ಅವರಿಗೀಗ 80. ಎಲ್ಲರಂತೆ ಮಧುಮೇಹದಂಥ ಕಾಯಿಲೆಗಳು . ಅವರ ಬಳಿಗೆ ಬಂದಿಲ್ಲ. ಅವರು ಜೀವನೋತ್ಸಾಹದ ಚಿಲುಮೆ. ನಸುಕಿನಲ್ಲೇ ಏಳುತ್ತಾರೆ. ಸಂಪ್ರದಾಯದ ಉದಯರಾಗ ಹಾಡುತ್ತ ನಿತ್ಯ ಕೆಲಸಗಳಲ್ಲಿ ಭಾಗಿ. ತುಳಸೀದಳಗಳನ್ನು ಕೊಯ್ದು ತಂದು ಹಾಡುತ್ತಲೇ ದೇವರಿಗೊಂದು ಮಾಲೆ ಸಿದ್ಧ. ನೆನಪಿನ ಶಕ್ತಿ ಇನ್ನೂ ಸ್ಫುಟ. ಮಕ್ಕಳು ಬಾಣಂತಿಯರಿಗೆ ಬೇಕಾದ ಮದ್ದು ಆರೈಕೆಗಳನ್ನು ಆಸಕ್ತರಿಗೆ ಹೇಳುತ್ತಾರೆ. ಒಬ್ಬರೇ ಅಡುಗೆ ಮನೆಗೆ ಹೋಗಿ ಹಳೇ ಕಾಲದ ಮರದ ಒತ್ತಿನಲ್ಲಿ ಶಾವಿಗೆ ಒತ್ತುತ್ತಾರೆ. ರೊಟ್ಟಿ ತಟ್ಟುತ್ತಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಜನಮನದಿಂದ ಅಳಿದು ಹೋಗುತ್ತಿರುವ ಸಂಪ್ರದಾಯದ ಹಾಡುಗಳನ್ನು ಬಲ್ಲವರಿಂದ ಕೇಳಿ ಬರೆದುಕೊಳ್ಳುತ್ತಾರೆ. ನೂರಾರು ಹಾಡುಗಳನ್ನು ನೆನಪಿನ ಶಕ್ತಿಯಿಂದಲೇ ಹಾಡುತ್ತಾರೆ.
ಹೌದು, ಇವರು ಹಳೇ ಪರಂಪರೆಯ ಸಿರಿವಂತ ಕೊಂಡಿ. ರಾಧಾಬಾಯಿ ಭಟ್ ಅವರ ಹೆಸರು. 9 ಮಕ್ಕಳು, 20 ಮೊಮ್ಮಕ್ಕಳು, 11 ಮರಿಮಕ್ಕಳಿರುವ ಸಂಸಾರದ ಕೇಂದ್ರಬಿಂದು. ಉಜಿರೆಯ ರಘುರಾಮ ಭಟ್- ಲಕ್ಷ್ಮೀದೇವಿ ದಂಪತಿಯ 7 ಮಕ್ಕಳಲ್ಲಿ ಐದನೆಯವರು. 60 ಜನರಿದ್ದ ಕೊಂಕಣಿ ಬ್ರಾಹ್ಮಣರ ಕೂಡು ಕುಟುಂಬ ಅವರದು. ಉಜಿರೆ ಮತ್ತು ಬೆಳ್ತಂಗಡಿಯ ಶಾಲೆಗಳಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ. ಮಧ್ಯಾಹ್ನ ಊಟಕ್ಕೆ ಎರಡು ಮೈಲು ದೂರದ ಅಜ್ಜನ ಮನೆಗೆ ಓಡಿಕೊಂಡೇ ಹೋಗಿ ಊಟ ಮುಗಿಸಿ ಮತ್ತೆ ಅದೇ ವೇಗದಲ್ಲಿ ಶಾಲೆಗೆ ಬರಬೇಕಿತ್ತು. ಆಗ ಪಾದಗಳಿಗೆ ಚಪ್ಪಲಿ ಇರಲಿಲ್ಲ. ಬಾಳೆಯೆಲೆ ಮತ್ತು ಆಲದ ಮರದ ಎಲೆಗಳನ್ನು ಅಂಗಾಲಿಗೆ ಕಟ್ಟಿಕೊಂಡು ಓಡುತ್ತಿದ್ದರು. ಚಿಕ್ಕಂದಿನಲ್ಲಿ ಎಷ್ಟು ದೊಡ್ಡ ಮರವನ್ನಾದರೂ ಸರಸರನೆ ಏರಬಲ್ಲ ಕೌಶಲ ರಾಧಾಗಿತ್ತು.
