ಸಾಧನೆ

ಅನುನಾಸಿಕ ಪ್ರಸಂಗ

ಪ್ರಹಸನ ಬ್ರಹ್ಮ ಟಿ.ಪಿ. ಕೈಲಾಸಂರವರ 'ಬಂಡ್ವಾಳ್ವಿಲ್ಲದ ಬಡಾಯಿ' ನಾಟಕದ ಒಂದು ದೃಶ್ಯ...

ಪ್ರಹಸನ ಬ್ರಹ್ಮ ಟಿ.ಪಿ. ಕೈಲಾಸಂರವರ 'ಬಂಡ್ವಾಳ್ವಿಲ್ಲದ ಬಡಾಯಿ' ನಾಟಕದ ಒಂದು ದೃಶ್ಯ. ವಕೀಲ ಅಹೋಬಲರಾಯರು ತಮ್ಮ ಮನೆಗೆ ಅಡುಗೆ ಕೆಲಸಕ್ಕೆ ಬಂದವನನ್ನು 'ಹಾಗೇನೆ ನೀವು ಮೂಗಿನ ಕೆಳಗಿರುವ ನಶ್ಯದ ಬಾಕಿ ಬರೆಸಿಕೊಂಡ್ಬುಡಿ' ಎನ್ನುತ್ತಾರೆ. ಅದಕ್ಕವನು 'ಇದು ಮೂಕುತ್ತಿಲೆ ನಶ್ಯದ್ದು ಬಾಕಿ ಅಲ್ಲೆ. ಇದು ನನ್ನ ಮೀಸೆ' ಎನ್ನುವನು. ಪೇಕ್ಷಕರು ನಗದಿರಲು ಸಾಧ್ಯವೇ?.

ಬಾಳಸಂಜೆ ಸಮೀಪಿಸಿದಂತೆಲ್ಲ ಮೆಲುಕುಗಳ ಪ್ರವಾಹ. ಭಾವನಾತ್ಮಕ ಸಂಬಂಧಗಳಿಗೆ ವ್ಯಕ್ತಿಗಳೇ ಆಗಬೇಕೆಂದಿಲ್ಲ. ತಾನು ಕಚೇರಿಗೆ ಹೋಗಲು ಏರುತ್ತಿದ್ದ ಸ್ಕೂಟರ್, ಧರಿಸುತ್ತಿದ್ದ ಕೋಟು, ಒಯ್ಯುತ್ತಿದ್ದ ಬುತ್ತಿಡಬ್ಬಿ, ಲೇಖನಿ, ಕನ್ನಡಕ, ಬಿಡುವಿನಲ್ಲಿ ಕಣ್ಣಾಡಿಸುತ್ತಿದ್ದ ನೆಚ್ಚಿನ ಸಾಹಿತಿಯ ಕೃತಿ... ಒಂದೊಂದೂ ವಿಶಿಷ್ಟ ಪಾತ್ರಗಳಾಗಿ ಕಾಡುತ್ತವೆ. ನಿವೃತ್ತ ಅಧಿಕಾರಿಗೆ ತಾನು ಮಹತ್ತರ ಆದೇಶಗಳಿಗೆ ಸಹಿ ಹಾಕುತ್ತಿದ್ದ ಮೇಜು. ನಿವೃತ್ತ ಗಣಿತ ಪ್ರೊಫೆಸರ್‌ಗೆ ಬೋರ್ಡ್ ಬರೆಸಲು ಬಳಸುತ್ತಿದ್ದ ಡಸ್ಟರ್. ಸಾರಿಗೆ ಬಸ್ ಚಾಲಕನಾಗಿ ಸೇವೆ ಸಲ್ಲಿಸಿ ವಿಶ್ರಾಂತ ಜೀವನಕ್ಕೆ ಸರಿದಾತನಿಗೆ ಆ ಕೊನೆಯ ದಿನ ಕೊನೆಯ ಟ್ರಿಪ್‌ನಲ್ಲಿ ಬಸ್ಸನ್ನು ಡಿಪೋಗೆ ತಿರುಗಿಸಿದ ಕ್ಷಣ. ಅಷ್ಟೇಕೆ, ಕಟ್ಟಡದ ಕೆಲಸ ಇನ್ನು ಸಾಕಪ್ಪ ಎನ್ನುವವನಿಗೆ ಅಂದು ಇರಿಸಿದ ಕೊನೆಯ ಇಟ್ಟಿಗೆ ಕೂಡ ಗಾಢ  ಭಾವಪರವಶತೆಯನ್ನು ಪುಟಿದೇಳಿಸಬಲ್ಲದು.
ಪ್ರೊ. ವಿ.ಕೆ. ದೊರೆಸ್ವಾಮಿ ಆಗಾಗ ಹೇಳುತ್ತಿದ್ದ ಪ್ರಸಂಗವಿದು. ಒಂದು ವಿವಾಹ ಸಮಾರಂಭದಲ್ಲಿ ಭರ್ಜರಿಯಾಗಿ ರುಮಾಲು, ಕೋಟು, ಕಚ್ಚೆ ಪಂಚೆ ಧರಿಸಿದವರೊಬ್ಬರು ವಿಪರೀತ ಚಡಪಡಿಸುತ್ತಿದ್ದರು. ಛತ್ರದ ಆವರಣದಲ್ಲಿ ನಾಲ್ಕು ಮಾರು ದೂರದಲ್ಲಿ ಒಬ್ಬ ಆಸಾಮಿ ಕಿಸೆಯಿಂದ ಏನನ್ನೋ ತೆಗೆಯುತ್ತಿದ್ದುದನ್ನು ಇವರು ಗಮನಿಸಿದರು. ಸರಿ ಒಂದೊಂದೇ ಪ್ರಶ್ನೆಗಳು.

