ನಮ್ಮಲ್ಲಿ ಎರಡು ರೀತಿಯ ನವರಾತ್ರಗಳನ್ನು ಆಚರಿಸುವ ಪದ್ಧತಿಯಿದೆ. ಶರತ್ಕಾಲದಲ್ಲಿ ಆಚರಿಸುವ ಹಬ್ಬಕ್ಕೆ ಶರನ್ನವರಾತ್ರೋತ್ಸವ ಎಂದು ಮತ್ತು ಯುಗಾದಿಯಿಂದ ಪ್ರಾರಂಭವಾಗಿ 9 ದಿವಸಗಳ ವಸಂತೋತ್ಸವ ಆಚರಣೆಯಿದೆ.
ಭಾರತದ ಎಲ್ಲಾ ಹಬ್ಬಹರಿದಿನಗಳು ಪ್ರಕೃತಿಯೊಂದಿಗೆ ನೇರವಾದ ಸಂಬಂಧ ಹೊಂದಿದೆ. ಪ್ರಕೃತಿಯ ಬದಲಾವಣೆಗೆ ಅನುಗುಣವಾಗಿ ನಾವು ಹಬ್ಬಹರಿದಿನಗಳನ್ನು ಆಚರಿಸುವುದು. ಅತಿಯಾದ ಮಳೆ, ಚಳಿ, ಹಿಮಪಾತ, ಪ್ರಾಕೃತಿಕ ವಿಕೋಪಗಳಿಲ್ಲದೆ ವಸಂತ ಮತ್ತು ಶರದೃತುಗಳಲ್ಲಿ ಆಕಾಶ ಶುಭ್ರವಾಗಿರುತ್ತದೆ. ಪ್ರಕೃತಿಯಲ್ಲಿ ಹೂವು, ಹಣ್ಣು ಮೂಡಿ ಸೊಗಸಾಗಿರುತ್ತದೆ. ಪಶು-ಪಕ್ಷಿ ಪ್ರಾಣಿಗಳು ಸ್ವಚ್ಛಂದವಾಗಿ ಖುಷಿಯಿಂದ ವಿಹರಿಸುತ್ತಿರುತ್ತವೆ. ಜನರು ಮನೆಯಿಂದ ಹೊರಬಂದು ಖುಷಿಯಾಗಿ ವಿಹರಿಸಿ ಹಬ್ಬ-ಹರಿದಿನಗಳನ್ನು ಆಚರಿಸಲು ಅನುಕೂಲವಾಗುತ್ತದೆ ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆಯ ಪರಿಣತರು ಹಾಗೂ ವಾಗ್ಮಿ, ಲೇಖಕಿಯಾದ ಡಾ ಆರತಿ ವಿ.ಬಿ.
ವಸಂತೋತ್ಸವದಲ್ಲಿ ಹೆಚ್ಚಾಗಿ ಲಲಿತಕಲೆಗಳ, ಶೃಂಗಾರ ಸಂಭ್ರಮ, ಮದುವೆ-ಮುಂಜಿ ಕಾರ್ಯಕ್ರಮಗಳು, ಜಾತ್ರೆ, ರಥೋತ್ಸವಗಳು ನಡೆದರೆ ಶರದೃತುವಿನಲ್ಲಿ ವೀರರಸ ಪ್ರಧಾನವಾದ ಕಲೆಗಳನ್ನು ನೋಡಬಹುದು ಎನ್ನುತ್ತಾರೆ.
ಶರದೃತುವಿನಲ್ಲಿ ಕುಸ್ತಿಯಾಟ, ಮಲ್ಲಯುದ್ಧ, ಸೇನಾ ಪ್ರದರ್ಶನ, ಸೀಮೋಲ್ಲಂಘನದ ಅಂದರೆ ರಾಜ-ಮಹಾರಾಜರು ಹಿಂದೆ ಯುದ್ಧಕ್ಕೆ ಹೊರಡುವ ಸಂಕೇತದ ಸಮಯವಿದು. ಶಕ್ತಿ ದೇವತೆಗಳ ಆರಾಧನೆ ಮಾಡುವ ಕಾಲ, ರಾಮ-ರಾವಣರ ಯುದ್ಧ ಪ್ರಸಂಗಗಳನ್ನು ಓದುವುದು, ವೀರ-ಧೀರ ಚರಿತ್ರೆಗಳನ್ನು ಓದುವ ಕಾಲವೇ ಶರದೃತ್. ಈ ಸಮಯದ ಪ್ರಮುಖ ಹಬ್ಬ ಶರನ್ನವರಾತ್ರ. ಜೀವನದಲ್ಲಿ ಕ್ಷಾತ್ರವೂ ಬೇಕು, ಬ್ರಹ್ಮವೂ ಬೇಕು, ಶೃಂಗಾರವೂ ಬೇಕು, ವೀರವೂ ಬೇಕು ಎಂದು ಸೂಚಿಸುವ ಸಂಕೇತವಾಗಿದೆ.
