ಎಲ್ಲಾ ಅಂಗಾಗಂಗಳೂ ಸರಿಯಾಗಿಯೇ ಇದ್ದರೂ ಎಷ್ಟೋ ಬಾರಿ ಕೈಲಾಗದವರಂತೆ ಕುಳಿತುಕೊಳ್ಳುವ ನಮಗೆ ಇಲ್ಲಿ ಪಾಠವಿದೆ. ಜೀವನ ಪ್ರೀತಿಯಿದೆ. ಕೈಗಳಿಲ್ಲದೇ ವಿಕಲಾಂಗಳಾಗಿ ಹುಟ್ಟಿದ್ದ ಜೆಸ್ಸಿಕ ಕಾಕ್ಸ್ ಅವರಿಗೆ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಇಲ್ಲದ ಕೈಗಳ ನೆವ ಎಂದಿಗೂ ಅಡ್ಡ ಬರಲಿಲ್ಲ. ತನ್ನ ಕಾಲುಗಳಿಂದಲೇ ತನ್ನ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ೩೨ ವರ್ಷದ ಕಾಕ್ಸ್ ಈಗ ಗಗನದೆತ್ತರದ ಸಾಧನೆ ಮಾಡಿದ್ದಾರೆ.
ಕೈಗಳಿಲ್ಲದೇ ಗಗನದಲ್ಲಿ ವಿಮಾನ ಹಾರಾಡಿಸಿದ ಮೊದಲ ಪೈಲಟ್ ಎಂಬ ಖ್ಯಾತಿ ಪಡೆದ ಯುವತಿ ಜೆಸ್ಸಿಕಾ ಕಾಕ್ಸ್. ಇದೊಂದೇ ಸಾಧನೆ ಎಂದು ಮೂಗು ಮುರಿಯುವಂತಿಲ್ಲ. ಈಕೆ ಅಮೆರಿಕಾದ ಟೇಕ್ವಾಂಡೊ (ಮಾರ್ಷಲ್ ಫೈಟ್) ಸಂಘದ ಬ್ಲ್ಯಾಕ್ ಬೆಲ್ಟ್ ಸಾಧನೆ ಕೂಡ ಮಾಡಿದ್ದಾರೆ.
ತಾನು ಸಣ್ಣವಳಿದ್ದಾಗ ಕೃತಕ ಕೈಗಳನ್ನು ಅಡವಳಿಸಿಕೊಂಡಿದ್ದ ಕಾಕ್ಸ್ ೧೪ ವರ್ಷ ತುಂಬಿದ ಮೇಲೆ ಅವುಗಳನ್ನು ಬಿಸಾಡಿ ತನ್ನೆಲ್ಲಾ ಕೆಲಸಗಳನ್ನು ಕಾಲಿನಿಂದಲೇ ಮಾಡಲು ಪ್ರಾರಂಭಿಸಿದರಂತೆ.
ಕಾರಿಗೆ ಯಾವುದೇ ಮಾರ್ಪಾಡು ಮಾಡದಂತೆ ಇವರು ಓಡಿಸಬಲ್ಲರು, ಸರಾಗವಾಗಿ ಕೀ ಬೋರ್ಡ್ ಮೇಲೆ ಟೈಪ್ ಮಾಡಬಲ್ಲರು ಮತ್ತು ತಮ್ಮ ೩೦ ವರ್ಷದ ಪತಿ ಪ್ತ್ಯಾಟ್ರಿಕ್ ಜೊತೆ ಸರಾಗವಾಗಿ ಹೆಜ್ಜೆ ಹಾಕಬಲ್ಲರು.
ತನ್ನ ಪತಿಯ ಜೊತೆ ಜಾಗತಿಕ ಪ್ರವಾಸ ಕೈಗೊಂಡು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ಕೊಡಲು ಕಾಕ್ಸ್ ಸಜ್ಜಾಗುತ್ತಿದ್ದಾರೆ.