ಕೃಷಿ-ಪರಿಸರ

ಕಾಣದಾದ ಕೊರಲೆ

ಕೊರಲೆ ಅಪರೂಪದ ಸಿರಿಧಾನ್ಯ. ನಮ್ಮ ರಾಜ್ಯದ ತುಮಕೂರು, ಚಿತ್ರದುರ್ಗ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಕಂಡುಬರುವ ವಿಶಿಷ್ಟ ಪ್ರಾದೇಶಿಕ ಬೆಳೆ. ಎರಡೂವರೆ ತಿಂಗಳಿಗೆ ಕೊಯ್ಲಿಗೆ ಬರುವ, ಬರ ನಿರೋಧಕ ಗುಣ ಹೊಂದಿದ, ಬರಡು ಮಣ್ಣಿನಲ್ಲೂ ಬೆಳೆಯುವ ಸಾಮರ್ಥ್ಯ ಕೊರಲೆಗಿದೆ. 2 ಹದ ಮಳೆ ಬಂದ್ರೆ ಗ್ಯಾರಂಟಿ ಬೆಳೆ. ಇದು ಶಿರಾ ತಾಲೂಕು ಹೆಂದೊರೆ ಗ್ರಾಮದ ತಿಮ್ಮಕ್ಕ ಕೊರಲೆಗೆ ನೀಡುವ ಸರ್ಟಿಫಿಕೇಟ್.
ದಶಕದ ಹಿಂದೆ ಈ ಭಾಗದ ಬಹುತೇಕ ರೈತರ ಹೊಲಗಳಲ್ಲಿ ಕೊರಲೆ ಜೀವಂತವಾಗಿತ್ತು. ಮಳೆ ನೆರಳಿನ (ರೈನ್ ಶ್ಯಾಡೋ) ಪ್ರದೇಶವಾಗಿರುವ ಈ ಜಿಲ್ಲೆಗಳ ವಾತಾವರಣ ಕೊರಲೆಗೆ ಸೂಕ್ತ. ಬೇಗ ಕೊಯ್ಲು ಆಗುವುದರಿಂದ ಕೆಲವೇ ಮಳೆ ಸಾಕಾಗುತ್ತದೆ. ಹಾಗಾಗಿ ಕೊರಲೆಯು ನೂರಾರು ವರ್ಷ ಹೊಲಗಳಲ್ಲಿ ಭದ್ರವಾಗಿತ್ತು. ನಿತ್ಯದ ಆಹಾರ ಪದ್ಧತಿಯಾಗಿತ್ತು. ಆದರೆ, ಬದಲಾದ ಕೃಷಿಯಿಂದಾಗಿ ಇತರೆಲ್ಲಾ ಸಿರಿಧಾನ್ಯಗಳಂತೆ ಕೊರಲೆಯೂ ಪತನದ ಹಾದಿ ಹಿಡಿಯಿತು. ಇಂದು ಬೆರಳೆಣಿಕೆಯಷ್ಟು ರೈತರಲ್ಲಿ ಮಾತ್ರ ಉಳಿದಿದೆ. ಇದನ್ನು ಜನಪ್ರಿಯಗೊಳಿಸುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿವೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹೆಂದೊರೆಯ ರಘು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಸ್ವತಃ ಬೆಳೆಯುವುದಲ್ಲದೆ, ಬೀಜ ವಿತರಣೆ, ಮೌಲ್ಯವರ್ಧನೆ ಹಾಗೂ ಮಾರಾಟಕ್ಕೂ ಕೈಹಾಕಿದ್ದಾರೆ.
2009ರಲ್ಲಿ ಇವರಿಗೆ ಸಾವಯವ ಕೃಷಿ ಸಂಘಟನೆಗಳ ಪರಿಚಯವಾಯಿತು. ಆ ವರ್ಷ ಸಾವಯವದಲ್ಲಿ ತೊಗರಿ ಬೆಳೆದರು. ಉತ್ತಮ ಬೆಲೆ ಸಿಕ್ಕಿತು. ಜೊತೆಗೆ ಪತ್ರಿಕೆಗಳಲ್ಲಿ, ಸಭೆಗಳಲ್ಲಿ ಸಿರಿಧಾನ್ಯಪರ ಒಲವು ಹಾಗೂ ಭವಿಷ್ಯವಿರುವುದು ಅರಿವಾಯಿತು. ಹಾಗಾಗಿ ಮತ್ತೆ ಸಿರಿಧಾನ್ಯಗಳತ್ತ ಆಕರ್ಷಿತರಾದರು. ಇದೇ ಸಮಯಕ್ಕೆ ಮಳೆಯ ಏರುಪೇರಿನಿಂದ ಶೇಂಗಾ ಕೈಕಚ್ಚತೊಡಗಿ ನಷ್ಟವೇ ಹೆಚ್ಚಾಗಿತ್ತು. ಇದೂ ಹೆಚ್ಚು ಬಂಡವಾಳ ಕೇಳದ ಸಿರಿಧಾನ್ಯಗಳನ್ನು ಬೆಳೆಯಲು ಪ್ರೇರಣೆ.
