ಋಷಿ-ಮುನಿಗಳು ಶಾಪ ನೀಡುತ್ತಿದ್ದ ಕಥೆಗಳು ಗೊತ್ತು. ಆದರೆ ಹುಲು ಮಾನವರು ನೀಡಿದ ಶಾಪವೂ ತಟ್ಟುತ್ತದಾ? ಜ್ಯೋತಿಷ ಶಾಸ್ತ್ರದಲ್ಲಿ ಇಂತಹ ಶಾಪಗಳ ಬಗ್ಗೆ ವಿವರಣೆ ಇದೆ.
ಮಾನವನಿಗೆ ಸಂಕಷ್ಟಗಳು ಸಹಜ. ಇದಕ್ಕೆಲ್ಲಾ ಹಿರಿಯರ, ದೇವತೆಗಳ ಶಾಪವೇ ಕಾರಣ ಎಂದು ಮೊದಲಿನಿಂದಲೂ ನಂಬಿಕೊಂಡು ಬಂದವರು ನಾವು. ಜ್ಯೋತಿಷ ಶಾಸ್ತ್ರದಲ್ಲಿಯೂ ಇಂತಹ ಹಲವು ಬಗೆಯ ಶಾಪಗಳನ್ನು ತಿಳಿಸಿದ್ದು, ಅದಕ್ಕೆ ಪರಿಹಾರವನ್ನೂ ತಿಳಿಸಲಾಗಿದೆ.
ಪಿತೃಶಾಪ
ಜಾತಕನ ಲಗ್ನದಿಂದ 5ನೇ ಸ್ಥಾನಾಧಿಪತಿ ಶನಿಯಾಗಿದ್ದು, ಆ 5ನೇ ಸ್ಥಾನಕ್ಕೆ ರವಿ ದೃಷ್ಟಿ ಇದ್ದರೆ ಅಥವಾ 5ನೇ ಸ್ಥಾನದಲ್ಲಿ ಶನಿ ಮತ್ತು ರವಿಯು ಜೊತೆಯಲ್ಲಿಯೇ ಇದ್ದರೆ ಜಾತಕನಿಗೆ ಪಿತೃಶಾಪವಿದೆ ಎಂದು ತಿಳಿಯಬೇಕು. ಇದರಿಂದ ಸಂತತಿಗೆ ಬಾಧೆ.
ಪರಿಹಾರ: ಶ್ರಾದ್ಧ, ಗೋದಾನ ಸದ್ಬ್ರಾಹ್ಮಣ ಸಂತರ್ಪಣೆ ಮಾಡಿದ್ದಲ್ಲಿ ಸುಸಂತತಿಯಾಗಿ ಜಾತಕನಿಗೆ ಸಂತಾನ ಅಭಿವೃದ್ಧಿಯಾಗುವುದು.
ಸರ್ಪಶಾಪ
ಜಾತಕನ ಲಗ್ನದಿಂದ 9ನೇ ಅಧಿಪತಿಯೂ ನೀಚನಾಗಿದ್ದು ಅಥವಾ ಅಸ್ತಂಗತನಾಗಿದ್ದು, ಆ 9ನೇ ಸ್ಥಾನದಲ್ಲಿ ರಾಹು ಇದ್ದಲ್ಲಿ, ಈ ರಾಹುವಿಗೆ ಕುಜನ ದೃಷ್ಟಿ ಅಥವಾ ಅಂಶವಿದ್ದರೆ ಜಾತಕನಿಗೆ ಸರ್ಪಶಾಪವಿದೆ ಎಂದು ತಿಳಿಯಬೇಕು.
ಪರಿಹಾರ: ಸರ್ಪ ಸಂಸ್ಕಾರ ಅಥವಾ ನಾಗಪ್ರತಿಷ್ಠಾಪನೆ, ಗೋದಾನ, ಭೂದಾನ, ತಿಲದಾನ ಮಾಡಿದರೆ, ಸರ್ಪಶಾಪ ಪರಿಹಾರವಾಗಿ ಸಂತಾನ ಅಭಿವೃದ್ಧಿಯಾಗುವುದು.
