ಮಾತು ಮತ್ತು ಮಾತು
ಇಂದಿನ ಜಗತ್ತು ನಿಂತಿರುವುದೇ ಸಂವಹನ ಕಲೆಯ ಮೇಲೆ. ಈ ಕಲೆ ನಮ್ಮೊಳಗೇ ವಿಕಾಸ ಹೊಂದಿ, ನಮ್ಮನ್ನೇ ವಿಕಾಸದ ಹಾದಿಯತ್ತ ಕೊಂಡೊಯುತ್ತದೆ...
ಇಂದಿನ ಜಗತ್ತು ನಿಂತಿರುವುದೇ ಸಂವಹನ ಕಲೆಯ ಮೇಲೆ. ಈ ಕಲೆ ನಮ್ಮೊಳಗೇ ವಿಕಾಸ ಹೊಂದಿ, ನಮ್ಮನ್ನೇ ವಿಕಾಸದ ಹಾದಿಯತ್ತ ಕೊಂಡೊಯುತ್ತದೆ...
ಮಾನವ ಸಂಘಜೀವಿ. ಅವನಿಂದ ಒಬ್ಬನೇ ಜೀವನ ನಡೆಸಲು ಸಾಧ್ಯವಿಲ್ಲ, ಅವನು ತನ್ನ ಮನೆಯವರು, ಸಂಬಂಧಿಕರು, ಸಮಾಜ, ಬೇರೆ ರಾಜ್ಯದವರೊಂದಿಗೆ, ಬೇರೆ ಬೇರೆ ದೇಶದವರೊಂದಿಗೆ ಒಳ್ಳೆಯ ಸಂವಹನ ಇಟ್ಟುಕೊಂಡಾಗ ಮಾತ್ರ ಸುಖ ಜೀವನದೊಂದಿಗೆ ಉನ್ನತಿ ಹೊಂದಲು ಸಾಧ್ಯ.
ಸಂವಹನ ಎಂದರೇನು?
ಉತ್ತಮ ರೀತಿಯಲ್ಲಿ ಮನದಟ್ಟಾಗುವಂತೆ, ಅರ್ಥೈಸಿಕೊಳ್ಳುವಂತೆ ಮಾಹಿತಿ ತಿಳಿಸುವುದೇ ಸಂವಹನ ಕಲೆ. ನಾವು ಹೇಳುವ ವಿಚಾರಗಳು ಸ್ಪಷ್ಟವಾಗಿರಬೇಕು. ಪೂರ್ಣವಾಗಿದ್ದು, ಪ್ರಮುಖವಾದ ಅಂಶಗಳು ಮನದಟ್ಟಾಗಬೇಕು. ಇದುವೇ ಸಂವಹನ ಕಲೆ.
ಇದರಿಂದ ಏನು ಲಾಭ?
ಇಂದು ಜಗತ್ತು ನಿಂತಿರುವುದೇ ಸಂವಹನ ಕಲೆಯ ಮೇಲೆ. ಇದರಿಂದಾಗುವ ಕೆಲವು ಲಾಭಗಳ ಪಟ್ಟಿ ಇಲ್ಲಿದೆ...
1. ಗುರುತಿಸುವಿಕೆ: ನಾವು ಒಳ್ಳೆಯ ಸಂವಹನ ಕರಗತ ಮಾಡಿಕೊಂಡರೆ ಸಜ್ಜನರೊಂದಿಗೆ, ಒಳ್ಳೆಯ ಸಂಸ್ಥೆಯೊಂದಿಗೆ, ಒಳ್ಳೆಯ ವಿದ್ಯಾಸಂಸ್ಥೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳಬಹುದು. ಆಗ ಅಲ್ಲಿ ನಮ್ಮನ್ನು ಒಳ್ಳೆಯ ರೀತಿಯಲ್ಲಿ ಗುರುತಿಸುತ್ತಾರೆ. ಇಂಥವರ ಸಂಪರ್ಕದಿಂದ ನಮ್ಮ ಜ್ಞಾನವೃದ್ಧಿಯಾಗಿ, ವೈಯಕ್ತಿಕವಾಗಿ ನಾವೂ ಮೇಲೇರುತ್ತೇವೆ.
