ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳನ್ನು ಪ್ರತಿನಿಧಿಸುವ 9 ರತ್ನಗಳಾಗಿವೆ. ರತ್ನಗಳ ಗುಣಸ್ವರೂಪ ಮತ್ತು ಬಣ್ಣಗಳ ಆಧಾರದಲ್ಲಿ ಪ್ರತಿಯೊಂದು ಗ್ರಹಕ್ಕೆ ಒಂದು ರತ್ನವನ್ನು ಸೂಚಿಸಲಾಗಿದೆ.
ಮಾಣಿಕ್ಯವು ನವರತ್ನದ ಪ್ರಮುಖ ರತ್ನಗಳಲ್ಲಿ ಒಂದಾಗಿದ್ದು ಇದು ಚೈತನ್ಯ, ಶುದ್ಧತೆ ಮತ್ತು ಸ್ವಾತಂತ್ರ್ಯವನ್ನು ಸಂಕೇತಿಸುತ್ತದೆ. ಇದು ಸರ್ವಶಕ್ತ ಸೂರ್ಯನನ್ನು ಪ್ರತಿನಿಧಿಸುತ್ತದೆ. ಜಾತಕದಲ್ಲಿ ದುರ್ಬಲ ಸೂರ್ಯನನ್ನು ಹೊಂದಿರುವವರು ಪ್ರಬಲವಾದ ಸೂರ್ಯ ದೇವರ ಆಶೀರ್ವಾದವನ್ನು ಪಡೆಯಲು ಇದನ್ನು ಧರಿಸಬಹುದು. ಇದರ ಬಣ್ಣವು ತಿಳಿ ಗುಲಾಬಿ ಬಣ್ಣದಿಂದ ಗಾಢ ರಕ್ತದ ಕೆಂಪು ಛಾಯೆಗಳವರೆಗೆ ಇರುತ್ತದೆ.
ಗುಲಾಬಿ ಬಣ್ಣವನ್ನು ಹೊಂದಿರುವ ಮಾಣಿಕ್ಯ ಅಥವಾ ರೂಬಿ ಸೂರ್ಯನಿಗೂ, ಮುತ್ತು ಚಂದ್ರನಿಗೂ, ಹವಳವನ್ನು ಕುಜನಿಗೂ, ಮರಕತ ಅಥವಾ ಪಚ್ಚೆ ಬುಧನಿಗೂ, ಪುಷ್ಯರಾಗ ಗುರುವಿಗೂ, ಹೊಳೆಯುವ ವಜ್ರ ಶುಕ್ರನಿಗೂ, ನೀಲಮಣಿ ಶನಿಗೂ, ಗೋಮೇಧಿಕಾ ರಾಹು, ವೈಢೂರ್ಯ ಅಥವಾ ಬೆಕ್ಕಿನಕಣ್ಣು ಕೇತುಗ್ರಹಕ್ಕೂ ನಿಯೋಜಿತವಾಗಿದೆ.
ಮಾಣಿಕ್ಯಧಾರಣೆ ಪ್ರಯೋಜನ
ಸೂರ್ಯನು ಆತ್ಮಬಲ, ಅಧಿಕಾರ, ಖ್ಯಾತಿ ಮತ್ತು ತಂದೆಯ ಆಶೀರ್ವಾದದ ಪ್ರತಿನಿಧಿಯಾಗಿದ್ದಾನೆ. ಸೂರ್ಯನು ದುರ್ಬಲ ರಾಶಿಗಳಲ್ಲಿ (ತುಲಾ, ಕರ್ಕ, ಇತ್ಯಾದಿ) ಇದ್ದರೆ ಅಥವಾ ಜಾತಕದಲ್ಲಿ ಸೂರ್ಯನ ಮೇಲೆ ದುಷ್ಟ ಗ್ರಹಗಳ ದೃಷ್ಟಿ ಬೀಳುತ್ತಿದ್ದರೇ ಹಾಗೂ ಯಾವುದೇ ವ್ಯಕ್ತಿಗೆ ಆತ್ಮವಿಶ್ವಾಸದ ಕೊರತೆ ಎದುರಾದರೇ ಮಾಣಿಕ್ಯ ಧರಿಸುವುದರಿಂದ ಉತ್ತಮ ಪ್ರಯೋಜನ ಸಿಗುತ್ತದೆ.
