ಕೃಷಿ-ಪರಿಸರ

ಅವಧಿಗಿಂತ ಮೊದಲೇ ಕಾಲಿಟ್ಟ ಬೇಸಿಗೆ ಝಳ, ಬಳ್ಳಾರಿಯಲ್ಲಿ 37 ಡಿಗ್ರಿ ಉಷ್ಣಾಂಶ ದಾಖಲು

Srinivasamurthy VN

ಬೆಂಗಳೂರು: ಈಗಿನ್ನೂ ಫೆಬ್ರವರಿ ಅದಾಗಲೇ ರಾಜ್ಯದಲ್ಲಿ ಬೇಸಿಗೆ ಅನುಭವ ಆರಂಭವಾಗಿದ್ದು, ರಾಜ್ಯದ ವಿವಿಧ ನಗರಗಳಲ್ಲಿ ತಾಪಮಾನ 30 ಡಿಗ್ರಿ ದಾಟಿದೆ.

ಕೆಲ ನಗರಗಳಲ್ಲಿಯಂತೂ ತಾಪಮಾನ 35 ಡಿಗ್ರಿಯನ್ನೂ ದಾಟಿದ್ದು, ಗಡಿ ಜಿಲ್ಲೆ ಬಳ್ಳಾರಿಯಲ್ಲಿ ತಾಪಮಾನ ಬರೊಬ್ಬರಿ 37 ಡಿಗ್ರಿಯಷ್ಟು ದಾಖಲಾಗಿದೆ. ಬೆಂಗಳೂರಿನಲ್ಲಿರುವ ಹವಾಮಾನ ಇಲಾಖೆಯ ಅಧಿಕಾರಿಗಳು ನೀಡಿರುವ  ವರದಿಯಂತೆ ಓಈ ಬಾರಿಯ ಬೇಸಿಗೆ ಸಾಮಾನ್ಯ ಬೇಸಿಗೆಗಿಂತಲೂ ಹೆಚ್ಚಿನ ಪ್ರಮಾಣದ ತಾಪಮಾನ ಹೊಂದಿರಲಿದ್ದು, ಬಿಸಿಲಿನ ಝಳ ಹೆಚ್ಚಾಗಿರಲಿದೆ ಎಂದು ಹೇಳಿದ್ದಾರೆ.

"2016 ಫೆಬ್ರವರಿ ಅಂತಿಮ ಭಾಗದಲ್ಲಿ ಬೆಂಗಳೂರಿನಲ್ಲಿ 35 ಡಿಗ್ರಿ ತಾಪಮಾನ ದಾಖಲಾಗಿತ್ತು. ಈ ಬಾರಿಯೂ ಅದೇ ರೀತಿಯ ತಾಪಮಾನ ಇರಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನ 30 ಡಿಗ್ರಿ ದಾಟಿದ್ದು, ಬೇಸಿಗೆ  ಕಾಲದ ಹೊತ್ತಿಗೆ ಈ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ. ಪ್ರಮುಖವಾಗಿ ಬಳ್ಳಾರಿ, ಬಿಸಿಲ ನಗರಿ ರಾಯಚೂರಿನಲ್ಲಿ ಅತೀ ಹೆಚ್ಚಿನ ತಾಪಮಾನ ದಾಖಲಾಗಲಿದೆ. ಇನ್ನು ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು   ಮತ್ತು ಕೊಡಗು ಜಿಲ್ಲೆಗಳಲ್ಲಿ ಮಂಗಳವಾರ 31 ಡಿಗ್ರಿ ತಾಪಮಾನ ದಾಖಲಾಗಿದೆ. ಫೆಬ್ರವರಿ ಅಂತ್ಯದ ವೇಳೆ ಇದು 35 ಡಿಗ್ರಿ ತಲುಪಿದರೂ ಅಚ್ಚರಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಾರಿಯ ಬಿಸಿನ ಝಳಕ್ಕೆ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳು ತತ್ತರಿಸಲಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ತಾಪಮಾನ 37 ಡಿಗ್ರಿಯನ್ನೂ ಮೀರುವ ಸಾಧ್ಯತೆ ಇದೆ. ಉಳಿದಂತೆ ಕಲಬುರ್ಗಿ, ವಿಜಯಪುರ, ಬಾಗಲಕೋಟೆ  ಜಿಲ್ಲೆಗಳಲ್ಲಿ ಮಂಗಳವಾರ 35 ಡಿಗ್ರಿ ತಾಪಮಾನ ದಾಖಲಾಗಿದ್ದು, ಗದಗ, ಹಾವೇರಿ, ಕೊಪ್ಪಳದಲ್ಲಿ 33 ಡಿಗ್ರಿ ತಾಪಮಾನ ದಾಖಲಾಗಿದೆ. ಕರಾವಳಿ ಭಾಗದಲ್ಲಿ ತಾಪಮಾನ 33 ಡಿಗ್ರಿಯಿಂದ 35 ಡಿಗ್ರಿವರೆಗೂ ಇದೆ. ಮಾರ್ಚ್ 1 ರಿಂದ  15ರವರೆಗೂ ಪ್ರತೀ ಜಿಲ್ಲೆಗಳಲ್ಲಿ ತಾಪಮಾನ 1 ರಿಂದ 3 ಡಿಗ್ರಿಯವರೆಗೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಕಳೆದ ಬಾರಿಯಂತೆಯೇ ಈ ಬಾರಿ ಕೂಡ ಬೇಸಿಗೆ ಝಳ ಕರ್ನಾಟಕದ ಜನತೆಯನ್ನು ಹೈರಾಣಾಗಿಸಲಿದೆ.

SCROLL FOR NEXT