ಸಾಧನೆ

ಮೋಹನ ತರಂಗಿಣಿ

ಸುಗಮ ಸಂಗೀತ ಕ್ಷೇತ್ರವನ್ನು ಯುವ ಪೀಳಿಗೆಗೆ ಪರಿಚಯಿಸಿ ಅದರ ಸಿರಿವಂತಿಕೆ ಹೆಚ್ಚಿಸಲು ಹೊರಟಿರುವವರು ಹಾಗೂ ಅನೇಕ ಕವಿಪುಂಗವರ ಗೇಯ ಗೀತೆಗಳನ್ನು ಮನೆ-ಮನೆಗೆ ತಲುಪಿಸುತ್ತಿರುವವರು ಉಪಾಸನಾ ಸಂಸ್ಥೆಯ ಮೋಹನ್. ಇವರು 'ಉಪಾಸನಾ ಮೋಹನ್ ಅಂತಲೇ ಖ್ಯಾತಿ.
ಮೂಲತಃ ಸಂಗೀತ ಪರಂಪರೆಯ ಮನೆತನದವರಾದರೂ ಸುಗಮ ಸಂಗೀತಕ್ಕೆ ಆಕರ್ಷಿತರಾಗಿ, ಗುರುಗಳಾದ ತಾಂಡವಮೂರ್ತಿ ಮತ್ತು ವಿದ್ವಾನ್ ಶ್ರೀವತ್ಸರ ಪ್ರೀತಿಯ ಶಿಷ್ಯರಾಗಿ ಹೊರಹೊಮ್ಮಿದ ಮೋಹನ್‌ಗೆ ನಾದ ವಿನೋದಿನಿ ಕಲಾವೃಂದದಲ್ಲಿ ಹಾಡುವ ಅವಕಾಶ ದೊರೆಯಿತು. ಕೇವಲ ಸಂಗೀತದಿಂದ ಮಾತ್ರ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಮೋಹನ್ ಹುಟ್ಟೂರು ಮೈಸೂರನ್ನು ತೊರೆದು ಬೆಂಗಳೂರಿಗೆ ಬಂದು ಗೆಳೆಯರ ಸಹಕಾರದಿಂದ ಬೆಂಗಳೂರಿನ ಗಾಂಧಿಬಜಾರ್‌ನಲ್ಲಿ ರಿಪೇರಿ ಅಂಗಡಿ ತೆರೆದರು. ಗಾಂಧಿ ಬಜಾರ್ ಆಗಿನ ಕಾಲದಲ್ಲಿ ಕವಿಗಳಿಗೆ ಸ್ಫೂರ್ತಿಯ ನೆಲೆವೀಡು. ಕವಿ ಕವನಗಳನ್ನು ಗುನುಗುತ್ತಲೇ ಸುಗಮ ಸಂಗೀತದ ಕಲಿಕೆಗೆ ಸೇರ್ಪಡೆಯಾದರು. ಅದೇ ವೇಳೆ ಜಿ.ವಿ. ಅತ್ರಿ 'ಸಂಗೀತ ಗಂಗಾ' ಸಂಸ್ಥೆ ತೆರೆದರು. ಅವರಲ್ಲಿ ಮೋಹನ್ ಶಿಷ್ಯವೃತ್ತಿ ಪ್ರಾರಂಭಿಸಿ ಅದೇ ಶಾಲೆಯಲ್ಲಿ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರಾಗಿ ದುಡಿದರು. ಈ ಸಂಸ್ಥೆಗೆ ಬರುವ ಮಹನೀಯರ ಪರಿಚಯದಿಂದ ಮತ್ತಷ್ಟು ಬೆಳೆದರು. ನಂತರ 'ಕಲಾ ಚಾವಡಿ' ಎಂಬ ಸಂಸ್ಥೆ ತೆರೆದು ಸುಗಮ ಸಂಗೀತ ಕಲಾವಿದರ ಕ್ಷೇಮಾಭಿವೃದ್ಧಿಗೆ ಸಹಾಯವಾಣಿಯಾಗುವಂತೆ ಬೆಳೆಸಿದರು. ಇದರ ಪ್ರಾರಂಭದಿಂದ ಅನೇಕ ಕಷ್ಟಕಾಲಗಳನ್ನು ಎದುರಿಸಿದ ಮೋಹನ್ ಈ ಸಂಸ್ಥೆಯಿಂದ ಹಿಂದೆ ಸರಿದರು. ಕೊನೆಗೆ ಕೈಯಲ್ಲಿದ್ದ ಕೆಲಸ ತೊರೆದು ಗಟ್ಟಿ ಮನಸ್ಸು ಮಾಡಿ ಉಪಾಸನಾ ನಾದ ಕೈಂಕರ್ಯಕ್ಕೆ ಮುಂದಾದರು. ಈಗ ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ.
ಉಪಾಸನಾ ಸಂಸ್ಥೆಗೆ ಜಾಗ ನೀಡಿದ ಹರಿಣಿ ಸತ್ಯಪ್ರಕಾಶ್‌ರನ್ನು ಮೋಹನ್ ಮನಸಾರೆ ನೆನೆಯುತ್ತಾರೆ. ಗೆಳೆಯರಾದ ಫಲ್ಗುಣಿ, ಬಾಲಿ, ಅಪ್ಪಗೆರೆ ತಿಮ್ಮರಾಜು, ಶಿವಮೊಗ್ಗ ಸುಬ್ಬಣ್ಣ, ರಾಜು ಅನಂತಸ್ವಾಮಿ, ಅಮೆರಿಕದ ಅಶ್ವತ್ಥ ನಾರಾಯಣರ ಜೊತೆಗೆ ಕನ್ನಡದ ಭಾವಕವಿ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಸೇರಿದಂತೆ ಅನೇಕರು ಮೋಹನ್‌ಗೆ ಬೆನ್ನೆಲುಬಾಗಿ ನಿಂತರು.
ಗುರುಗಳಾದ ಜಿ.ವಿ. ಅತ್ರಿ ನೆನಪಿಗಾಗಿ 'ಜಿ.ವಿ. ಅತ್ರಿ ಪ್ರಶಸ್ತಿ'ಯನ್ನು ಜಾರಿಗೆ ತಂದರು. ಮೋಹನ್ ತಮ್ಮ ಸಂಸ್ಥೆಯ ಮೂಲಕ ಗೀತಧಾರೆ, ಬಳ್ಳಿಯೊಡಲ ಕುಸುಮಗಳು, ಭರವಸೆಯ ಕುಡಿಗಳು ಮತ್ತು ನಾಳಿನ ಗೀತೆಗಳು ಎಂಬ ಕಾರ್ಯಕ್ರಮಗಳನ್ನು ಮಾಡಿ ಯುವ ಗಾಯಕರನ್ನು ಹೊರ ತರುವ ಪ್ರಯತ್ನ ಮಾಡಿದರು. ಇದರೊಂದಿಗೆ ಕವಿಗಳನ್ನೂ ಪರಿಚಯಿಸಿ ಕಾರ್ಯಕ್ರಮದ ಯಶಸ್ಸಿನ ಮೆಟ್ಟಿಲೇರುತ್ತಾ ಬಂದರು. ನಾಡಿನ ಪ್ರಸಿದ್ಧ ಕವಿಗಳ ಹಲವು ಪುಸ್ತಕ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿದ ಹೆಗ್ಗಳಿಕೆ ಇವರದ್ದು.
ಮುವತ್ತೈದಕ್ಕೂ ಹೆಚ್ಚಿನ ಭಾವಗೀತೆಗಳ ಸಿಡಿ ಹೊರ ತಂದ ಇವರು ಆಕಾಶವಾಣಿಯ ಗಾಯನ ವಿಭಾಗದ ಬಿ-ಹೈ ಗ್ರೇಡ್ ಹಾಗೂ ಸಂಯೋಜಕ ವಿಭಾಗದಲ್ಲೂ ಬಿ- ಹೈ ಗ್ರೇಡ್ ಕಲಾವಿದರು. ವರ್ಷದ ಸಂಯೋಜಕ ಪ್ರಶಸ್ತಿ, ವರ್ಷದ ಗಾಯಕ ಪ್ರಶಸ್ತಿ, ಉತ್ತಮ ಸಂಯೋಜಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

