ಕೆಂಟುಕಿ ಫ್ರೈಡ್ ಚಿಕನ್ ಯಾರಿಗೆ ಗೊತ್ತಿಲ್ಲ ಹೇಳಿ... ಕೆಎಫ್‌ಸಿ ಅಂದ್ರೆ ಸಾಕು, ಬಾಯಲ್ಲಿ ನೀರಿಳಿಯುತ್ತದೆ. ಕೆಎಫ್‌ಸಿಯನ್ನು ಮಾರ್ಕೆಟ್‌ಗೆ ತಂದ ಹಾದಿ ಅದರ ರುಚಿಯಷ್ಟೇ ರೋಚಕ. ಉತ್ಸಾಹಿ ಯುವ ಉದ್ಯಮಿ ಅಥವಾ ಅನುಭವಿಯಿಂದ ಮಾತ್ರ ಈ ಸಾಧನೆ ಸಾಧ್ಯ ಎಂದು ನೀವು ಭಾವಿಸಬಹುದು. ಆದರೆ, ಕೆಎಫ್‌ಸಿ ಬ್ರ್ಯಾಂಡ್ ಹುಟ್ಟುಹಾಕಿದ್ದು 65ರ ತಾತ ಹರ್ಲನ್ ಡೇವಿಡ್ ಸಾಂಡರ್ಸ್ ಎಂದರೆ ನಂಬಲೇಬೇಕು.
ಸಾಂಡರ್ಸ್ ತನ್ನ ಯೌವನದ ದಿನಗಳಲ್ಲಿ ಹಲವು ಕೆಲಸಗಳನ್ನು ಮಾಡಿ ಜೀವನ ನಿರ್ವಹಿಸಿದಾತ. ಕೃಷಿ, ಬೋಟ್ ಚಾಲನೆ, ಇನ್ಸೂರೆನ್ಸ್ ಸೇಲ್ಸ್‌ಮನ್ ಹಾಗೂ ಇತರೆ ಕೆಲಸಗಳನ್ನು ಮಾಡುತ್ತ ಬದುಕು ಕಟ್ಟಿಕೊಂಡಿದ್ದ. ಮಧ್ಯವಯಸ್ಸು ದಾಟಿದ ನಂತರ ಸುತ್ತಮುತ್ತಲಿನವರನ್ನು ಮೆಚ್ಚಿಸುವಂಥ ಕೆಲಸ ಮಾಡಬೇಕೆಂಬ ಆಸೆ ಹುಟ್ಟಿತು. ಇನ್ನೊಬ್ಬರ ಸಂತೃಪ್ತಿಯಲ್ಲಿ ತನ್ನ ನೆಮ್ಮದಿ ಇದೆ ಎಂದು ಭಾವಿಸಿ ರುಚಿಯಾದ ಕೋಳಿ ಖಾದ್ಯವನ್ನು ಉಣಬಡಿಸಲು ಯೋಚಿಸಿದ.
ತಡ ಮಾಡದೆ ಕಲ್ಪನೆಗೆ ಜೀವ ನೀಡಿದ. ಚಿಕನ್ ತಿನಿಸು ಮಾಡಿ ದಾರಿ ಬದಿ ಮಾರತೊಡಗಿದ. ಡೇವಿಡ್ ಸಾಂಡರ್ಸ್‌ನ ಕೈ ರುಚಿಯ ಪ್ರಖ್ಯಾತಿ ದಿನೇ ದಿನೆ ಹೆಚ್ಚಾಗತೊಡಗಿತು. ರುಚಿಯಾದ ಚಿಕನ್ ಕರಿ ಘಂ ಎಂದು ಪಸರಿಸುತ್ತಿದ್ದಂತೆ ಜನಸಂದಣಿಯೂ ಜಾಸ್ತಿ ಆಯಿತು. ಡಿಮ್ಯಾಂಡಿಗೆ ತಕ್ಕ ರೆಸ್ಟೋರೆಂಟ್ ಮಾಡದಿದ್ದರೆ ಹೇಗೆ? ಆ ಆಸೆಯೂ ನೆರವೇರಿತು.
ಹಂತ ಹಂತವಾಗಿ ಯಶಸ್ಸಿನ ಮೆಟ್ಟಿಲೇರುತ್ತ ಸಾಗಿದ ಡೇವಿಡ್ ತನ್ನ ಇಳಿವಯಸ್ಸಿನಲ್ಲಿ 'ಕೆಂಟುಕಿ ಫ್ರೈಡ್ ಚಿಕನ್' ಎಂಬ ಉದ್ಯಮ ಹುಟ್ಟು ಹಾಕಿ ಕೆಲವೇ ವರ್ಷಗಳಲ್ಲಿ ಜಗತ್ತಿನಾದ್ಯಂತ ಮನೆಮಾತಾದ. ಬಹುತೇಕ ತಾತಂದಿರಂತೆ ವಯಸ್ಸಾಯಿತು, ಇನ್ನೇನಿದ್ದರೂ ರಾಮಕೃಷ್ಣಾ ಎಂದು ದಿನಗಳೆದುಬಿಡುತ್ತೇನೆ ಎಂದು ಡೇವಿಡ್ ಕುಳಿತಿದ್ದರೆ ಕೆಎಫ್‌ಸಿ ಚಿಕನ್‌ನ ಸವಿರುಚಿ ನಮ್ಮ ನಾಲಗೆಗೆ ಸಿಗುತ್ತಿತ್ತೇ ಹೇಳಿ?
- ಮಂಜುನಾಥ್ ಎಲ್.ಕೆ.