ಕಡಿಮೆ ವೆಚ್ಚ, ಪರಿಶ್ರಮ ಪಡದೆ ನಿತ್ಯ ರಾಸುಗಳಿಗೆ ಹಸಿರು ಮೇವು ನೀಡಬಹುದು. ಅದೂ ಯಂತ್ರದ ಮೂಲಕ!
ಹೌದು, ಇಂಥದ್ದೊಂದು ಯಂತ್ರವನ್ನು ಮಹಾರಾಷ್ಟ್ರದ ಕೊಲ್ಹಾಪುರದ ಮಯೂರೇಶ ಇಂಡಸ್ಟ್ರೀಸ್ ಅಭಿವೃದ್ಧಿಪಡಿಸಿದೆ. ಅದುವೇ ಹೈಡ್ರೊಪೊನಿಕ್ ಪಾಡ್ಡರ್ ಮೆಷಿನ್.
ಯಂತ್ರದ ಕಾರ್ಯವೈಖರಿ ಹೇಗೆ?
250 ಚದರ ಅಡಿ ಜಾಗ ಈ ಪಾಡ್ಡರ್ ಮೆಷಿನ್‌ಗೆ ಬೇಕಾಗುತ್ತದೆ. ಪ್ರತಿದಿನ ಏನಿಲ್ಲವೆಂದರೂ ಸರಿಸುಮಾರು 50 ಕೆಜಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಯಂತ್ರದಲ್ಲಿ ವಿವಿಧ ಸ್ತರದಲ್ಲಿ ಒಟ್ಟು ಏಳು ಟ್ರೇಗಳಿರುತ್ತವೆ. ಆ ಟ್ರೇಗಳಲ್ಲಿ ಅಗತ್ಯಕ್ಕನುಗುಣವಾಗಿ ಒಂದು ದಿನ ಮುಂಚಿತವಾಗಿ ನೀರಿನಲ್ಲಿ ನೆನೆಸಿದ ಗೋದಿ, ಮೆಕ್ಕೆಜೋಳ, ಜೋಳ, ಬಾರ್ಲಿ ಬೀಜ ಹರಡಿ ಯಂತ್ರದ ಬಾಗಿಲು ಮುಚ್ಚಬೇಕು. ಮರುದಿನ ಮತ್ತೆ ಅದೇ ರೀತಿ ನೆನೆಸಿದ ಬೀಜಗಳನ್ನು ಇನ್ನೊಂದು ಟ್ರೇನಲ್ಲಿ ಹಾಕಬೇಕು. ಏಳು ದಿನಗಳ ನಂತರ ಮೇವು ಕೊಯ್ಲಿಗೆ ಬರುತ್ತದೆ. ಕೊಯ್ಲಿಗೆ ಬಂದ ಮೇವನ್ನು ನೇರವಾಗಿ ರಾಸುಗಳಿಗೆ ಹಾಕಿದರೆ ಆಯಿತು.
ಎಷ್ಟು ವೆಚ್ಚ?
40 ಟನ್ ಮೆಕ್ಕೆಜೋಳ ಬೆಳೆಯಬೇಕಾದರೆ ಕನಿಷ್ಠ ಎರಡು ಎಕರೆ ಬೇಕು. ಆದರೆ, ಅದೇ 250 ಚದರ ಅಡಿ ಯಂತ್ರದಲ್ಲಿ ವರ್ಷದೊಪ್ಪತ್ತಿನಲ್ಲಿ ಇಷ್ಟೇ ಪ್ರಮಾಣದ ಮೇವು ಬೆಳೆಯಬಹುದು. 2 ಎಕರೆಯಲ್ಲಿ ಬೇರೆ ಬೆಳೆದು ಪರ್ಯಾಯ ಆದಾಯಕ್ಕೆ ದಾರಿ ಮಾಡಿಕೊಳ್ಳಬಹುದು. ನಾಲ್ಕೈದು ಜಾನುವಾರು ಸಾಕುವುದಕ್ಕೆ ಒಬ್ಬ ವ್ಯಕ್ತಿ ಇಡೀ ದಿನ ಕೆಲಸ ಮಾಡಬೇಕಾಗುತ್ತದೆ. ಈ ಯಂತ್ರ ಇದ್ದರೆ ಮಾನವ ಸಂಪನ್ಮೂಲ ಕೂಡ ಸದ್ಬಳಕೆಯಾಗುತ್ತದೆ. ಅರ್ಧ ತಾಸಿನಲ್ಲಿ ಯಂತ್ರದ ಟ್ರೇಗಳಲ್ಲಿ ಬೀಜ ಹರಡಿದರೆ ಮುಗಿಯಿತು... ಅದೇ ಸಮಯದಲ್ಲಿ ಕೊಯ್ಲಿಗೆ ಬಂದ ಮೇವು ತೆಗೆದರೂ ಆಯಿತು. ಇಡೀ ದಿನ ಆ ವ್ಯಕ್ತಿ ಇನ್ನೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು.
ಎಷ್ಟೆಷ್ಟು ಇಳುವರಿ?
ಒಂದು ಕೆಜಿ ಮೆಕ್ಕೆಜೋಳ ನೀರಿನಲ್ಲಿ ನೆನೆಸಿ ಯಂತ್ರದಲ್ಲಿ ಇರಿಸಿದರೆ ಒಂದು ವಾರದ ಅವಧಿಯಲ್ಲಿ ಕನಿಷ್ಠ 5 ಕೆಜಿ ಮೇವು ಪಡೆಯಬಹುದು. ಜಾನುವಾರು ಒಂದಕ್ಕೆ ನಿತ್ಯ ಕನಿಷ್ಠ 8- 10 ಕೆಜಿ ಹಸಿರು ಮೇವು ಅಗತ್ಯ. ಸಣ್ಣ ರೈತರಿಗೆ ನಿತ್ಯ 50 ಕೆಜಿ ಮೆವು ಉತ್ಪಾದಿಸುವ ಯಂತ್ರ ಸಾಕು.
ಆಸಕ್ತ ರೈತರು ಅಥವಾ ಹೈನೋದ್ಯಮಿಗಳು ಮಯೂರೇಶ ಇಂಡಸ್ಟ್ರೀಸ್, ಗೋಕುಲ ಶಿರಗಾಂವ, ಕೊಲ್ಹಾಪುರ, ಸಂಜೀವ ಗೋಖಲೆ (09822794730).
-ಸತೀಶ ಪಾಗಾದ