ವೈದಿಕ ಮತ್ತು ವಾನಪ್ರಸ್ಥ
ವೈದಿಕ ಮೂಢ ಸಂಸ್ಕೃತಿ ಅಲ್ಲ. ವೈಜ್ಞಾನಿಕ ಹಾಗೂ ಕ್ರಮಬದ್ಧ ಸಂಸ್ಕೃತಿ. ಇಡೀ ಸೃಷ್ಟಿಯ, ಜೀವಕಣಗಳ ಹುಟ್ಟಿನ ಬಗೆಗೆ ವೈಜ್ಞಾನಿಕ ವಿವರಣೆ ನೀಡುವ ಸಶಕ್ತ ಸಂಸ್ಕೃತಿ.
ವೈದಿಕ ಮೂಢ ಸಂಸ್ಕೃತಿ ಅಲ್ಲ. ವೈಜ್ಞಾನಿಕ ಹಾಗೂ ಕ್ರಮಬದ್ಧ ಸಂಸ್ಕೃತಿ. ಇಡೀ ಸೃಷ್ಟಿಯ, ಜೀವಕಣಗಳ ಹುಟ್ಟಿನ ಬಗೆಗೆ ವೈಜ್ಞಾನಿಕ ವಿವರಣೆ ನೀಡುವ ಸಶಕ್ತ ಸಂಸ್ಕೃತಿ. ಅಷ್ಟೇಅಲ್ಲ, ವ್ಯಕ್ತಿ, ಸೃಷ್ಟಿ ರಹಸ್ಯಗಳು, ರೋಗಮುಕ್ತ ದೇಹದೊಳಗಿನ ಸುಪ್ತಜ್ಞಾನ ಎಲ್ಲವನ್ನೂ ವಿವರವಾಗಿ ತಿಳಿಸುವ ಸಂಸ್ಕೃತಿ ಇದು.
ಜಗತ್ತಿನಲ್ಲಿ ಸಾಧಕರ ಸಂಖ್ಯೆ ಕಡಿಮೆ. ಆದರೆ ಸಾಧಿಸೋ ಹಂಬಲ ಇರುವವರ ಸಂಖ್ಯೆ ಹೆಚ್ಚು. ಇದಕ್ಕೆ ಕಾರಣ ತುಂಬಾ ಸರಳ. ಯಶಸ್ವಿ ಸಾಧಕರಲ್ಲಿ ಒಂದು ಸಾಮಾನ್ಯ ಅಂಶ ಗಮನಿಸಬಹುದು. ಅದೇನೆಂದರೆ ಸಾಧಕರಿಗೆ ಒಬ್ಬ ಗುರು ಇದ್ದೇ ಇರುತ್ತಾನೆ. ಆ ಗುರು ಅಷ್ಟಾಂಗ ಯೋಗದ 5 ಯಮಗಳನ್ನು ಕರಗತ ಮಾಡಿಕೊಂಡಿರುವಂಥವನು, ದಾನ ಮತ್ತು ಸೇವೆಯಲ್ಲಿ ಸದಾ ತೊಡಗಿರುವವನು, ಜೀವನದಲ್ಲಿ ಯಾವ ವಿಷಯಗಳಿಗೆ ಪ್ರಾಶಸ್ತ್ಯ ಕೊಡಬೇಕೆಂದು ಅರಿತಿರುವವನು ಆಗಿರುತ್ತಾನೆ. ಈ ಮೂರು ಅಂಶಗಳು ನಾಲ್ಕು ಆಶ್ರಮದ (ಬ್ರಹ್ಮಚರ್ಯ, ಗೃಹಸ್ಥ್ತ, ವಾನಪ್ರಸ್ಥ ಮತ್ತು ಸನ್ಯಾಸ) ಒಂದು ಚೌಕಟ್ಟಿನಲ್ಲಿರುತ್ತದೆ. ಸೂಕ್ತ ಗುರುವಿನಿಂದ ಕಲಿತ ಯೋಗಾಭ್ಯಾಸಗಳು ಕ್ರಮಬದ್ಧವಾಗಿದ್ದರೆ ಈ ಆಶ್ರಮಗಳು ಒಂದರಿಂದ ಇನ್ನೊಂದಕ್ಕೆ ತಾನೇತಾನಾಗಿ ಸಕಾಲಕ್ಕೆ ಬದಲಾಗುತ್ತವೆ.
ಈಗ ಯೋಗ ಗುರುವೊಬ್ಬನ ವಾನಪ್ರಸ್ಥ ಆಶ್ರಮದ ಒಳನೋಟವನ್ನು ಕಿರಿದಾಗಿ ವಿವರಿಸುತ್ತೇನೆ. ವಾನಪ್ರಸ್ಥ ಸ್ಥಿತಿ ವೈರಾಗ್ಯ ಹುಟ್ಟುವ ಅವಧಿ ಎಂಬ ಭಾವವಿದೆ. ಆದರೆ ವೈರಾಗ್ಯ ಎಂಬುದೇ ಸುಳ್ಳು. ಇದೊಂದು ರೀತಿಯ ಹಡಗಿನಲ್ಲಿನ ಪಯಣ. ತೇಲುವ ಜೀವನ ಸ್ಥಿತಿ ಅಷ್ಟೇ. ದಡವೆಂಬುದು ದೂರವಿದ್ದು ನೀರಿನ ಮೇಲೆ ತೇಲುತ್ತಾ ದಡ ಸಿಕ್ಕರೂ ಸಿಗಬಹುದು ಅಲ್ಲಿಯವರೆಗೂ ನೀರಿನ ಮೇಲೆ ಜೀವನ ಎಂದು ಮನಸು ಗಟ್ಟಿಮಾಡಿಕೊಳ್ಳುವ ಸ್ಥಿತಿ. ವಾನಪ್ರಸ್ಥ ಎಂಬುದು ಪ್ರಾಪಂಚಿಕ ವಿಷಯಗಳ ಜೊತೆಗಿನ ಸಂಪರ್ಕವನ್ನು ಎಷ್ಟು ಬೇಕೋ ಅಷ್ಟಕ್ಕೇ ಸೀಮಿತಗೊಳಿಸಿಕೊಳ್ಳುವ ಜೀವನಶೈಲಿಯ ಆರಂಭಿಕ ಹಂತ. ಇಲ್ಲಿ ಯೋಗ ಸಾಧನೆಯ ಅಗತ್ಯ ಹೆಚ್ಚು.
