ಮುಂಬೈ: ಅತ್ತ ದಶರಥ್ ಮಾಂಝಿ ಎಂಬ ಬೆಟ್ಟದ ಜೀವದ ಕತೆ ಬಾಲಿವುಡ್ ಅಂಗಳದಿಂದ ದೇಶಾದ್ಯಂತ ತೆರೆಗೆ ಅಪ್ಪಳಿಸಿದ್ದರೆ, ಇತ್ತ ಮಹಾರಾಷ್ಟ್ರದ ಅಹಮದ್ ನಗರ ಜೆಲ್ಲೆಯಿಂದ ಏಳು ಬೆಟ್ಟಗಳನ್ನೇ ಕರಗಿಸಿದ ಮತ್ತೊಬ್ಬ ನಿಜವಾದ ಬೆಟ್ಟದ ಜೀವದ (ಮೌಂಟೆನ್ ಮ್ಯಾನ್) ಸಾಧನೆ ಬೆಳಕಿಗೆ ಬಂದಿದೆ.
ಅಹಮದ್ ನಗರ ಜಿಲ್ಲೆಯ ರಾಜಾರಾಂ ಭಾಪ್ ಕರ್ ಮಾಂಝಿಯಂತೆ ಬೆಟ್ಟಗಳನ್ನು ಬಗೆದು ತನ್ನೂರಿನ ರಸ್ತೆ ಭಾಗ್ಯ ಕರುಣಿಸಿದ್ದಾರೆ. ಗುಂಡೆಗಾಂನಲ್ಲಿ ಶಿಕ್ಷಕನಾಗಿದ್ದ ಭಾಪ್ ಕರ್, ಬರೋಬ್ಬರಿ 57 ವರ್ಷಗಳ ಕಾಲ ನಿರಂತರವಾಗಿ ಏಳು ಗುಡ್ಡಗಳನ್ನು ಕಡಿದು ತನ್ನೂರಿಗೆ 40 ಕಿ.ಮೀ. ದೂರದ ರಸ್ತೆ ನಿರ್ಮಿಸಿದ್ದಾರೆ.
ಸ್ಥಳೀಯರಿಂದ ಭಾಪ್‍ಕರ್ ಗುರೂಜಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ರಾಜಾ-ರಾಂ ಭಾಪ್‍ಕರ್, ಬಿಳಿ ಅಂಗಿ, ಪೈಜಾಮ, ತಲೆಯ ಮೇಲೊಂದು ಗಾಂಧಿ ಟೊಪ್ಪಿ ತೊಟ್ಟ ಸಾದಾ-ಸೀದಾ ಹಳ್ಳಿಗ. ಆದರೆ, ಆ ಸರಳತೆಯ ಒಳಗೆ ಸಾಲು ಸಾಲು ಬೆಟ್ಟಗಳನ್ನೇ ಕರಗಸಿದ ಅಸೀಮ ದೃಢತೆ ಮತ್ತು ಕಠಿಣ ಪರಿಶ್ರಮ ಹುದುಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ಹೊತ್ತಿಗೆ ಗುಂಡೆಗಾಂವ್ ಗೆ ಸರಿಯಾದ ಕಾಲುದಾರಿ ಕೂಡ ಇರಲಿಲ್ಲ ಎಂದು ತನ್ನ ಪರಿಶ್ರಮಕ್ಕೆ ಮುಂಚಿನ ಊರಿನ ಚಿತ್ರಣ ನೆನಪಿಸಿಕೊಳ್ಳುವ ಭಾಪ್‍ಕರ್, ಗುಜರಾತಿ ಭಾಷೆಯಲ್ಲಿ ಕೇವಲ ಏಳನೇ ತರಗತಿವರೆಗೆ ಕಲಿತಿದ್ದಾರೆ. 1957ರಿಂದ 1991ರವರೆಗೆ ಕೋಲೆಗಾಂವ್ ನ ಜಿಲ್ಲಾ ಪರಿಷತ್ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಆದರೆ, ಗುಂಡೆಗಾಂವ್ ನಿಂದ ಕೋಲೆಗಾಂವ್ ಗೆ ಹೋಗಲು ಅಲ್ಲಿನ ಜನ ಮೂರು ಹಳ್ಳಿಗಳನ್ನು ದಾಟಿ ಹೋಗಬೇಕಿತ್ತು. 700 ಮೀ. ಎತ್ತರದ ಬೆಟ್ಟಗಳನ್ನು ಬಗೆದು ರಸ್ತೆ ನಿರ್ಮಿಸುವ ಮೂಲಕ ಗ್ರಾಮಕ್ಕೆ ಸೂಕ್ತ ಸಂಪರ್ಕ ವ್ಯವಸ್ಥೆ ಮಾಡುವಂತೆ ಸರ್ಕಾರಗಳಿಗೆ ಮನವಿ ಮಾಡಿದ್ದನ್ನು ಇದೀಗ ನೆನೆಪಿಸಿಕೊಳ್ಳುವ ಭಾಪ್ ಕರ್, ಆಡಳಿತ ವ್ಯವಸ್ಥೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗದೇ ಅಂತಿಮವಾಗಿ ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ವಿವರಿಸುತ್ತಾರೆ.
