ಯಕ್ಷಗಾನದ ಮೇರು ನಟ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ನಿವಾಸಕ್ಕೆ ಯಾರೇ ಹೋಗಲಿ, ಅವರನ್ನು ಸ್ವಾಗತಿಸಲು ಚಿಟ್ಟಾಣಿ ನಿಂತಿರುತ್ತಾರೆ. ದಿನದ 24 ಗಂಟೆಯೂ ಅವರಿಂದಲೇ ಸ್ವಾಗತ ದೊರೆಯುತ್ತದೆ. ಏಕೆಂದರೆ ಅವರ ಮನೆಯ ಪ್ರಧಾನ ಬಾಗಿಲಿಗೆ ಆಕರ್ಷಕವಾದ ಚಿಟ್ಟಾಣಿ ಅವರ ಯಕ್ಷಗಾನದ ವೇಷದ ಕೆತ್ತನೆ ಮಾಡಲಾಗಿದೆ. ಕಾಷ್ಠ ಶಿಲ್ಪದಲ್ಲಿ ಚಿಟ್ಟಾಣಿ ಮೂಡಿಬಂದಿದ್ದಾರೆ.
ಕಲಾವಿದನೊಬ್ಬ ಚಿಟ್ಟಾಣಿ ಮೇಲಿನ ಅಭಿಮಾನದಿಂದ ಚಿಟ್ಟಾಣಿ ಅವರ ರೂಪವನ್ನೇ ಕಟ್ಟಿಗೆಯ ಮೇಲೆ ಮೂಡಿಸಿದ್ದಾನೆ. ಚಿಟ್ಟಾಣಿ ಯಕ್ಷ ಕಲೆಯಿಂದ ಗಮನ ಸೆಳೆದಿದ್ದರೆ, ಕುಮಟಾ ತಾಲೂಕು ಮೂರೂರು ಕಲ್ಲಬ್ಬೆಯ ಶಿವರಾಮ ಆಚಾರಿ ತಮ್ಮ ಕಾಷ್ಠ ಕಲೆಯ ಮೂಲಕ ಗಮನ ಸೆಳೆದಿದ್ದಾರೆ.
ಎರಡು ವರ್ಷಗಳ ಹಿಂದೆ ಚಿಟ್ಟಾಣಿ ನೂತನವಾಗಿ ನಿರ್ಮಿಸಿರುವ ಮನೆಯ ಕಟ್ಟಿಗೆ ಕೆಲಸವನ್ನು ಶಿವರಾಮ ಆಚಾರಿ ನಿರ್ವಹಿಸುತ್ತಿದ್ದರು. ಪ್ರಧಾನ ಬಾಗಿಲು ರೂಪಿಸಲು ಚಿಟ್ಟಾಣಿ ಹೇಳಿದಾಗ ಕಲಾವಿದ ಶಿವರಾಮ ಆಚಾರಿ ಹಾಗೂ ಸಹೋದರನಿಗೆ ಪ್ರಧಾನ ಬಾಗಿಲಿನ ಮೇಲೆ ಚಿಟ್ಟಾಣಿ ಅವರ ಪ್ರತಿರೂಪವನ್ನೇ ಕೆತ್ತಿದರೆ ಹೇಗೆಂಬ ಯೋಚನೆ ಬಂತು. ತಕ್ಷಣ ಚಿಟ್ಟಾಣಿ ಅವರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಂಡರು. ಚಿಟ್ಟಾಣಿ ಅವರಿಂದ ಅವರದ್ದೇ ಯಕ್ಷಗಾನ ಪಾತ್ರದ ಫೋಟೋವನ್ನೂ ಪಡೆದರು. ಸತತ 1 ತಿಂಗಳ ಶ್ರಮದಿಂದ ಕಟ್ಟಿಗೆಯ ಬಾಗಿಲಿನ ಮೇಲೆ ಚಿಟ್ಟಾಣಿ ಪಡಿಯಚ್ಚು ಮೂಡಿಸಿದರು. ಇದನ್ನು ನೋಡಿದಾಗ ಸ್ವತಃ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೂ ಅಚ್ಚರಿಯಾಯಿತು.
