ಇಲ್ಲಿ ಕೋಟ್ಯಂತರ ತುಡವಿ ಜೇನುಗಳು ಹಾರಾಡುತ್ತಿವೆ. ತೋಟದ ಸನಿಹ ಬಂದವರಿಗೂ ತುಪ್ಪದ ವಾಸನೆ ಸೂಸುತ್ತಿವೆ...
ಇಂಥದ್ದೊಂದು ದೃಶ್ಯ ಕಾಣಸಿಗುವುದು ಉ.ಕ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯ (ಬಾಳೆಮನೆ) ಉತ್ಸಾಹಿ ಕೃಷಿಕ ಹರಿಹರ ವೆಂ. ಹೆಗಡೆ ಅವರ ಅಡಕೆ ತೋಟದಲ್ಲಿ.
ಹಿತ್ಲಳ್ಳಿಯ ಹರಿಹರ ಹೆಗಡೆ ಅಡಕೆ ಕೃಷಿಯೊಂದಿಗೆ, ಜೇನು ಕೃಷಿಯಲ್ಲೂ ಸಕ್ರಿಯ. 15 ವರ್ಷಗಳಿಂದ ಜೇನು ಕೃಷಿಯಲ್ಲಿ ತಲ್ಲೀನರಾಗಿರುವ ಅವರು ಅದನ್ನೇ ಉಪ ಕಸುಬಾಗಿಸಿಕೊಂಡು ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ.
ಆರಂಭ ಹೇಗೆ?
ಹಿತ್ಲಳ್ಳಿಯ ಸುಂದರ ಪರಿಸರದ ಮಧ್ಯೆ ವಾಸಿಸುತ್ತಿರುವ ಹರಿಹರ ಹೆಗಡೆ ಪರಂಪರಾಗತವಾಗಿ ಬಂದ ಭತ್ತ- ಅಡಕೆ ಕೃಷಿ ಚಟುವಟಿಕೆಗೆ ಹೊಂದಿಕೊಂಡರು. ಆಕಸ್ಮಿಕವಾಗಿ ಜೇನು ಕಸುಬಿಗೆ ಧುಮುಕಿದರು. 1984- 85ನೇ ಸಾಲಿನಲ್ಲಿ ಅವರು 7ನೇ ತರಗತಿಯ ವಿದ್ಯಾರ್ಥಿ. ಆ ಸಮಯದಲ್ಲಿ ಊರಿನಲ್ಲೊಂದು ಜೇನುಕೃಷಿ ತರಬೇತಿ ನಡೆಯುತ್ತಿತ್ತು. ಅದರಲ್ಲಿ ಪಾಲ್ಗೊಂಡ ಬಾಲಕ ಹರಿಹರ ಹೆಗಡೆ ಜೇನು ಸಾಕಾಣೆಯ ಬಗ್ಗೆ ಪೂರಕ ಮಾಹಿತಿ ಪಡೆದುಕೊಂಡರು. ಆಮೇಲೆ ರು. 50ಕ್ಕೆ ಒಂದು ಪೆಟ್ಟಿಗೆ ಖರೀದಿಸಿ, ಮಲೆನಾಡಿನ ತುಡವಿ ಜೇನನ್ನು ತುಂಬಿ ಜೇನು ಕೃಷಿ ಆರಂಭಿಸಿದರು.
ಕ್ರಮೇಣ ಹರಿಹರ ಹೆಗಡೆಗೆ ಜೇನು ಕೃಷಿಯ ಬಗ್ಗೆ ಸಮಗ್ರ ವಿಷಯ ತಿಳಿಯಬೇಕೆಂಬ ಅಭಿಲಾಷೆ ಉಂಟಾಯಿತು. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಮೂರು ತಿಂಗಳ ಜೇನು ಸಾಕಾಣೆ ವಿಶೇಷ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಮೊದಲೇ ಪ್ರಾರಂಭಿಸಿದ್ದ ತಮ್ಮ ಮೆಚ್ಚಿನ ಉಪಕಸುಬನ್ನು ವಿಸ್ತರಿಸಲು ಅವರು ಸಂಕಲ್ಪಿಸಿದರು.
1ರಿಂದ 100 ಪೆಟ್ಟಿಗೆ
ಮಲೆನಾಡು ತುಡವಿಯನ್ನು ಪಟ್ಟಿಗೆಯಲ್ಲಿ ಹಿಡಿದಿಟ್ಟುಕೊಳ್ಳುವುದೇ ಕಷ್ಟವೆನಿಸಿತು. ನಂತರ ಬಯಲುಸೀಮೆಯ ತುಡವಿ ಜೇನಿನ ಸಂಸಾರವನ್ನು ಪೋಷಿಸಿದರು. ಜೇನು ಕೃಷಿಯಿಂದ ಸಿಗುವ ಆದಾಯದಿಂದಲೇ ಪೆಟ್ಟಿಗೆಯ ಸಂಖ್ಯೆ ಹೆಚ್ಚಿಸಿ, ಮತ್ತಷ್ಟು ಜೇನು ಕುಟುಂಬ ಸಾಕಿದರು. ಛಲದಿಂದ ಒಂದು ಪೆಟ್ಟಿಗೆಯಿಂದ ಆರಂಭವಾದ ಇವರ ಜೇನುಕೃಷಿ, ಈಗ ನೂರು ಪೆಟ್ಟಿಗೆಯೊಂದಿಗೆ ಮುನ್ನಡೆಯುತ್ತಿದೆ.
ಪ್ರತಿ ಪೆಟ್ಟಿಗೆಗೂ ಹೆಸರು!
ಇಲ್ಲಿ ಪ್ರತಿ ಪೆಟ್ಟಿಗೆಗೂ ಒಂದೊಂದು ಹೆಸರಿದೆ. ಸಂವತ್ಸರ, ನಕ್ಷತ್ರದ ಹೆಸರುಗಳನ್ನೇ ಜೇನು ಮನೆಗಳಿಗೆ ಬರೆಸಿರುವುದು ವಿಶೇಷ.
ಪ್ರತಿ ಕೆಜಿ ತುಪ್ಪಕ್ಕೆ ರು. 150 ದರವಿದೆ. ವರ್ಷದಲ್ಲಿ ಮಧುವನದಿಂದ 300 ಕೆ.ಜಿ. ತುಪ್ಪ ಸಿದ್ಧವಾಗುತ್ತದೆ. ಜೇನು ಕೃಷಿಯಿಂದ ವರುಷದಲ್ಲಿ ಸುಮಾರು 45 ಸಾವಿರ ಸಿಗುತ್ತಿದೆ ಎನ್ನುತ್ತಾರೆ ಹೆಗಡೆ. ಮಾಹಿತಿಗೆ ಮೊ. 9591343921 ಸಂಪರ್ಕಿಸಬಹುದು. <
- ಗಣಪತಿ ಹಾಸ್ಪುರ