ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದ್ದು, ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯನ್ನು ವಿಶೇಷ ಮಹತ್ವ ನೀಡಲಾಗಿರುವ ಗುರು ಪರಂಪರೆಯನ್ನು ಸ್ಮರಿಸಿ ಪೂಜಿಸುವ ದಿನವನ್ನಾಗಿ ಆಚರಿಸಲಾಗುತ್ತದೆ.
ವೇದಗಳನ್ನು ವಿಂಗಡಿಸಿ ಮಾನವ ಕುಲದ ಉದ್ಧರಿಸುವುದಕ್ಕಾಗಿ ಸಾಕ್ಷಾತ್ ವಿಷ್ಣುವೇ ವ್ಯಾಸರ ರೂಪದಲ್ಲಿ ಅವತರಿಸುತ್ತಾನೆ, ವೇದಗಳನ್ನು ವಿಂಗಡಿಸಿದ ಕಾರಣದಿಂದ ವ್ಯಾಸರಿಗೆ ವೇದ ವ್ಯಾಸ ಎಂಬ ಹೆಸರು ಬಂದಿದ್ದು, ವೇದವ್ಯಾಸರು ಅವತರಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನೇ ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯೆಂದು ಆಚರಿಸಲಾಗುತ್ತದೆ. ಈ ಬಾರಿ ಜು.19 ರಂದು ವ್ಯಾಸ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ವೇದ, ಪುರಾಣ, ಶಾಸ್ತ್ರಾದಿಗಳೆಲ್ಲವೂ ಓರ್ವ ವ್ಯಕ್ತಿಗೆ ಗುರುವಿನ ಮಾರ್ಗದರ್ಶನ ಹಾಗೂ ಅಗತ್ಯತೆಯನ್ನು ಸ್ಪಷ್ಟವಾಗಿ ತಿಳಿಸಿದ್ದು ಗುರುವಿನ ಮಹಿಮೆಯನ್ನು ಕೊಂಡಾಡಿವೆ. ಭಾರತದಲ್ಲಿ ಈ ವರೆಗೂ ಅದೆಷ್ಟೋ ಗುರುಗಳು ಆಗಿಹೋಗಿದ್ದಾರೆ. ಆದರೆ ವ್ಯಾಸ ಪೂರ್ಣಿಮೆಯಂದೇ ಗುರುವನ್ನು ಆರಾಧಿಸಲು ಮುಖ್ಯ ಕಾರಣವೇನೆಂದರೆ 'ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣವೇ, ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ' ಎಂದು ಹೇಳಿರುವಂತೆ ವ್ಯಾಸರು ವೇದಗಳನ್ನು ನೀಡಿದ ಸಾಕ್ಷಾತ್ ವಿಷ್ಣುವಿನ ಅವತಾರವಾಗಿರುವುದರಿಂದ ವ್ಯಾಸ ಪೂರ್ಣಿಮೆಯ ದಿನದಂದೇ ಗುರುವನ್ನು ಪೂಜಿಸಲಾಗುತ್ತದೆ.
ಆಷಾಢ ಹುಣ್ಣಿಮೆಯಂದು ವ್ಯಾಸಪೂಜೆ ಮಾಡುವ ಮೂಲಕ ಸನ್ಯಾಸಿಗಳು(ಯತಿಗಳು) ಚಾತುರ್ವಸ್ಯವ್ರತದ ಸಂಕಲ್ಪ ಮಾಡು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯ ಮತ್ತೊಂದು ವಿಶೇಷ. ಪರಿವ್ರಾಜಕರಾಗಿರುವ ಸನ್ಯಾಸಿಗಳು ಒಂದು ಪಕ್ಷವನ್ನು ಒಂದು ಮಾಸದಂತೆ ಗಣಿಸಿ ಒಟ್ಟು ಎರಡು ತಿಂಗಳುಗಳಲ್ಲಿ ಚಾತುರ್ವಸ್ಯವನ್ನು ಪೂರೈಸುವ ಪರಿಪಾಠ ಇದೆ. ಚಾತುರ್ಮಾಸ್ಯಕ್ಕೆ ಸಂಕಲ್ಪಿದ ದಿನದಿಂದ ಸನ್ಯಾಸಿಗಳು ಎರಡು ತಿಂಗಳ ಕಾಲ(ಅಧಿಕ ಮಾಸ ಬಂದಲ್ಲಿ ಮೂರು ತಿಂಗಳು) ತನಕ ಸಂಚಾರ ಕೈಗೂಳ್ಳದೆ; ವ್ರತ ಕೈಗೊಂಡ ಕ್ಷೇತ್ರದ ವ್ಯಾಪ್ತಿಯಲ್ಲೇ ವ್ರತಕಾಲವನ್ನು ಕಳೆಯುತ್ತಾರೆ. ವ್ರತಸಮಾಪ್ತಿಯ ಬಳಿಕ ಸೀಮೋಲ್ಲಂಘನ ಮಾಡಿ ಮತ್ತೆ ಸಂಚಾರ ಪ್ರಾರಂಭ ಮಾಡುತ್ತಾರೆ.
