ರಾಸಾಯನಿಕ ಗೊಬ್ಬರ ಇಲ್ಲದೆ ಬೇಸಾಯ ಅಸಾಧ್ಯ ಎನ್ನುವವರು ಗರೂರು ಊರಿನತ್ತ ಹೆಜ್ಜೆ ಹಾಕುವಂತಾಗಿದೆ. ವಿಜ್ಞಾನಿಗಳು, ರೈತರು, ಬುದ್ಧಿಜೀವಿಗಳು ಬಂದು ಎರೆಹುಳು ರೈತನ ಮಿತ್ರನಾದ ದಂತಕಥೆಗೆ ಸಾಕ್ಷಿಯಾಗುತ್ತಿದ್ದಾರೆ.
ಕಬ್ಬು, ಶೇಂಗಾ, ಈರುಳ್ಳಿ, ಟೊಮೇಟೊ, ಮೆಣಸಿನಕಾಯಿ, ಸಜ್ಜೆ, ಗೋದಿ, ಕಡಲೆ, ತೊಗರಿ, ನಿಂಬೆ, ಕರಿಬೇವು, ಸೀತಾಫಲ, ಜೋಳ ಹೀಗೆ ಹಲವು ತೋಟಗಾರಿಕೆ ಬೆಳೆಗಳನ್ನೆಲ್ಲ ಎರೆಹುಳು ಗೊಬ್ಬರ ಬಳಸಿ ಬೆಳೆಯುತ್ತಾರೆ. ಸತ್ವಯುಕ್ತ ಆಹಾರದ ಜೊತೆಗೆ ಜೇಬೂ ಭರ್ತಿ.
ನೋಟ: 1
ಅರವಳ್ಳಿ ಗುಂಡೇರಾವ್‌ಗೆ ಇಳಿವಯಸ್ಸಿನಲ್ಲೂ ಕೂಲಿಯೇ ಉಸಿರು. ಮೂರೂವರೆ ಎಕರೆಯಲ್ಲಿ ರಾಸಾಯನಿಕ ಗೊಬ್ಬರ ಹಾಕಿ ಜೇಬು ಖಾಲಿ ಮಾಡಿಕೊಂಡಿದ್ದೇ ಬಂತು, ಇಳುವರಿ ಅಷ್ಟಕ್ಕಷ್ಟೇ. ಬದುಕೇ ಕೂಲಿಯಲ್ಲಿ ಕಳೆದುಹೋಯ್ತು ಎಂಬ ಚಿಂತೆ. ಅಂಥ ಸಂದರ್ಭದಲ್ಲಿ ಇವರ ಕೈ ಹಿಡಿದಿದ್ದು ಎರೆಹುಳು. ಆರಂಭದಲ್ಲಿ 4 ಎರೆಹುಳು ಘಟಕ ತೆರೆದರು. ಇದರ ಮೂಲಕ ಬೆಳೆ ಬೆಳೆದಿದ್ದಾರೆ, ಅನ್ಯರಿಗೂ ಗೊಬ್ಬರ, ಹುಳು ಮಾರಿ ಹಣ ಗಳಿಸುತ್ತಿದ್ದಾರೆ. ಗುಂಡೇರಾವ್ ಈಗ ಸಾವಯವ ಕೃಷಿಕ. ಅಷ್ಟೇ ಅಲ್ಲ, ಎರೆಹುಳು ಗೊಬ್ಬರ ಮಾರಿಯೇ ವಾರ್ಷಿಕ ರು. 10 ರಿಂದ 20 ಸಾವಿರಕ್ಕೂ ಹೆಚ್ಚು ಲಾಭ ಗಿಟ್ಟಿಸುತ್ತಾರೆ.
