ಸಾಧನೆ

ವಿಜಯ ಮೇಳ

ಈ ಯುವಕನ ವಯಸ್ಸು ಇಪ್ಪತ್ತೊಂಬತ್ತು. ಎರಡೂ ಕಂಕುಳಿಗೆ ಆಧಾರವಾಗಿ ಊರುಗೋಲು ನೀಡದೆ ನಡೆದಾಡುವ ...

ಈ ಯುವಕನ ವಯಸ್ಸು ಇಪ್ಪತ್ತೊಂಬತ್ತು. ಎರಡೂ ಕಂಕುಳಿಗೆ ಆಧಾರವಾಗಿ ಊರುಗೋಲು ನೀಡದೆ ನಡೆದಾಡುವ ಶಕ್ತಿ ಇವರಿಗಿಲ್ಲ. ನಾಲ್ಕು ತಿಂಗಳ ಹಸುಳೆಯಾಗಿದ್ದಾಗ ಬಂದೆರಗಿದ ಪೋಲಿಯೋ ಮಹಾಮಾರಿ ಕಾಲುಗಳ ಶಕ್ತಿಯನ್ನು ಬಲಿ ತೆಗೆದುಕೊಂಡಿದೆ. ಆದರೆ ಸ್ವಾಭಿಮಾನದಿಂದ ಬದುಕುವ ಛಲವೇ ಬಲಹೀನ ಕಾಲುಗಳಿಗೆ ನವಚೈತನ್ಯ ತುಂಬಿದೆ.
ಹೆಗಲಲ್ಲಿರುವ ಊರುಗೋಲನ್ನು ಬದಿಗಿಟ್ಟು ಭಾರವಾದ ಮೃದಂಗದ ಹಗ್ಗವನ್ನು ಯುವಕನ ಕೊರಳಿಗೆ ತೂಗುಹಾಕಿ ಭಾಗವತರು ತಾಳ ಕೈಗೆತ್ತಿಕೊಂಡರೆ ಸಾಕು, ತನಗಿರುವ ನ್ಯೂನತೆಯನ್ನೇ ಮರೆತು ಅದೇ ಕಾಲುಗಳಲ್ಲಿ ನಿರಾಧಾರವಾಗಿ ನಿಂತುಬಿಡುತ್ತಾರೆ. ಹಾಡಿನ ತಾಳಕ್ಕೆ ತಕ್ಕಂತೆ ಬೆರಳುಗಳು ಮೃದಂಗದ ಮೇಲೆ ಓಡಾಡುತ್ತವೆ.
ಪೋಲಿಯೊಗೆ ಹೆದರದೆ ಕಲಾಸಾಧಕನಾಗಿ ನೆಮ್ಮದಿಯಿಂದ ಬದುಕುತ್ತಿದ್ದಾರೆ ವಿಜಯ್. ಉಡುಪಿ ತಾಲೂಕಿನ ಮಂದರ್ತಿಯವರಾದ ಅವರು 10ನೇ ತರಗತಿವರೆಗೆ ಓದಿದವರು. ಶಾಲೆಯಲ್ಲಿ ಕ್ರಿಕೆಟ್ ಮತ್ತು ಕಬಡ್ಡಿಗಳಲ್ಲೂ ಅಪ್ರತಿಮರಾಗಿ ಮೆರೆದವರು ಅಂತಾರೆ ಅವರ ಸಹಕಲಾವಿದ ರಾಘವೇಂದ್ರ ಶೆಟ್ಟಿ.
ಚಿಕ್ಕಂದಿನಲ್ಲೇ ಯಕ್ಷಗಾನ ಆಟಗಳೆಂದರೆ ಪಂಚಪ್ರಾಣ. ಅದರಲ್ಲೂ ಹಿಮ್ಮೇಳ ವಾದನದಲ್ಲಿ ತೀವ್ರ ಆಸಕ್ತಿ ಇತ್ತು.
ಅಸಹಾಯಕ ಬಾಳಿಗೆ ಕಲೆಯ ಊರುಗೋಲು ನೀಡಿ ಹರಸಿದವರು ಯಲ್ಲಾಪುರದ ಮೃದಂಗ ವಾದಕ ಎಂ.ಜಿ. ಹೆಗಡೆಯವರು. ಎರಡು ವರ್ಷ ಅವರು ಈ ಯುವಕನ ಬೆರಳುಗಳನ್ನು ಮೃದಂಗದ ಮೇಲೆ ಓಡಾಡಿಸಿ ಹದಗೊಳಿಸಿದರು. ನಂತರ ಮಂದಾರ್ತಿ ಮೇಳದಲ್ಲಿ ಅವಕಾಶದ ಬಾಗಿಲು ತೆರೆಯಿತು. ಅಲ್ಲಿ ಎರಡು ವರ್ಷಗಳಲ್ಲಿ ಆರಾರು ತಿಂಗಳ ಯಶಸ್ವೀ ತಿರುಗಾಟ ಮಾಡಿದ ಮೇಲೆ ಶನೈಶ್ಚರ ಯಕ್ಷಗಾನ ಮೇಳದಲ್ಲಿ ಅವಕಾಶ ಸಿಕ್ಕಿತು. ಮೂರು ವರ್ಷಗಳಿಂದ ಅದರಲ್ಲೇ ಕಲಾಸೇವೆ. ಕುಳಿತು ಭಾಗವತರ ಹಾಡಿನ ತಾಳಕ್ಕೆ ಮೃದಂಗದ ಸಾಥ್ ನೀಡುವುದಷ್ಟೇ ಅಲ್ಲ, ನಿಂತು ಕೂಡ ಮೃದಂಗದೊಂದಿಗೆ ಮಾತನಾಡಬಲ್ಲೆನೆಂದು ತೋರಿಸಿಕೊಟ್ಟಿದ್ದಾರೆ. ರಂಗಸ್ಥಳದಲ್ಲಿ ಹೆಬ್ರಿ ಗಣೇಶ ಭಾಗವತರಿಗೆ ನಿರಂತರ ಐದು ತಾಸುಗಳ ಕಾಲ ಶ್ರಮವರಿಯದೆ ಮೃದಂಗದ ಮೋಡಿ ಮೆರೆಯಬಲ್ಲರು. ಭಾಗವತರ ಹಾಡಿನ ಭಾವತೀವ್ರತೆಯನ್ನು ಹಿಮ್ಮೇಳದ ಮೃದುಸ್ಪರ್ಶದಲ್ಲಿ ಮುಳುಗಿಸಿ ಕೇಳುಗರಿಗೆ ಮುದ ನೀಡಬಲ್ಲರು.
ವಿಜಯ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಸಂಸಾರಪೋಷಣೆಗೆ ಕಲೆಯೇ ಆಧಾರ. ಮಳೆಗಾಲದಲ್ಲಿ ಮನೆಮನೆಗೆ ಯಕ್ಷಗಾನ ಪ್ರದರ್ಶಿಸುವ ಚಿಕ್ಕ ಮೇಳದ ಜತೆಗೆ ಊರಿಂದೂರು ಸಂಚರಿಸುವ ಅವರ ಬದುಕಿಗೆ ಕಲೆಯೇ ದಿಕ್ಕಾಗಿದೆ. ಕಲೆ ಕಾಲುಗಳಿಗೆ ಬಲ ತುಂಬಿದೆ. ವಿಜಯ್ ಅವರನ್ನು ನೀವೂ ಅಭಿನಂದಿಸಿ... ಮೊ. 7026022851.
- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!