ಸಾಧನೆ

ಗೋ ಕಲೆ

ಓದಿದ್ದು ನಾಲ್ಕನೇ ಕ್ಲಾಸು. ಮಾಡುತ್ತಿರುವ ವೃತ್ತಿ ಕಾಷ್ಠ ಶಿಲ್ಪ ರಚನೆ. ಪಡೆದದ್ದು ಶ್ರೀಲಂಕಾ ವಿ.ವಿ.ಯ ಡಾಕ್ಟರೇಟ್ ಪದವಿ! ಇದು ಕಲೆ...

ಓದಿದ್ದು ನಾಲ್ಕನೇ ಕ್ಲಾಸು. ಮಾಡುತ್ತಿರುವ ವೃತ್ತಿ ಕಾಷ್ಠ ಶಿಲ್ಪ ರಚನೆ. ಪಡೆದದ್ದು ಶ್ರೀಲಂಕಾ ವಿ.ವಿ.ಯ ಡಾಕ್ಟರೇಟ್ ಪದವಿ! ಇದು ಕಲೆಗೆ ಸಿಕ್ಕಿದ ಬೆಲೆ.
ಈ ಯಶೋಗಾಥೆಯ ಹೀರೋ ಬಳ್ಕೂರು ಗೋಪಾಲಕೃಷ್ಣ ಆಚಾರ್ಯ.
ಇತಿಹಾಸಕ್ಕೆ ಮರುಜೀವ
ಒಂದು ಕಾಲದಲ್ಲಿ ರಾಜಮಹಾರಾಜರ ಶ್ರೀಮಂತಿಕೆಯ ಪ್ರತೀಕವಾಗಿ, ನಾಡಿನ ಇತಿಹಾಸದ ನಿದರ್ಶನವಾಗಿ, ನಂತರ ನಿರ್ಲಕ್ಷ್ಯಕ್ಕೊಳಗಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ನೆಲಕಚ್ಚಿದ್ದ 25ಕ್ಕೂ ಹೆಚ್ಚು ಅರಮನೆ, ಐತಿಹಾಸಿಕ ಬಂಗ್ಲೆ, ಪಾರಂಪರಿಕ ವಾಸ್ತುಶೈಲಿಯ ಅಪರೂಪದ ಕಟ್ಟಡ, ದೇವಸ್ಥಾನ, ಗರೋಡಿ, ಜಂಗಮ- ಮಠಗಳ ಅಳಿದುಳಿದುದನ್ನು ಕೊಡವಿ ಎತ್ತಿ ತಂದು ಮಣಿಪಾಲದ 'ಹೆರಿಟೇಜ್ ವಿಲೇಜ್‌'ನಲ್ಲಿ ಮತ್ತೆ ಮೂಲರೂಪದಲ್ಲಿ ನೆಲೆಗೊಳಿಸಿದ್ದು ವಿಜಯನಾಥ ಶೆಣೈ. ಅವರ ಸಾಧನೆಗಳನ್ನು ಕಾರ್ಯಸಾಧುಗೊಳಿಸಿದವರು ಈ ಬಳ್ಕೂರು ಗೋಪಾಲಕೃಷ್ಣ ಆಚಾರ್ಯ.
ಹೆರಿಟೇಜ್ ವಿಲೇಜ್‌ನಲ್ಲಿರುವ ನೂರಾರು ವರ್ಷಗಳಷ್ಟು ಹಳೆಯ ಇತಿಹಾಸದ ಅದ್ಭುತಗಳಾದ ಮದ್ದಳೆ ಕಂಬದ ಅರಮನೆ, ಪೇಶ್ವೆ ದರ್ಬಾರು, ಹರ್ಕೂರು ಅರಮನೆ, ಬಂಡಸಾಲೆ ಬಂಗಲೆ, ಮುದೂಳ್ ಅರಮನೆ, ವೈಸ್‌ರಾಯ್ ಬಂಗ್ಲೋ... ಎಲ್ಲವೂ ಬಳ್ಕೂರು ಆಚಾರ್ಯರ ಸುತ್ತಿಗೆ- ಉಳಿಯೇಟಿಗೆ ಮತ್ತೆ ಮೂಲರೂಪ ಪಡೆದವುಗಳೇ ಆಗಿವೆ.
ಕನಿಷ್ಠ 400 ವರ್ಷಗಳಷ್ಟು ಹಳೆಯದಾಗಿರುವ ಕಾಷ್ಠ ಶಿಲ್ಪಗಳಿಂದ ಸಂಪತ್ಭರಿತವಾಗಿರುವ ಉಡುಪಿಯ ಕೃಷ್ಣಮಠ-ಅಷ್ಟಮಠಗಳ ದುರಸ್ತಿ ಸಂದರ್ಭದಲ್ಲೆಲ್ಲ ಬಳ್ಕೂರು ಆಚಾರ್ಯ ತಮ್ಮ ಮ್ಯಾಜಿಕ್ ತೋರಿಸಿದ್ದಾರೆ.
