ನಮಗೆ ಇತಿಹಾಸದ ಬಗ್ಗೆ ಮಾಹಿತಿ ಸಿಗುವುದು ಪುಸ್ತಕ, ವಿವಿಧ ಶಾಸನಗಳಲ್ಲಿ ಅಥವಾ ಅವರು ಟಂಕಿಸಿದ ನಾಣ್ಯಗಳಲ್ಲಿ. ವಿಶೇಷವಾಗಿ ನಾಣ್ಯಗಳ ಕಲಾತ್ಮಕತೆ, ಅಕಾರ, ಶೈಲಿ, ವಿನ್ಯಾಸ, ಗುಣಮಟ್ಟ ನಾಣ್ಯಗಳ ಮೇಲೆ ಬಿಡಿಸಿರುವ ಚಿತ್ರಗಳ, ಅಕ್ಷರಗಳ ಸ್ಪಷ್ಟತೆ ಇವುಗಳ ಆಧಾರದ ಮೇಲೆ ಆ ರಾಜವಂಶದ ಬಗ್ಗೆ ತಿಳಿದುಕೊಳ್ಳಲು ನಮಗೆ ಸಹಾಯಕ. ಹೀಗೆ ವಿವಿಧ ರಾಜವಂಶದ ನಾಣ್ಯಗಳು, ವಿವಿಧ ದೇಶದ ಹಳೆಯ ಹಾಗೂ ಹೊಸ ನೋಟುಗಳು, ಅಂಚೆ ಚೀಟಿಗಳು ಒಂದೆಡೆಯೇ ನೋಡಲು ಸಿಗುತ್ತದೆ ಎಂದಾದರೆ ಅದು ವಾಸಪ್ಪನವರ ನಿವಾಸದಲ್ಲಿ.
ರಾಯಚೂರಿನ ವಾಸಪ್ಪ 40 ವರ್ಷಗಳಿಂದ ಈ ಹವ್ಯಾಸದಲ್ಲಿ ತೊಡಗಿದ್ದಾರೆ. 73ರ ಹರೆಯದ ನಿವೃತ್ತ ಶಿಕ್ಷಕ ಇವರು. ವಿವಿಧ ರೀತಿಯ ನಾಣ್ಯ, ನೋಟು, ಅಂಚೆ ಚೀಟಿ, ಇವುಗಳನ್ನು ಸಂಗ್ರಹಿಸಲು ತಮ್ಮ ಜೀವನಮಾನವನ್ನೇ ಕಳೆದಿದ್ದಾರೆ. ಇದಕ್ಕೆ ಸ್ಫೂರ್ತಿ ಸ್ನೇಹಿತನೊಬ್ಬ ಸ್ನೇಹದ ನೆನಪಿಗಾಗಿ ಇವರಿಗೆ ಕೊಟ್ಟ ಜರ್ಮನಿಯ ಮಾರ್ಕ್ ನಾಣ್ಯ. ಈಗ ಇವರ ಸಂಗ್ರಹದಲ್ಲಿ ಬೆಳ್ಳಿ, ಬಂಗಾರ, ಸೀಸ, ತಾಮ್ರ ಹೀಗೆ ಅನೇಕ ರೀತಿಯ ನಾಣ್ಯಗಳಿವೆ.
ಅದರಲ್ಲೂ ವಿಶೇಷವಾಗಿ ಹೇರ್ಪಿನ್ ಆಕಾರದ ನಾಣ್ಯವಿದೆ. ಇದನ್ನು ವಿಜಾಪುರದ ಆದಿಲ್ ಶಾಹನು ಟಂಕಿಸಿದ್ದು. ಇದಕ್ಕೆ 'ಲಾರಿನ್' ಎಂದು ಕರೆಯಲಾಗುತ್ತದೆ. ವಾರಣಸಿಯ ನ್ಯಮಿಸ್‌ಮೆಟಿಕ್ಸ್ ಸೊಸೈಟಿ ಆಫ್ ಇಂಡಿಯಾ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರಾಗಿರುವ ವಾಸಪ್ಪನವರಲ್ಲಿ ಹಳೇ ನಾಣ್ಯಗಳು ಅಷ್ಟೇ ಅಲ್ಲದೆ ಭಾರತ ಸರ್ಕಾರವು ವಿಶೇಷ ಸಂದರ್ಭಗಳಲ್ಲಿ ಸ್ಮರಣಾರ್ಥವಾಗಿ ಮುದ್ರಿಸಿದ ಜಗಜ್ಯೋತಿ ಬಸವಣ್ಣ, ಅಂಚೆ ಇಲಾಖೆ, ಎಸ್.ಬಿ. ಬ್ಯಾಂಕಿನದ್ದು, ಜೈನರ ನಾಣ್ಯ, ಗಾಂಧೀಜಿ ನಾಣ್ಯ ಇತ್ಯಾದಿಯೂ ಭದ್ರವಾಗಿವೆ. ಅಲ್ಲದೆ, ವಿವಿಧ ದೇಶಗಳ ಕರೆನ್ಸಿಗಳಾದ ಯೂರೋ, ಡಾಲರ್, ಪೌಂಡ್, ಯೆನ್, ದಿನಾರ್, ರೂಬಲ್, ರಿಯಾಲ್ ಇತ್ಯಾದಿ ಹಳೆಯ ಮತ್ತು ಹೊಸ ನೋಟುಗಳನ್ನು ಸಂಗ್ರಹಿಸಿಟ್ಟಿರುವ ಇವರು ವಿವಿಧ ದೇಶಗಳ ಅಂಚೆ ಚೀಟಿಗಳ ಸಂಗ್ರಹವೂ ಇದೆ.
