ಕಲೆಯ ಮೇಲಿನ ಅಭಿಮಾನ, ಸಾಧನೆ ಮಾಡಬೇಕೆಂಬ ಹಂಬಲ, ತಾಳ್ಮೆಯಿದ್ದರೆ ಆಸಕ್ತಿಗೆ ಅನುಗುಣವಾಗಿ ಅಭಿರುಚಿಯ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆ ಮಾಡಲು ಇಂದು ವಿಫುಲ ಅವಕಾಶಗಳಿವೆ. ಅಂಥ ಅವಕಾಶಗಳನ್ನು ಸಬ್ಬಳಕೆ ಮಾಡಿಕೊಂಡವರಲ್ಲಿ ವೆಂಕಟ್ರಮಣ ಹೆಗಡೆ ಸಹ ಒಬ್ಬರು.
ಉ.ಕ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸ್ಮನೆ-ಮುಛಳ್ಳಿಯ ವೆಂಕಟ್ರಮಣ ಹೆಗಡೆ ಪಿಯುಸಿವರೆಗೆ ವ್ಯಾಸಂಗ ಮಾಡಿ, ತಂದೆಯೊಂದಿಗೆ ಕೃಷಿಗೆ ಹೆಗಲೂರಿದವರು. ಅವರು ಕೃಷಿಯ ಕಾರ್ಯಗಳ ಜೊತೆಗೆ ವಿಭಿನ್ನ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮದುವೆ, ಮುಂಜಿ.... ಇತ್ಯಾದಿ ಕಾರ್ಯಕ್ರಮಗಳಲ್ಲಿ ನೆಲಗಟ್ಟು ಕಟ್ಟಲು ಆರಂಭಿಸಿದ ಹೊಸ್ಮನೆಯ ವೆಂಕಣ್ಣ, ಸೀರೆಯಿಂದ ಭಿನ್ನಭಿನ್ನವಾದ ಡಿಸೈನ್‌ಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಅವರಲ್ಲಿರುವ ಕಲಾ ಚಟುವಟಿಕೆಯನ್ನು ಸೂಕ್ಷ್ಮವಾಗಿ ಗುರುತಿಸಿದ ಊರಮಂದಿ, ವೆಂಕಣ್ಣನ ಕಲಾಸೇವೆಯನ್ನು ಪ್ರೋತ್ಸಾಹಿಸಿದರು. ಹೀಗೆ ಆರಂಭವಾದ ಅವರ ನೆಲಗಟ್ಟು ಕಟ್ಟುವ ಕಲಾಸೇವೆ ಊರಿನಾಚೆಯೂ ಪ್ರಸರಿಸಿತು. ಹೀಗಾಗಿ ವೆಂಕಣ್ಣ ಹೊರ ತಾಲೂಕಿಗೂ ಹೋಗಿ ಸೀರೆಗಳಿಂದ ವೈವಿಧ್ಯಮಯವಾದ ಡಿಜೈನ್ಗಳನ್ನು ಮಾಡಿ ಸೈ ಎನಿಸಿಕೊಂಡು ಬಂದಿದ್ದಾರೆ. ಇವರು ಸಿಂಗಾರದಿಂದ ಆಕರ್ಷಕ ರಂಗೋಲಿ ಬಿಡಿಸುವುದರಲ್ಲೂ ಎತ್ತಿದ ಕೈ.
ಸಾಮಾನ್ಯವಾಗಿ ಅಡಿಕೆ ಮರದ ಸಿಂಗಾರದ ಹೂ ದೇವರಿಗೆ ಏರಿಸುವುದೇ ಹೆಚ್ಚು. ಆದರೆ, ಅದರಿಂದಲೂ ಉತ್ತಮವಾಗಿ, ಜನಸಾಮಾನ್ಯರನ್ನು ರಂಜಿಸುವ ರಂಗೋಲಿ ಹಾಕಬಹುದು ಎಂಬುದನ್ನು ತೋರಿಸಿಕೊಟ್ಟ ಹೆಗ್ಗಳಿಕೆ ವೆಂಕಣ್ಣಂದ್ದು. ಅವರು ಶಿರಸಿಯಲ್ಲಿ ನಡೆದ ಪುಷ್ಪ ಮೇಳ, ಸ್ವರ್ಣವಲ್ಲಿಯ ಕೃಷಿ ಜಯಂತಿ, ಶಿರಸಿಯ ಯೋಗ ಮಂದಿರದಲ್ಲಿ ನಡೆಯ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮ ಕೈಚಳಕದಿಂದ ಪುಷ್ಪಕಲೆಯನ್ನು ಅರಳಿಸಿ ಕಲಾಸಕ್ತರನ್ನು ಸಂತೃಪ್ತಿ ಪಡಿಸಿದ್ದಾರೆ. ವೆಂಕಣ್ಣನ ಕಲಾ ಚಟುವಟಿಕೆ ಇನ್ನಷ್ಟು ಉತ್ತಂಗಕ್ಕೇರಲಿ ಎಂದು ಶುಭ ಹಾರೈಸೋಣ. ಆಸಕ್ತರು ಅವರನ್ನು ದೂ. 08389-296292ನಲ್ಲಿ ಸಂಪರ್ಕಿಸಬಹುದು.
= ಚಿತ್ರ-ಬರಹ: ಗಣಪತಿ ಹಾಸ್ಪುರ