ಭಕ್ತಿ-ಭವಿಷ್ಯ

ನವವಿಧದ ತುಳಸಿ ದರ್ಶನದಿಂದ ಐಶ್ವರ್ಯ, ಆರೋಗ್ಯ ವೃದ್ಧಿ ಸಾಧ್ಯ

ಹಿಂದೂ ಧರ್ಮದ ಎಲ್ಲ ಸಂಪ್ರದಾಯಗಳು ವೃಂದಾವನವನ್ನು ಪವಿತ್ರ ಸ್ಥಳವೆಂದು ಪರಿಗಣಿಸುತ್ತವೆ. ನಮ್ಮ ದೇಶದಲ್ಲಿ ತುಳಸಿಯನ್ನು ಪೂಜಿಸುವ ಪರಿಪಾಠವೂ ಇದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನವಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ತಾಂಡವಾಡುತ್ತಾಳೆ ಹಾಗೂ ಅಲ್ಲಿ ದುಷ್ಟಶಕ್ತಿಗಳು

ನೆಲೆಸುವುದಿಲ್ಲ ಎಂಬ ನಂಬಿಕೆಯಿದೆ. ಯಾರು ತುಳಸಿಯನ್ನು ಶುದ್ಧತೆಯಿಂದ ಪ್ರತೀನಿತ್ಯ ಪೂಜಿಸುತ್ತಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಸೌಭಾಗ್ಯ ಲಭಿಸುತ್ತದೆ. ಜನ್ಮಾಂತರದವರೆಗೂ ಇರುವ ಪಾಪಗಳು ಪರಿಹಾರವಾಗುತ್ತದೆ ಮತ್ತು ಮನೆಯ ಅಂಗಳದಲ್ಲಿ ತುಳಸಿ ಬೆಳದಂತೆ ಆ ಮನೆಯ ಆರೋಗ್ಯ ಐಶ್ವರ್ಯ ವೃದ್ಧಿಸುತ್ತದೆ ಎಂಬು ನಂಬಿಕೆಯೂ ಜನರಲ್ಲಿದೆ.



ಸಂಪ್ರದಾಯದಂತೆ ಮನೆಯ ಹೆಂಗಸರು ಮುಂಜಾನೆ ಬೇಗನೇ ಎದ್ದು ಸ್ನಾನ ಮಾಡಿ, ಒಂದು ತಂಬಿಗೆ ನೀರು ತಂದು ತುಳಸಿ ಗಿಡಕ್ಕೆ ಹಾಕಿದ ನಂತರ ಪ್ರದಕ್ಷಿಣೆ ಮಾಡಿ ಬಂದು ದೇವರಿಗೆ ಪ್ರಾರ್ಥಿನೆ ಸಲ್ಲಿಸುತ್ತಾರೆ. ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿ ಬಳಸುತ್ತಾರೆ.

ನವವಿಧ ತುಳಸಿ ಪೂಜೆ ಮಾಡುವುದು, ನೋಡುವುದು, ಸ್ಪರ್ಶಿಸುವುದು, ಧ್ಯಾನಿಸುವುದು, ಗುಣಗಾನ ಮಾಡುವುದು, ನಮಿಸುವುದು, ಸ್ತುತಿಸುವುದು, ನೀರೆರೆಯುವುದು, ಗಿಡ ನೆಡುವುದರಿಂದ ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಮಾಯವಾಗುತ್ತವೆ. ನೆಮ್ಮದಿ,  ಐಶ್ವರ್ಯ, ಆರೋಗ್ಯ ವೃದ್ಧಿಸಿತ್ತದೆ ಎಂಬ ನಂಬಿಕೆಗಳು ನಮ್ಮ ಪುರಾಣಗಳಲ್ಲಿವೆ. ಗ್ರಹಣ ಕಾಲದಲ್ಲಿ ನೀರಿಗೆ ಒಂದು ತುಳಸಿ ಎಲೆ ಹಾಕಿಡಿ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಇದರ ಹಿಂದಿನ ಕಾರಣ ಏನೆಂದರೆ ಗ್ರಹಣದ ವೇಳೆ ಹುಟ್ಟಿಕೊಳ್ಳಬಹುದಾದ ಸೂಕ್ಷ್ಮ ರೋಗಾಣುಗಳು ಜನದಲ್ಲಿ ಜನಿಸದಿರಲಿ ಎಂಬುದುವುದು. ಇಂದಿಗೂ ಈ ನಂಬಿಕೆಗಳನ್ನು ಜನರು ಪಾಲಿಸುತ್ತಾರೆ.