2010ರಲ್ಲಿ ಸಕಾಲದಲ್ಲಿ ಮಳೆ ಬಾರದೆ ಬಿತ್ತನೆಗೆ ಅನನುಕೂಲ. 2011ರಲ್ಲಿ ತಲಾ ಎರಡು ಎಕರೆಗೆ ಕೊರಲೆ, ನವಣೆ ಹಾಗೂ ಸಾವೆ ಬಿತ್ತಿದರು. ಅದಾದ ನಂತರ ಪ್ರತಿವರ್ಷ ಬಿತ್ತುತ್ತಿದ್ದಾರೆ. ಸ್ವತಃ ಸಂಸ್ಕರಣೆ ಮಾಡಿ ಮಾರಾಟವನ್ನೂ ಮಾಡುತ್ತಿದ್ದಾರೆ. ಈ ಮೂರು ವರ್ಷದಲ್ಲಿ 35 ಕ್ವಿಂಟಲ್ ಅಕ್ಕಿ ಮಾರಿದ್ದಾರೆ. ಇದರಲ್ಲಿ ಸಿಂಹಪಾಲು ಕೊರಲೆ.
ಬೆಂಗಳೂರು, ಮೈಸೂರು, ತುಮಕೂರು, ಗದಗ, ಹುಬ್ಬಳ್ಳಿಗಳಿಗೆ ಬೇಡಿಕೆಯ ಮೇರೆಗೆ ರವಾನಿಸುತ್ತಾರೆ. ರಾಜ್ಯಾದ್ಯಂತ ನಡೆಯುವ ಸಿರಿಧಾನ್ಯ ಮೇಳಗಳಿಗೆ ತಪ್ಪದೆ ಆಹ್ವಾನ ಬರುತ್ತಿದೆ. ಆರಂಭದಲ್ಲಿ ಪ್ರತಿ ಕಿಲೋ ಕೊರಲೆ ಅಕ್ಕಿಗೆ ರು. 40 ಬೆಲೆ ಸಿಗುತ್ತಿದ್ದು, ಈಗ ರು. 50ಕ್ಕೆ ಏರಿದೆ.
ಆಶ್ಲೇಷ ಮಳೆ ಕೊರಲೆ ಬಿತ್ತನೆಗೆ ಉತ್ತಮ. ಮುಂಚೆಯೇ ಬಿತ್ತಿದರೆ ಕಟಾವಿನ ಸಮಯಕ್ಕೆ ಮಳೆಗೆ ಸಿಲುಕುತ್ತದೆ. ಕೂರಿಗೆ ಬಳಸಿ ಸಾಲು ಬಿತ್ತನೆ ಮಾಡುತ್ತಾರೆ. ಒಂದಿಂಚು ಆಳಕ್ಕೆ ತೆಳುವಾಗಿ ಬಿತ್ತಬೇಕು. ಸಾಂದ್ರತೆ ಹೆಚ್ಚಾದರೆ ತೆಂಡೆ ಚೆನ್ನಾಗಿ ಹೊಡೆಯುವುದಿಲ್ಲ. ಎಕರೆಗೆ ಐದು ಕಿಲೋ ಬೀಜ ಬೇಕಾಗುತ್ತದೆ. ಸಾಲಿನಿಂದ ಸಾಲಿಗೆ ಒಂದು ಚೋಟು ಅಥವಾ ಐದು ಇಂಚು ಅಂತರ. ಬಿತ್ತಿದ ಐದು ದಿವಸಕ್ಕೆ ಮೊಳಕೆ ಬರುತ್ತದೆ.