ಬ್ರಹ್ಮಚರ್ಯದ ಸಮಯದಲ್ಲಿ ಒಟ್ಟು ಮಾಡಿಟ್ಟುಕೊಂಡ ಶಕ್ತಿ ಮತ್ತು ಗೃಹಸ್ಥಾಶ್ರಮದಲ್ಲಿ ಇಹಲೋಕದ ಬಗೆಗೆ ತುಂಬಿಕೊಂಡ ಅನುಭವ, ಇವೆಲ್ಲ ವಾನಪ್ರಸ್ಥದ ಪ್ರವೇಶಕ್ಕೆ ನಿಮ್ಮನ್ನು ಸಜ್ಜುಗೊಳಿಸುತ್ತದೆ. ಆದರೆ ಒಮ್ಮೆ ವಾನಪ್ರಸ್ಥ ಪ್ರವೇಶಿಸಿದರೆ ಹಿಂದಿನ ಎರಡು ಸ್ಥಿತಿಗಳನ್ನು ಪೂರ್ತಿಯಾಗಿ ಮರೆಮಾಡಿಕೊಂಡು ಬಿಡಬೇಕು. ಅದೇ ನಿಯಮ.
ಒಂದು ಕಥೆಯಿದೆ. ಋಷಿಯೊಬ್ಬ ಕುಟುಂಬ ತೊರೆದು ಹಿಮಾಲಯಕ್ಕೆ ಧ್ಯಾನಕ್ಕೆ ಹೋಗುತ್ತಾನೆ. ಅವನಿಗೆ ನಿತ್ಯ ಶಿವಲಿಂಗಕ್ಕೆ ಹಾಲೆರೆಯುವ ಅಭ್ಯಾಸ. ಹಿಮಾಲಯದಲ್ಲಿ ಸುತ್ತಮುತ್ತಲಿನವರು ಋಷಿಗೆ ಹಾಲು ಒದಗಿಸಿ ಪೂಜೆಗೆ ಸಹಕರಿಸುತ್ತಿರುತ್ತಾರೆ. ಒಂದು ದಿನ ಯಾರೂ ಹಾಲು ಒದಗಿಸದ ಕಾರಣ ನೀರಿನ ಅಭಿಷೇಕ ಮಾಡುತ್ತಾನೆ ಋಷಿ. ನೀರಿಂದಲೂ ಅಭಿಷೇಕ ನಡೆಯೋದನ್ನು ಗಮನಿಸಿದ ಹಳ್ಳಿಗರು, ತಮ್ಮ ಮರೆವನ್ನೇ ಅಭ್ಯಾಸ ಮಾಡಿಕೊಂಡರು. ಆಗ ಅದನ್ನು ತಡೆಗಟ್ಟಲು ಹಾಗೂ ಹಳ್ಳಿಗರ ಮೇಲಿನ ಅವಲಂಬನೆ ತ್ಯಜಸಲು ಋಷಿ ಆಶ್ರಮದಲ್ಲೇ ಹಸು ಕಟ್ಟುತ್ತಾನೆ. ಗ್ರಾಮಸ್ಥರ ಮಾತಿನಂತೆ ಹಸು ನೋಡಿಕೊಳ್ಳಲು ಒಬ್ಬ ಹೆಂಗಸನ್ನು ಕೆಲಸಕ್ಕೆ ಇಟ್ಟುಕೊಳ್ತಾನೆ. ಕೆಲವರ್ಷಗಳ ನಂತರ 'ಆ ಒಂಟಿ ಹೆಂಗಸಿಗೆ ಬಾಳು ಕೊಡಿ' ಎಂದು ಗ್ರಾಮಸ್ಥರು ಸಲಹೆ ನೀಡುತ್ತಾರೆ. ಋಷಿಗೂ ಹೌದು ಅನಿಸಿ ಆಕೆಯನ್ನು ಮದುವೆ ಆಗುತ್ತಾನೆ. ಅಲ್ಲಿಗೆ ಆತ ಸಾಧನೆಗೋಸ್ಕರ ಯಾವುದರಿಂದ ದೂರ ಬಂದಿದ್ದನೋ ಅದರೊಳಗೆ ಮತ್ತೆ ಬಂಧಿ ಆಗುತ್ತಾನೆ. ವಾನಪ್ರಸ್ಥ ಎಂಬುದು ಸನ್ಯಾಸ ಆಶ್ರಮಕ್ಕೆ ಪೂರ್ವತಯಾರಿ ಆಗಬೇಕೇ ಹೊರತು ಗೃಹಸ್ಥಾಶ್ರಮಕ್ಕೆ ವಾಪಸು ಕರೆದೊಯ್ಯುವಂತೆ ಆಗಕೂಡದು ಎಂಬುದಕ್ಕೆ ಇದು ಉದಾಹರಣೆ.
ಇಮೇಲ್: dhyan@dhyanfoundation.com
ಮೊಬೈಲ್: 7406175228.
-ಯೋಗಿ ಅಶ್ವಿನಿ