ಪತ್ನಿಶಾಪ
ಲಗ್ನಾಧಿಪತಿ ಮತ್ತು ಲಗ್ನದಿಂದ 2,7,9ನೇ ಸ್ಥಾನಾಧಿಪತಿ ಮತ್ತು ಗುರು-ಶುಕ್ರ- ಚಂದ್ರರು ದುರ್ಬಲರಾಗಿ ಶನಿ, ಕುಜ, ರಾಹು ಇವರಿಂದ ಕೂಡಿ ಅಥವಾ ಇವರ ನವಾಂಶದಿಂದ ಕೂಡಿ, ಲಗ್ನದಿಂದ 6-8-9-12ನೇ ಸ್ಥಾನಗಳಿದ್ದರೆ ಪತ್ನಿಶಾಪವೆಂದು ತಿಳಿಯಬೇಕು. ಇದರಿಂದ ಗರ್ಭದಲ್ಲಿ ತೊಂದರೆಯಾಗಿ ಗರ್ಭೋತ್ಪತ್ತಿ ಕಷ್ಟ.
ಪರಿಹಾರ: ಸಾಲಂಕೃತ ಲಕ್ಷ್ಮೀನಾರಾಯಣ ಮೂರ್ತಿಯ ದಾನ, ಗೋದಾನ, ಶಯ್ಯಾದಾನಗಳನ್ನು ದಂಪತಿಗೆ ನೀಡಬೇಕು. ಇದರಿಂದ ಇಚ್ಛಿತ ಸಂತಾನವಾಗಿ ಶುಭವಾಗುವುದು.
ಭಾತೃಶಾಪ
ಲಗ್ನಾಧಿಪತಿ ಲಗ್ನದಿಂದ 3-5ನೇ ಸ್ಥಾನಾಧಿಪತನು ಮತ್ತು ಮಂಗಳ ಶನಿ ದುರ್ಬಲರಾಗಿ ಲಗ್ನದಿಂದ 6-8-12ನೇ ಸ್ಥಾನದಲ್ಲಿದ್ದು, ಅಥವಾ ಆ ಸ್ಥಾನದಿಂದ ಕೂಡಿದ್ದರೆ ಭಾತೃಶಾಪ. ಜಾತಕರಿಗೆ ಸಂತತಿಯ ನಾಶವಾಗುವುದು.
ಪರಿಹಾರ: ಚಂದ್ರಾಯಣ ವ್ರತ, ಕಾವೇರಿ ನದಿಯ ಪವಿತ್ರ ಸ್ನಾನ, ಅಶ್ವತ್ಥದಲ್ಲಿ ವಿಷ್ಣುಪೂಜಾ ಪ್ರಜಾಪತಿ ಭೂದಾನಾಧಿಗಳನ್ನು ಮಾಡಬೇಕು. ಇವುಗಳನ್ನು ಮಾಡಿದರೆ ಇಷ್ಟಾರ್ಥಸಿದ್ಧಿಯಾಗಿ ಸಂತಾನ ಅಭಿವೃದ್ಧಿ.
ಪ್ರೇತಶಾಪ
ಜನ್ಮ ಲಗ್ನದಿಂದ ನವಮ ಸ್ಥಾನಾಧಿಪತಿ ಮತ್ತು ಶನಿಯೊಂದಿಗೆ ಮಾಂದಿಯೂ ಕೂಡಿ ಲಗ್ನದಿಂದ ನವಮ ಸ್ಥಾನದಲ್ಲಿದ್ದರೆ ಪ್ರೇತ ಶಾಪವಿದೆ ಎಂದು ತಿಳಿಯುವುದು.
ಪರಿಹಾರ: ಪ್ರೇತಶ್ರಾದ್ಧ, ಪ್ರೇತೋದ್ಧಾರ, ರುದ್ರ ಮೂರ್ತಿಸ್ನಾನ, ಬ್ರಹ್ಮಮೂರ್ತಿ ಸ್ನಾನ, ಗೋವು ಮತ್ತು ಬೆಳ್ಳಿಯ ದಾನ ಮಾಡುವುದರಿಂದ ಈ ಶಾಪ ಪರಿಹಾರವಾಗಿ ಸಂತಾನ ಅಭಿವೃದ್ಧಿಯಾಗುತ್ತದೆ.
- ಎನ್. ಅಂಜನ್‌ಕುಮಾರ್