2. ಪ್ರಸಿದ್ಧಿ: ಯಾವುದೇ ವ್ಯಕ್ತಿ ಪ್ರಸಿದ್ಧಿಯಾಗಬೇಕಾದರೆ ಒಳ್ಳೆಯ ವ್ಯಕ್ತಿತ್ವ ಹೊಂದಿರಬೇಕು. ಅಂದರೆ ಚಾತುರ್ಯ, ಬುದ್ಧಿ, ವಿದ್ಯಾಭ್ಯಾಸ, ಚಾಣಾಕ್ಷತನ, ಧೈರ್ಯ, ಎಲ್ಲ ಗುಣಗಳಿರಬೇಕು. ಇಂಥ ಗುಣವುಳ್ಳ ವ್ಯಕಿಗಳೊಂದಿಗೆ ಸಂವಹನ ಇದ್ದಾಗ ನಮ್ಮಲ್ಲೂ ಗುಣಗಳು ಬಂದು ಅದನ್ನು ಬಿತ್ತರಿಸಿದಾಗ ನಾವು ಪ್ರಸಿದ್ಧಿ ಪಡೆಯುವುದರಲ್ಲಿ ಸಂಶಯವಿಲ್ಲ.
3. ಯೋಗ್ಯ ಗೆಳೆತನ: ಶಾಲಾ, ಕಾಲೇಜುಗಳಿಂದಲೇ ನಾವು ಜನರೊಂದಿಗೆ ಒಳ್ಳೆಯ ಸಂವಹನವನ್ನು ಇಟ್ಟುಕೊಂಡಾಗ, ಕಷ್ಟದಲ್ಲಿ ನೆರವಾದಾಗ, ಖುಷಿಯಲ್ಲಿ ಸಂತಸ ವ್ಯಕ್ತಪಡಿಸಿದಾಗ, ಸುತ್ತಮುತ್ತಲಿನ ಒಳ್ಳೆಯ ಜನರು ಹತ್ತಿರವಾಗುತ್ತಾರೆ. ಇದು ಜೀವನದುದ್ದಕ್ಕೂ ಗಟ್ಟಿ ಸ್ನೇಹಕ್ಕೆ ಕಾರಣವಾಗುತ್ತದೆ.
4. ನಾಯಕರಾಗಲು ದಾರಿ: ಯೋಗ್ಯ ನಾಯಕ ಆಗಬೇಕಾದರೆ ಅವನಲ್ಲಿ ಮುಖ್ಯವಾಗಿ ಜನಬಲ ಇರಬೇಕು. ಜ್ಞಾನ, ಸಾಹಸ ಪ್ರವೃತ್ತಿ, ಹಣ ಬಲ, ಕೆಲಸ ಮಾಡಿಸುವ ಸಾಮರ್ಥ್ಯ- ಹೀಗೆ ಎಲ್ಲ ಗುಣಗಳೂ ವೃದ್ಧಿಯಾಗಲು ಸಂವಹನವೇ ಕಾರಣವಾಗುತ್ತದೆ.
5. ಜ್ಞಾನದ ಬೆಳವಣಿಗೆ: 'ಕೋಶ ಓದು ದೇಶ ಸುತ್ತು' ಇದು ಹಿರಿಯರ ಮಾತು. ಆದರೆ ಕೋಶ ಓದಿದ ಮಾತ್ರಕ್ಕೆ ಜ್ಞಾನ ವೃದ್ಧಿ ಆಗದು. ಅದರಲ್ಲಿನ ವಿಷಯ ಬಳಸಿದಾಗ ಮಾತ್ರ ಪ್ರಯೋಜನಕ್ಕೆ ಬರುತ್ತದೆ. ಹಾಗೆಯೇ ಕೋಶ ಓದುವುದರ ಜೊತೆಗೆ ದೇಶ ಸುತ್ತುವುದು ಅಂದರೆ ಇಲ್ಲಿ ಹೊರ ಪ್ರಂಪಂಚದೊಂದಿಗೆ ಸಂಪರ್ಕ ಸಂವಹನವಿದ್ದಾಗ ನಮ್ಮ ಜ್ಞಾನವೂ ವೃದ್ಧಿಯಾಗುತ್ತದೆ.
