ದೇವವ್ರತ ಮಹೇಶ್ ರೇಖೆ ಐತಿಹಾಸಿಕ ಸಾಧನೆಗೆ ಶೃಂಗೇರಿ ಮಠದಿಂದ ಸನ್ಮಾನ online desk
ಭಕ್ತಿ-ಜ್ಯೋತಿಷ್ಯ

ದಂಡಕ್ರಮ ಪಾರಾಯಣ: ದೇವವ್ರತ ಮಹೇಶ್ ರೇಖೆ ಐತಿಹಾಸಿಕ ಸಾಧನೆಗೆ ಶೃಂಗೇರಿ ಮಠದ ನೆರವು; ಸನ್ಮಾನ

ಮಹಾರಾಷ್ಟ್ರ ಮೂಲದ ದೇವವ್ರತ ಮಹೇಶ್ ರೇಖೆ ಅವರ ಸಾಧನೆಗೆ ಕರ್ನಾಟಕದಲ್ಲಿರುವ ಶೃಂಗೇರಿ ಶಾರದಾ ಪೀಠ ಬೆನ್ನೆಲುಬಾಗಿ ನಿಂತಿದ್ದು, ಶೃಂಗೇರಿ ಶ್ರೀಗಳಿಂದ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.

ಶುಕ್ಲ ಯಜುರ್ವೇದದ ದಂಡಕ್ರಮ ಪಾರಾಯಣ ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಕಾಶಿಯ ಯುವ ವೇದ ವಿದ್ವಾಂಸ ವೇದಮೂರ್ತಿ ದೇವವ್ರತ ಮಹೇಶ್ ರೇಖೆ ಅವರ ಸಾಧನೆಗೆ ಪ್ರಧಾನಿ ಆದಿಯಾಗಿ ದೇಶಾದ್ಯಂತ ಮೆಚ್ಚುಗೆ, ಅಭಿನಂದನೆಗಳು ವ್ಯಕ್ತವಾಗತೊಡಗಿವೆ.

ಮಹಾರಾಷ್ಟ್ರ ಮೂಲದ ದೇವವ್ರತ ಮಹೇಶ್ ರೇಖೆ ಅವರ ಸಾಧನೆಗೆ ಕರ್ನಾಟಕದಲ್ಲಿರುವ ಶೃಂಗೇರಿ ಶಾರದಾ ಪೀಠ ಬೆನ್ನೆಲುಬಾಗಿ ನಿಂತಿದ್ದು, ಶೃಂಗೇರಿ ಶ್ರೀಗಳಿಂದ ಆಶೀರ್ವಾದ ಪೂರ್ವಕ ಪುರಸ್ಕಾರ ನೀಡಿ ಯುವ ವಿದ್ವಾಂಸರಿಗೆ ಸನ್ಮಾನ ಮಾಡಲಾಗಿದೆ.

ಸನ್ಮಾನ ಸಮಾರಂಭದ ಭಾಗವಾಗಿ ಕಾಶಿಯಲ್ಲಿ ರಥಯಾತ್ರೆ ಕ್ರಾಸಿಂಗ್‌ನಿಂದ ಮಹಮೂರ್‌ಗಂಜ್‌ವರೆಗೆ ಸಂಗೀತ ವಾದ್ಯಗಳು, ಶಂಖಧ್ವನಿ ಮತ್ತು 500 ಕ್ಕೂ ಹೆಚ್ಚು ವೈದಿಕ ವಿದ್ಯಾರ್ಥಿಗಳನ್ನು ಒಳಗೊಂಡ ಭವ್ಯ ಮೆರವಣಿಗೆ ನಡೆದಿದೆ.

ಕಾಶಿಯ ಶೃಂಗೇರಿ ಶಂಕರ ಮಠದಲ್ಲಿ ಶೃಂಗೇರಿ ಜಗದ್ಗುರುಗಳ ಪ್ರತಿನಿಧಿಗಳಾದ ಆಸ್ಥಾನ ವಿದ್ವಾಂಸರೂ ಆದ ಡಾ.ತಂಗಿರಾಲ ಶಿವಕುಮಾರ ಶರ್ಮ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಮಹೇಶ್ ರೇಖೆ ಅವರಿಗೆ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದಿಂದ ವಿಶೇಷ ಆಶೀರ್ವಾದದ ಸಂದೇಶವನ್ನು ರವಾನಿಸಲಾಯಿತು. ಇದೇ ವೇಳೆ ಶ್ರೀಮಠದಿಂದ 5 ಲಕ್ಷ ರೂಪಾಯಿ ಮೌಲ್ಯದ ಸುವರ್ಣ ಕಂಕಣ ಹಾಗೂ ₹1,11,116 ನೀಡಿ ಸನ್ಮಾನಿಸಲಾಗಿದೆ.

