ಅಸಮರ್ಪಕ ನಿರ್ವಹಣೆಯಿಂದ ಕೈಕೊಟ್ಟ ಕೃಷಿ, ಕಾಡುವ ಬಡತನ, 5-6 ಲಕ್ಷ ರು. ಸಾಲ ತಲೆಯ ಮೇಲಿತ್ತು. ಆದರೂ ಸವಾಲುಗಳನ್ನು ಮೆಟ್ಟಿ ನಿಂತು ಇಲ್ಲೊಬ್ಬ ರೈತ ಸಾಧನೆ ಮಾಡಿದ್ದಾರೆ. ಅವರೇ ಗುಲ್ಬರ್ಗದ ಮೇಳಕುಂದಾ (ಬಿ) ಗ್ರಾಮದ ಮಹಾದೇವಪ್ಪ ಕೊಳ್ಳೂರು. ಅವರ ಪಾಲಿಗೆ ಆಶಾಕಿರಣವಾಗಿದ್ದು ರೇಷ್ಮೆ ಬೆಳೆ. ರೇಷ್ಮೆ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮಹಾದೇವಪ್ಪ ಧೈರ್ಯ ಮಾಡಿ ರೇಷ್ಮೆ ಬೆಳೆಯಲು ನಿರ್ಧರಿಸಿದರು. ಇರುವ ಮೂರೂವರೆ ಎಕರೆ ಹೊಲದಲ್ಲಿ ರೇಷ್ಮೆ ಬೆಳೆಯಲು ಹೊರಟ ಅವರಿಗೆ ಎದುರಾದದ್ದು ರೇಷ್ಮೆ ಶೆಡ್ಡಿನ ಸಮಸ್ಯೆ. ಯಾಕೆಂದರೆ ಶೆಡ್ ನಿರ್ಮಿಸಲೂ ಅವರ ಬಳಿ ಹಣವಿರಲಿಲ್ಲ. ಸಾಲ ಮಾಡಿ ತಾತ್ಕಾಲಿಕ ಶೆಡ್ ನಿರ್ಮಿಸಿದರು. ರೇಷ್ಮೆ ಇಲಾಖೆಯವರು 3 ಕ್ವಿಂಟಲ್ಗೆ ರು. 12000 ಸಬ್ಸಿಡಿ ಇತರ ಸೌಲಭ್ಯ ಒದಗಿಸಿದರು. ಇದು ಮಹಾದೇವಪ್ಪ ಅವರ ರೇಷ್ಮೆ ಕನಸು ನನಸಾಗಲು ಕಾರಣವಾಯಿತು. ಅಲ್ಲದೆ, ರೇಷ್ಮೆ ಬೆಳೆ, ಹುಳುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡರು. ಅವರು ಯಾವುದೇ ಕೂಲಿಯಾಳು ಬಳಸದೆ ತಾವೇ ನಿಂತು ಅವುಗಳ ಪಾಲನೆ ಮಾಡಿದರು. ಒಂದು ಬಾರಿ ರೇಷ್ಮೆ ಬೆಳೆಗೆ ರು. 20 ಸಾವಿರ ಖರ್ಚಾಗುತ್ತದೆ. ಪ್ರತಿ ಬೆಳೆಯಿಂದ ರು. 1.20 ಲಕ್ಷ ನಿವ್ಹಳ ಲಾಭ ಬರುತ್ತದೆ. ವರ್ಷದಲ್ಲಿ 8- 9 ಬೆಳೆ ಬೆಳೆಯಬಹುದು ಎನ್ನುತ್ತಾರೆ ಮಹಾದೇವಪ್ಪ. ರೇಷ್ಮೆಯಿಂದ ಮಹಾದೇವಪ್ಪ(9535592566) ಅವರ ಕಷ್ಟ ಮಾಯವಾಗಿವೆ.
-ಬಿ. ಸೋಮಶೇಖರ್ಚಿತ್ರ: ರಮೇಶ ಮೇಳಕುಂದಾ