ಸಾಧನೆ

ಅವರಿಗೀಗ ವೃದ್ಧಾಶ್ರಮವೇ ವಾಸಿ!

ವೃದ್ಧಾಶ್ರಮಕ್ಕೆ ಭೇಟಿ ನೀಡಿ ಎಲ್ಲರಿಗೂ ಉಂಡೆ ಹಂಚುವಂತೆ ಕೊಟ್ಟಿದ್ದೆ. ಬಳಿಕ ಆಶ್ರಮದ ಅಂಗಳದಲ್ಲಿ ಸುತ್ತುತ್ತಿದ್ದೆ. ಎದುರಿಗೆ ಎರಡು ಜೋಡಿ ಕಣ್ಗಳು ಕಂಬದ ಮರೆಯಲ್ಲೇ ಇಣುಕಿ ನೋಡ್ತಿದ್ವು. ಮಾತನಾಡಿಸಲು ಸ್ವಾಭಿಮಾನ ಅಡ್ಡಿಯಾಯ್ತೋ, ಭಯವೋ, ಹಿಂಜರಿಕೆಯೋ ತಿಳಿಯದಾಯ್ತು. ನಾನೂ ಸುಮ್ಮನಿದ್ದೆ. ನಂತರ ಅವರೇ ಉಂಡೆ ತೋರಿಸಿ, ತುಂಬಾ ಚೆನ್ನಾಗಿದೆ ಅಂತ ಕೈಸನ್ನೆ ಮಾಡಿದರು. ಮಾತು ಬರುವುದಿಲ್ಲವೇನೋ ಅಂದುಕೊಂಡು ಕೈಮುಗಿದೆ.
ಕರೆದು ಇದನ್ನ ಹೇಗೆ ಮಾಡಿದ್ರಿ? ತುಂಬಾ ಚೆನ್ನಾಗಿದೆ. ನನಗೂ ಹೇಳಿಕೊಡಿ. ಒಂದಿನ ಇಲ್ಲಿ ಪ್ರಸಾದಕ್ಕೆ ಮಾಡ್ತೀನಿ ಅಂದ್ರು. ಸರಿ ಎಂದು ಮಾಡುವ ವಿಧಾನ ಹೇಳಿಕೊಟ್ಟೆ. ಖುಷಿಯಾದರು. 'ನನ್ನನ್ನೇನೂ ಕೇಳಲ್ವಾ' ಅಂದ್ರು. 'ಹೇಳ್ಕೊಂಡ್ರೆ ಮನಸು ಹಗುರ ಆಗತ್ತೆ ಅನ್ಸಿದ್ರೆ ಹೇಳಿ. ಇಲ್ಲದಿದ್ರೆ ಬೇಡಾ. ನಿಮ್ಮ ಮನಸಿಗೆ ಬೇಸರ ಮಾಡಲು ನನಗಿಷ್ಟವಿಲ್ಲ' ಅಂದೆ.
ಅವರ ಕತೆ ಬಿಚ್ಚಿಕೊಂಡಿತು. 'ನನ್ನ ಯಜಮಾನರು ತೀರಿಹೋದ ನಂತರ ಸ್ವಲ್ಪ ದಿನ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಮಗ ಸೊಸೆ ಇದ್ದಕ್ಕಿದ್ದ ಹಾಗೇ ದಿನವೂ ಮನೆಬಿಟ್ಟು ಹೋಗೆಂದು ಕಾಡತೊಡಗಿದರು. ನಾನೆಲ್ಲಿಗೆ ಹೋಗ್ಲಿ? ಇದು ನನ್ನ ಮನೆ ಅಂತ ಹಠ ಹಿಡಿದಿದ್ದಕ್ಕೆ, 2 ತಿಂಗಳು ತನಕ ದಿನವೂ 4 ಬಿಸ್ಕತ್, 2 ಲೋಟ ನೀರು ಮಜ್ಜಿಗೆ ಕೊಟ್ಟು, 'ಹೀಗಾದ್ರೂ ಬೇಗ ಸಾಯಿ' ಅಂತಿದ್ರು.