ಬಿತ್ತಿದ 20 ದಿವಸಕ್ಕೆ ಎಡೆಕುಂಟೆ ಹೊಡೆದು ಕಳೆ ಹೋಗಲಾಡಿಸುತ್ತಾರೆ. ಮಣ್ಣು ಸಡಿಲವಾಗುತ್ತದೆ. 40 ದಿವಸಕ್ಕೆ ಮತ್ತೊಮ್ಮೆ ಪುನರಾವರ್ತನೆ. ಮೂರು ಅಡಿಗಳಷ್ಟು ಬೆಳೆಯುತ್ತದೆ. ತೆನೆಗಳು 5- 6 ಇಂಚು ಉದ್ದ. ಹಳದಿ ಬಣ್ಣಕ್ಕೆ ತಿರುಗಿದಾಗ ಕಟಾವು. ಅಂದರೆ 75- 80 ದಿವಸ ಅವಧಿಯ ಬೆಳೆ. ಹಣ್ಣಾದ ನಂತರ ಕೊಯ್ಲು ಮಾಡಬೇಕು. ಇಲ್ಲವಾದರೆ ತೆನೆಯ ಅಕ್ಕಲುಗಳು ಮುರಿದು ನೆಲಕ್ಕೆ ಬಿದ್ದು ಕಾಳು ಮಣ್ಣುಪಾಲು.
ಎಕರೆಗೆ 7-8 ಕ್ವಿಂಟಲ್ ಇಳುವರಿ ಬರುತ್ತದೆ. ಸಕಾಲಕ್ಕೆ ಬಿತ್ತನೆಯಾಗಿ ಉತ್ತಮ ಮಳೆಯಾದ ವರ್ಷ 10 ಕ್ವಿಂಟಲ್‌ವರೆಗೂ ಬಂದದ್ದುಂಟು. ನಾಲ್ಕು ಗಾಡಿಯಷ್ಟು ಮೇವು ಸಿಗುತ್ತದೆ. ಈ ಮೇವು ದನಗಳಿಗೆ ತುಂಬಾ ಇಷ್ಟ. ಗರಿಗಳು ಜೋಳದ ಗರಿಗಳನ್ನು ಹೋಲುತ್ತವೆ. ಆದರೆ, ಗಾತ್ರ ಮತ್ತು ಉದ್ದ ಕಡಿಮೆ. ಕಾಂಡ ತುಂಬಾ ಮೃದು. ಹಾಗಾಗಿ ಒಕ್ಕಣೆ ಮಾಡುವಾಗ ದನಗಳು ಹೆಚ್ಚು ತುಳಿಯಲು ಬಿಡುವುದಿಲ್ಲ. ಹಾಗೆ ಮಾಡಿದರೆ ಹುಲ್ಲೆಲ್ಲಾ ಪುಡಿಯಾಗುತ್ತದೆ. ಕಾಳನ್ನು ಚೆನ್ನಾಗಿ ಒಣಗಿಸಿ ಶೇಖರಿಸುತ್ತಾರೆ. 6 ವರ್ಷ ಇಟ್ಟರೂ ಕಾಳು ಕೆಡುವುದಿಲ್ಲ. ಆದರೆ, ಅಕ್ಕಿಗೆ ಆ ಗುಣವಿಲ್ಲ. 20-30 ದಿವಸಗಳಿಗೆಲ್ಲಾ ಹುಳು ಬೀಳುತ್ತದೆ.
ಕಳೆದ ಐದಾರು ವರ್ಷಗಳಿಂದೀಚೆಗೆ ಮಳೆ ಮತ್ತು ವಾತಾವರಣ ಏರುಪೇರಾಗುತ್ತಿದೆ. ಈ ಸಂದರ್ಭದಲ್ಲಿ ಸಿರಿಧಾನ್ಯಗಳು ಉತ್ತಮವಾಗಿ ಬೆಳೆದಿರುವುದನ್ನೂ, ಇತರ ಬೆಳೆಗಳು ಮೇಲಾಗಿರುವುದನ್ನು ಹೆಂದೊರೆಯ ಮೂರ್ತಪ್ಪ- ತಿಮ್ಮಕ್ಕ ದಂಪತಿ ಗಮನಿಸಿದ್ದಾರೆ. 