ಅಲ್ಲದೆ, ಹಿಂದಿನ ರಾಷ್ಟ್ರಪತಿಗಳ, ಉಪರಾಷ್ಟ್ರಪತಿಗಳ, ಸಂಸದರ, ಮುಖ್ಯಮಂತ್ರಿಗಳ, ಉಪಮುಖ್ಯಮಂತ್ರಿಗಳ, ಸಚಿವರ ಹಸ್ತಾಕ್ಷರ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳ ಹಸ್ತಾಕ್ಷರವನ್ನೂ ಸಂಗ್ರಹಿಸಿದ್ದಾರೆ. 'ಜನ ಮೆಚ್ಚಿದ ಶಿಕ್ಷಕ', ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರ ಯಶೋಗಾಥೆಯನ್ನು 'ಚಿನ್ನದ ನಾಣ್ಯ' ಎಂಬ ಪುಸ್ತಕದ ಮೂಲಕ ಈರಣ್ಣ ಬೆಂಗಾಲಿ ಹೊರತಂದಿದ್ದಾರೆ.
ಇತಿಹಾಸದ ಬಗ್ಗೆ ಮಾಹಿತಿಗಳನ್ನು ತುದಿ ನಾಲಗೆ ಮೇಲೆಯೇ ಹೊಂದಿರುವ ಇವರು, ಆದಾಯದ ಸಿಂಹಪಾಲನ್ನು ತಮ್ಮ ಹವ್ಯಾಸಕ್ಕೆ ವ್ಯಯಿಸಿದ್ದಾರೆ. ಹಳೆಯ ನಾಣ್ಯ, ನೋಟು, ಅಂಚೆ ಚೀಟಿಗಳು ಅಷ್ಟು ಸುಲಭವಾಗಿ ಸಿಕ್ಕುವುದಿಲ್ಲ. ಹಾಗಾಗಿ ಹುಡುಕಿಕೊಂಡು ಹೋಗಬೇಕಾಗುತ್ತದೆ. ಕೆಲವು ವ್ಯಕ್ತಿಗಳು ಕೊಡದಿದ್ದರೆ ಅವರನ್ನು ಒಲಿಸಬೇಕಾಗುತ್ತದೆ. ತಿಂಗಳಾನುಗಟ್ಟಲೆ ದುಂಬಾಲು ಬೀಳಬೇಕಾಗುತ್ತದೆ. ಇನ್ನು ಕೆಲವರಂತೂ ತಮ್ಮ ಬಳಿ ಇದ್ದ ಹಳೆಯ ನಾಣ್ಯ, ನೋಟುಗಳಿಗೆ ಅದಕ್ಕಿಂತ ನೂರರಷ್ಟು ಅಧಿಕ ಬೆಲೆ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಾರೆ. ಹೀಗೆ ಅನೇಕ ಸಮಸ್ಯೆಗಳನ್ನು ಈ ಹವ್ಯಾಸದಲ್ಲಿ ಎದುರಿಸಿಯೂ ಅಮೂಲ್ಯವಾದ ನಾಣ್ಯ, ನೋಟು, ಅಂಚೆ ಚೀಟಿಗಳನ್ನು ಸಂಗ್ರಹಿಸಿದ್ದಾರೆ. ಸರ್ಕಾರ, ಖಾಸಗಿ, ಸಂಘ ಸಂಸ್ಥೆಗಳ ಆರ್ಥಿಕ ಸಹಾಯ, ಸಹಕಾರ ದೊರೆತರೆ ಮುಂಬರುವ ಪೀಳಿಗೆಗಳು ನೋಡಲು ದೊರೆಯುವಂತೆ ಇವುಗಳನ್ನು ಸಂರಕ್ಷಿಸಿಡಲು ಒಂದು ಸುವ್ಯವಸ್ಥೆ ಮಾಡುವುದಾಗಿ ವಾಸಪ್ಪ ಹೇಳುತ್ತಾರೆ.
- ಈರಣ್ಣ ಬೆಂಗಾಲಿ