ಉಡುಪಿ ಮಾತ್ರವಲ್ಲ...
ಉಡುಪಿಯಲ್ಲಿ ಮಾತ್ರವಲ್ಲ, ಬೆಂಗಳೂರಿನಲ್ಲಿರುವ ಚಿತ್ರನಟ ಸುದೀಪ್, ಮದ್ಯದ ದೊರೆ ವಿಜಯ ಮಲ್ಯ ಅಂಥವರ ಬಂಗ್ಲೆಗಳಲ್ಲೂ ಕಾಷ್ಠ ವೈಭವ ಮೆರೆಸಿದವರು ಆಚಾರ್ಯರು. ಸದ್ಯದಲ್ಲೇ ಅವರು ಮುಂಬೈಯಲ್ಲಿ ಚಿತ್ರನಟ ಸುನಿಲ್ ಶೆಟ್ಟಿಗಾಗಿ ಭವ್ಯ 'ಗುತ್ತಿನ ಮನೆ'ಯನ್ನೂ ನಿರ್ಮಿಸಲಿದ್ದಾರೆ ಎಂದರೆ ಆಚಾರ್ಯರ ಕೈಚಳಕ ಅಂದಾಜಿಗೆ ಸಿಗಬಹುದು.
ಇನ್ನಷ್ಟು ನಿದರ್ಶನ
ಅವರ ಉಳಿಯಲ್ಲಿ ಸುಂದರಗೊಂಡ ಮನೆ, ಬಂಗ್ಲೆಗಳನ್ನು ಲೆಕ್ಕ ಹಾಕುವುದೇ ಒಂದು ಸಾಹಸ. ಕೈ ಅಳತೆಯಲ್ಲಿ ನಿರ್ಮಾಣಗೊಂಡ ದೇಗುಲಗಳು, ಕರಾವಳಿಯ ಬಂಟರ ಗತ್ತಿನ ಗುತ್ತಿನ ಮನೆಗಳು, ರೆಸಾರ್ಟ್‌ಗಳು, ಭಾರಿ ರಥಗಳು ಎಲ್ಲವೂ ಆಚಾರ್ಯರ ಸಾಧನೆಗೆ ಹಿಡಿದ ಕೈಗನ್ನಡಿಗಳು.
ಹುಡುಕಿ ಬಂದ ಪುರಸ್ಕಾರ
ಅವರ ಕಲೆಗೆ ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿ, ಅಷ್ಟಮಠಗಳ ಸನ್ಮಾನ ಸೇರಿದಂತೆ ಅನೇಕ ಗೌರವಗಳು ಪ್ರಾಪ್ತಿಯಾಗಿವೆ. ಜೊತೆಗೆ ಈಗ ಕೊಲಂಬೋ ವಿವಿ ಕರೆದು ಗೌರವ ಡಾಕ್ಟರೇಟ್ ನೀಡಿದೆ. ಆಚಾರ್ಯರ ಕಾಷ್ಠ ಶಿಲ್ಪ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ.
ಪ್ರಸ್ತುತ ಮಣಿಪಾಲದ ಅಲೆವೂರು ಎಂಬಲ್ಲಿ ಪತ್ನಿ, ಮೂವರು ಹೆಣ್ಣು ಮಕ್ಕಳೊಂದಿಗೆ ಸುಖಿ ಸಂಸಾರ ನಡೆಸುತ್ತಿರುವ ಆಚಾರ್ಯರು, 'ಇಷ್ಟೆಲ್ಲ ಹೇಗಾಯ್ತೋ, ಇದೆಲ್ಲ ಕನಸಾ ನನಸಾ ಅಂತ ಗೊತ್ತಾಗುದಿಲ್ಲೆ ಮಾರಾಯ್ರೆ, ದೇವ್ರ ದಯೆ ಅಂತಾರಲ್ಲಾ, ಇದೇ ಮಾರಾಯ್ರೆ ಅದು. ಇಲ್ದಿದ್ರೆ ಆಗ ಒಪ್ಪತ್ತೂ ಊಟಕ್ಕೆ ಕಷ್ಟ ಇದ್ದ ಮನೆ ನಮ್ದು. ಈಗ ಕೈತುಂಬಾ ಕೆಲ್ಸಾನೂ ಇತ್ತ್, ಸಂಪಾದನೆನೂ ಇತ್ತ್...' ಎಂದು ಮುಗ್ಧವಾಗಿ ನುಡಿಯುತ್ತಾರೆ.




