ಕೃಷಿ-ಪರಿಸರ

ಕೃಷಿಯಲ್ಲಿ ಗೋಮೂತ್ರದ ಉಪಯೋಗ

Shilpa D

ಭಾರತೀಯ ರೈತರಿಗೆ ಆಕಳು ದೇವರ ಸಮಾನ. ರೈತನಿಗೂ ಮತ್ತು ಜಾನುವಾರುಗಳಿಗೆ  ಬಿಡದ ನಂಟು. ಭೂಮಿಯನ್ನು ಬಿತ್ತುವುದರಿಂದ ಹಿಡಿದು ಫಸಲು ಪಡೆಯುವ ತನಕ ರೈತ ಜಾನುವಾರುಗಳನ್ನೇ ಅವಲಂಬಿಸಿರುತ್ತಾನೆ.

ಹಸು ಹಾಗೂ ಅದರ ಪ್ರತಿಯೊಂದು ಉತ್ಪನ್ನಗಳು ಮನುಷ್ಯನಿಗೆ ಎಲ್ಲಾ ರೀತಿಯಲ್ಲೂ ಪ್ರಯೋಜನಕಾರಿ. ಹಾಲು, ಮೊಸರು, ಬೆಣ್ಣೆ, ತುಪ್ಪ, ಸಗಣಿ. ಮೂತ್ರ ಹೀಗೆ ಪ್ರತಿಯೊಂದು ಉತ್ಪನ್ನಗಳು ಮಾನವನಿಗೆ ಉಪಯುಕ್ತ.

ಹಾಗೆಯೇ ಗೋಮೂತ್ರವನ್ನು ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಮೂತ್ರವನ್ನು ಬೆಳೆಗಳಿಗೆ ಗೊಬ್ಬರವನ್ನಾಗಿ ಉಪಯೋಗಿಸುತ್ತಾರೆ. ಆಕಳು ಮೂತ್ರ  ಬೆಳೆಗಳಿಗೆ ಮೂಲ ಮಂತ್ರವಿದ್ದಂತೆ.ಯಾವ ರಾಸಾಯನಿಕ ಗೊಬ್ಬರಗಳು ಮಾಡದಂತ ಕೆಲಸವನ್ನು ಆಕಳು ಮೂತ್ರ ಮಾಡುತ್ತದೆ. ಬೆಳೆಗಳಿಗೆ ನೀರು ಕೊಡುವ ಸಮಯದಲ್ಲಿ ನೀರಿನ ಜೊತೆ ಆಕಳು ಸಗಣಿಯನ್ನು ಮಿಶ್ರಣ ಮಾಡಲಾಗುತ್ತದೆ. ಇದು ಬೆಳೆಯನ್ನು ತಲುಪುತ್ತದೆ. ಬೆಳೆ ಪುಷ್ಟಿದಾಯಕವಾಗಲು ಈ ಪದ್ಧತಿ ಸಹಕಾರಿಯಾಗುತ್ತದೆ.

ಹೊಲಕ್ಕೆ ನೀರು ಬರುವ ಮೂಲ ಅಂದರೆ, ಕಾಲುವೆ ಅಥವಾ ಕೊಳವೆ ಹೀಗೆ ನೀರು ಬರುವ ಜಾಗದಲ್ಲಿ ಒಂದು ಸಣ್ಣ ಗುಂಡಿಯನ್ನು ತೋಡಿ . ಆ ಗುಂಡಿಯಲ್ಲಿ ಆಕಳು ಮೂತ್ರವನ್ನು ಶೇಖರಿಸಬೇಕು. ನಂತರ ಕೊಳವೆಯ ಮುಖಾಂತರ ನೀರು ಬಂದಾಗ ಕಟ್ಟಿಗೆಯ ಸಹಾಯದಿಂದಲೋ ಅಥವಾ ಕೈ ಮುಖಾಂತರ ಆ ಆಕಳು ಮೂತ್ರವನ್ನು ಕಲೆಸಬೇಕು. ಹಾಗೆ ಮಾಡುವಾಗ ನೀರಿನಲ್ಲಿ ಮೂತ್ರ ಮಿಶ್ರಣವಾಗಿ ಪ್ರತಿ ಬೆಳೆಯ ಬೇರುಗಳಿಗೆ ನೇರವಾಗಿ ತಲುಪುತ್ತದೆ. ಇದರಿಂದ ಫಸಲು ಚೆನ್ನಾಗಿ ಬರುತ್ತದೆ. ಮತ್ತು ಭೂಮಿಯು ಫಲವತ್ತತೆಯನ್ನು ಕಾಯ್ದುಕೊಳ್ಳುತ್ತದೆ. ಹಾಗೂ ಗಿಡಗಳಿಗೆ ರೋಗ ತಗಲುವ ಸಾಧ್ಯತೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಯಾಕಂದರೆ ಗೋಮೂತ್ರದಲ್ಲಿರುವ ಸಲ್ಫರ್ ಅಂಶ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಇದರಿಂದ ಬೆಳೆಗಳು ಹುಲುಸಾಗಿ ಆರೋಗ್ಯಯುತವಾಗಿ ಬೆಳೆಯುತ್ತದೆ. ಪ್ರತಿ ವರ್ಷ ಗೋಮೂತ್ರ ಉಪಯೋಗಿಸಿದ ಭೂಮಿ ಫಲವತ್ತತೆಯಿಂದ ಕೂಡಿರುವ ಜೊತೆಗೆ ಅತಿ ಸೂಕ್ಷ್ಮಾಣು ಜೀವುಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಇನ್ನು ಕೃಷಿಯಲ್ಲಿ ಗೋ ಮೂತ್ರದ ಬಳಕೆ ಬಗ್ಗೆ ನಬಾರ್ಡ್ ನ ಕೃಷಿ ಕಚೇರಿ ತರಬೇತಿ ಕೂಡ ನೀಡುತ್ತಿದೆ.