ಜಾತಕದಲ್ಲಿ ಸೂರ್ಯನು ಲಗ್ನ, ದಶಾ ಅಥವಾ ಯೋಗ ಕಾರಕದಲ್ಲಿದ್ದಾಗ ಮಾಣಿಕ್ಯ ಧರಿಸುವುದು ಅತ್ಯಂತ ಸೂಕ್ತವಾಗಿದೆ. ಮೇಷ, ಸಿಂಹ, ಧನು, ಮಕರ ಮತ್ತು ಮೀನ ರಾಶಿಯಲ್ಲಿ ಜನಿಸಿದ ಜನರಿಗೆ ಮಾಣಿಕ್ಯವು ಸಾಮಾನ್ಯವಾಗಿ ಸೂಕ್ತವಾದ ರತ್ನವಾಗಿದೆ. ಸೂರ್ಯ ಎರಡನೇ ಮನೆಯ ಅಧಿಪತಿಯಾಗಿರುವುದರಿಂದ, ಕರ್ಕ ರಾಶಿಯಲ್ಲಿ ಜನಿಸಿದ ಜನರು ಹಣಕಾಸಿನ ಅಭಿವೃದ್ಧಿಗಾಗಿ ಮಾಣಿಕ್ಯ ಧರಿಸಬಹುದು.
ವಜ್ರದ ನಂತರ ಅತ್ಯಂತ ಕಠಿಣ ರತ್ನವಾಗಿದೆ. ಗಾಢ ಕೆಂಪು ಬಣ್ಣದಿಂದ ಕೂಡಿರುವ ಮಾಣಿಕ್ಯ ಅತ್ಯಂತ ದುಬಾರಿಯಾಗಿದೆ. ಉತ್ತಮ ಗುಣಮಟ್ಟದ ಮಾಣಿಕ್ಯಗಳನ್ನು ಮ್ಯಾನ್ಮಾರ್‌ನಿಂದ ಪಡೆಯಲಾಗುತ್ತದೆ. ಶ್ರೀಲಂಕಾ, ಥೈಲ್ಯಾಂಡ್, ಮಡಗಾಸ್ಕರ್ ಮತ್ತು ಟಾಂಜಾನಿಯಾದಲ್ಲಿಯೂ ಕಂಡುಬರುತ್ತವೆ.
ಧರಿಸುವುದು ಹೇಗೆ?
ಭಾನುವಾರ ಬೆಳಿಗ್ಗೆ ಸೂರ್ಯೋದಯದ ನಂತರ (ಕನಿಷ್ಠ 2 ಕ್ಯಾರೆಟ್ ) ಚಿನ್ನದ ಉಂಗುರದಲ್ಲಿ ಮಾಣಿಕ್ಯವನ್ನು ಬಲಗೈಯ ಮಧ್ಯದ ಬೆರಳಿಗೆ ಧರಿಸಬೇಕು. - ಮಾಣಿಕ್ಯವನ್ನು ಧರಿಸುವ ಮೊದಲು, ಹಸುವಿನ ಹಾಲು ಮತ್ತು ಗಂಗಾ ಜಲದಿಂದ ಉಂಗುರವನ್ನು ಶುದ್ಧೀಕರಿಸಿ. ಮಾಣಿಕ್ಯವು ಹೃದಯ ಕಾಯಿಲೆ, ರಕ್ತಪರಿಚಲನಾ ಸಮಸ್ಯೆಗಳು, ದೃಷ್ಟಿಹೀನತೆ, ಮಾನಸಿಕ ಆಯಾಸ ಇತ್ಯಾದಿಗಳಿಗೆ ಪರಿಹಾರವಾಗಿದೆ ಎಂದು ನಂಬಲಾಗಿದೆ.
ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಸೂರ್ಯನ ಹೊಳಪು ಧರಿಸುವವರ ದೇಹದ ಮೇಲೆ ಬೆಳಕಿನಂತೆ ಕಾರ್ಯನಿರ್ವಹಿಸುತ್ತದೆ. ಒಟ್ಟಾರೆಯಾಗಿ, ಮಾಣಿಕ್ಯವು ಅದ್ಭುತ ರತ್ನವಾಗಿದ್ದು, ಅದು ಧರಿಸುವವರ ಜೀವನದಲ್ಲಿ ಸೂರ್ಯನ ವಿಶಿಷ್ಟ ಬೆಳಕಿನ ಲಾಭ ಸಿಗುತ್ತದೆ. ಬೌದ್ಧಿಕ ಜಾಗೃತಿ, ಆತ್ಮವಿಶ್ವಾಸ ಮತ್ತು ಯಶಸ್ಸನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.
ಡಾ. ಪಿ.ಬಿ ರಾಜೇಶ್, ಜ್ಯೋತಿಷಿ ಮತ್ತು ಸಂಖ್ಯಾಶಾಸ್ತ್ರಜ್ಞ