ನೋಟ: 2
'ನಾನಂತೂ ಯಾರೂ ಹೇಳಿದ್ದು ಕೇಳಲಿಲ್ರಿ. ಹೊಲ್ದಾಗ ಒಂದು ಮಡಿ ಕೆಮಿಕಲ್ ಗೊಬ್ರ ಹಾಕಿ ಬೆಳೆದ, ಮಗ್ಲದಾಗ ಎರೆಹುಳು ಗೊಬ್ರ ಹಾಕಿದ್ದೆ. ಮಳಿ ಬರಲಿಲ್ಲ, ಕೆಮಿಕಲ್ ಗೊಬ್ರ ಹಾಕಿದ್ದ ಬೆಳಿ ಸುಟ್ಟು ಹೋತು. ಎರೆಹುಳು ಗೊಬ್ರದ ಬೆಳಿ ವೈನಾಗಿ ಬಂತು. ಸಮಾಧಾನದಿಂದ ಫಸಲು ಕೊಟ್ಟಾಗ ನನ್ನ ಪ್ರಯೋಗ ಕಣ್ಣು ತೆರೆಸಿತ್ತು. ರಾಸಾಯನಿಕ ಗೊಬ್ರಕ್ಕ ದೊಡ್ಡ ನಮಸ್ಕಾರ ಹೇಳೀನ್ರಿ. ಸಾವಯವ ಗೊಬ್ರಕ್ಕೇ ಜೈ ಅಂದೀನಿ' ಎನ್ನುತ್ತಾನೆ ಗರೂರಿನ ಪೀರಪ್ಪ.
ಇಷ್ಟೇ ಅಲ್ಲ, ಗರೂರಿನ ಮಹಾಂತಪ್ಪ, ಕಾಳಪ್ಪ, ಬಸವರಾಜ ಬಗಲಿ, ಸುತಾರ್, ಸಿದ್ದಯ್ಯ ಮಠ ಹೀಗೆ ನೂರಾರು ರೈತರು ರಾಸಾಯನಿಕ ಗೊಬ್ಬರಕ್ಕೆ ಟಾಟಾ ಹೇಳಿದ್ದಾರೆ. ಎರೆಹುಳು ಸಂಗ ಮಾಡಿ ಸ್ವಾವಲಂಬಿಯಾಗಿದ್ದಾರೆ.
ಗುಲ್ಬರ್ಗದಿಂದ 20 ಕಿ.ಮೀ. ದೂರದಲ್ಲಿರುವ ಈ ಪುಟ್ಟ ಗ್ರಾಮ ರಾಸಾಯನಿಕ ಗೊಬ್ಬರ ಬಳಕೆಯಿಂದ ಮುಕ್ತ. ಕೃಷಿಯಲ್ಲೇನಿದೆ ಎಂದು ಕೇಳುವವರಿಗೆ ನನ್ನನ್ನು ನೋಡಿ ಎಂದು ಪಾಟೀಸವಾಲು ಹಾಕುವಂತಿದೆ. ಸಾವಯವ ಕೃಷಿ ಜೊತೆ ಸ್ವಾವಲಂಬನೆ ಪಾಠವನ್ನೂ ಗರೂರು ಹೇಳಿ ಕೊಡುತ್ತಿದೆ.
ಸಾವಯವ ಕ್ರಾಂತಿ
ರಾಜ್ಯದಲ್ಲಿ ಸಾವಯವ ಕೃಷಿಗೆ ಆದ್ಯತೆ ದೊರಕುತ್ತಿದ್ದಂತೆ ಕೃಷಿ ಇಲಾಖೆ ಆರಂಭಿಸಿದ್ದ ಸಾವಯವ ಗ್ರಾಮ ಯೋಜನೆ ಗರೂರಲ್ಲಿ ಫಲ ನೀಡಿದೆ. ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿ ಅನುಷ್ಠಾನ ಮಾಡಿರುವ ಈ ಯೋಜನೆಯಡಿಯಲ್ಲೀಗ 250 ಕುಟುಂಬಗಳಿರುವ ಗರೂರಲ್ಲಿ ನೂರು ಹೆಕ್ಟೇರ್ ಭೂಮಿ ಎರೆಹುಳು ಗೊಬ್ಬರ ಆಧಾರಿತ ಕೃಷಿ ಭೂಮಿಯಾಗಿ ಪರಿವರ್ತಿತವಾಗಿದೆ.
