ ಖನಿಯನ್ನು ಸೂಕ್ತವಾಗಿ ಬಳಸಿಕೊಳ್ಳದ ಸಮಾಜ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ' ಎಂದ ಜಪಾನ್‌ನ ಡೇವಿಡ್ ಸುಜುಕಿಯವರ ಮಾತು ಅಕ್ಷರಶಃ ಸತ್ಯ. ಅಜ್ಜ ಅಜ್ಜಿ ಜತೆ ಕೂಡಿ ಬಾಳುವ ಪರಿಪೂರ್ಣ ಕುಟುಂಬದ ಪರಿಕಲ್ಪನೆ ಇಂದಿನ ನಗರವಾಸಿ ಯುವ ಪೀಳಿಗೆಯಲ್ಲಿ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ. ಬದಲಾಗುತ್ತಿರುವ ಕೌಟುಂಬಿಕ ಮೌಲ್ಯಗಳು ಪ್ರತಿಕೂಲವಾಗಿ ಪರಿಣಮಿಸುತ್ತಿರುವುದರಿಂದ ಹಿರಿಯರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ.
ಗೌರವಯುತ ಬದುಕು
'ಎಲ್ಲ ವಯೋವಾನದವರಿಗಾಗಿ ಸಮಾಜ ಎಂಬ ಗುರಿಯತ್ತ ಹೆಜ್ಜೆ' ಎಂಬುದು ಅಂತಾರಾಷ್ಟ್ರೀಯ ಹಿರಿಯ ವ್ಯಕ್ತಿಗಳ ವರ್ಷ-1990ರ ಘೋಷವಾಕ್ಯವಾಗಿತ್ತು. ಆದರೆ ನಾವು ಆ ಗುರಿಯತ್ತ ಒಂದು ಹೆಜ್ಜೆಯನ್ನಾದರೂ ಇಟ್ಟಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ಕುಟುಂಬದವರ, ಮಕ್ಕಳ ಬೆಂಬಲವಿಲ್ಲದೆ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದು ಅತ್ಯಂತ ಕಷ್ಟಕರ. ಇದನ್ನು ಮನಗಂಡ ಕೇಂದ್ರ, ರಾಜ್ಯ ಸರ್ಕಾರಗಳು ಹಿರಿಯರಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿವೆ. ಕೇಂದ್ರ ಸರ್ಕಾರ 'ನ್ಯಾಷನಲ್ ಪಾಲಿಸಿ ಫಾರ್ ಓಲ್ಡರ್ ಪರ್ಸನ್ಸ್' ಜಾರಿಗೊಳಿಸಿದೆ. ವೃದ್ಧರಿಗೆ ಆರ್ಥಿಕ ಭದ್ರತೆ, ಆರೋಗ್ಯ, ಆರೈಕೆ, ರಕ್ಷಣೆ ಮತ್ತು ಮೂಲಸೌಕರ್ಯಗಳನ್ನು ಪೂರೈಸಿ ಅವರು ಇಳಿವಯಸ್ಸಿನಲ್ಲಿ ಗೌರವಯುತವಾಗಿ ಬಾಳುವಂತೆ ಮಾಡುವುದು ಇದರ ಉದ್ದೇಶ. ಆದರೆ ಹೆಚ್ಚಿನ ಹಿರಿಯರಿಗಿರುವ ಯೋಜನೆಗಳೇನು? ಸಹಾಯದ ಪ್ರಮಾಣ, ಯಾರಲ್ಲಿ ವಿಚಾರಿಸಬೇಕು ಎಂಬ ಬಗ್ಗೆ ಗೊತ್ತಿಲ್ಲ. ಗೊತ್ತಿರುವವರು ವಾಹನ ದಟ್ಟಣೆಯ ನಗರಗಳಲ್ಲಿ ಓಡಾಡಿ ಕೆಲಸ ಮಾಡಿಸಿಕೊಳ್ಳಲು ಅಸಮರ್ಥರಾಗಿರುತ್ತಾರೆ. ಇದರಿಂದ ಯೋಜನೆಯ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ.