ಗಿಡಗಳನ್ನು ಆರೋಗ್ಯಯುತವಾಗಿಸುತ್ತದೆ. ಗಿಡಗಳಿಗೆ ತಗಲು ಮಾರಕ ರೋಗಗಳಿಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಗೋಮೂತ್ರ ಬಳಸಿದ ಬೆಳೆಗಳು ಹೆಚ್ಚು ಸತ್ವ ಪೂರಿತವಾಗಿರುತ್ತದೆ. ಹಾಗೂ ಎಲೆಗಳು ಹಚ್ಚ ಹಸಿರಾಗಿರುತ್ತವೆ. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ರೈತನ ಮಿತ್ರ ಎರೆ ಹುಳಗಳ ಬೆಳವಣಿಗೆಗೆ ಗೋಮೂತ್ರ ಸಹಾಯ ಮಾಡುತ್ತದೆ.

ಭತ್ತ, ಜೋಳ, ರಾಗಿ, ನವಣೆ, ಶೇಂಗಾ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಹಲವು ಬೆಳೆಗಳಿಗೆ ಗೋಮೂತ್ರವನ್ನು ಗೊಬ್ಬರವಾಗಿ ಬಳಸಲಾಗುತ್ತದೆ. ಹಿಂದೆಲ್ಲಾ ಗೋಮೂತ್ರ ಮತ್ತು ಸಗಣಿಯನ್ನು ಒಟ್ಟಾಗಿ ಕಲೆಸಿ ಬೆಳೆಗಳಿಗೆ ಹಾಯಿಸಲಾಗುತ್ತಿತ್ತು. ಆದರೆ ಕೆಲ ವರ್ಷಗಳ ನಂತರ ರಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಯ್ತು. ಆದರೆ ರಾಸಾಯನಿಕ ಗೊಬ್ಬರಗಳ ಬಳಕೆಯ ದುಷ್ಪರಿಣಾಮಗಳನ್ನು ಅರಿತ ದೇಶದ ಅನ್ನದಾತ ಈಗ ಅಂದರೆ ಕಳೆದ 2 ದಶಕಗಳಿಂದ ಮತ್ತೆ ಗೋಮೂತ್ರವನ್ನು ಕೃಷಿಗೆ ಬಳಸುತ್ತಿದ್ದಾನೆ.

ಇನ್ನು ಗೋಮೂತ್ರವನ್ನು ಗಿಡಗಳಿಗೆ ತಗಲುವ ರೋಗಕ್ಕೆ ಔಷಧಿಯನ್ನಾಗಿ ಸಿಂಪಡಿಸಲಾಗುತ್ತದೆ. ಬೇವಿನ ಎಣ್ಣೆ ಜೊತೆ ಗೋಮಾತ್ರವನ್ನು ಬೆರೆಸಿ ರೋಗ ತಗುಲಿರುವ ಗಿಡಗಳಿಗೆ ಸಿಂಪಡಿಸದರೇ ರೋಗಕಾರಕ ಕೀಟಗಳು ಸಾಯುತ್ತವೆ.


.ಆದರೆ ಇಡಿ ದೇಶದ ವ್ಯವಸಾಯಕ್ಕೆ ಬೇಕಾಗುವಷ್ಟು ಗೋಮೂತ್ರ ನಮ್ಮಲ್ಲಿ ಲಭ್ಯವಿಲ್ಲ. ಹೀಗಾಗಿ ರಸಾಯನಿಕ ಗೊಬ್ಬರಗಳ ಬಳಕೆ ಅನಿವಾರ್ಯ.

SCROLL FOR NEXT