ಪಾಪ ಮೊಮ್ಮಕ್ಕಳು, ಅಪ್ಪ ಅಮ್ಮನಿಗೆ ಕಾಣದ ಹಾಗೆ ಕದ್ದು ಮುಚ್ಚಿ ಚೂರುಪಾರು ತಿಂಡಿ ಕೊಟ್ಟು, 'ಅಜ್ಜೀ, ನೀ ನಮಗೆ ಎಷ್ಟೊಂದ್ ತಿಂಡಿ ಮಾಡಿಕೊಡ್ತಿದ್ದೆ. ತಗೋ ಅಜ್ಜಿ, ಚೂರೇ ಇದೆ. ಬೇಗ ತಿಂದುಬಿಡು' ಎಂದು ಕೊಡ್ತಿದ್ವು. 'ಅಮ್ಮ ನೀ ಕೊಡೊ ತಿಂಡಿ ನಾವೆಲ್ಲಾ ಶೇರ್ ಮಾಡ್ಕೊಳ್ಳೋಕೆ ಸಾಕಾಗಲ್ಲ. ಇನ್ನೂ ಒಂದು ಡಬ್ಬಿ ಕೊಡು' ಎಂದು ಪೀಡಿಸಿ ಅದನ್ನು ತಮ್ಮ ಮುದ್ದು ಅಜ್ಜಿಗೆ ಕೊಟ್ಟು ಶಾಲೆಗೆ ಹೋಗ್ತಿದ್ರು.
ಅವರೆಲ್ಲ ಹೊರಗಡೆ ಹೋದರೆ ನನ್ನನ್ನು ಒಳಗೆ ಕೂಡಿಹಾಕಿ ಬೀಗ ಜಡಿದು ಹೋಗುತ್ತಿದ್ದುದನ್ನು ಕಂಡು ಬೇಸರಿಸಿದ ಅಕ್ಕಪಕ್ಕದವರು ನನ್ನ ಸ್ಥಿತಿ ನೋಡಲಾಗದೆ, ಮಗ ಸೊಸೆಗೆ ಬುದ್ಧಿಹೇಳಿ, ಅವರು ಕೇಳದಾದಾಗ ಎಲ್ಲರ ಸಹಕಾರದಿಂದ ಇಲ್ಲಿಗೆ ತಂದು ಸೇರಿಸಿದರು. ಈಗ ಇಲ್ಲಿ ತುಂಬಾ ಖುಷಿಯಾಗಿದೀನಿ ಕಣಮ್ಮಾ... ನನಗೆ ಬರುವ ಅಡುಗೆಯನ್ನು ಅಡುಗೆಯವರೊಂದಿಗೆ ಸೇರಿ ಮಾಡ್ತೀನಿ. ಭಜನೆ, ಗಿಡಗಳನ್ನ ನೋಡ್ಕೊಳ್ಳೋದು, ಎಲ್ಲರೂ ಕಷ್ಟ ಸುಖ ಹಂಚ್ಕೊಳ್ತೀವಿ. ಒಟ್ಟಿನಲ್ಲಿ ನೆಮ್ಮದಿಯಾಗಿದ್ದೇನೆ. ಇನ್ನೊಂದ್ ವಿಚಾರ ಗೊತ್ತಾ?, ಇಲ್ಲಿ ನಂಗೆ ಮೂರ್ ಹೊತ್ತೂ ಹೊಟ್ಟೆ ತುಂಬಾ ಊಟ ಕೊಟ್ಟಿದಾನೆ ದೇವ್ರು, ಅಂತ ಕಣ್ಣೀರೊರೆಸಿಕೊಂಡರು. ಅವರ ಮಕ್ಕಳಿಗೂ ಒಂದು ದಿನ ವಯಸ್ಸಾಗುತ್ತಲ್ವೇ ಎಂದು ಯೋಚಿಸುತ್ತಾ ಹೊರ ನಡೆದೆ.

= ನಾಗಲಕ್ಷ್ಮೀ ಶಶಿಕುಮಾರ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!