ಚಿಕ್ಕವಯಸ್ಸಿನಲ್ಲೇ ಮದುವೆಯಾಯಿತು. ನಂತರ ಮಗುವಾಯಿತು. ತದಮೇಲೆ ಲಾಲನೆ ಪಾಲನೆ, ಶಾಲೆ ಎಂದಾಯಿತು. ಇಷ್ಟಾದ ಮೇಲೆಯೇ ಆಕೆಗೆ ತನಗಾಗಿ ಸಮಯ ಸಿಕ್ಕಿದ್ದು. ಅವರು ಮೊದಲ ಬಾರಿ ಚಿತ್ರ ಬಿಡಿಸಿದ್ದು 34ರ ವಯಸ್ಸಿನಲ್ಲಿ! ತನ್ನೊಳಗಿನ ಪ್ರತಿಭೆ ಕಂಡುಕೊಳ್ಳಲು, ಅದನ್ನು ಪೋಷಿಸಲು ಆಯುಸ್ಸಿನ 3ನೇ ಒಂದು ಭಾಗ ಕಳೆಯಬೇಕಾಯಿತು ಶಾಂತಿವಾಸು ಅವರಿಗೆ.
ಚಿತ್ರಕಲಾ ಪರಿಷತ್ತಿನಲ್ಲಿ ಒಂದು ವರ್ಷದ ಚಿತ್ರಕಲಾ ತರಬೇತಿಗೆ ಸೇರಿದ ಶಾಂತಿ ಮತ್ತೆ ತಿರುಗಿ ನೋಡಲೇ ಇಲ್ಲ. ಸದ್ಯ ಬೆಂಗಳೂರಿನ ರಾಜಾಜಿನಗರದಲ್ಲಿ 'ನಿಸರ್ಗ ಚಿತ್ರಾಲಯ' ಎಂದು ತಮ್ಮದೇ ಚಿತ್ರಕಲಾ ತರಬೇತಿ ಸಂಸ್ಥೆ ತೆರೆದು ಮಕ್ಕಳು ಮತ್ತು ಮಹಿಳೆಯರಿಗೆ ಪೇಂಟಿಂಗ್ ಕ್ಲಾಸ್‌ಗಳನ್ನು ನಡೆಸುತ್ತಿದ್ದಾರೆ. ಇದೀಗ ಹಲವು ವೇದಿಕೆಗಳಲ್ಲಿ ಹಿನ್ನೆಲೆ ಹಾಡಿಗೆ ಸರಿಯಾಗಿ ಸ್ಥಳದಲ್ಲೇ ಚಿತ್ರ ಬಿಡಿಸಿ ಸೈ ಎನಿಸಿಕೊಳ್ಳುತ್ತಿರುವುದಲ್ಲದೆ, ತಮ್ಮ ವಿದ್ಯಾರ್ಥಿಗಳನ್ನೂ ಈ ವೇದಿಕೆ ಕಾರ್ಯಕ್ರಮಗಳಿಗೆ ಅಣಿಗೊಳಿಸಿ ಅವಕಾಶ ನೀಡುತ್ತಿದ್ದಾರೆ.
ಆಯಿಲ್ ಪೇಂಟಿಂಗ್, ವಾಟರ್ ಕಲರ್, ಮ್ಯೂರಲ್ ಕಲೆಗಳನ್ನು ಸ್ವಯಂ ಪ್ರಯತ್ನದಿಂದ ಕಲಿತಿರುವ ಶಾಂತಿ ಅವರ ಪೇಂಟಿಂಗ್‌ಗಳು 2012ರಿಂದ ಸತತ ಮೂರು ವರ್ಷ ಚಿತ್ರಕಲಾ ಪರಿಷತ್ ಆಯೋಜಿಸುವ 'ಚಿತ್ರಸಂತೆ'ಯಲ್ಲಿ ಪ್ರದರ್ಶನಗೊಂಡು ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಗಿವೆ. ಸಾಮಾನ್ಯವಾಗಿ 'ಪರಿಸರ' ಇವರ ಚಿತ್ರಗಳ ಸರಕಾದರೂ, ಅಧ್ಯಾತ್ಮ, ಪ್ರೀತಿಪ್ರೇಮ ಇತ್ಯಾದಿ ವಿಷಯಗಳೂ ಇವರ ಕುಂಚದಲ್ಲಿ ರೂಪ ತಾಳಿವೆ.
ಮೈಸೂರಿನಲ್ಲಿ 2012ರಲ್ಲಿ ನಡೆದ ದಸರಾ ಚಿತ್ರಪ್ರದರ್ಶನದಲ್ಲಿ ಭಾಗವಹಿಸಿ, ಉತ್ತಮ ಪೇಂಟಿಂಗ್ ಅವಾರ್ಡ್ ಪಡೆದ ಹೆಗ್ಗಳಿಕೆ ಅವರದು. ಕೇರಳದಲ್ಲಿ ವಿಶ್ವ ಜಲದಿನದ ಅಂಗವಾಗಿ ಜರುಗಿದ ಕಾರ್ಯಕ್ರಮ, ಗೊವಾದಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಕಲಾಪ್ರದರ್ಶನ, ಕೆಮ್ಮಣ್ಣುಗುಂಡಿಯಲ್ಲಿ ಪರಿಸರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಚಿತ್ರಪ್ರದರ್ಶನದಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದ್ದಾರೆ. ಭರವಸೆಯ ಪ್ರತಿಭೆಯಾಗಿರುವ ಶಾಂತಿಯವರ ಚಿತ್ರಪಯಣ ನಿರಂತರ ಸಾಗಲಿ. ಮೊ. 9590957810.