ಸಾಧನೆ

ಸ್ನೇಕ್ ಸಹವಾಸ

ಅವರು ವೃತ್ತಿಯಲ್ಲಿ ಗ್ಯಾರೇಜ್ ಮಾಲೀಕರು. ವಯಸ್ಸು ಅರ್ಧಶತಕದ ಮೇಲೆ ನಾಲ್ಕಾದರೂ ಯುವಕರನ್ನು ನಾಚಿಸುವ ಉತ್ಸಾಹ. ಗ್ಯಾರೇಜಿನಲ್ಲಿ ವಾಹನಗಳ ಬಿಡಿಭಾಗಗಳೊಂದಿಗೆ ಆಟವಾಡುವಷ್ಟೇ ಸರಾಗವಾಗಿ ವಿಷಕಾರಿ ಹಾವುಗಳೊಂದಿಗೂ ಆಟವಾಡಿ ಹಿಡಿದು ಕಾಡಿಗೆ ಬಿಡುವ ನಿಪುಣರು.
ಎಲ್ಲಾದರೂ ನಿಮಗೆ ಹಾವು ಕಂಡರೆ ಕೇವಲ 50 ಪೈಸೆ ಖರ್ಚು ಮಾಡಿ ಇವರಿಗೆ ಪೋನಾಯಿಸಿದರೆ ಸಾಕು. ಮಧ್ಯರಾತ್ರಿ ಎರಡಾಗಿದ್ದರೂ ಸರಿ, ತಮ್ಮ ಸ್ವಂತ ಖರ್ಚಿನಲ್ಲಿ ಕರೆದಲ್ಲಿಗೆ ಕರೆದಷ್ಟೆ ವೇಗವಾಗಿ ಬಂದು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಜನರಿಗೆ ಭಯ ಹೋಗಲಾಡಿಸುವ ಇಂಥ ಅಪರೂಪದ ಉರಗಪ್ರೇಮಿಯೇ ಧಾರವಾಡದ ಸುರೇಶ್ ಹೆಗ್ಗೇರಿ. ಇಲ್ಲಿ ಜನರನ್ನು ರಕ್ಷಿಸುವುದಕ್ಕಿಂತ ಹಾವನ್ನು ರಕ್ಷಿಸುವುದೇ ಅವರ ಮುಖ್ಯಗುರಿ. ಏಕೆಂದರೆ, ಹಾವಿನ ಬಗ್ಗೆ ತಿಳಿವಳಿಕೆ ಇಲ್ಲದ ಜನ ಸುಮ್ಮನೆ ಅವುಗಳನ್ನು ಕೊಂದು ಉರಗಗಳ ಹಲವು ಸಂತತಿಯೇ ನಾಶವಾಗಿದೆ ಎಂಬುದು ಅವರ ಕೊರಗು.
ಓದಿದ್ದು ಡಿಪ್ಲೊಮಾ ಎಂಜಿನಿಯರಿಂಗ್. ಇಳಿ ವಯಸ್ಸಲ್ಲೂ ಹಾವುಗಳ ರಕ್ಷಣೆಗೆ ನಿಂತಿರುವ ಸುರೇಶ್ 2005ರಿಂದ ಉರಗತಜ್ಞ ಗಂಗಾಧರ ಕಲ್ಲೂರ ಅವರ ಪ್ರೇರಣೆ, ಪ್ರೋತ್ಸಾಹದೊಂದಿಗೆ ಉರಗ ರಕ್ಷಣೆಗಿಳಿದಿದ್ದಾರೆ. ಈ ಸಂದರ್ಭ ಅನೇಕರು ಹಣ ನೀಡಲು ಬಂದರೆ ನಯವಾಗಿ ನಿರಾಕರಿಸುವ ಇವರು ಎಂದಿಗೂ ಪ್ರಚಾರದ ಬೆನ್ನು ಬಿದ್ದವರಲ್ಲ. ಹಾವುಗಳನ್ನು ಕೈಯಿಂದಲೇ ಹಿಡಿಯುವುದು ಇವರ ಕೌಶಲ್ಯತೆಗಳಲ್ಲೊಂದು. ತೀರಾ ವಿಷಕಾರಿ ಹಾವುಗಳಿಗೆ ಮಾತ್ರ ಟಾಂಗ್ ಬಳಸುತ್ತಾರೆ.