'ತಾವು ಹೆಲ್ತ್ ಇನ್ಸ್‌ಪೆಕ್ಟರೇ?', 'ಬ್ರೇಕ್ ಇನ್ಸ್‌ಪೆಕ್ಟರೇ?'. 'ಅಲ್ಲವಲ್ಲ'. 'ಹೋಗ್ಲಿ ರೆವೆನ್ಯೂ, ಅಬಕಾರಿ?', 'ಸದ್ಯ ಖಂಡಿತ ಅಲ್ಲ'. 'ಹಾಗಾದ್ರೆ ಯಾವ ಇನ್ಸ್‌ಪೆಕ್ಟರ್ ಹೇಳ್ಬುಡಿ ಹೋಗ್ಲಿ'. 'ಸ್ಕೂಲ್ ಇನ್ಸ್‌ಪೆಕ್ಟರ್‌'. 'ಓ ಸ್ಕೂಲ್ ಇನ್ಸ್‌ಪೆಕ್ಟರೇ? ಕೊಡಿ ಇಲ್ಲಿ ನಶ್ಯದ ಡಬ್ಬಿ ಸ್ವಲ್ಪ' ಎಂದ ಸೂಟುಧಾರಿ ಅವರ ಕೈಯಿಂದ ಡಬ್ಬಿ ಕಸಿದಿದ್ದರು! ಒಂದೊಂದು ಪ್ರಶ್ನೆಗೂ ಉತ್ತರ ಬರುತ್ತಿದ್ದಂತೆ ಆತ ಒಂದೊಂದು ಹೆಜ್ಜೆಯನ್ನು ನಶ್ಯಡಬ್ಬಿಯ ಒಡೆಯನತ್ತ ಇರಿಸುತ್ತಿದ್ದರು. ನಮಗೆ ದಳವಾಯಿ ಮಾಧ್ಯಮಿಕ ಶಾಲೆಯಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಸುಬ್ಬರಾಯ ಮೇಷ್ಟ್ರು 'ಸ್ನಫ್ ಮಾಸ್ಟರ್‌' ಎನ್ನುವ ಖ್ಯಾತಿ ಪಡೆದಿದ್ದರು. ನನ್ನನ್ನು ಹಾಗೆ ಕಿಚಾಯಿಸಿದರೆ ಬೇಸರವಿಲ್ಲ. ಆದರೆ 'ಬ್ಲಫ್ ಮಾಸ್ಟರ್‌' ಎನ್ನಬೇಡಿ ಅಂತ ಅವರು ನಮಗೆ ಕೈ ಮುಗಿಯುವುದಕ್ಕೂ ಮುಂದಾಗುತ್ತಿದ್ದರು! ಒಮ್ಮೆ ನಶ್ಯದ ಹಿರಿಮೆಯನ್ನು ಅವರು ಬಣ್ಣಿಸಿದ್ದರು. 'ನೋಡಿ ನಶ್ಯ, ಸಿಗರೇಟು, ಬೀಡಿ, ಚುಟ್ಟಾ ಇವೆಲ್ಲದರ ಮೂಲ ತಂಬಾಕು ನಿಜ. ಆದರೆ ನಶ್ಯಕ್ಕಿರುವ ಮಾನ್ಯತೆ. ಆದರೆ ಉಳಿದವಕ್ಕಿಲ್ಲ. ಏಕೆಂದರೆ ನಶ್ಯವನ್ನು ಎಲ್ಲೆಂದರಲ್ಲಿ ಮೂಗಿಗೇರಿಸಬಹುದು. ಪುರೋಹಿತರು ಮದುವೆ ನೆರೆವೇರಿಸುತ್ತಿರಲಿ ನಶ್ಯಾಸ್ವಾದನೆ ಕೂಡದೆಂದು ಯಾರೂ ಹೇಳರು. ದೈವ ಸನ್ನಿಧಿಯಲ್ಲೂ ಸೇದಲಿಕ್ಕೆ ಯಾರ ಅಭ್ಯಂತರವೂ ಇರದು. ಆದರೆ ಬೀಡಿ, ಸಿಗರೇಟು? ಬಾಯಿಯಲ್ಲಿ ಕಡ್ಡಿಗೀರುವ ಮುನ್ನವೆ ವಿಘ್ನ ಎದುರಾಗಿತ್ತದೆ. ಹಾಗೆ ಅಡ್ಡಿಪಡಿಸುವುದು ಸರಿಯೆ ಬಿಡಿ?' ಅಂತ ಅವರು ಹೇಳಿ ನಶ್ಯದ ಡಬ್ಬಿಯ ಮೇಲೆ ಚಟ್ ಎಂದು ಏಟು ಬಾರಿಸಿದ್ದರು.