ಈ ಬಾಗಿಲನ್ನು ಚಿಟ್ಟಾಣಿ ಅವರ ಮನೆಗೆ ಅಳವಡಿಸಿದಾಗ ಭಾರಿ ಪ್ರಶಂಸೆ. ಕಲಾವಿದರು, ಚಿಟ್ಟಾಣಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಚಿಟ್ಟಾಣಿ ಅವರದ್ದೆ ಮುಖಭಾವ, ಕಣ್ಣು, ಹುಬ್ಬು ಎಲ್ಲವೂ ಸಹಜತೆಗೆ ತುಂಬ ಹತ್ತಿರವಾಗಿತ್ತು. ಯಕ್ಷಗಾನದ ಆಭರಣಗಳೂ ಅಂದವಾಗಿ ಮೂಡಿ ಬಂದಿದ್ದವು.
ಶಿವರಾಮ ಆಚಾರಿ ಅವರಿಗೆ ಚಿಟ್ಟಾಣಿ ಮೇಲೆ ಎಲ್ಲಿಲ್ಲದ ಅಭಿಮಾನ. ಕನಿಷ್ಠ 50 ಸಾವಿರ ರು. ಮೌಲ್ಯದ ಶ್ರಮ ಅದರ ಹಿಂದಿತ್ತು. ಆದರೆ ಕುಮಟಾದಲ್ಲಿ ವಿಶ್ವಕರ್ಮ ಸಮಾಜದವರು ಚಿಟ್ಟಾಣಿ ಅವರನ್ನು ಸನ್ಮಾನಿಸಿದಾಗ ಶಿವರಾಮ ಆಚಾರಿ ಈ ಬಾಗಿಲನ್ನು ಕೊಡುಗೆಯಾಗಿ ನೀಡಿದರು. ಪೈಸೆ ಹಣವನ್ನೂ ಪಡೆಯದೆ ಅಭಿಮಾನ ಮೆರೆದರು.
ಧಾರವಾಡದ ಫೈನ್ ಆರ್ಟ್‌ನಲ್ಲಿ ಆರ್ಟ್ ಮಾಸ್ಟರ್ ಡಿಪ್ಲೋಮಾ ಅಭ್ಯಸಿಸಿದ್ದ ಶಿವರಾಮ ಆಚಾರಿ ತಮ್ಮ ಕುಲಕಸುಬಿನಲ್ಲಿ ಚಿತ್ರಕಲೆಯನ್ನೂ ಸೇರಿಸಿ ಕಾಷ್ಠ ಶಿಲ್ಪವನ್ನು ರೂಪಿಸುತ್ತಿದ್ದಾರೆ. ಚಿಟ್ಟಾಣಿ ಅವರ ಚಿತ್ರ ಕೂಡ ಶಿವರಾಮ ಆಚಾರಿ ಅವರ ಕಲ್ಪನೆಯಿಂದಲೆ ಮೂಡಿಬಂದಿದೆ. ಕಾಷ್ಠ ಶಿಲ್ಪದಲ್ಲಿ ಅಪರೂಪದ ಕಲಾಕೃತಿಗಳನ್ನು ನಿರ್ಮಿಸಿರುವ ಶಿವರಾಮ ಆಚಾರಿ ಚಿಟ್ಟಾಣಿ ಅವರ ಕಲಾಕೃತಿಯಿಂದಾಗಿ ಇನ್ನಷ್ಟು ಗಮನ ಸೆಳೆದವರು. ಚಿಟ್ಟಾಣಿ ನಿವಾಸದ ಪ್ರಧಾನ ಬಾಗಿಲನ್ನು ನೋಡಿ ಆಕರ್ಷಿತರಾದ ಯಕ್ಷ ನಟಿ ಅರ್ಪಿತಾ ಹೆಗಡೆ ಅವರಿಗೂ ಶಿವರಾಮ ಆಚಾರಿ ಕಲಾಕೃತಿ ರೂಪಿಸಿಕೊಟ್ಟಿದ್ದಾರೆ.
ನನ್ನ ಮನೆ ಬಾಗಿಲಿಗೆ ನನ್ನದೇ ಅರ್ಜುನನ ಪಾತ್ರದ ಪಡಿಯಚ್ಚು ಮಾಡಿದ್ದು ಸಂತಸ ತಂದಿದೆ. ಕಲಾವಿದ ಶಿವರಾಮ ಆಚಾರಿ ಇದಕ್ಕೆ ಅಭಿನಂದನಾರ್ಹರು.
- ಚಿಟ್ಟಾಣಿ ರಾಮಚಂದ್ರ ಹೆಗಡೆ
ಪದ್ಮಶ್ರೀ ಪುರಸ್ಕೃತ ಯಕ್ಷಗಾನ ಕಲಾವಿದ
- ವಸಂತಕುಮಾರ್ ಕತಗಾಲ