2012ರಲ್ಲಿ ಇವರು ಸಾವೆ, ನವಣೆ, ಕೊರಲೆ, ಶೇಂಗಾ ಮತ್ತು ರಾಗಿ ಬಿತ್ತಿದರು. ಕಾಲಕ್ಕೆ ಸರಿಯಾಗಿ ಮಳೆ ಆಗಲಿಲ್ಲ. ಆದರೂ ನವಣೆ, ಸಾವೆ ಮತ್ತು ಕೊರಲೆ ಉತ್ತಮವಾಗಿ ಬಂದವು, ರಾಗಿ ಮತ್ತು ಶೇಂಗಾ ಬೆಳೆ ಹತ್ತು ಪೈಸೆ ಭಾಗದಷ್ಟು ಮಾತ್ರ ಕೈಗೆ ಬಂತು. ಅದೇ ವರ್ಷ ಶೇಂಗಾ ಬೆಳೆಗಾಗಿ ರು. 30 ಸಾವಿರ ಸಾಲ ಮಾಡಿದ್ದರು. ಆದರೆ, ಬೆಳೆಯೆಲ್ಲಾ ಜೊಳ್ಳಾಗಿ ಒಂದು ರುಪಾಯಿ ಆದಾಯ ಬರಲಿಲ್ಲ. ಇವತ್ತಿಗೂ ನಾವು ಸಾಲದ ಮಕ್ಕಳೇ ಎಂದು ನೊಂದುಕೊಳ್ಳುತ್ತಾರೆ ತಿಮ್ಮಕ್ಕ. ಆದರೆ, ಕೊರಲೆ ಮುಂತಾದ ಸಿರಿಧಾನ್ಯಗಳನ್ನು ಬೆಳೆಯಲು ಸಾಲ ಮಾಡುವ ಪ್ರಮೇಯವೇ ಬರುವುದಿಲ್ಲ ಎಂಬುದು ಇವರ ಇಷ್ಟು ವರ್ಷಗಳ ಅನುಭವ.
ಕೊರಲೆಯನ್ನು ಬಿತ್ತುವುದಾಗಲಿ, ಕೊಯ್ಯುವುದಾಗಲಿ, ಬಚ್ಚಿಡುವುದಾಗಲಿ, ತಿನ್ನುವುದಾಗಲೀ ಸುಲಭದ ಕೆಲಸ. ಆದರೆ, ಕಷ್ಟ ಬರುವುದು ಅಕ್ಕಿ ಮಾಡುವಾಗ. ಕಾಳಿನ ಮೇಲೆ ಗಟ್ಟಿ ಕವಚ ಇರುತ್ತದೆ. ಇದನ್ನು ಬೇರ್ಪಡಿಸುವುದು ಸುಲಭದ ಮಾತಲ್ಲ. ಹಿಂದೆ ಬೀಸುವ ಕಲ್ಲು ಬಳಸಿ ಅಕ್ಕಿ ತೆಗೆಯುತ್ತಿದ್ದರು. ಕಾಲಾನಂತರ ಆ ಪದ್ಧತಿ ಕಣ್ಮರೆಯಾಯಿತು.
ರಾಗಿ ಹಿಟ್ಟು ಮಾಡುವ ಮಿಲ್‌ನಲ್ಲಿಯೇ ಕೊರಲೆ ಅಕ್ಕಿ ಮಾಡುವ ವಿಧಾನವನ್ನು ರಘು ಪಾಲಿಸುತ್ತಿದ್ದಾರೆ. ಮಿಲ್ಲಿನ ಬಿಗಿತವನ್ನು ಅರ್ಧ ಸುತ್ತು ಸಡಿಲಗೊಳಿಸಿದರೆ ಕೊರಲೆ ಅಕ್ಕಿ ಮಾಡಬಹುದು. ಹೀಗೆ ಮಾಡಲು ಅನುಭವ ಅಗತ್ಯ ಎನ್ನುತ್ತಾರೆ ಗಿರಣಿ ಮಾಲೀಕ ಲೋಕೇಶ್. ಮಿಲ್ ಮಾಡಿದ ನಂತರವೂ ಸ್ವಲ್ಪ ಪ್ರಮಾಣದ ಹೊಟ್ಟು ಇರುತ್ತದೆ. ಇದನ್ನು ಹಸನು ಮಾಡಲು ಗಾಳಿಗೆ ತೂರಿ ಜರಡಿ ಮಾಡಿದರೆ ಕಾಳುಗಳು ಬೇರ್ಪಡುತ್ತವೆ. ಕೊರಲೆ ಅಕ್ಕಿಯ ಗಾತ್ರ ತುಂಬಾ ಸಣ್ಣ. ಹಾಗಾಗಿ ಕಲ್ಲು ಹೆಕ್ಕುವುದು ತ್ರಾಸದ ಕೆಲಸ. ಅಕ್ಕಿ ಮಾಡುವ ಪ್ರತ್ಯೇಕ ಗಿರಣಿ ಯಂತ್ರ ಲಭ್ಯವಾಗುವುದಾದರೆ ಕೊರಲೆಯನ್ನು ಜನಪ್ರಿಯಗೊಳಿಸುವುದು ಸುಲಭ.
ರಘು ಅಕ್ಕಿ ಮಾರಾಟ ಶುರು ಮಾಡಿದ ನಂತರ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ. ಅಕ್ಕಿಯ ಜೊತೆಗೆ ಬೀಜಕ್ಕೂ ಬೇಡಿಕೆ ಬರುತ್ತಿದೆ. ಕಳೆದೆರಡು ವರ್ಷದಲ್ಲಿ 20ಕ್ಕೂ ಹೆಚ್ಚು ರೈತರು ಬೀಜ ಪಡೆದಿದ್ದಾರೆ. ರಾಜ್ಯಾದ್ಯಂತ ಜನರ ಒಲವು ಹೆಚ್ಚುತ್ತಿದೆ. ನಗರದಲ್ಲಿ ಆರೋಗ್ಯದ ಕಾರಣಕ್ಕೆ ಬಳಸುವವರು ಹೆಚ್ಚುತ್ತಿದ್ದು, ಉತ್ತಮ ಬೆಲೆಯೂ ಸಿಗುತ್ತಿದೆ. ಹಾಗಾಗಿ ಬೆಳೆಯುವವರ ಸಂಖ್ಯೆ ಮತ್ತು ಬೆಳೆಯುವ ಪ್ರದೇಶ ನಿಧಾನವಾಗಿ ವಿಸ್ತರಿಸುತ್ತಿದೆ.
ರಘು ಕೊರಲೆ ಹಿಟ್ಟು ಹಾಗೂ ರವೆ ಮಾಡಿಸಿ ಮಾರುತ್ತಿದ್ದಾರೆ. ಗ್ರಾಮದ ಮಹಿಳಾ ಸಂಘಕ್ಕೆ ಕೊರಲೆ ರೊಟ್ಟಿ ಮಾಡಿ ಮಾರಾಟ ಮಾಡಲು ಪ್ರೇರೇಪಿಸುತ್ತಿದ್ದಾರೆ. ಕೊರಲೆ ರೊಟ್ಟಿ ಈ ಭಾಗದ ರೈತರ ಜನಪ್ರಿಯ ಖಾದ್ಯ. ಕಮ್ಮಗಿನ ರುಚಿಯ ರೊಟ್ಟಿಗಳು ಬಿಸಿಲಲ್ಲಿ ಒಣಗಿಸಿ ಶೇಖರಿಸಿದರೆ ಮೂರು ತಿಂಗಳವರೆಗೂ ಕೆಡುವುದಿಲ್ಲ. ಹಾಗಾಗಿ ರೊಟ್ಟಿ ಮಾಡಿ ಮಾರಾಟ ಮಾಡುವುದು ಸುಲಭ ಎನ್ನುತ್ತಾರೆ ಹೆಂದೊರೆಯ ಅನಸೂಯಮ್ಮ.
ಬಾಸುಮತಿ, ನಂಜನಗೂಡು ರಸಬಾಳೆ ಮುಂತಾದವುಗಳಂತೆ ಸೀಮಿತ ಭೌಗೋಳಿಕ ವ್ಯಾಪ್ತಿಗೆ ಸೇರಿದ ಕೊರಲೆಗೆ ಭೌಗೋಳಿಕ ಮಾನ್ಯತೆ (Giographical indication) ಬೇಕಾಗಿದೆ. ಕೊರಲೆ ಸಂಸ್ಕರಣೆ ಸರಳಗೊಳಿಸುವ ಗಿರಣಿಯೊಂದರ ಸಂಶೋಧನೆ ಕೊರಲೆ ಬೆಳೆಗಾರರನ್ನು ಮತ್ತು ಬಳಕೆದಾರರನ್ನು ಉತ್ತೇಜಿಸಬಲ್ಲದು. ಜಾಗತಿಕ ತಾಪಮಾನದಿಂದಾಗಿ ಏರುಪೇರಾಗುತ್ತಿರುವ ವಾತಾವರಣ ಹಾಗೂ ನೀರಿನ ಕೊರತೆ ಮಿತಿಮೀರುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಎದುರಿಸುವ ಶಕ್ತಿಯುಳ್ಳ ಕೊರಲೆ ಮತ್ತು ಇತರ ಸಿರಿಧಾನ್ಯಗಳು ಉತ್ತರವಾಗಬಲ್ಲವು.

- ಮಲ್ಲಿಕಾರ್ಜುನ ಹೊಸಪಾಳ್ಯ
krushikaimara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು