ಭಕ್ತಿ-ಭವಿಷ್ಯ

ಮಹಾಲಯ ಅಮಾವಾಸ್ಯೆ: ಪಿತೃಗಳಿಗೆ ತರ್ಪಣ ನೀಡುವ ದಿನ 

Sumana Upadhyaya

ಮಹಾಲಯ ಅಮಾವಾಸ್ಯೆಯನ್ನು ಇಂದು ಅಕ್ಟೋಬರ್ 6ರಂದು ದೇಶದ ವಿವಿಧ ಭಾಗಗಳಲ್ಲಿ ಆಚರಿಸಲಾಗುತ್ತಿದೆ. ಮಹಾಲಯ ಪಿತೃಪಕ್ಷ ಶ್ರಾದ್ಧದ ಕೊನೆಯ ದಿನವಾಗಿದೆ ಮತ್ತು ದುರ್ಗಾಪೂಜೆ, ದಸರಾ ಹಬ್ಬದ ಆರಂಭಕ್ಕೆ ಮುನ್ನುಡಿಯಾಗಿದೆ. ದುರ್ಗಾದೇವಿಯು ಮಹಿಷಾಸುರ ರಾಕ್ಷಸನನ್ನು ಸೋಲಿಸಿದ ದಿನವೆಂದು ಮಹಾಲಯವನ್ನು ಪರಿಗಣಿಸಲಾಗಿದೆ.

ಈ ದಿನ, ಪೂರ್ಣಿಮಾ ತಿಥಿ, ಚತುರ್ದಶಿ ತಿಥಿ ಮತ್ತು ಅಮಾವಾಸ್ಯ ತಿಥಿಯಂದು ಕೊನೆಯುಸಿರೆಳೆದವರಿಗೆ ಶ್ರಾದ್ಧ ಮತ್ತು ತರ್ಪಣ ಆಚರಣೆಗಳನ್ನು ಮಾಡಲಾಗುತ್ತದೆ.

ಮಹಾಲಯ ಅಮಾವಾಸ್ಯೆಯು ಪಿತೃ ಪಕ್ಷ ಅವಧಿಯ ಮುಕ್ತಾಯವನ್ನು ಮತ್ತು ದೇವಿ ಪಕ್ಷದ ಅಂದರೆ ನವರಾತ್ರಿಯ ಆರಂಭದ ಹಿಂದಿನ ದಿನವಾಗಿರುತ್ತದೆ. ಮಹಾಲಯ ಅಮಾವಾಸ್ಯೆಯಿಂದ ತೊಡಗಿ ಕೆಲವು ಭಕ್ತರು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ, ನವದುರ್ಗೆಯನ್ನು ಪೂಜಿಸುತ್ತಾರೆ. 

ಈ ದಿನ, ದುರ್ಗಾ ದೇವಿಯು ತನ್ನ ಸ್ವರ್ಗ ನಿವಾಸ ಅಥವಾ ಕೈಲಾಸದಿಂದ ಪಲ್ಲಕಿ, ದೋಣಿ, ಆನೆ ಅಥವಾ ಕುದುರೆಯ ಮೇಲೆ ಭೂಮಿಗೆ ಇಳಿಯುತ್ತಾಳೆ ಎಂದು ಭಕ್ತರು ನಂಬುತ್ತಾರೆ, ಹೀಗಾಗಿ ಮಹಾಲಯ ಅಮಾವಾಸ್ಯೆಯ ನಂತರ ದುರ್ಗಾ ಪೂಜೆಯ ಆಚರಣೆಗಳು ನಡೆಯುತ್ತದೆ. 

ಒಂದರ್ಥದಲ್ಲಿ ಮಹಾಲಯ ಅಮವಾಸ್ಯೆ ದುರ್ಗಾ ಪೂಜೆಯ ಆರಂಭಕ್ಕೆ ಬಾಗಿಲು ತೆರೆಯುವ ದಿನವಾಗಿದೆ. ದುರ್ಗೆಯನ್ನು ಆರಾಧಿಸುವ ಬಂಗಾಳಿಯರು ಬೆಳಗ್ಗೆಯೇ ಎದ್ದು ಸ್ನಾನಾದಿಗಳನ್ನು ಮಾಡಿ ಮಹಿಷಾಸುರ ಮರ್ದಿನಿಯ ಶ್ಲೋಕ, ಮಂತ್ರಗಳನ್ನು ಪಠಿಸುತ್ತಾರೆ.

ಮಹಾಲಯ ಅಮವಾಸ್ಯೆ ಆಚರಣೆ: ಈ ದಿನದ ಪ್ರಮುಖ ಆಚರಣೆ ಎಂದರೆ ಕುಟುಂಬದಲ್ಲಿ ಅಗಲಿದ ಆತ್ಮವನ್ನು ಸ್ಮರಿಸಲು ತರ್ಪಣ ನೀಡುವುದು. ತಮ್ಮ ಪೂರ್ವಜರ ಉದ್ಧಾರಕ್ಕಾಗಿ ಮುಂಜಾನೆಯೇ ಅನೇಕ ಜನರು ಪಿತೃ ತರ್ಪಣವನ್ನು ನೀಡುತ್ತಾರೆ. ಈ ದಿನ ದುರ್ಗೆ ಮಾತೆಯನ್ನು ಜನರು ಮಂತ್ರಗಳನ್ನು ಪಠಿಸುವ ಮೂಲಕ ಭೂಮಿಗೆ ಇಳಿಯುವಂತೆ ಆಹ್ವಾನಿಸುತ್ತಾರೆ. ಈ ದಿನವು 'ದೇವಿ-ಪಕ್ಷ'ದ ಆರಂಭ ಮತ್ತು' ಪಿತೃ-ಪಕ್ಷ'ದ ಅಂತ್ಯವನ್ನು ಸೂಚಿಸುತ್ತದೆ, ಹಿಂದೂ ಧರ್ಮೀಯರು ತಮ್ಮ ಪೂರ್ವಜರಿಗೆ ಗೌರವ ಸಲ್ಲಿಸಿ ತಮ್ಮ ಜೀವನಕ್ಕೆ ಹಿರಿಯರು ನೀಡಿದ ಕೊಡುಗೆಗೆ ಕೃತಜ್ಞತೆ ಸಲ್ಲಿಸುತ್ತಾರೆ. 

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಹಾಲಯ ಅಮಾವಸ್ಯೆಯ ಅಂಗವಾಗಿ ತಮ್ಮ ಪೂರ್ವಜರಿಗೆ ತಿಲ ತರ್ಪಣ ನೀಡಿ, ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ.

SCROLL FOR NEXT