ಶರನ್ನವರಾತ್ರದಲ್ಲಿ ಶಕ್ತಿ ದೇವತೆಯ ಆರಾಧನೆಯೇ ಮುಖ್ಯ. ಸನಾತನ ಧರ್ಮದಲ್ಲಿ ಒಂದು ಪುಸ್ತಕ, ಒಬ್ಬರು ಗುರು, ಒಂದು ಜೀವನ ಸಂಹಿತೆ ಎಂಬ ಬಲವಂತದ ಹೇರಿಕೆಯಿಲ್ಲ. ಒಂದು ದಟ್ಟ ಅರಣ್ಯದಲ್ಲಿ ನಾನಾ ಬಗೆಯ ಗಿಡಮೂಲಿಕೆಗಳು, ಗಿಡ, ಮರ, ಬಳ್ಳಿ ಇರುವಂತೆ, ಪಶು-ಪಕ್ಷಿ, ಪ್ರಾಣಿಗಳಿಗೆ ಸ್ಥಾನಗಳಿರುವಂತೆ ಸನಾತನ ಧರ್ಮದಲ್ಲಿ ವೈದಿಕ, ಆಗಮ, ಪ್ರಾಂತೀಯವಾದ ಜಾನಪದೀಯವಾದ ಅಂಶಗಳು, ಕಲಾಭಿಜ್ಜ್ಞತೆಗಳನ್ನು ಸ್ವಚ್ಛಂದವಾಗಿ, ಸ್ವತಂತ್ರವಾಗಿ ತೋರಿಸಿಕೊಳ್ಳಬಹುದಾಗಿದೆ.
ಅವರವರ ಕುಲಪದ್ಧತಿಯಂತೆ, ಅವರವರ ಇಷ್ಟಕಲ್ಪಿಸಿದಂತೆ ದೇವರ ಪೂಜೆ ಮಾಡಬಹುದು. ಈ ಸಂದರ್ಭದಲ್ಲಿ ತಿರುಪತಿಯಂಥಹ ಕ್ಷೇತ್ರಗಳಲ್ಲಿ ಬ್ರಹ್ಮೋತ್ಸವ, ದಶಾವತಾರಗಳು, ದುಷ್ಠ ಶಿಕ್ಷಣ, ಶಿಷ್ಠ ರಕ್ಷಣದ ಅದ್ಭುತ ಲೀಲೆಗಳನ್ನು ಆರಾಧಿಸುವುದು, ಕ್ಷಾತ್ರ ದೇವತೆಯಾದ ಶಿವನ ಲೀಲೆಗಳನ್ನು ಆರಾಧಿಸುವುದೂ ಉಂಟು. ಆದರೆ ನವರಾತ್ರಿಯಲ್ಲಿ ಹೆಚ್ಚು ಜನಪ್ರಿಯವಾಗಿರುವುದು ಶಕ್ತಿ ದೇವತೆ ದೇವಿಯ ಆರಾಧನೆ.
ನವರಾತ್ರಿಯನ್ನು ದುರ್ಗಾಸಪ್ತಶತಿಯ 700 ಶ್ಲೋಕಗಳ ಅಧ್ಯಯನ ಮೂಲಕ ಅದರಲ್ಲಿರುವ ವರ್ಣನೆಗಳ ಮೂಲಕ, ಮೂರು ಚರಿತ್ರೆಗಳ ಪಠಣೆ, ವಾಖ್ಯಾನ, ಗೀತೆಗಳ ಪಾರಾಯಣ ಮೂಲಕ, ನೃತ್ಯ, ನಾಟಕ, ಹರಿಕಥೆಗಳ ಮೂಲಕ ಹೇಳುವುದು ಒಂದು ಪದ್ಧತಿಯಾಗಿದೆ.