6. ಹಣ ಸಂಪಾದನೆ: ಹಣ ಸಂಪಾದನೆ ಜೀವನದ ಪ್ರಧಾನ ಕರ್ತವ್ಯ. ಆದರೆ ಅದನ್ನು ಒಳ್ಳೆಯ ಮಾರ್ಗದಲ್ಲಿ ಸಂಪಾದಿಸಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಮಗೆ ಸರಿ ಹೊಂದುವ ಮಾರ್ಗವನ್ನು ಅನುಸರಿಸುತ್ತಾರೆ. ಆದರೆ ಆ ಮಾರ್ಗ ನಮಗೆ ಸೂಚಿಸಲು ಅಥವಾ ಆರಿಸಲು ಎಲ್ಲರ ಸಂಪರ್ಕ ಇರಲೇಬೇಕು. ಹಣ ಸಂಪಾದಿಸುವುದು ಹೇಗೆ ಎನ್ನುವ ವಿಷಯವನ್ನು ಒಳ್ಳೆಯ ಗೆಳೆಯ, ತಂದೆ, ಒಬ್ಬ ಒಳ್ಳೆಯ ಸಂಸ್ಥಾಪಕನ ಬಳಿ ಸಂವಹನ ಚೆನ್ನಾಗಿದ್ದರೆ ಖಂಡಿತ ನಾವು ಉನ್ನತಿ ಸಾಧಿಸುತ್ತೇವೆ.
7. ವ್ಯಕ್ತಿತ್ವ ವಿಕಸನ: ವ್ಯಕ್ತಿ ವಿಕಸನ ಹೊಂದಿದ್ದಾನೆ ಎಂದರೆ ಅವನಲ್ಲಿರುವ ಗುಣ ಆಗಿರಬಹುದು, ವ್ಯಾವಹಾರಿಕ ಜ್ಞಾನವಾಗಿರಬಹುದು. ಬುದ್ಧಿವಂತಿಕೆ, ಚಾಣಕ್ಷತನ, ಹಣ, ಸಂಪತ್ತನ್ನು ಗಳಿಸುವ ಕೌಶಲ್ಯವಾಗಿರಬಹುದು. ಇತರರೊಂದಿಗೆ ಸ್ನೇಹ ಆಗಿರಬಹುದು. ಹೀಗೆ ತನ್ನ ಎಲ್ಲ ಗುಣಗಳನ್ನು ಒಳ್ಳೆಯ ಸಂವಹನ ಕಲೆಯಿಂದ ಬೆಳೆಸುತ್ತಾ ಹೋಗುತ್ತಾನೆ. ಹೀಗೆಯೇ ವ್ಯಕ್ತಿತ್ವ ವಿಕಸನವಾಗುತ್ತದೆ.
8. ವೃತ್ತಿ: ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲೂ ನಾವು ಒಳ್ಳೆಯ ಸಂವಹನ ಕಲೆ ಹೊಂದಿದ್ದರೆ ಬಹು ಬೇಗ ನಮ್ಮ ಏಳಿಗೆ ಪಡೆಯುವುದರಲ್ಲಿ ಸಂದೇಹವಿಲ್ಲ. ನಮ್ಮಲ್ಲಿ ವಾಕ್ಚಾತುರ್ಯ, ಕೆಲಸಕ್ಕೆ ಬೇಕಾದ ಪೂರಕ ಮಾಹಿತಿ ಎಲ್ಲ ನಮ್ಮಲ್ಲಿದ್ದರೆ ನಮಗೆ ನಾವು ಇಷ್ಟಪಟ್ಟಲ್ಲಿ ನಮಗೆ ಕೆಲಸ ಸಿಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ವೃತ್ತಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಒಳ್ಳೆಯ ಸಂವಹನ ಕಲೆಯಿರಬೇಕು.
-ಕೃಷ್ಣ್ಣವೇಣಿ ಪ್ರಸಾದ್ ಮುಳಿಯ