ಬಳ್ಳಿಯಂತೆ ಕೊಂಬೆಗಳನ್ನು ನೀಳವಾಗಿ ಹರಡುವ ಗಿಡದಲ್ಲಿ ಚಿಕ್ಕ ಮುಳ್ಳುಗಳೂ ಇವೆ. ಕೊಂಬೆಯ ಅಲ್ಲಲ್ಲಿ ಗಂಟುಗಳು, ಅದರಲ್ಲಿ ಎಲೆಗಳು. ಎಲೆಗಳೊಂದಿಗೆ ಕಪ್ಪಾಗಿ ನೇತಾಡುವ ಹಣ್ಣುಗಳು. ಕೊಯ್ದು ಬಾಯಿಗಿರಿಸಿದರೆ ಕರಗುವಷ್ಟು ಮೃದು. ಬಲು ಸಿಹಿ. ಸುಗಂಧಭರಿತ ರುಚಿ. ಹೌದು, ಇದು ಕಂಬಳಿಹಣ್ಣು ಅಥವಾ ಬ್ಲ್ಯಾಕ್ ಬುಷ್ ಬೆರಿ ಹಣ್ಣು. ಕಪ್ಪು ಸ್ಟ್ರಾಬೆರಿ ಅಂತಲೂ ಹೇಳಬಹುದು.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಬಳಿ ಬೈಕುಡೆ ಎಂಬಲ್ಲಿ ಶಾಮಸುಂದರ ಭಟ್ಟರ ಮನೆ. ಇದರಿಂದ ಜಾಮ್, ಜೆಲ್ಲಿ ಮೊದಲಾದದ್ದನ್ನಲ್ಲದೆ ವೈನ್ ಕೂಡ ತಯಾರಿಸಬಹುದು. ಹಾಗೆಯೇ ತಿನ್ನಬಹುದು. ಶಾಮಸುಂದರರ ಅಂಗಳದಲ್ಲಿರುವ ಈ ಹಣ್ಣಿನ ಗಿಡ ಕಮಾನಿನಂತೆ ವಿಶಾಲವಾಗಿ ಹಬ್ಬಿದೆ. ನೆಲದ ಮೇಲೂ ಬಿಡಬಹುದಂತೆ. ಎರಡು ಅಡಿ ಆಳದ ಹೊಂಡ ತೆಗೆದು ನಾಟಿ ಮಾಡಿದ್ದಾರೆ. ಬೇಸಗೆಯಲ್ಲಿ ಎರಡು ದಿನಕ್ಕೊಮ್ಮೆ ನೀರು ಹನಿಸಿರುವುದು ಬಿಟ್ಟರೆ ಯಾವುದೇ ಗೊಬ್ಬರ ಹಾಕಿಲ್ಲ.
ಬುಟ್ಟಿ ಭರ್ತಿ ಹಣ್ಣು
ಎರಡನೇ ವರ್ಷದಲ್ಲಿ ಹೂವು ಬಿಟ್ಟು ಮೊದಲ ಫಲ ಕೈ ಸೇರಿದೆ. ಹಣ್ಣು ಸುಮಾರು 12 ಗ್ರಾಂವರೆಗೂ ತೂಕವಿರುವುದುಂಟು. ಕಪ್ಪುಮಿಶ್ರಿತ ನೇರಳೆ ವರ್ಣದ ಹಣ್ಣಿನ ಒಳಭಾಗ ಕೆಂಪಾಗಿದೆ. ಇದರಲ್ಲಿ 'ಸಿ', 'ಕೆ' ಜೀವಸತ್ವ, ನಾರು, ಸ್ಯಾಲಿಸಿಲಿಕ್ ಆಮ್ಲ, ಖನಿಜಗಳು ಮತ್ತು ತೈಲಾಂಶ ಅಂಶ ಹೇರಳ ಎಂದು ಹೇಳುವ ಶಾಮಸುಂದರ ನಾಲ್ಕು ವರ್ಷ ದಾಟಿದ ಬಳಿಕ ಒಂದು ಗಿಡದಿಂದ ಬುಟ್ಟಿ ತುಂಬ ಹಣ್ಣು ಕೊಯ್ಯಬಹುದು. ಮೇ ತಿಂಗಳಿನಲ್ಲಿ ಹಣ್ಣುಗಳ ಸುಗ್ಗಿ ಎನ್ನುತ್ತಾರೆ.
ಇದನ್ನು ಅಂಗಳದ ಪ್ರವೇಶದಲ್ಲಿ ಬೆಳೆಸಿ ಕಮಾನಿನಂತೆ ಕಟ್ಟಬಹುದಂತೆ. ಬುಷ್ ಬೆರಿ ರೊಸೇಸಿಯೇ ಸಸ್ಯ ಕುಟುಂಬಕ್ಕೆ ಸೇರಿದ್ದು, ಕೊಂಬೆಗಳಿಂದ ವಂಶಾಭಿವೃದ್ಧಿ ಮಾಡುತ್ತಾರೆ. ಕೀಟ ಬಾಧೆ ಕಡಿಮೆ.
ಕಸಿ ಕಲೆಯ ಪರಿಣತ
ಶಾಮಸುಂದರ ಕಸಿ ಕಲೆಯಲ್ಲಿ ನಿಸ್ಸೀಮರು. ಹಲಸಿನ ಮರಕ್ಕೆ ಬೇರೆ ತಳಿಗಳ ಕಸಿ ಕಟ್ಟುವುದು ಸುಲಭವಲ್ಲ. ಅವರ ಕಸಿ ಕಲೆಗೆ ಸಾಕ್ಷಿಯಾಗಿ ಅಂಗಳದಲ್ಲಿರುವ ಒಂದೇ ಹಲಸಿನ ಮರದಲ್ಲಿ ಮೂರು ಜಾತಿಯ ಕಾಯಿಗಳಾಗುತ್ತವೆ. ಹತ್ತಕ್ಕಿಂತ ಹೆಚ್ಚು ವಿಧದ ಮಾವಿನಹಣ್ಣು ಒಂದೇ ಮರದಲ್ಲಿ ಕೊಯ್ಯುತ್ತಾರೆ.
ನಾನಾ ಹಣ್ಣಿನ ಗಿಡ
ಇದಲ್ಲದೆ ದೇಶ- ವಿದೇಶಗಳ ಹಲವು ಹಣ್ಣಿನ ತಳಿಗಳು ಫಲ ಬಿಡಲು ಸಿದ್ಧವಾಗಿವೆ. ಕೊಂಚವೂ ಹುಳಿಯಿಲ್ಲದ ಸಿಹಿ ಲಿಂಬೆಗಳಾಗುತ್ತಿವೆ. ಬುಟ್ಟಿಗಟ್ಟಲೆ ಕಾಯಿ ಕೊಡಬಲ್ಲ ನೆಲ್ಲಿಕಾಯಿ ಗಾತ್ರದ ಹುಳಿ ಲಿಂಬೆ ಹಾಗೆಯೇ ವಿಶಿಷ್ಟ ಬಗೆಯ ನೆಲ್ಲಿ ಕಾಯಿ ಗಿಡದೊಂದಿಗೆ ಬುದ್ಧಾಸ್ ಬಲ್ಲಿ ಎಂಬ ವಿಶಿಷ್ಟ ಬಿದಿರೂ ಅವರಲ್ಲಿದೆ. (ದೂ. 08256- 264393).
- ಪ. ರಾಮಕೃಷ್ಣ ಶಾಸ್ತ್ರಿ