ಇವಿಷ್ಟು ಜನರ ನಂಬಿಕೆಯಾದರೆ ಇನ್ನು ಮನೆಯಲ್ಲಿರುವ ವಾಸ್ತುದೋಷ ನಿವಾರಣೆಗೆ ಅದ್ಭುತ ಪರಿಹಾರ ತುಳಸಿ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲದೆ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತಿರುವ ತುಳಸಿ ನಮ್ಮೆಲ್ಲಾ ರೋಗಗಳಿಗೆ ಸಿದ್ಧೌಷಧವಾಗಿದೆ. ತುಳಸಿ ಬಹುಪಯೋಗಿ ಆರೋಗ್ಯ ಸಂಜೀವಿನಿ ಅಂತಲೂ ಕರೆಯಲಾಗುತ್ತದೆ.



ತುಳಸಿ ಹುಟ್ಟಿನ ಹಿನ್ನೆಲೆ...

ತುಳಸಿಯು ಜಲಂಧರ ಎನ್ನುವ ರಾಕ್ಷಸನ ಹೆಂಡತಿ. ಆಕೆ ಮಹಾ ಪತಿವ್ರತೆ. ಆಕೆಯ ಪಾತಿವ್ರತ್ಯದಿಂದ ಜಲಂಧರನು ಅಜೇಯನಾಗಿರುತ್ತಾನೆ. ಆದರೆ ಜಲಂಧರನು ಸಾಕ್ಷಾತ್ ಶಿವ ಮತ್ತು ಸಮುದ್ರದ ಸಂಯೋಗದಿಂದ ಹುಟ್ಟಿದವನು. ಆದರೆ ಆತ ಇದರ ಅರಿವಿಲ್ಲದೆ ಪಾರ್ವತಿಯ ಬಳಿ ಮೋಹಗೊಳ್ಲುತ್ತಾನೆ ಮತ್ತು ಶಿವನ

ಬಳಿ ಆಕೆಯನ್ನು ತನಗೆ ಒಪ್ಪಿಸುವಂತೆ ಹೇಳುತ್ತಾನೆ. ಆದರೆ ಶಿವ ಇದಕ್ಕೆ ನಿರಾಕರಿಸಿದಾಗ ಸಿಟ್ಟಿಗೆದ್ದ ಜಲಂಧರ ಶಿವನ ಮೇಲೆ ಯುದ್ಧಕ್ಕೆ ನಿಲ್ಲುತ್ತಾನೆ. ತುಳಸಿಯ ಪಾತಿವ್ರತ್ಯದಿಂದ ಶಿವನಿಗೆ ಆತನನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಆಗ ವಿಷ್ಣುವು ಜಲಂಧರನ ವೇಷದಲ್ಲಿ ಬಂದು ತುಳಸಿಯ ಪಾತಿವ್ರತ್ಯವನ್ನು ಭಂಗಗೊಳಿಸುತ್ತಾನೆ. ಆಗ ಶಿವ ಜಲಂಧರನನ್ನು ಕೊಲ್ಲುತ್ತಾನೆ.

ಈ ವಿಷಯ ತಿಳಿದ ತುಳಸಿಗೆ ತನಗಾದ ಮೋಸದ ಅರಿವಾಗಿ ಆಕೆ ಸಿಟ್ಟಿಗೆದ್ದು ವಿಷ್ಣುವಿಗೆ ಶಾಪ ನೀಡಲು ಸಿದ್ಧಳಾಗುತ್ತಾಳೆ. ವಿಷ್ಣುವು ಆಕೆಯನ್ನು ಸಮಾಧಾನಪಡಿಸಿ ಆಕೆಯ ಸಾವಿನ ನಂತರ ಆಕೆಯ ಗೋರಿಯ ಮೇಲೆ ಒಂದು ಗಿಡವು ಹುಟ್ಟುತ್ತದೆಯೆಂದೂ ಮತ್ತು ಆ ಗಿಡದ ಎಲೆಗಳಿಂದ ಮಾಡಿದ ಮಾಲೆಯು ತನಗೆ