1957ರಲ್ಲಿ ಹಠಕ್ಕೆ ಬಿದ್ದು ಆರಂಭಿಸಿದ ಕೆಲಸ ಇವತ್ತು ಒಟ್ಟು 40 ಕಿ.ಮೀ. ಉದ್ದದ ಏಳು ರಸ್ತೆಗಳ ನಿರ್ಮಾಣದ ಮೂಲಕ ತನ್ನೂರನ್ನು ನೆರೆಯ ಹಳ್ಳಿಗೆ ಸಂಪರ್ಕಿಸಲು ಕಾರಣವಾಗಿದೆ. ಈ ಮೊದಲು ಕೋಲೆಗಾಂವ್‍ನಿಂದ ಡಿಯುಲ್ ಗಾಂವ್ ಗೆ ಇದ್ದ - 29 ಕಿ.ಮೀ. ಅಂತರ ಇದೀಗ ಕೇವಲ 10 ಕಿ.ಮೀಗೆ ಕುಸಿದಿದೆ.
ಬೆಟ್ಟ ಕಡಿದು ಮಾಡಿದ ಕಚ್ಛಾ ರಸ್ತೆ 2 ಊರುಗಳನ್ನು ಸಮೀಪಿಸಿದೆ. ರಸ್ತೆ ನಿರ್ಮಾಣಕ್ಕೆ ತನ್ನೊಂದಿಗೆ ಕೈಜೋಡಿಸಿದವರಿಗೆ ತಮ್ಮ ಸ್ವಂತ ಹಣದಿಂದ ಕೂಲಿ ಕೊಟ್ಟಿರುವ ಭಾಪ್ ಕರ್, ನನ್ನ ಅರ್ಧ ಸಂಬಳವನ್ನು ರಸ್ತೆ ಕೆಲಸಕ್ಕಾಗಿಯೇ ವೆಚ್ಚ ಮಾಡುತ್ತಿದ್ದೆ. ಇದಕ್ಕಾಗಿ ಸರ್ಕಾರದಿಂದ ಒಂದೇ ಒಂದು ಪೈಸೆಯನ್ನೂ ಪಡೆದಿಲ್ಲ ಎಂದು ಹೇಳುವಾಗ ಅವರ ಕಣ್ಣಲ್ಲಿ ಕಷ್ಟಕ್ಕೆ ಸಿಕ್ಕ ಪ್ರತಿಫಲ ಮಿಂಚುತ್ತದೆ. 1968ರಲ್ಲಿ ಇಲ್ಲಿದ್ದ ಕಾಲುದಾರಿಯಲ್ಲಿ ಸೈಕಲ್ ಕೂಡ ಸಾಗುವಂತಿರಲಿಲ್ಲ.
ಆದರೆ, ಈಗ ಭಾರೀ ವಾಹನಗಳೂ ನಿತ್ಯ ಓಡಾಡು-ತ್ತವೆ ಎಂದು ಗ್ರಾಮಸ್ಥರು ಭಾಪ್‍ಕರ್ ಅವರ ಸಾಧನೆಗೆ ಹೆಮ್ಮೆಪಡುತ್ತಾರೆ. 1997ರಲ್ಲೇ ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಿದ ಭಾಪ್‍ಕರ್, ತಮ್ಮ ಅಷ್ಟೂ ಪಿಂಚಣಿ ಹಾಗೂ ನಿವೃತ್ತಿನಂತರದ ಆದಾಯವನ್ನು ರಸ್ತೆಗಾಗಿಯೇ ವ್ಯಯಿಸಿದ್ದಾಗಿ ಹೇಳುತ್ತಾರೆ. ಗುದ್ದಲಿ, ಹಾರೆಗಳೊಂದಿಗೆ ಬೆಟ್ಟವನ್ನು ಕರಗಿಸಲು ಜೆಸಿಬಿಯಂತಹ ಯಂತ್ರಗಳನ್ನೂ ಅವರು ಬಾಡಿಗೆ ಪಡೆದಿದ್ದರು.
ಅಂತೂ ಮಹಾರಾಷ್ಟ್ರದ ಈ `ಮಾಂಝಿ'ಯ ಕಾರಣಕ್ಕಾಗಿ ಹೊರಜಗತ್ತಿ ನಿಂದ ದೂರವೇ ಉಳಿದಿದ್ದ ಹಳ್ಳಿಯೊಂ ದು ಬೆಟ್ಟ ಕರಗಿಸಿ ರಸ್ತೆ ಕಂಡಿದೆ. ಅಸೀಮ ದೃಢ ಮನಸ್ಸು ಮತ್ತು ಒಳ್ಳೆಯ- ದನ್ನು ಮಾಡುವ ಹಂಬಲ ಹೊಸದಾರಿ ಕೊಟ್ಟಿದೆ. ಹೊರಜಗತ್ತಿನ ಸಂಪರ್ಕ ತಂದ ಹೊಸ ಬೆಳಕು ಹಳ್ಳಿಗೆ ಹೊಸ ಬದುಕು ಕೊಟ್ಟಿದೆ.