ಅಪ್ಪ, ನಮ್ಮಿಬ್ಬರೊಪ್ಪಂದದಂತೆ ನೀವು ನಡೆದಿಲ್ಲ
ಮುಂಜಾನೆದ್ದು ನಿಮ್ಮ ವಾಕಿಂಗ್ ಶೂಗಳ ಪರೀಕ್ಷಿಸಿದೆ
ಸೋಲು ಸವೆದಿಲ್ಲ, ಬಣ್ಣ ಕೆಟ್ಟಿಲ್ಲ
ಅಂದರೆ ನೀವು ಬೆಳಗಿನೆಳೆ ಬಿಸಿಲಿಗೆ ಮೈ ಕೊಡುವುತ್ತಿಲ್ಲ
ಮೊನ್ನೆ ಮೊನ್ನೆ ಕೊಂಡ ಪ್ಯಾಂಟನ್ನು ನೀವು ಧರಿಸುತ್ತಿಲ್ಲ
ಯಾಕೆಂದರೆ ಅದರ ಸುತ್ತಳತೆ ಬಾಜೂ ನೀವಿಲ್ಲ
ಡೈನಿಂಗ್ ಟೇಬಲ್ಲಿನಲ್ಲಿ ಪ್ರತಿಷ್ಠಾಪನೆಗೊಂಡರೆ
ಹೊಟ್ಟೆಗಿಳಿಸುವ ಮಂತ್ರ ನೀವು ಬಿಡುತ್ತಿಲ್ಲ
ಸೋಫಾದ ಈ ತುದಿ ಹಳ್ಳ ಬಿದ್ದಿದೆ ನೋಡಿ
ಟಿವಿ ನೋಡಲು ಕೂರುವುದು ಇಲ್ಲೆ ತಾನೆ
ಸುದ್ದಿವಾಹಿನಿ ಬಿಟ್ಟು ಹಿಡಿದಿದ್ದೀರಿ ಸೀರಿಯಲ್ಲು
ಅದು ಅಮ್ಮನಿಗಾರಾಮವೆಂತ ಸಬೂಬು ಕೊಟ್ಟು
ನಿಮ್ಮ ಕಣ್ಣ ಕೆಳಗಿನ ಮೂಗಿನೆರಡು ಬದಿ ಕಪ್ಪಿಟ್ಟಿಲ್ಲವೇಕೆ?
ಕನ್ನಡಕವ ಬಿಟ್ಟು ದೃಷ್ಟಿದೋಷದ ಕಡೆಗೆ ಗಮನವೇಕೆ?
ಕತೆ ಕವಿತೆ ದೊಡ್ಡವರ ಚರಿತೆ ಬೇಡವೆಂದರೆ ಹೇಗೆ
ಪತ್ರಿಕೆಗಳ ಓದಿಗೆ ಭಂಗ ಮಾಡಿಕೊಂಡದ್ದು ಸಾಕೆ?
ಕೋಣೆಯೊಳಗೇನು ಅಷ್ಟೊಂದು ಮಿಂಟಿ ಪೆಪ್ಪರ್ಮಿಂಟು
ಅಗರಬತ್ತಿಯ ಬದಲು ಸಿಗರೇಟು ಘಾಟು
ಪಾರಾಯಣದ ಪುಸ್ತಕದ ತುಂಬಾ ಚೀಟಿ ವೈದ್ಯರದು
ಭಾಗವತದ ಬದಲಾಗಿ ಬ್ಯಾಂಕ್‌ಪಾಸ್ ಪುಸ್ತಕಗಳ ಓದು
ರಾಮಾಯಣಕ್ಕೆ ನಾಯಕ ದಶರಥನಲ್ಲ, ಭಾರತಕ್ಕೆ ಧೃತರಾಷ್ಟ್ರನೂ
ಹೇಳಿರಿ ಇದನ್ನು ನಿಮ್ಮ ಭಾಗವತಿಕೆಯಲ್ಲಿ
ಸ್ಪಷ್ಟವಾಗಲಿ ಎಲ್ಲ
ಅಪ್ಪ, ಇದು ಮೂದಲಿಕೆಯಲ್ಲ...
= ಅನಂತ ರಮೇಶ್