ಪ್ರಿಯವಾಗುವುದೆಂದು ವರ ನೀಡುತ್ತಾನೆ. ಇದಾದ ಬಳಿಕ ತುಳಸಿ ರುಕ್ಮಿಣಿಯಾಗಿ ಜನ್ಮ ಪಡೆದು ಕಾರ್ತಿಕ ಶುದ್ಗ ದ್ವಾದಶಿಯಂದು ಕೃಷ್ಣನನ್ನು ಮದುವೆಯಾದಳೆಂದು ಪ್ರತೀತಿಯಿದೆ. ಇನ್ನೊಂದು ಪುರಾಣದ ಪ್ರಕಾರ ದೇವತೆಗಳೂ, ದಾನವರೂ ಕ್ಷೀರ ಸಾಗರವನ್ನು ಕಡೆದಾಗ ಕೊನೆಯಲ್ಲಿ ಅಮೃತಕಲಶ ಬಂತು. ಅದನ್ನು

ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ಹೋಲಿಕೆ ಇಲ್ಲವಾದ್ದರಿಂದ ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ತುಳಸಿಯನ್ನೂ ವಿಷ್ಮುವು ವಿವಾಹವಾದನು ಎಂಬ ಪ್ರತೀತಿ ಇದೆ.



ತುಳಸಿಯ ಮಹಿಮೆ...

  • ಮನೆ ಮುಂದೆ ತುಳಸಿ ಗಿಡ ನೆಡುವುದರ ಹಿಂದೆ ದೈವಿಕ ಭಾವನೆ ಮಾತ್ರವೇ ಇಲ್ಲ. ತುಳಸಿಯ ಪ್ತತಿಯೊಂದು ಭಾಗದಲ್ಲೂ ಅಂದರೆ ಎಲೆ, ಬೀಜ, ಕಾಂಡ  ಹೀಗೆ ಪ್ರತಿಯೊಂದು ಭಾಗದಲ್ಲಿಯೂ ಔಷಧೀಯ ಗುಣಗಳಿವೆ. ಕ್ರಿಮಿಕೀಟಗಳನ್ನು ಓಡಿಸುವ ಸಾಮರ್ಥ್ಯವೂ ತುಳಸಿಗಿದೆ.
  • ಕೃಷ್ಣ ತುಳಸಿ, ಶ್ವೇತ ತುಳಸಿ, ಕರ್ಪೂರ ತುಳಸಿ ಎಂಬ ಮೊದಲಾದ ಪ್ರಭೇದಗಳಿವೆ.ಪ್ರತಿಯೊಂದು ತುಳಸಿಯೂ ಒಂದು ರೀತಿಯ ಔಷಧೀಯ ಗುಣಗಳನ್ನು ಹೊಂದಿರುತ್ತದೆ.
  • ತುಳಸಿಯನ್ನು ಶೀತ, ಅಜೀರ್ಣ, ತಲೆನೋವು ಮತ್ತು ಹೃದಯ ಸಂಬಂಧದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಶರೀರದಲ್ಲಿರುವ ಹಲವು ವಿಷಕ್ರಿಮಿಗಳನ್ನು ಇವು ನಾಶಮಾಡುತ್ತದೆ.
  • ತುಳಸಿಯಲ್ಲಿ ಒತ್ತಡಗಳನ್ನು ನಿವಾರಿಸುವ ಶಕ್ತಿಯಿದ್ದು, ಇದನ್ನು ಹಸಿಯಾಗಿ ಅಥವಾ ಒಣಗಿಸಿ ಪುಡಿ ಮಾಡಿದ ರೂಪದಲ್ಲಿ ಪಾನೀಯ ರೂಪದಲ್ಲಿ ಕುಡಿಯಲಾಗುತ್ತದೆ.
  • ಹಂದಿಜ್ವರಕ್ಕೆ ತುಳಸಿ ರಾಮಬಾಣವಾಗಿದ್ದು ಹೆಚ್1 ಎನ್1 ರೋಗಾಣುಗಳು ಶರೀರಕ್ಕೆ ಪ್ರವೇಶಿಸದಂತೆ ರಕ್ಷಿಸುತ್ತದೆಯಂತೆ
  • ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಸುತ್ತದೆ. ಆರೋಗ್ಯದ ದೃಷ್ಟಿಕೋನದಿಂದ ಪ್ರತಿದಿನ 7 ರಿಂದ 8 ತುಳಸಿ ಎಲೆಗಳನ್ನು ತಿನ್ನುವುದರಿಂದ ಉತ್ತಮ ಆರೋಗ್ಯ ಪಡೆಯಬಹುದು ಮತ್ತು ಬಾಯಿಯಲ್ಲಿರುವ ದುರ್ಗಂಧವನ್ನು ಕೂಡಾ ನಿವಾರಣೆಮಾಡಿಕೊಳ್ಳಬಹುದು. 
-ಮಂಜುಳ.ವಿ.ಎನ್
SCROLL FOR NEXT