ಭಕ್ತಿಯ ಸಂಗಮವಾದ ಜ್ಞಾನದಿಂದ ಯಾವುದೇ ಉಪಯೋಗವಿಲ್ಲ. ಅಂತ್ಯಕಾಲ ಬಂದಾಗ ವ್ಯಾಕರಣಗಳು ಪಂಡಿತರನ್ನು ಉಳಿಸುವುದಿಲ್ಲ. ದೇವರ ಸ್ಮರಣೆ ಹಾಗೂ ಸಂಕೀರ್ತನೆ ಅಥವಾ ಭಜನೆ ಇಲ್ಲದೇ ಏನನ್ನೂ ಸಾಧಿಸಲು ಅಸಾಧ್ಯ ಎನ್ನುತ್ತಾರೆ ಮಹಾತ್ಮರು.
ದೇವರನ್ನು ಒಲಿಸಿಕೊಳ್ಳಲು ಜ್ಞಾನಮಾರ್ಗ, ಕರ್ಮಮಾರ್ಗ ಹಾಗೂ ಯೋಗವಾರ್ಗಕ್ಕಿಂತ ಭಕ್ತಿಮಾರ್ಗವೇ ಅತ್ಯುತ್ತಮ ಎನ್ನುವುದು ಜ್ಞಾನಿಗಳಾದ ಪುರಂದರದಾಸ, ಕನಕದಾಸ, ರಾಮಕೃಷ್ಣ ಪರಮಹಂಸ ಸೇರಿದಂತೆ ಹಲವರು ಕಂಡುಕೊಂಡ ಮಾರ್ಗವಾಗಿದೆ.
ನಮ್ಮ ಸನಾತನ ಧರ್ಮವಾದ ಋಗ್ವೇದದಲ್ಲಿ ಭಕ್ತಿಯ ಮಾರ್ಗ ಹೇಳಿದೆ. ಉಪನಿಷತ್‌ನಲ್ಲಿ ಜ್ಞಾನಮಾರ್ಗ ಹಾಗೂ ತಿಳಿವಳಿಕೆಯ ಮಹತ್ವ ಪಡೆದರೂ ಅನೇಕ ಕಡೆ ಸಾತ್ವಿಕ ಭಕ್ತಿಯ ಉಲ್ಲೇಖವನ್ನೂ ನಾವು ಕಾಣಬಹುದು. ಅಲ್ಲದೆ ನಾರದ ಭಕ್ತಿ ಸೂತ್ರ, ನಾರದ ಭಕ್ತಿ ರಸಾಯನ ಹಾಗೂ ಭಕ್ತಿ ರಸಾಮೃತ ಕೃತಿಗಳಲ್ಲಿ ಭಕ್ತಿಯೇ ಸಂಕೀರ್ತನೆಗೆ ಪ್ರಾಮುಖ್ಯತೆ ಕೊಟ್ಟಿದೆ.
ಶಂಕರಾಚಾರ್ಯರೂ ಭಕ್ತಿಮಾರ್ಗದಿಂದಲೇ ಅನೇಕ ಸ್ತೋತ್ರ, ಶ್ಲೋಕ ಭಜನೆಯನ್ನು ರಚಿಸಿದರು.
ಹಿರಿದಾದುದನ್ನು ಪೂರ್ಣ ಪ್ರಮಾಣದಲ್ಲಿ ಪ್ರೀತಿಸುವುದೇ ಭಕ್ತಿ. ಎಲ್ಲವನ್ನೂ ನಡೆಸುತ್ತಿರುವ ಶಕ್ತಿಯೇ ಬೇರೆ ಇದೆ. ತಾನು ಆ ಶಕ್ತಿಗಿಂತ ಬೇರೆ ಹಾಗೂ ಕಿರಿಯ ಎಂದು ಮಾನವ ಅಂದುಕೊಂಡಾಗ ಆ ಅದ್ಭುತ, ಅಗಮ್ಯ ಚೈತನ್ಯಕ್ಕೆ ನಮ್ಮನ್ನು ತಾವು ಅರ್ಪಿಸಿಕೊಂಡು ಪ್ರೀತಿಯಿಂದ, ಆರಾಧನೆ, ಪೂಜೆ, ಭಜನೆ ಮಾಡುವಂಥ ನೆಲೆಯೇ ಭಕ್ತಿ.
ಪುರಂದರರು ಆ ಶಕ್ತಿಯನ್ನೇ ಹರಿ ಎಂದರು. ವಿಧವಿಧವಾಗಿ ಭಗವಂತನ ಸ್ತುತಿಸಿ ಹಾಡುಗಳನ್ನು ಬರೆದಿದ್ದಾರೆ. ಅಲ್ಲದೆ, ಅವರ ಕೀರ್ತನೆಗಳು ಶರಣಾಗತಿಯ ಪರಿ, ದೇವರನ್ನು ಪ್ರೀತಿಸಿ ಬಾಳುವ ರೀತಿಯನ್ನು ತಿಳಿಸುತ್ತದೆ.
ಭಜನೆ ಎಂಬ ಪದಕ್ಕೆ ವಿಶೇಷ ಅರ್ಥವಿದೆ. 'ಭ' ಎಂದರೆ ಭಗವಂತ, 'ಜ' ಎಂದರೆ ಜನ್ಮಾಂತರ, 'ನೆ' ಎಂದರೆ ನೆನೆಯುವುದು. ಜನ್ಮಜನ್ಮಾಂತರಗಳಿಂದ ಮಾಡಿದ ಪಾಪವನ್ನು ಕಳೆಯಲು ಹಾಗೂ ದೇವರನ್ನು ಒಲಿಸಿಕೊಳ್ಳಲು ಭಗವಂತನನ್ನು ಪೂಜಿಸುವುದೇ ಭಜನೆ. ಎಂಥ ಪಾಪ ಮಾಡಿದ್ದರೂ ಭಗವಂತನ ನಾಮ ಸಂಕೀರ್ತನೆಯಿಂದ ಜೀವನದಲ್ಲಿ ನೆಮ್ಮದಿ, ಶಾಂತಿ ಸಿಗುತ್ತದೆ.
- ಪ್ರಕಾಶ್ ಬಾಬು