ತಂದೆಗೆ ಇಷ್ಟ ಇರಲಿಲ್ಲ...
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ತೀರಾ ಬಡತನದಲ್ಲಿ ಹುಟ್ಟಿದ ಆಚಾರ್ಯರ ತಂದೆಗೆ ಆಗಿನ ಕಾಲದಲ್ಲಿ ಹೊಟ್ಟೆ ಹೊರೆಯದ ಕುಲಕಸುಬಾದ ಬಡಗಿ ವೃತ್ತಿಯಲ್ಲಿ ಮಗ ಮುಂದುವರಿಯುವುದು ಒಂಚೂರೂ ಇಷ್ಟ ಇರಲಿಲ್ಲ. ಅದಕ್ಕಾಗಿ 15ನೇ ವರ್ಷದಲ್ಲೇ ಲಾರಿಗಳ ಬಾಡಿ ಕಟ್ಟುವ ಕೆಲಸಕ್ಕೆ ಸೇರಿಸಿದರು.
ಆದರೆ, ಲಾರಿ ಬಾಡಿ ಕಟ್ಟುವವರಲ್ಲಿ ಮಳೆಗಾಲದಲ್ಲಿ ಕೆಲಸ ಇರಲಿಲ್ಲ. ಆದ್ದರಿಂದ ಅಲ್ಲಿಂದ ಆಚಾರ್ಯರು ಹೊರಬಿದ್ದರು. ಅಕಾಲದಲ್ಲಿ ತಂದೆಯೂ ನಿಧನರಾದರು. ಆಚಾರ್ಯರು ತಂದೆಯ ಉಳಿ ಸುತ್ತಿಗೆಯನ್ನೇ ಕೈಗೆತ್ತಿಕೊಂಡರು.
ಆರಂಭದಲ್ಲಿ ಅಲ್ಲಿ ಇಲ್ಲಿ ಬೇರೆಯವರ ಕೈಕೆಳಗೆ ದುಡಿದ ಅವರಿಗೆ ಅದರಲ್ಲಿ ತೃಪ್ತಿ ಸಿಗಲಿಲ್ಲ. ಅಳಿಯುತ್ತಿರುವ ತಮ್ಮ ಕುಲದವರು ನೂರಾರು ವರ್ಷಗಳ ಹಿಂದೆ ರಚಿಸಿದ ಕಾಷ್ಠ ಶಿಲ್ಪ ವೈಭವ ಉಳಿಸಬೇಕು ಎಂದೆನ್ನಿಸಿತು.
ಅವರ ಈ ಆಸೆಗೆ ಒತ್ತಾಸೆಯಾದವರು ಹೆರಿಟೇಜ್ ವಿಲೇಜ್‌ನ ಕನಸುಗಾರ ವಿಜಯನಾಥ ಶೆಣೈ ಮತ್ತು ಅವರ ಆರ್ಕಿಟೆಕ್ಟ್ ಹರೀಶ್ ಪೈ. ಅಲ್ಲಿಂದ ಎತ್ತರೆತ್ತರಕ್ಕೆ ಬೆಳೆದ 47ರ ಹರೆಯದ ಆಚಾರ್ಯರ ಕೈಕೆಳಗೆ ಇಂದು 150 ಜನರು ದುಡಿಯುತ್ತಿದ್ದಾರೆ!

- ಸುಭಾಶ್ಚಂದ್ರ ಎಸ್. ವಾಗ್ಳೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!