ವ್ಯಾಸ ಪೂಜೆ ಅಂಗವಾಗಿ ನಡೆಸಲಾಗುವ ಗುರುಪೂಜೆ ವೇಳೆ ಪ್ರತಿ ಗುಂಪಿನಲ್ಲೂ 5(ಪಂಚಕ) ಆಚಾರ್ಯಾರನ್ನೊಳಗೊಂಡ 3 ಗುಂಪಿಗೆ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ಪೂಜೆ ಕೃಷ್ಣ ಪಂಚಕ ಇಲ್ಲಿ ಶ್ರೀ ಕೃಷ್ಣನನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಕೃಷ್ಣನ ಸುತ್ತ ಸನಕ, ಸನಂದನ, ಸನತ್ ಕುಮಾರ, ಸನತ್ ಸುಜಾತರುಗಳನ್ನು ಅನುಕ್ರಮವಾಗಿ ಪೂರ್ವ, ದಕ್ಷಿಣ ಪಶ್ಚಿಮ ಹಾಗೂ ಉತ್ತರಕ್ಕೆ ಪ್ರತಿಷ್ಠಾಪಿಸಿ ಕೃಷ್ಣ ಅಷ್ಟೋತ್ತರ ಅರ್ಚನೆ ಮೂಲಕ ಪೂಜೆ ಸಲ್ಲಿಸಲಾಗುತ್ತೆ.
ಇನ್ನು ಎರಡನೇ ಹಂತದಲ್ಲಿ ವ್ಯಾಸ ಪಂಚಕಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿ ವೇದ ವ್ಯಾಸರನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಅವರ ನಾಲ್ವರು ಶಿಷ್ಯರಾದ ಸುಮಂತು, ಜೈಮಿನಿ, ವೈಶಂಪಾಯನ, ಪೈಲ ಮಹರ್ಷಿಗಳನ್ನು ಅನುಕ್ರಮವಾಗಿ ವ್ಯಾಸರ ಪೂರ್ವ ದಕ್ಷಿಣ, ಪಶ್ಚಿಮ ಹಾಗೂ ಉತ್ತರಕ್ಕೆ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.
ಮೂರನೇ ಹಾಗೂ ಕೊನೆಯ ಹಂತದಲ್ಲಿ ಅದ್ವೈತ ಸಿದ್ಧಾಂತದ ಯತಿಗಳು ಶಂಕರಾಚಾರ್ಯ ಪಂಚಕಕ್ಕೆ ಪೂಜೆ ಸಲ್ಲಿಸುತ್ತಾರೆ. ( ಅದ್ವೈತ ಸಿದ್ಧಾಂತದ ಹೊರತಾಗಿರುವ ಮಠಗಳಲ್ಲಿ ಆಯಾ ಮಠದ ಸಂಪ್ರದಾಯ ಪಾಲಿಸಲಾಗುತ್ತದೆ) ಇಲ್ಲಿ ಆದಿ ಶಂಕರಾಚಾರ್ಯರನ್ನು ಮಧ್ಯಭಾಗದಲ್ಲಿ ಪ್ರತಿಷ್ಠಾಪಿಸಿ ಶಂಕರರ ನಾಲ್ವರು ಶಿಷ್ಯರಾದ ಪದ್ಮಪಾದಾಚಾರ್ಯ, ಸುರೇಶ್ವರಾಚಾರ್ಯ, ಹಸ್ತಾಮಲಕಾಚಾರ್ಯ ಹಾಗೂ ತೋಟಕಾಚಾರ್ಯರನ್ನು ನಾಲ್ಕೂ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸದಾಶಿವ, ವೇದವ್ಯಾಸರಿಂದ ಪ್ರಾರಂಭವಾಗಿ ಆಯಾ ಮಠಗಳ ಗುರು ಪರಂಪರೆಗೂ ಸಹ ಪೂಜೆ ಸಲ್ಲಿಸಿ, ಅಲ್ಲಿನ ಪೀಠಾಧಿಪತಿಗಳು, ಯತಿಗಳು ಚಾತುರ್ಮಾಸ್ಯ ವ್ರತ ಸಂಕಲ್ಪ ಕೈಗೊಳ್ಳುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos