ಜೀವನ ನಡೆಸಲು ಉತ್ತಮವಾದ ಯಾವ ವೃತ್ತಿಯಾದರೇನು, ಉತ್ತಮ ಜನರ ಸಂಪರ್ಕದೊಂದಿಗೆ ಗಳಿಕೆ ಮತ್ತು ಒಳ್ಳೆಯ ಗುಣ ನಡತೆಯಿದ್ದರೆ ಅಷ್ಟೇ ಸಾಕು. ವಿದ್ಯೆಯೊಂದಿಗೆ ಹೇಗೆ ವಿನಯವೂ ಬರುತ್ತದೋ ಹಾಗೆಯೇ ಕಷ್ಟಪಟ್ಟು ದುಡಿದರೆ ಗಳಿಕೆಯೂ ಬರುತ್ತದೆ.
ಮಡಿಕೇರಿಯಿಂದ 16 ಕಿ.ಮೀ. ದೂರದಲ್ಲಿ ಮರಗೋಡು ಎಂಬ ಗ್ರಾಮದಲ್ಲಿ ವಾಸಿಸುತ್ತಿರುವ ಎಂ.ಎಸ್. ರಾಜು ಮನೆಯ ಪಕ್ಕದಲ್ಲಿ ಟೈಲರಿಂಗ್ ಮಾಡುತ್ತಿದ್ದರು. ಅವರ ಅಲ್ಪ ಸ್ವಲ್ಪ ಟೈಲರಿಂಗ್ ಜೊತೆಯಲ್ಲಿ ಆ ಬಟ್ಟೆಗಳಿಗೆ ಇಸ್ತ್ರಿ ಹಾಕುವುದು ಇವರ ಉದ್ಯೋಗವಾಗಿತ್ತು. ಅನಂತರ ಇವರು ಇಸ್ತ್ರಿ ಮಾಡುವುದನ್ನೇ ವೃತ್ತಿಯಾಗಿಸಿಕೊಂಡರು.
ಆಗ ಇವರಿಗೆ 16 ವರ್ಷ. ಜನ ಇವರ ಮನೆಗೇ ಇಸ್ತ್ರಿ ಮಾಡಲು ಬಟ್ಟೆ ತಂದು ಕೊಡುತ್ತಿದ್ದರು. ಅನಂತರ ಯಾಕೆ ನಾನೇ ಮನೆ ಮನೆಗೆ ಹೋಗಿ ಇಸ್ತ್ರಿ ಮಾಡಬಾರದು ಎಂದೆನಿಸಿ ಒಂದೊಂದು ಮನೆಗೂ ಹೋಗಿ ಮಾಡತೊಡಗಿದರು. ಪ್ರಾರಂಭದಲ್ಲಿ ಒಂದು ಬಟ್ಟೆ ತೊಳೆದು ಇಸ್ತ್ರಿ ಮಾಡುವುದಾದರೆ 10 ಪೈಸೆ, ಕೇವಲ ಇಸ್ತ್ರಿ ಮಾಡುವುದಾದರೆ 5 ಪೈಸೆ ಇತ್ತಂತೆ! ಬೆಳಗ್ಗೆ 9ರಿಂದ ಸಂಜೆ 3.30ರ ತನಕ ಇಸ್ತ್ರಿ ಮಾಡುವುದು ವಾಡಿಕೆಯಾಗಿತ್ತು. ಬಟ್ಟೆ ಲೆಕ್ಕದಲ್ಲೇ ದುಡ್ಡು ತೆಗೆದುಕೊಳ್ಳುತ್ತಿದ್ದರು.
ನಂತರದ ದಿನದಲ್ಲಿದು ಸಂಬಳವಾಗಿ ಮಾರ್ಪಟ್ಟಿತು. ರು. 60ರಿಂದ ಪ್ರಾರಂಭವಾದ ಸಂಬಳವು ಈಗ ರು. 350ಕ್ಕೆ ಬಂದು ಮುಟ್ಟಿದೆ. ಮದುವೆ ಸೀರೆಗಳಿಗೆ ಇಸ್ತ್ರಿ ಹಾಕುವುದರಲ್ಲಿ ಇವರು ಎಕ್ಸ್‌ಪರ್ಟ್. ದಿನಕ್ಕೆ 20 ಸೀರೆಗೆ ಇಸ್ತ್ರಿ ಹಾಕುತ್ತಾರೆ. ಶರ್ಟ್, ಪ್ಯಾಂಟ್ ಆದರೆ ದಿನಕ್ಕೆ 50ಕ್ಕೆ ಹಾಕುತ್ತಾರೆ. ಬೆಳಗ್ಗೆ 9ರಿಂದ ಸಂಜೆ 5.30ರ ತನಕವೂ ಭಾರದ ಇಸ್ತ್ರಿ ಪೆಟ್ಟಿಗೆಯೇ ಇವರ ಗೆಳೆಯ.
ಮದುವೆ ಬಟ್ಟೆಗಳು ತುಂಬಾ ಇದ್ದಲ್ಲಿ ಒಂದೇ ಮನೆಗೆ 3, 4 ದಿನ ಹೋಗಿ ಇಸ್ತ್ರಿ ಮಾಡಿಕೊಡುತ್ತಾರೆ. ಮನೆಯಲ್ಲೇ ಇದ್ದಿಲನ್ನು ಕೆಂಡ ಮಾಡಿ ಇಸ್ತ್ರಿ ಹಾಕುತ್ತಾರೆ. ಮನೆಯಿಂದ ಬರುವಾಗಲೇ ಕಬ್ಬಿಣದ ಇಸ್ತ್ರಿಪೆಟ್ಟಿಗೆ ತುಂಬಾ ಇದ್ದಿಲು ತರುತ್ತಾರೆ. ದಿನಕ್ಕೆ 1ರಿಂದ 11.2 ಕೆ.ಜಿ. ಇದ್ದಿಲು ಬೇಕಾಗುತ್ತದಂತೆ!
ಸುಮಾರು 45 ವರ್ಷಗಳಿಂದ ಇವರು ಇಸ್ತ್ರಿ ಹಾಕುವುದನ್ನು ವೃತ್ತಿಯಾಗಿ ತೆಗೆದುಕೊಂಡು ಜೀವನ ನಡೆಸುತ್ತಿದ್ದಾರೆ. ಈಗಲೂ ಎಂ.ಎಸ್. ರಾಜು ಮಡಿಕೇರಿಯ ಹಲವಾರು ಮನೆಗಳಿಗೆ ಹೋಗಿ ಬಟ್ಟೆಗಳಿಗೆ ಇಸ್ತ್ರಿ ಮಾಡಿಕೊಡುತ್ತಿದ್ದಾರೆ. ಅವರು ಇಸ್ತ್ರಿ ಮಾಡಿದ ಬಟ್ಟೆ ಮಡಚುವ ರೀತಿ, ಜೋಡಿಸುವ ಕ್ರಮ ಕಣ್ಮನ ಸೆಳೆಯುತ್ತದೆ. ಇವರ ಬದುಕಿಗೆ ಬಟ್ಟೆಗಳೇ ಬಣ್ಣ ತುಂಬಿವೆ.
= ಕೃಷ್ಣವೇಣಿ ಪ್ರಸಾದ್ ಮುಳಿಯ