ರೈತರ ಮನವೊಲಿಕೆ, ತಾಂತ್ರಿಕ ನೆರವು, ತರಬೇತಿಯಿಂದ ಸಮಿತಿ ಕ್ಷೇತ್ರಾಧಿಕಾರಿ ಮಲ್ಲೀನಾಥ ಪಾಟೀಲ್ ಅಸಾಧ್ಯವಾದುದನ್ನು ಸಾಧಿಸಿದ್ದಾರೆ. ಶಾಮರಾವ ಪಾಟೀಲ್ ತಮ್ಮ ಮೂರೂವರೆ ಎಕರೆ ಹೊಲವನ್ನೇ ಸಮಗ್ರ ಕೃಷಿ ಪದ್ಧತಿ ರೂಪದಲ್ಲಿ ನಂದನವನ ಮಾಡಿದ್ದರು. ಇವರ ಪ್ರೇರಣೆಯೇ ಊರಿಗೆ ಮಾದರಿ. ಅದೇ ಊರಲ್ಲಿ ಸಮತಾ ಲೋಕ ಶಿಕ್ಷಣ ಸಮಿತಿ ರೈತರ ಮನವೊಲಿಸಿದಾಗ 150ಕ್ಕೂ ಹೆಚ್ಚು ಮಂದಿ ಸಾವಯವ ಪದ್ಧತಿಗೆ ವಾಲಿದರು. <
ಸಾವಿರ ಟನ್ ಮಾರಾಟ
ಗರೂರಿನ 45 ಕುಟುಂಬಗಳು 100 ಹೆಕ್ಟೇರ್‌ನಲ್ಲಿ ಎರೆಹುಳು ಗೊಬ್ಬರ ಸಿದ್ಧಪಡಿಸುತ್ತಿದ್ದಾರೆ. ರಾಯಚೂರು ಕೃಷಿವಿದ್ಯಾಲಯ ವಿಜ್ಞಾನಿಗಳ ತಂಡ ಇಲ್ಲಿನ ಸಾವಯವ ಕ್ರಾಂತಿ ಪರಿಶೀಲಿಸಿದೆ. ಸಾವಿರ ಟನ್ ಎರೆಹುಳು ಗೊಬ್ಬರ ಇಲ್ಲಿಂದ ಅನ್ಯ ಗ್ರಾಮಗಳಿಗೆ ಮಾರಾಟವಾಗಿರುವ ದಾಖಲೆ ಮಾಡಿರುವ ವಿಜ್ಞಾನಿಗಳು ಈ ಊರಿನ ಸಾಧನೆಗೆ ಬೆಕ್ಕಸಬೆರಗಾಗಿದ್ದಾರೆ. 'ಸಾವಯವ ಗ್ರಾಮ ಯೋಜನೆಯಲ್ಲಿ ಘಟಕ ನಿರ್ಮಾಣಕ್ಕೆ 4 ಸಾವಿರ, ದನದ ಹಟ್ಟಿಗೆ 3 ಸಾವಿರ ಹಣ ನೀಡಲಾಗಿದೆ. ಇದಲ್ಲದೆ ರೈತರು ತಮ್ಮ ಗಳಿಕೆ ಹಣವನ್ನೂ ವಿನಿಯೋಗಿಸಿ ಎರೆಹುಳು ಸ್ನೇಹ ಸಂಪಾದಿಸಿದ್ದಾರೆ. ಅದರ ಫಲವೇ ಗರೂರು ಸಾವಯವ ಕೃಷಿ ಗಮನ ಸೆಳೆಯುತ್ತಿದೆ' ಎನ್ನುತ್ತಾರೆ ಸಮತಾ ಲೋಕ ಶಿಕ್ಷಣ ಸಮಿತಿಯ ರೂವಾರಿ ಬಿ.ಆರ್. ಪಾಟೀಲ್. ಗುಲ್ಬರ್ಗ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ರಾಜು ತೆಗ್ಗೆಳ್ಳಿ, ಡಾ. ಗುಂಡಪ್ಪಗೋಳ, ಡಾ. ಪಾಟೀಲ್ ಅವರು ಇಲ್ಲಿನ ರೈತರಿಗೆ ಸದಾ ಕಾಲ ತಾಂತ್ರಿಕ ನೆರವು, ಸಲಹೆ- ಸೂಚನೆ ನೀಡುತ್ತ ಸಾವಯವ ಕೃಷಿಗೆ ಹುರಿದುಂಬಿಸುತ್ತಿದ್ದಾರೆ.
-ಶೇಷಮೂರ್ತಿ ಅವಧಾನಿ