ಮನೆಯಲ್ಲಿ ಅಪ್ಪ ಸಂಪ್ರದಾಯಸ್ಥರು. ಪೂಜೆ ಪುನಸ್ಕಾರಗಳ ಜತೆಗೆ ಪುರಾಣ ವಾಚನ ಮಾಡುತ್ತಿದ್ದುದನ್ನು ಕೇಳಿ ರಾಧಾಬಾಯಿಯ ಜ್ಞಾನಶಕ್ತಿ ವರ್ಧಿಸುತ್ತಲೇ ಹೋಯಿತು. ಉಜಿರೆಯ ರಾಮಮಂದಿರದಲ್ಲಿ ನಡೆಯುತ್ತಿದ್ದ ಏಕಾಹ ಭಜನೆ, ಕಾರ್ತಿಕಮಾಸದ ಭಜನೆಗಳನ್ನು ಕೇಳುತ್ತ ಕೇಳುತ್ತ ಸಂಗೀತ ಕಲಿಯದೆ ರಾಗ ತಾಳ ಜೋಡಿಸಿ ಸುಮಧುರವಾಗಿ ಹಾಡುವ ಕಲೆಯ ಸಿರಿಕಂಠ ಒಲಿಯಿತು. ಕಳಸದ ದಯಾನಂದ ಭಟ್ಟರೊಂದಿಗೆ 16ನೇ ವಯಸ್ಸಿನಲ್ಲಿ ವಿವಾಹ. ಆಗ ಕೊಂಕಣಿಯವರ ಮದುವೆಗಳು 4 ದಿನದ ಹಾಡುಹಸೆಗಳ ರಸಗವಳ. ಆಗ ನಾದಿನಿ ಗಂಡನಿಗೆ ಆರತಿಯೆತ್ತುವ ಹಾಡು ಹೇಳಲು ಒತ್ತಾಯಿಸಿದಾಗ ರಾಧಾಬಾಯಿಗೆ ಹಾಡು ಬರಲಿಲ್ಲ. ಆದರೆ ಅಂದೇ ಮೂಡಿದ ಛಲವೆಂದರೆ ಇಂಥ ಹಾಡುಗಳನ್ನು ಸಂಗ್ರಹಿಸಬೇಕು, ತಾನೂ ಹಾಡಬೇಕು.
ಈ ಛಲವನ್ನು ರಾಧಾಬಾಯಿ ಸಾಧಿಸಿದ್ದಾರೆ. ತಾವು ಹೋದ ಮನೆಗಳಲ್ಲಿ ಹಾಡು ಬಲ್ಲವರಿದ್ದರೆ ಅವರಿಂದ ಹಾಡು ಹೇಳಿಸಿ ಬರೆಯಲಾರಂಭಿಸಿದವರು ಇಂದಿಗೂ ಅದನ್ನು ನಿಲ್ಲಿಸಿಲ್ಲ. ಅದರಲ್ಲಿ ನೂರಾರು ಹಾಡುಗಳ ಸಂಗ್ರಹವೂ ಆಗಿದೆ. ಭಜನೆ, ಆರತಿ ಹಾಡು, ಸ್ತೋತ್ರಗಳು, ವಧುವನ್ನು ಪತಿಗೃಹಕ್ಕೆ ಬೀಳ್ಕೊಡುವುದು, ಮಗುವನ್ನು ತೊಟ್ಟಿಲಿಗೆ ಹಾಕುವುದು, ಗರ್ಭಿಣಿಯರ ಸೀಮಂತ, ಹೆಂಡತಿ ಗಂಡನಿಗೆ ತಾಂಬೂಲ ಕೊಡುವ ಹಾಡು ಹೀಗಿರುವ ಸಂಪ್ರದಾಯದ ಅಸಂಖ್ಯ ಕನ್ನಡ- ಕೊಂಕಣಿ ಹಾಡುಗಳ ಜತೆಗೆ ಭಾವಗೀತೆಗಳು, ಹಳೇ ಚಿತ್ರಗೀತೆಗಳೂ ಅವರ ಸಂಗ್ರಹದಲ್ಲಿ ಸೇರಿಕೊಂಡಿವೆ. ಈ ಎಲ್ಲ ಹಾಡುಗಳೂ ಅವರಿಗೆ ಬಾಯಿಪಾಠ. ಸುಮಧುರ ಕಂಠದಿಂದ ಹಾಡಿದರೆಂದರೆ ಮನಮೋಹಕ ಭಾವಯಾನ. ಎಳೆಯ ಮಕ್ಕಳನ್ನು ಆಟವಾಡಿಸುವ ಹತ್ತಾರು ವಿಧದ ಶಿಶುಗೀತೆಗಳನ್ನು ಅವರಿಂದ ಕೇಳಿ ಬರೆಸಿಕೊಂಡು ಹೋಗುವವರಿದ್ದಾರೆ. ಐದು ಸೇರಕ್ಕಿ ಕಡೆಯುವ ಕಲ್ಲಿಗೆ ಹಾಕಿ ಪತ್ರೊಡೆಗಾಗಿ ಅರೆಯುತ್ತಿದ್ದ ಆ ಕಾಲದಲ್ಲಿ ಕೆಲಸದ ಶ್ರಮವನ್ನು ಮರೆಸಲು ಇಂಥ ಹಾಡುಗಳ ತನ್ಮಯತೆ ನೆರವಾಗುತ್ತಿತ್ತು ಎನ್ನುತ್ತಾರೆ ರಾಧಾ.
ರಾಧಾಬಾಯಿ ಕಸೂತಿ ಕಲೆಯಲ್ಲಿ ಪರಿಣತೆ. ಚೌಕಾಬಾರಾ, ಚೆನ್ನೆಮಣೆ ಆಟಗಳನ್ನು ಬಲ್ಲರು. ಹಳ್ಳೀಮದ್ದುಗಳನ್ನೂ ಕೊಡುತ್ತಾರೆ. ಬೆಳಗ್ಗೆ ಹಾಡುತ್ತಲೇ ತುಳಸಿಗೆ, ಹೊಸ್ತಿಲಿಗೆ ಪೂಜಿಸುತ್ತಾರೆ. ಮನೆಯಲ್ಲಿ ನಿತ್ಯ ಪೂಜೆ ಮುಗಿಯುವ ವರೆಗೂ ಮನೆದೇವರಿಗೆ ಅವರ ಹಾಡಿನದೇ ಹುಗ್ಗಿ. ಜೋಗುಳದಲ್ಲಿ ದಶಾವತಾರ, ದ್ರೌಪದಿ ವಸ್ತ್ರಾಪಹಾರದಂಥ ಅಳವಿನಂಚಿನಲ್ಲಿರುವ ಹಾಡುಗಳೂ ಅವರ ಜೋಳಿಗೆಯಲ್ಲಿವೆ. ಸನಿಹದ ಶಾಲೆಗಳಿಗೆ ಹೋಗಿ ಶಿಕ್ಷಕಿಯರಿಗೆ ಹಳೇ ಹಾಡುಗಳನ್ನು ಕಲಿಸುತ್ತಾರೆ. ಅವರ ಇಂಥ ಸಂಪ್ರದಾಯದ ಹಾಡುಗಳನ್ನು ಅವರಿಂದಲೇ ಹಾಡಿಸಿ ವಿಡಿಯೋ ಸಿ.ಡಿ. ಗಳನ್ನು ತಯಾರಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ನ ವಿದ್ಯಾ ನಾಯಕ್. ರಾಧಾ ಅವರಿಗೆ ನೀವೂ ಒಂದು ಹಲೋ ಹೇಳಿ ಅಭಿನಂದಿಸಿ, ದೂ: 08263- 274343.
- ಪ. ರಾಮಕೃಷ್ಣ ಶಾಸ್ತ್ರಿ