ವಿನೂತನ ಮೋಹನ್
ಕವಿ, ಗೀತೆಗಳನ್ನು ಜನರಿಗೆ ಪರಿಚಯಿಸುವ ಸಲುವಾಗಿ 'ಮನೆಯಂಗಳದಲ್ಲಿ ಕವಿತಾಗಾಯನ', 'ಅಂಗಳಕ್ಕೆ ಹೂ ಹಸೆ'ಯಂಥ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಇಂದು ಇದರ ಜನಪ್ರಿಯತೆ ಜೊತೆಗೆ ಅನೇಕ ಕಂತುಗಳ ಸರದಾರ ಎನಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳಿಗೆ ಹಾಗೂ ಸಾಹಿತ್ಯ ಪರಿಷತ್ತಿನ ಸಮಾರಂಭಗಳಲ್ಲಿ ಭಾಗವಹಿಸಿ ಸಕ್ರಿಯವಾಗಿ ಹಾಡುತ್ತಾರೆ. ಕಲಾತ್ಮಕ ಚಲನಚಿತ್ರ ಹಾಗೂ ನಾಟಕಗಳಿಗೆ ಸಂಗೀತ ನೀಡಿದ್ದಾರೆ. ಎರಡು ಕೃತಿಗಳನ್ನು ಹೊರತಂದಿದ್ದಾರೆ.

= ಸಂಧ್ಯಾ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!