ಕೆಲವರು ಬುದ್ಧಿಯಿಂದ ಸಾಧಕರು. ಹಲವರು ಮೈಕಟ್ಟಿನಿಂದಲೇ ಸಾಧಕರು. ಶರೀರವನ್ನು ದಿನಾ ಪಳಗಿಸಿ, ಬೆವರಿಳಿಸಿ ದರೆ ಅದು ಮತ್ತಷ್ಟು ಗಟ್ಟಿಮುಟ್ಟಾಗುತ್ತದೆ. ಆ ಗಟ್ಟಿತನವೇ ಅವರೊಳಗೊಬ್ಬ ಸಾಧಕನನ್ನು ಹುಟ್ಟುಹಾಕುತ್ತದೆ. ಅಂಥ ಸಾಧಕರಲ್ಲಿ ವಿದೇಶದ ಅನೇಕ ಕರಾಟೆ ಪಟ್ಟುಗಳನ್ನು ಕಲಿತಿರುವ ಕಾರ್ತೀಕ್ ಎಸ್. ಕಟೀಲು ಒಬ್ಬರು.
ಯೂಟ್ಯೂಬ್‌ನಲ್ಲಿ ವಿದೇಶದ ಪ್ರಖ್ಯಾತ ಪಟುಗಳ ಕರಾಟೆ ಶೈಲಿಯನ್ನು ವೀಕ್ಷಿಸಿ ಅದನ್ನು ಕರಗತ ಮಾಡಿಕೊಂಡಿರುವ ಕಾರ್ತೀಕ್ ಕಟೀಲಿನ ಅಜಾರು ಊರಿನವರು. ಆರನೇ ವಯಸ್ಸಿನಲ್ಲಿ ಈಶ್ವರ್ ಕಟೀಲ್ ಅವರನ್ನು ಕರಾಟೆಯ ಗುರುಗಳಾಗಿ ಪಡೆದ ಕಾರ್ತೀಕ್, 9ನೇ ತರಗತಿಯಲ್ಲೇ ಕರಾಟೆಯ ಉನ್ನತ ಪ್ರಶಸ್ತಿ 'ಬ್ಲಾಕ್‌ಬೆಲ್ಟ್' ಪಡೆದಿದ್ದರು. ಮಗನ ಕರಾಟೆ ಪ್ರೇಮಕ್ಕೆ ಹೆತ್ತವರಿಂದ ಉತ್ತಮ ಪ್ರೋತ್ಸಾಹ ದೊರಕಿದ್ದು ಕಾರ್ತೀಕ್‌ಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಯಿತು.
21ರ ಹರೆಯದ ಕಾರ್ತೀಕ್ ಕರಾಟೆಯಲ್ಲಿ 16 ಸಲ ರಾಜ್ಯ ಮಟ್ಟದ ಹಾಗೂ 6 ಸಲ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ. ಪ್ರಾರಂಭದಲ್ಲಿ ಭಾರತೀಯ ಶೈಲಿಯ ಕರಾಟೆ ಕಲಿತ ಕಾರ್ತೀಕ್ ನಂತರ ವಿದೇಶಿ ಕರಾಟೆಗೆ ಆಕರ್ಷಿತರಾದರು. ಯೂಟ್ಯೂಬ್‌ನಲ್ಲಿ ತನ್ನ ಮೆಚ್ಚಿನ ಕರಾಟೆ ಪಟುಗಳಾದ ಥಾಯ್ಲೆಂಡ್‌ನ ಟೋನಿ ಜಾ, ಬ್ರೂಸ್ಲಿ, ಜಾಕಿಚಾನ್ ಮುಂತಾದವರ ಕರಾಟೆ ಶೈಲಿಯನ್ನು ವೀಕ್ಷಿಸಿ ಕರಗತ ಮಾಡಿಕೊಂಡಿದ್ದಾರೆ.
ಮುಖ್ಯವಾಗಿ ವಿದೇಶಿ ಕರಾಟೆ ಪಟ್ಟುಗಳಾದ ಟೇಕ್ವಾಂಡೋ, ವೂವತ್ಸಾಯ್, ಒಜಿಸ್ತುಗಳನ್ನು ಕಲಿತಿದ್ದಾರೆ. ಅಲ್ಲದೆ ಏರಿಯಲ್ ಕಾಟರ್‌ವೀಲ್, ಚೀಟ್ ಗೇನಾರ್, ಜೂಡೊಸ್ತೊ ಸ್ಪೆಷಲ್ ಟೆಕ್ನಿಕ್, ಕನ್ಫ್ಯೂಸ್ ಕಿಕ್ ಹಾಗೂ ಬಟರ್‌ಫ್ಲೈ ಟ್ವಿಸ್ಟ್‌ನಂಥ ವಿದೇಶಿ ಕರಾಟೆ ತಂತ್ರಗಳಲ್ಲಿ ಹೊಡೆದಾಡುವ ಸಾಮರ್ಥ್ಯ ಹೊಂದಿದ್ದಾರೆ.
ಪ್ರಸ್ತುತ ಕಾರ್ತೀಕ್ ಅಲೋಶಿಯಸ್ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿ. ತಂದೆ ಪ್ರೊ. ಸುರೇಶ್ ಕಟೀಲು ಕಾಲೇಜಿನಲ್ಲಿ ಉಪನ್ಯಾಸಕರು. ತಾಯಿ ಶೋಭಾಲತಾ ಭರತನಾಟ್ಯ ಶಿಕ್ಷಕಿ. ತನ್ನದೇ ಕರಾಟೆ ತಂಡವನ್ನು ಕಟ್ಟಿ ಬೆಳೆಸುತ್ತಿರುವ ಕಾರ್ತೀಕ್ ಕರಾಟೆಯಲ್ಲಿ ಮಾರ್ಷಲ್ ಆರ್ಟ್ ಸೂಪರ್‌ಸ್ಟಾರ್ ಆಗುವ ಗುರಿಯನ್ನು ಹೊಂದಿದ್ದಾರೆ. ಅಲ್ಲದೆ ಅವಕಾಶ ಸಿಕ್ಕರೆ ಚಲನಚಿತ್ರಗಳಲ್ಲೂ ಅಭಿನಯಿಸುವ ಆಶಯವನ್ನು ವ್ಯಕ್ತಪಡಿಸುತ್ತಾರೆ.
= ರವಿರಾಜ್ ಕಟೀಲು