ಕರ್ನಾಟಕದ ಆಹಾರ ಬೆಳೆಗಳಲ್ಲಿ ಜೋಳ ಪ್ರಧಾನವಾದದ್ದು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಯಥೇಚ್ಛವಾಗಿ ಇದನ್ನು ಬೆಳೆಯುತ್ತಾರೆ. ಆ ಭಾಗದಲ್ಲಿ ಜೋಳದ ರೊಟ್ಟಿ ತಿನ್ನದೆ ಊಟ ಮಾಡುವವರು ಕಮ್ಮಿ. ಅಷ್ಟರ ಮಟ್ಟಿಗೆ ಜೋಳ ಆ ಭಾಗದ ಜನರನ್ನು ಆವರಿಸಿದೆ. ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಜೋಳ ಉತ್ಪಾದಿಸುವ ರಾಜ್ಯ ಕರ್ನಾಟಕ.
ಬೆಳೆಯುವ ವಿಧಾನ
ಜೋಳ ಬಿತ್ತನೆ ಮಾಡುವ ಮೊದಲು ಜಮೀನನ್ನು ಚೆನ್ನಾಗಿ ಹರಗಿ ಹೆಂಡೆಯಿಲ್ಲದಂತೆ ಸಮತಟ್ಟು ಮಾಡಿರಬೇಕು. ಬಳಿಕ ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಬೀಜವನ್ನು 1 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಬಿತ್ತಿದ 40 ದಿನದ ನಂತರ ಯಡೆ ಹೊಡೆಯಬೇಕು. ಕಸ- ಕಳೆ ಬಾರದಂತೆ ಸ್ವಚ್ಛಗೊಳಿಸುತ್ತಿರಬೇಕು. ಹೀಗೆ ಸೂಕ್ತ ನಿಯಂತ್ರಣ ಕ್ರಮ ಕೈಗೊಂಡರೆ 110ರಿಂದ 120 ದಿನಗಳ ಒಳಗೆ ಫಸಲು ಕಟಾವಿಗೆ ಬರುತ್ತದೆ.
ಇನ್ನು ಜೋಳ ಸಾಮಾನ್ಯವಾಗಿ ಎಲ್ಲ ನಮೂನೆಯ ಮಣ್ಣಲ್ಲಿ ಬೆಳೆಯುತ್ತದೆ. ಉಷ್ಣವಲಯದ ಬೆಳೆಯಾಗಿರುವುದರಿಂದ ಹೆಚ್ಚು ಉಷ್ಣವನ್ನು ತಡೆದುಕೊಳ್ಳುತ್ತದೆ. 26 ರಿಂದ 33 ಸೆ. ಉಷ್ಣಾಂಶದಲ್ಲೂ ಜೋಳ ಚೆನ್ನಾಗಿ ಬೆಳೆಯಬಲ್ಲದು. ಜೂನ್ ಅಥವಾ ಜುಲೈ ನಾಟಿಗೆ ಸಕಾಲ. ಪ್ರತಿ ಹೆಕ್ಟೇರ್‌ಗೆ 15 ಕೆಜೆಯಷ್ಟು ಬೀಜ ಬಿತ್ತಲು ಬೇಕಾಗುತ್ತದೆ. ಇದನ್ನು ನೀರಾವರಿ, ಮಳೆಯಾಶ್ರಿತವಾಗಿಯೂ ಬೆಳೆಯಬಹುದು.
ತಳಿಗಳು
ರಾಜ್ಯದಲ್ಲಿ ಡೆಕ್ಕನ್ ಅಮೆರಿಕನ್, ಡಿಎಸ್‌ವಿ- 2, ಲಿಎಸ್‌ವಿ- 15, ಸಿಎಸ್‌ಎಚ್- 14, ಸಿಎಸ್‌ಎಚ್- 16, ಡಮ್ 35- 1, ಮೂಗುತಿ, ಸಿಎಸ್‌ಎಚ್- 53 ಸೇರಿದಂತೆ ಹಲವಾರು ತಳಿಗಳು ಚಾಲ್ತಿಯಲ್ಲಿವೆ.
ರೋಗಗಳು
ಜೋಳಕ್ಕೆ ಮುಖ್ಯವಾಗಿ ಕಾಡಿಗೆ ರೋಗ, ಜೋನಿ ರೋಗ, ಇದ್ದಿಲು ಕೊಳೆ ರೋಗ ಮತ್ತು ತುಕ್ಕು ರೋಗ ಬರಬಹುದು. ಅದೇ ರೀತಿ ಸುಳಿ ನೊಣ, ಸೈನಿಕ ಹುಳು, ತೆನೆ ತಿನ್ನುವ ಕೀಟ ಮತ್ತು ಸಸ್ಯ ಹೇನು ಕೀಟ ಬಾಧೆ ಕಾಡುವ ಸಾಧ್ಯತೆ ಅಧಿಕ. ರೋಗ, ಕೀಟ ಬಾಧೆ ಬಂದ ತಕ್ಷಣವೇ ಸುರಕ್ಷಾ ಕ್ರಮ ಕೈಗೊಳ್ಳಬೇಕು.
-ಮಹೇಶ್ ಅರಳಿ