ಹಾವುಗಳ ಸಂತತಿ ಉಳಿದರೆ, ಜನರ ಪ್ರೋತ್ಸಾಹ ಇದ್ದರೆ ಸಾಕೆನ್ನುವ ಇವರಿಗೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಗಳಿಂದಲೂ ಹಾವು ಹಿಡಿಯಲು ಕರೆಗಳು ಬರುತ್ತವೆ. ಅಷ್ಟರಮಟ್ಟಿಗೆ ಸುರೇಶ್ ಇಲ್ಲಿ ಚಿರಪರಿಚಿತರು. ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಹಾವುಗಳನ್ನು ರಕ್ಷಿಸಿರುವ ಸುರೇಶ್ ಪ್ರಾಣಿ, ಪಕ್ಷಿ ಹಾಗೂ ಚಾರಣ ಪ್ರಿಯರು. ತಿಂಗಳಲ್ಲಿ 10- 15 ದಿನಗಳ ಕಾಲ ಚಾರಣ, ಪ್ರಾಣಿ, ಪಕ್ಷಿಗಳ ರಕ್ಷಣೆಗೆ ತೆರಳುವ ಇವರ ಉತ್ಸಾಹಕ್ಕೆ ಮಡದಿ ರಾಜೇಶ್ವರಿ ಎಂದಿಗೂ ಭಂಗ ತಂದಿಲ್ಲವಂತೆ. ಅನೇಕ ಬಾರಿ ಇತರೆ ಪ್ರಾಣಿಗಳಿಂದ ಹಲ್ಲೆಗೊಳಗಾದ ಪ್ರಾಣಿ, ಪಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ಕೃಷಿ ವಿವಿಯಲ್ಲಿರುವ ಪಶುವೈದ್ಯ ಡಾ. ಅನಿಲ್ ಪಾಟೀಲ್ ಅವರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ. ಇವರೇ ಪ್ರಾಣಿ, ಪಕ್ಷಿಗಳ ಚಿಕಿತ್ಸಾ ವೆಚ್ಚ ಭರಿಸಿದ್ದುಂಟು. ಹಾವುಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವ ಸುರೇಶ್, ಇಲ್ಲಿಯವರೆಗೆ ಸಾವಿರಾರು ವಿಷಕಾರಿ ಹಾವುಗಳನ್ನು ಹಿಡಿದಿದ್ದರೂ ಒಮ್ಮೆಯೂ ಅವುಗಳಿಂದ ಕಚ್ಚಿಸಿಕೊಂಡಿಲ್ಲ ಎಂಬುದು ಇವರ ಉರಗ ಹಿಡಿಯುವ ಜಾಣ್ಮೆಗೆ ಸಾಕ್ಷಿ. ಮಕ್ಕಳಾದ ಆಕಾಶ ಮತ್ತು ಅಕ್ಷತಾ ಇಬ್ಬರಿಗೂ ಹಾವು ಹಿಡಿಯುವ ಕಲೆ ಕಲಿಸಿಕೊಟ್ಟಿದ್ದು, ಕಲಿಕಾಸಕ್ತಿ ಇರುವ ಯಾರಿಗಾದರೂ ಹಾವು ಹಿಡಿಯುವ ಕಲೆ ಕಲಿಸುತ್ತಾರೆ. ಹೆಗ್ಗೇರಿ ಅವರನ್ನು ಸಂಪರ್ಕಿಸಲು ಮೊ. 94485 65136 ಸಂಪರ್ಕಿಸಬಹುದು.

ಯಾರೂ ಹಿಡಿಯಬಹುದು!
ಹಾವುಗಳ ಸಾಮಾನ್ಯ ಜ್ಞಾನ ಹೊಂದಿದ್ದರೆ ಯಾರು ಬೇಕಾದರೂ ಹಾವು ಹಿಡಿಯಬಹುದು. ತನ್ನ ಜೀವಕ್ಕೆ ಕುಂದುಂಟಾಗುತ್ತದೆ ಎಂದಾಗ ಮಾತ್ರ ಹಾವುಗಳು ಕಚ್ಚುತ್ತವೆ ಹೊರತು, ಸುಮ್ಮನೆ ತೊಂದರೆ ನೀಡುವುದಿಲ್ಲ.
- ಸುರೇಶ್ ಹೆಗ್ಗೇರಿ

- ಗಣೇಶ್ ಕಮ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!