ತಂಡ ಹುಟ್ಟಿದ್ದು ಕ್ರೀಡೆಗಾಗಿ. ಮಾಡುತ್ತಿರುವುದು ಜಾನಪದ ಕಲೆ ಪಸರಿಸುವ ಕಾಯಕ. ಅದೂ ಸುದೀರ್ಘ ಮೂರು ದಶಕದಿಂದ!
ಗದಗ ಜಿಲ್ಲೆ ರೋಣ ತಾಲ್ಲೂಕು ಕೊತಬಾಳ ಗ್ರಾಮದ ಅರುಣೋದಯ ಕಲಾತಂಡಕ್ಕೆ ಜಾನಪದವೇ ಉಸಿರು. ರಾಜ್ಯ, ದೇಶ, ವಿದೇಶಗಳನ್ನು ಸುತ್ತಿ ಕನ್ನಡ ನೆಲದ ಜಾನಪದ ಕಲೆಯನ್ನು ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಕನ್ನಡದ ಕಂಪನ್ನು ಎಲ್ಲೆಲ್ಲೂ ಹರಡುತ್ತಿದೆ. 1972ರಲ್ಲಿ ಕೊತಬಾಳ ಗ್ರಾಮದಲ್ಲಿ ಪ್ರಾರಂಭವಾದ ಈ ತಂಡವು ಇಲ್ಲಿಯವರೆಗೂ 5 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದೆ.
ಕ್ರೀಡೆಗಾಗಿ ಉದಯವಾದ ತಂಡದ ನೇತೃತ್ವವನ್ನು ಶಂಕ್ರಣ್ಣ ಸಂಕಣ್ಣವರ ವಹಿಸಿಕೊಂಡ ನಂತರ ಕಲಾತಂಡಕ್ಕೆ ರಾಷ್ಟ್ರಮಟ್ಟದ ಮಾನ್ಯತೆ ದೊರೆತಿದೆ. ಅವರು ಗ್ರಾಮದಲ್ಲಿನ ಯುವಕರನ್ನು ಕಟ್ಟಿಕೊಂಡು ನಡೆದಾಡುವ ಜನಪದ ವಿವಿಯಂತೆ ಹಲವು ವರ್ಷಗಳಿಂದ ಜಾನಪದ ಸವಿಯನ್ನು ಜನತೆಗೆ ಉಣ ಬಡಿಸುತ್ತಿದ್ದಾರೆ.
ಗೀಗೀ ಪದ, ಹಂತಿ ಪದ, ಲಾವಣಿ, ಜೋಗತಿ ನೃತ್ಯ, ಸುಗ್ಗಿ ಹಾಡು, ಸಣ್ಣಾಟ, ದೊಡ್ಡಾಟದ ಪದಗಳು, ತತ್ವ ಪದಗಳು ಹೀಗೆ ಜಾನಪದದ ನಾನಾ ವಿಭಾಗಗಳಲ್ಲಿಯೂ ಈ ತಂಡ ದೊಡ್ಡ ಪಾಂಡಿತ್ಯವನ್ನೇ ಹೊಂದಿದೆ. ಕೇವಲ ತಾವಷ್ಟೇ ತಿರುಗಾಟ ಮಾಡದೇ ಗ್ರಾಮದಲ್ಲಿಯೇ ಯುವಜನ ಮೇಳ, ಜಾನಪದ ಮೇಳ, ಜಾನಪದ ಜಾತ್ರೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಉತ್ತರ ಕರ್ನಾಟಕ ಜನತೆಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಎಲ್ಲ ಕಲಾ ಪರಿಕರಗಳನ್ನು ಪರಿಚಯಿಸಿ, ಸಮಗ್ರವಾಗಿ ಹೊಸತನದೊಂದಿಗೆ ಕಟ್ಟಿಕೊಡುವ ಮೂಲಕ ಕಾರ್ಯಕ್ರಮ ನೋಡಲು ಆಗಮಿಸಿದರವರಿಗೆ ಸುಗ್ಗಿ ವಾತಾವರಣವನ್ನೇ ನಿರ್ಮಾಣ ಮಾಡುತ್ತಾರೆ.
ಜೋಗತಿಗೆ ಜೈ
ಅರುಣೋದಯ ಕಲಾ ತಂಡವನ್ನು ವಿಶ್ವ ಮಟ್ಟಕ್ಕೆ ಪರಿಚಯಿಸಿದ್ದು ಅವರ ಜೋಗತಿ ನೃತ್ಯ. ಯಲ್ಲಮ್ಮನ ಭಕ್ತರು ಮಾತ್ರ ಈ ಹಿಂದೆ ಜೋಗತಿ ನೃತ್ಯ ಮಾಡುತ್ತಾರೆ ಎನ್ನುವ ನಂಬಿಕೆ ಹುಸಿಗೊಳಿಸಿ, ಅದೇ ಹಾಡಿಗೆ ಕಲೆಯ ಸ್ಪರ್ಶ ನೀಡಿದ್ದು ತಂಡದ ಮತ್ತೊಂದು ಹಿರಿಮೆ. ಇದೇ ನೃತ್ಯಕ್ಕಾಗಿಯೇ ಖತಾರ್‌ನಲ್ಲಿ ಜರುಗಿದ ವಿಶ್ವ ಸಾಂಸ್ಕೃತಿಕ ಸಮ್ಮೇಳನದಲ್ಲಿ ದೇಶವನ್ನೇ ಪ್ರತಿನಿಧಿಸುವ ಮೂಲಕ ವಿದೇಶದಲ್ಲಿ ಕನ್ನಡ ಕಂಪು ಸೂಸಿದ್ದಾರೆ.
ಜಾಗೃತಿಗೂ ಸೈ
ಈ ಕಲಾ ತಂಡವು ತಮ್ಮಲ್ಲಿರುವ ಅಮೂಲ್ಯ ಕಲೆಯನ್ನು ನಮ್ಮ ಸಮಾಜವನ್ನು ಕಾಡುತ್ತಿರುವ ಏಡ್ಸ್, ವೈಯಕ್ತಿಕ ಸ್ವಚ್ಛತೆ, ಸಾಕ್ಷರತಾ ಆಂದೋಲನ ಮತ್ತಿತರ ಕಾರ್ಯಕ್ರಮಗಳಲ್ಲೂ ತಂಡ ಸಕ್ರಿಯವಾಗಿದೆ. ಮೂಢನಂಬಿಕೆ ತೊಲಗಿಸಲು ಬೀದಿ ನಾಟಕಗಳನ್ನು ಮಾಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಕಲೆಯ ಮೂಲಕವೇ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅರುಣೋದಯ ಕಲಾ ತಂಡದ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಕಲಾ ತಂಡದ ಸದಸ್ಯರ ಉತ್ಸಾಹ ಹೆಚ್ಚಿಸಿದೆ.