ಸಿಬಿಆರ್ ನೆಟ್‌ವರ್ಕ್
ಹಿರಿಯ ನಾಗರಿಕರಿಗೆ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಅರ್ಹರಿಗೆ ತಲುಪಿಸುವ ಕೆಲಸವನ್ನು ಸಿಬಿಆರ್ ನೆಟ್‌ವರ್ಕ್ ಹಾಗೂ ಹೆಲ್ಪೇಜ್ ಇಂಡಿಯಾ ಮಾಡುತ್ತ ಬಂದಿವೆ.
ಈ ಸಂಸ್ಥೆಯ ಉತ್ತೇಜನದಿಂದ ಹಲವಾರು ಹಿರಿಯ ನಾಗರಿಕರ ಸ್ವಸಹಾಯ ಗುಂಪುಗಳು ಅಸ್ತಿತ್ವಕ್ಕೆ ಬಂದಿವೆ. ವೃದ್ಧಾಪ್ಯ ಪಿಂಚಣಿ, ಅಂಗವಿಕಲರ ವೇತನ, ವಿಧವೆಯರ ಮಾಸಿಕ ಜೀವನಾಂಶ ಮತ್ತು ರಾಷ್ಟ್ರೀಯ ಕುಟುಂಬ ಕಲ್ಯಾಣ ಯೋಜನೆಗಳು, ವೃದ್ಧರ ಆರೋಗ್ಯ, ಪೌಷ್ಟಿಕ ಆಹಾರ, ಆರ್ಥಿಕತೆ ಮತ್ತು ಆಶ್ರಯ ಇತ್ಯಾದಿಗಳನ್ನು ಗಮನಿಸಲು ಸಾಮಾಜಿಕ ಭದ್ರತಾ ಬ್ಯಾಂಕುಗಳನ್ನು ಸ್ಥಾಪಿಸುವುದರಿಂದ ಫಲಾನುಭವಿಗಳ ಕುಟುಂಬ, ಸಹಕಾರ ಮತ್ತು ಸಮಾಜದ ಮೇಲೆ ಹೆಚ್ಚಿನ ಒತ್ತಡ ಬೀಳುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಸಿಬಿಆರ್ ನೆಟ್‌ವರ್ಕ್ ಸಂಸ್ಥೆ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯು ಭಾರತದಲ್ಲಿ ಹದಿಮೂರಕ್ಕಿಂತಲೂ ಹೆಚ್ಚಿನ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. ಅಲ್ಲದೇ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ, ಮಾಲ್ಡೀವ್ಸ್ ಮತ್ತು ಶ್ರೀಲಂಕಾಗಳಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಹಿರಿಯರಿಗಾಗಿ, ಅಶಕ್ತರಿಗಾಗಿ ಶ್ಲಾಘನೀಯ ಕೆಲಸ ಮಾಡುತ್ತಿರುವ ಹಿರಿಯ ನಾಗರಿಕರ ವೇದಿಕೆ ಸಿಬಿಆರ್ ನೆಟ್‌ವರ್ಕ್(ಸೌತ್ ಏಷಿಯಾ) ಮತ್ತು ಹೆಲ್ಪೇಜ್ ಇಂಡಿಯಾ ಸಂಸ್ಥೆಗಳು ಅಭಿನಂದನಾರ್ಹ.
2011-12ರಲ್ಲಿ ಕರ್ನಾಟಕ ಸರಕಾರ ಮಂಜೂರು ಮಾಡಿದ ಸಾಮಾಜಿಕ ಭದ್ರತೆ ಮತ್ತು ವಿತ್ತೀಯ ನೆರವು/ ರಿಯಾಯಿತಿ/ ಪಿಂಚಣಿ ಯೋಜನೆಗಳು