ಯುವ ವೈದಿಕ ದೇವವ್ರತ ನಿರಂತರ 50 ದಿನಗಳ ಕಾಲ ಪುಸ್ತಕದ ಸಹಾಯವಿಲ್ಲದೇ, ಕೇವಲ ಸ್ಮರಣಶಕ್ತಿಯಿಂದ (ಕಂಠಸ್ಥ) ಶುಕ್ಲ ಯಜುರ್ವೇದದ ಮಾಧ್ಯಂದಿನ ಶಾಖೆಯ 2,000 ಮಂತ್ರಗಳ ದಂಡ ಕ್ರಮ ಪಾರಾಯಣವನ್ನು ಕಾಶಿಯ ವಿದ್ವತ್ ವರ್ಗದ ಮುಂದೆ ಮಾಡಿ ಯಶಸ್ವಿಯಾಗಿದ್ದಾರೆ. 200 ವರ್ಷಗಳ ನಂತರ ವಿದ್ವಾಂಸರೊಬ್ಬರು ಮಾಡಿರುವ ಸಾಧನೆ ಇದಾಗಿದೆ.

ದಂಡಕ್ರಮವನ್ನು ಇತಿಹಾಸದಲ್ಲಿ ಕೇವಲ ಮೂರು ಬಾರಿ ಮಾತ್ರ ಪ್ರದರ್ಶಿಸಲಾಗಿದೆ. ದೇವವ್ರತ ಅವರ ಪಠಣ ದೋಷರಹಿತವಾಗಿದ್ದು ಮತ್ತು ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿರುವುದು ಐತಿಹಾಸಿಕ ಸಾಧನೆಯಾಗಿದೆ.

ವಲ್ಲಭಾರಂ ಶಾಲಿಗ್ರಾಮ ಸಂಗವೇದ ವಿದ್ಯಾಲಯದಲ್ಲಿ ಅಕ್ಟೋಬರ್ 2 ರಿಂದ ನವೆಂಬರ್ 30 ರವರೆಗೆ ನಡೆದ ಪಾರಾಯಣವನ್ನು ಕಾಶಿಯ ಹಲವಾರು ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಬೆಂಬಲಿಸಿದವು. ಸಂತರು, ವೇದ ವಿದ್ವಾಂಸರು ಮತ್ತು ಗಣ್ಯರು ಯುವ ವಿದ್ವಾಂಸ ಮತ್ತು ದೇವವ್ರತ ಅವರ ತಂದೆ ಮತ್ತು ಶಿಕ್ಷಕರೂ ಆಗಿರುವ ಮಹೇಶ್ ಚಂದ್ರಕಾಂತ್ ರೇಖೆ (ಪೀಠದ ವೇದಪೋಷಕ ಸಭೆ ನಡೆಸುವ ಶುಕ್ಲ ಯಜುರ್ವೇದ ಮಧ್ಯಂದಿನ ಶಾಖಾ ಪರೀಕ್ಷೆಗಳ ಮುಖ್ಯ ಪರೀಕ್ಷಕರು) ಅವರನ್ನು ಶ್ಲಾಘಿಸಿದರು.

ದಂಡಕ್ರಮ ಪಾರಾಯಣ ಎಂದರೇನು? ಕಠಿಣ ಏಕೆ?

ವೇದಗಳಲ್ಲಿ ಸಂಹಿತಾಪದ ಪ್ರಕೃತಿ ಎಂಬ ಸೂತ್ರದಿಂದ ಸಂಹಿತಾ ಹಾಗು ಪದಪಾಠಗಳು ಪ್ರಕೃತಿ ಪಾಠಗಳು ಎಂಬುದಿವೆ. ಸಂಹಿತಾ‌ಭಾಗವನ್ನು ಅದಿರುವಂತೆಯೇ ಪಠಿಸುವುದು ಪ್ರಕೃತಿಪಾಠವಾಗಿದೆ. ಸಂಹಿತಾಭಾಗದ ಪದಗಳನ್ನು ಬೇರೆ ಬೇರೆ ಕ್ರಮದಲ್ಲಿ ಮರುಜೋಡಿಸಿ ಪಠಿಸುವುದು ವಿಕೃತಿಪಾಠ

ಈ ಪಾಠಗಳನ್ನು ಯಥಾವತ್ತಾಗಿ, ಸ್ವರಗಳ ವ್ಯತ್ಯಾಸವಾಗದೆ, ಅಕ್ಷರ ವ್ಯತ್ಯಾಸವಾಗದೇ ವೇದಗಳ ಉಚ್ಚಾರಣೆ ಮಾಡುವಾಗ ಎಲ್ಲಿಯೂ ಯಾವುದೇ ಲೋಪದೋಷಗಳಾಗದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಅಭ್ಯಾಸ ಕ್ರಮಕ್ಕಾಗಿ 8 ವಿಕೃತಿಪಾಠಗಳನ್ನು ಅನುಸರಿಸಲಾಗುತ್ತದೆ.

ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ, ಘನ ಎಂಬುದು 8 ವಿಕೃತಿಪಾಠಗಳಾಗಿವೆ.

ಸಂಹಿತಾ ಮಂತ್ರಗಳ ಪದಚ್ಛೇದವಾಗಿರುವ ಪದಗಳನ್ನು ಈ ಮೇಲೆ ಉಲ್ಲೇಖಿಸಿದ 8 ವಿಧಾನಗಳಲ್ಲಿ ಅಭ್ಯಸಿಸಲಾಗುತ್ತದೆ. ಹಾಗು ಇವುಗಳಿಗೆ ಅದರದ್ದೇ ಆದ ಕಠಿಣ ವಿಧಿವತ್ತಾದ ಅಭ್ಯಾಸ ಕ್ರಮಗಳನ್ನು ವಿಧಿಸಲಾಗಿದೆ. ಈಗ ದೇವವ್ರತ ಘನಪಾಠಿಗಳು ಪಾರಾಯಣ ಮಾಡಿರುವುದು 6ನೆಯದ್ದಾದ ದಂಡ ಎಂಬ ವಿಕೃತಿಯನ್ನು, ಅದರ ಉದಾಹರಣೆ ಹೀಗಿದೆ. ಅದರಲ್ಲಿ ನಿರ್ದಿಷ್ಟ ಮಂತ್ರಗಳ ಪದಚ್ಛೇದವನ್ನು ಈ ಕ್ರಮವಾಗಿ ಪಠಿಸಲಾಗುತ್ತದೆ.

  • 1 2 - A B

  • 2 1 - B A

  • 1 2 2 3 - A B B C

  • 3 2 1 - C B A

  • 1 2 2 3 3 4 - A B B C C D

  • 4 3 2 1 - C D B A

  • 1 2 2 3 3 4 4 5 - A B B C C D E

  • 5 4 3 2 1 - E D C B A

  • 1 2 2 3 3 4 4 5 5 6 - A B B C C D D E E F

  • 6 5 4 3 2 1 - F E D C B A

ಹೀಗೆ ಪದಗಳ ಸಂಖ್ಯೆ ಅನುಸರಿಸಿ ಮುಂದುವರೆಯುತ್ತದೆ.

(ಮಾಹಿತಿ: ಸುಮುಖ ಶರ್ಮಾ)

ಯಾವುದೇ ಪುಸ್ತಕದ ನೆರವು ಇಲ್ಲದೇ, ಕೇವಲ ಸ್ಮರಣ ಶಕ್ತಿಯಿಂದ ಈ permutation and combination ಅನುಸರಿಸಿ, ಲಕ್ಷಗಟ್ಟಲೆ ಪದಗಳ ಪಾರಾಯಣ ಆಗಿರುತ್ತದೆ! ಈಗ ಮಹೇಶ್ ರೇಖೆ ಅವರು ನಡೆಸಿರುವುದು ಯಾಜ್ಙ್ನವಲ್ಕ್ಯ ಎಂಬ ಮಹರ್ಷಿಗಳಿಂದ ಪ್ರಚಾರಗೊಂಡ ಶುಕ್ಲಯಜುರ್ವೇದ ದ ಮಾಧ್ಯಂದಿನ ಶಾಖೆಯ ದಂಡಕ್ರಮ ಕಂಠಸ್ಥ ಪಾರಾಯಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿಗೆ ಸಿಎಂ ಆಗಲು ಅವಕಾಶ ಕೊಡಬೇಡಿ, ಇನ್ನೂ ಎರಡೂವರೆ ವರ್ಷ ನೀವೇ ಮುಂದುವರೆಯಿರಿ: ಸಿದ್ದು ಪರ ಜನಾರ್ಧನ ರೆಡ್ಡಿ ಬ್ಯಾಟಿಂಗ್..!

ಚಲನಚಿತ್ರೋತ್ಸವದಲ್ಲಿ ‘Palestinian’ ಸಿನೆಮಾಗಳಿಗೆ ನಿರ್ಬಂಧ: ಪ್ರಕಾಶ್‌ ರಾಜ್‌ ಪ್ರತಿರೋಧ, ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ಸಿಎಂಗೆ ಆಗ್ರಹ

WPL 2026: ನೇರವಾಗಿ ಫೈನಲ್ ಪ್ರವೇಶಿಸಿದ ಸ್ಮೃತಿ ಮಂದಾನ ನಾಯಕತ್ವದ RCB ಪಡೆ!

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಟ್ರಂಪ್ ದಾಳಿ ಬೆದರಿಕೆ ಬೆನ್ನಲ್ಲೇ ಇರಾನ್‌ಗೆ ಶಾಕ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್‌ ಉಗ್ರ ಸಂಘಟನೆ ಎಂದು ಪಟ್ಟಿ ಮಾಡಿದ EU!

SCROLL FOR NEXT