ಕನ್ನಡದ ಮೊಟ್ಟ ಮೊದಲ ಪ್ರೊಫೆಸರ್ ಟಿ.ಎಸ್. ವೆಂಕಣ್ಣಯ್ಯನವರ ಹೆಸರು ಕೇಳದವರು ಯಾರು? ಅವರು ರಾಷ್ಟ್ರಕವಿ ಕುವೆಂಪುರವರ ಮೇಷ್ಟ್ರು. ಕುವೆಂಪು ತಮ್ಮ ಕೃತಿ 'ಶ್ರೀಮದ್ ರಾಮಾಯಣ ದರ್ಶನಂ' ಸಮರ್ಪಿಸಿದ್ದು ಶಿಷ್ಯವತ್ಸಲರೆನ್ನಿಸಿದ್ದ ವೆಂಕಣ್ಣಯ್ಯನವರಿಗೆ, ನಶ್ಯಭಕ್ತರಾಗಿದ್ದ ವೆಂಕಣ್ಣಯ್ಯನವರಿಗೆ ಜ್ಞಾನಚೂರ್ಣವಿಲ್ಲದೆ ಸಭೆ ಸಮಾರಂಭಗಳಲ್ಲಿ ಮಾತೇ ಹೊರಡುತ್ತಿರಲಿಲ್ಲವಂತೆ. ಅವರ ಎಂದಿನ ಹಾಸ್ಯಪ್ರವೃತ್ತಿ ಸೇರಿದಂತೆ ಮುಗಿಯಿತು. ಸುತ್ತಮುತ್ತಲಿದ್ದವರಿಗೆ ಬೋಧಪ್ರದ ರಂಜನೆ ಖಾತರಿ. ಅದೊಂದು ಅವಿಸ್ಮರಣೀಯ ಸಂದರ್ಭ. ಡಾ. ಡಿವಿಜಿ ಮತ್ತು ಪ್ರೊ. ಟಿ.ಎಸ್. ವೆಂಕಣ್ಣಯ್ಯ ಒಂದೆಡೆ ಕಲೆತಿದ್ದರು. ಮಾತು ಎತ್ತೆತ್ತಲೋ ಸಾಗಿ ನಶ್ಯದ ಚಟ ಬಿಡುವುದು ಬಲು ಕಷ್ಟಕರ ಎನ್ನುವುದರತ್ತ ಹೊರಳಿತು. ಅದಿರಲಿ ಅನುನಾಸಿಕ ಅಕ್ಷರ ಬಳಸದೆ ನಶ್ಯದ ಮೇಲೆ ಒಂದು ಪದ್ಯ ಬರಿ ನೋಡೋಣ ಅಂದರುಡಿವಿಜಿ, ವೆಂಕಣ್ಣಯ್ಯನವರಿಗೆ. ಕ್ಷಣಾರ್ಧದಲ್ಲಿ ಪ್ರೊಫೆಸರ್ ಕವನ ಕಟ್ಟಿದರಂತೆ
'ದೆಗಡಿಯು ಬಲವಾಗಿದ್ದರೆ
ಹೊಗೆಯಲೆ ಧೂಡದ್ದು
ಬೂಗಿಗೇರಿಸು ಗೆಳೆಯಾ"

ನಮ್ಮ ಹಿರಿಯ ಸಂಬಂಧಿ ತೊಂಭತ್ತರ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ನಶ್ಯದ ಅಭ್ಯಾಸವೆಷ್ಟಿತ್ತೆಂದರೆ ಡಬ್ಬಿಗಳಲ್ಲ ಜಾಡಿಗಳೇ ಅವರ ಅಗತ್ಯ ಪೂರೈಸುತ್ತಿದ್ದವು. ಸರಿ, ವಿಧಿಬದ್ಧವಾಗಿ ಅಂತ್ಯಕ್ರಿಯೆಯಾಗಿ ಮಾರನೆ ದಿನ ಅಸ್ಥಿ ಸಂಗ್ರಹಣೆಗೆ ಮೃತರ ಪುತ್ರರು, ಹತ್ತಿರದ ನಂಟರು ಮುಂದಾದರು. ತಲೆಬುರುಡೆ ಭಸ್ಮದಿಂದ ಹೊರೆತೆಗೆಯುತ್ತಿದ್ದಂತೆ ಮೂಗಿನ ಭಾಗದಿಂದ ಧಾರಾಳವಾಗಿ ನಸ್ಯದ ಚರಟ ಉದುರುತ್ತಿತ್ತು. ಅಬ್ಬಾ! ರಸಿಕತೆಯೆಂದರೆ ಇದು ಬದುಕನ್ನು ಆನಂದಿಸಿ ನಿರ್ಗಮೀಸಲು ನಸ್ಯದ ಕೊಡುಗೆಯೇನು ಕಡಿಮೆಯೇ? ಇಬ್ಬರ ನಡುವೆ ಎಂಥ ಘೋರ, ಕ್ರೂರ ಕದನ, ವಾದ ವಿವಾದವೇ ನಡೆದಿರಲಿ. ಎಲ್ಲಿ ಹಿಡೀರಿ ಅಂತ ಜ್ಞಾನಚೂರ್ಣದ ಡಬ್ಬಿಯನ್ನು ಎದುರಾಳಿಯ ಮುಂದೊಡ್ಡಿದರಾಯಿತು. ನಾಸಿಕಗಳೆರಡು ಸುರ್ ಸುರ್ ಅಂತ ವೈಮನಸ್ಸಕ್ಕೆ ಮಂಗಳ ಹಾಡಿರುತ್ತವೆ.

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!